ಮಕ್ಕಳು-ಪೋಷಕರಲ್ಲಿ ಹೆಚ್ಚಿದ ಆತಂಕ

Update: 2017-01-22 13:48 GMT

ಬೆಂಗಳೂರು, ಜ. 22: ಶಿಕ್ಷಣ ಇಲಾಖೆಯ ಉದಾಸೀನತೆಯಿಂದಾಗಿ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ)ಯಡಿ ಬಡ ಮಕ್ಕಳ ಖಾಸಗಿ ಶಾಲಾ ಪ್ರವೇಶಕ್ಕೆ ಜ.15ಕ್ಕೆ ಆರಂಭ ಆಗಬೇಕಾಗಿದ್ದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈವರೆವಿಗೂ ಆರಂಭಗೊಳ್ಳದಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ.

ಶಿಕ್ಷಣ ಇಲಾಖೆ ಜ.15ಕ್ಕೆ ಆರ್‌ಟಿಇನಡಿಯಲ್ಲಿ ಅರ್ಜಿ ಸಲ್ಲಿಕೆಗೆ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಪ್ರಕಟಿಸಿತ್ತು. ಈ ಸಂಬಂಧ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿತ್ತು. ಆದರೆ, ಒಂದು ವಾರ ಕಳೆದರೂ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿಲ್ಲ. ಹೀಗಾಗಿ ರಾಜ್ಯಾದ್ಯಂತ ಪೋಷಕರು ಬಿಇಒ ಕಚೇರಿ, ಸೈಬರ್ ಸೆಂಟರ್‌ಗಳಿಗೆ ಸು್ತು ಹೊಡೆಯುವ ದುಸ್ಥಿತಿ ಎದುರಾಗಿದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಸಲು ವಿಳಂಬ ಆಗುತ್ತಿರುವ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಈ ವರೆಗೂ ಸ್ಪಷ್ಟಣೆಯನ್ನು ನೀಡಿಲ್ಲ. ಹೀಗಾಗಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಲು ಶಿಕ್ಷಣ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಲು ಪರದಾಡಬೇಕಾದ ಸ್ಥಿತಿ ಬಂದಿದೆ.

ಆತಂಕದಲ್ಲಿ ಪೋಷಕರು: ಬಹುತೇಕ ಖಾಸಗಿ ಶಾಲೆಗಳು ಡಿಸೆಂಬರ್, ಜನವರಿ ತಿಂಗಳಲ್ಲೆ ಮುಂದಿನ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆ ಪ್ರಾರಂಭಿಸುತ್ತವೆ. ಹೀಗಾಗಿ ಆರ್‌ಟಿಇನಡಿಯಲ್ಲಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಬಯಸುವ ಪೋಷಕರಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಂದೂಡುತ್ತಿರುವುದು ಆತಂಕ ಸೃಷ್ಟಿಸಿದೆ.

ಅತ್ತ ಆರ್‌ಟಿಇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳದ ಹಿನ್ನೆಲೆಯಲ್ಲಿ ತಮ್ಮ ಮಕ್ಕಳನ್ನು ಶಾಲೆಗಳಿಗೆ ಸೇರಿಸಲು ಆಗದೆ, ಇತ್ತ ಸಾಮಾನ್ಯ ಶಾಲೆಗಳಿಗೂ ಸೇರಿಸಲು ಸಾಧ್ಯ ವಾಗುತ್ತದೆಯೋ ಇಲ್ಲವೋ ಎಂಬ ಆತಂಕದಲ್ಲಿ ಪೋಷಕರು ಇದ್ದಾರೆ. ಆದರೆ, ಈ ಬಗ್ಗೆ ತಲೆಕೆಡಿಸಿಕೊಳ್ಳದ ಶಿಕ್ಷಣ ಇಲಾಖೆ ಇನ್ನೂ ಸಭೆ, ಚರ್ಚೆಯಲ್ಲೆ ಕಾಲ ನೂಕುತ್ತಿದೆ.

ಕಳೆದ ವರ್ಷ ಜನವರಿ ಆರಂಭದಲ್ಲೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಸಿದ್ದ ಶಿಕ್ಷಣ ಇಲಾಖೆ, ಪ್ರಸಕ್ತ ಸಾಲಿನಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ಪ್ರಸಕ್ತ ಸಾಲಿನಲ್ಲಿ ಆಧಾರ್ ಸಂಖ್ಯೆಯನ್ನು ಆಧರಿಸಿ ಆರ್‌ಟಿಇನಡಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮತ್ತು ಪ್ರವೇಶಕ್ಕೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ ವಿಳಂಬ ನೀತಿ ಅನುಸರಿಸಲಾಗುತ್ತಿದೆ.

ಅನರ್ಹರು ಮತ್ತು ಒಬ್ಬರ ಹೆಸರಿನಲ್ಲೇ ನಾಲ್ಕೈದು ಶಾಲೆಗಳಿಗೆ ಅರ್ಜಿ ಸಲ್ಲಿಸುವುದನ್ನು ತಪ್ಪಿಸುವ ದೃಷ್ಟಿಯಿಂದ ಆಧಾರ್ ಜೋಡಣೆಗೆ ಶಿಕ್ಷಣ ಇಲಾಖೆ ಮುಂದಾಗಿದೆ. ಆದರೆ, ತರಾತುರಿಯಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಸಾಫ್ಟ್‌ವೇರ್ ಸಿದ್ದಪಡಿಸಲು ಮುಂದಾಗಿದ್ದು, ವಿಳಂಬ ಆಗುತ್ತಿದೆ. ಹೀಗಾಗಿ ಸಾರ್ವಜನಿಕರು ಹಾಗೂ ಭವಿಷ್ಯದ ಕನಸಿನಲ್ಲಿರುವ ಮಕ್ಕಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಶಿಕ್ಷಣ ಇಲಾಖೆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಿಕ್ಷಣ ಹಕ್ಕು ಕಾಯ್ದೆಯಡಿ ಶೀಘ್ರದಲ್ಲೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಸಬೇಕು. ಪೋಷಕರಿಗೆ ಈ ಸಂಬಂಧ ಅಗತ್ಯ ಮಾಹಿತಿ ನೀಡಬೇಕು. ಆ ಮೂಲಕ ಎಲ್ಲ ವರ್ಗ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂದು ಶಿಕ್ಷಣ ಹಕ್ಕು ಕಾಯ್ದೆ ಆಶಯವನ್ನು ಎತ್ತಿಹಿಡಿಯಬೇಕೆಂಬುದು ಪೋಷಕರ ಆಗ್ರಹವೂ ಆಗಿದೆ.


‘ಜ.15ರಿಂದ ಆರ್‌ಟಿಇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಶಿಕ್ಷಣ ಇಲಾಖೆ ಲಕ್ಷಾಂತರ ರೂ.ವೆಚ್ಚ ಮಾಡಿ ಪ್ರಚಾರ ಮಾಡಿತ್ತು. ಆದರೆ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ವಿಳಂಬದ ಬಗ್ಗೆ ಎಲ್ಲಿಗೂ ಮಾಹಿತಿ ನೀಡುತ್ತಿಲ್ಲ. ಇದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಬಡ ಮಕ್ಕಳ ಶಿಕ್ಷಣದ ಬಗ್ಗೆ ಇರುವ ಕಳಕಳಿಯ ಧ್ಯೋತಕ’
-ಯೋಗಾನಂದ ಆರ್‌ಟಿಇ ಪೋಷಕರ ಸಂಘದ ಅಧ್ಯಕ್ಷ 

‘ಶಿಕ್ಷಣ ಇಲಾಖೆ ತನ್ನ ಕೆಲಸದ ಸ್ವರೂಪವನ್ನೆ ಬದಲಿಕೊಳ್ಳುವ ಅಗತ್ಯವಿದೆ. ನಿರಂತರವಾಗಿ ಜನತೆಯ ಸಂಪರ್ಕ ಹೊಂದಿ, ಅವರ ಅಭಿಪ್ರಾಯಗಳನ್ನೆ ಆದ್ಯತೆ ಮಾಡಿಕೊಳ್ಳಬೇಕು. ಹೀಗಾದರೆ ಮಾತ್ರ ಶಿಕ್ಷಣ ಹಕ್ಕು ಕಾಯ್ದೆಯಂತಹ ಯೋಜನೆಗಳು ಜನಸ್ನೇಹಿ ಆಗಲು ಸಾಧ್ಯ’
-ಪೊ.ನಿರಂಜನಾರಾಧ್ಯ ಶಿಕ್ಷಣ ತಜ್ಞ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News