ಮೊದಲ ದಿನವೇ ಒಬಾಮಕೇರ್ ರದ್ದು ಮಾಡಿದ ಟ್ರಂಪ್

Update: 2017-01-21 03:35 GMT

ವಾಷಿಂಗ್ಟನ್, ಜ.21: ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಆದೇಶ ಹೊರಡಿಸಿದ್ದು, ತಮ್ಮ ಚುನಾವಣಾ ಪ್ರಚಾರ ಸಂದರ್ಭದ ಭರವಸೆ ಈಡೇರಿಸಿದ್ದಾರೆ. ಅದೇನು ಗೊತ್ತೇ? 20 ಮಿಲಿಯನ್ ಜನರಿಗೆ ಕೈಗೆಟುಕವ ದರದ ವೈದ್ಯಕೀಯ ಸೇವೆ ಒದಗಿಸುತ್ತಿದ್ದ ಒಬಾಮಕೇರ್ ಯೋಜನೆಯನ್ನು ತಕ್ಷಣದಿಂದ ರದ್ದು ಮಾಡಿರುವುದು!

ಈ ಬಹು ಹಂತದ ಕಾರ್ಯಾದೇಶದಲ್ಲಿ ಆಡಳಿತ ಯಂತ್ರದ ಅಧಿಕೃತ ನೀತಿಯನ್ನು ಸ್ಪಷ್ಟಪಡಿಸಲಾಗಿದ್ದು, ಕೈಗೆಟುಕುವ ದರದ ವೈದ್ಯಕೀಯ ಸೇವೆ ಕಾಯ್ದೆಯನ್ನು ರದ್ದು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಲಾಗಿದೆ.

ಈ ಆದೇಶಕ್ಕೆ ಸಹಿ ಮಾಡುವ ಮೂಲಕ ಟ್ರಂಪ್ ಮೊದಲ ದಿನವೇ ಪ್ರಬಲ ಸಂದೇಶ ರವಾನಿಸಿದ್ದಾರೆ. ತಮ್ಮ ಮೊದಲ ಆದ್ಯತೆ 20 ದಶಲಕ್ಷ ಅಮೆರಿಕನ್ನರಿಗೆ ವೈದ್ಯಕೀಯ ಸುರಕ್ಷೆ ನೀಡುತ್ತಿದ್ದ ಕಾನೂನನ್ನು ರದ್ದು ಮಾಡುವುದು ಎಂದು ಸ್ಪಷ್ಟಪಡಿಸಿದ್ದಾರೆ. ಇದು ಒಬಾಮ ಅವರ ಮೊಟ್ಟಮೊದಲ ಯೋಜನೆಯಾಗಿದ್ದು, 2009ರಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಈ ಆದೇಶ ಹೊರಡಿಸಿದ್ದರು.

ವೈಯಕ್ತಿಕವಾಗಿ ಜನರಿಗೆ, ಆರೋಗ್ಯಸೇವಾ ಸಂಸ್ಥೆಗಳಿಗೆ ಹಾಗೂ ವಿಮಾ ಕಂಪನಿಗಳಿಗೆ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ನೆರವು ನೀಡಬಹುದಾದ ಇತರ ಯೋಜನೆ ರೂಪಿಸಲು ವಿವೇಚನೆ ಬಳಸುವಂತೆ ಆರೋಗ್ಯ ಹಾಗೂ ಮಾನವ ಸೇವಾ ವಿಭಾಗದ ಕಾರ್ಯದರ್ಶಿ ಹಾಗೂ ಇತರ ಸಂಸ್ಥೆಗಳ ಮುಖ್ಯಸ್ಥರಿಗೆ ಟ್ರಂಪ್ ಸೂಚನೆ ನೀಡಿದ್ದಾರೆ.

ಆರೋಗ್ಯ ಸುರಕ್ಷೆ ಮಾರುಕಟ್ಟೆಯನ್ನು ನಿಯಂತ್ರಿಸುವಲ್ಲಿ ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ನೀಡುವುದು ಹೊಸ ಅಧ್ಯಕ್ಷರ ಚಿಂತನೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News