ಕಂಬಳ ನಮ್ಮ ಹೆಮ್ಮೆ, ಅದನ್ನು ಉಳಿಸಬೇಕು : ರಕ್ಷಿತ್ ಶೆಟ್ಟಿ

Update: 2017-01-22 15:45 GMT

ಬೆಂಗಳೂರು, ಜ. 22 : ತಮಿಳುನಾಡಿನ ಜನರ ಪ್ರತಿಭಟನೆಗೆ ಮಣಿದು ಕೇಂದ್ರ ಸರ್ಕಾರ ಜಲ್ಲಿಕಟ್ಟು ಕುರಿತ ರಾಜ್ಯ ಸರ್ಕಾರದ ಸುಗ್ರೀವಾಜ್ಞೆಗೆ ಅನುಮೋದನೆ ನೀಡಿದ ಬೆನ್ನಲ್ಲೇ ತುಳುನಾಡಿನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಕಂಬಳದ ಕುರಿತ ಚರ್ಚೆ ಗರಿಗೆದರಿದೆ. ತಮಿಳುನಾಡಿನ ಪ್ರತಿಭಟನೆಗೆ  ಕೇಂದ್ರ ಸರ್ಕಾರವೇ ಮಣಿದಿರುವಾಗ ಕಂಬಳದ ಕುರಿತು ಕನ್ನಡಿಗರು ಯಾಕೆ ಪ್ರತಿಭಟನೆ ನಡೆಸಬಾರದು, ಈ ಬಗ್ಗೆ ಸುಗ್ರೀವಾಜ್ಞೆ ತರುವಂತೆ ರಾಜ್ಯ ಸರ್ಕಾರಕ್ಕೆ ಒತ್ತಡ ಯಾಕೆ ಹಾಕಬಾರದು ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿವೆ. 


ಈ ನಡುವೆ ಖ್ಯಾತ  ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಕಂಬಳದ ಕುರಿತು ಹಾಕಿರುವ ಆಪ್ತ ಫೇಸ್ ಬುಕ್ ಪೋಸ್ಟ್ ಒಂದು ವೈರಲ್ ಆಗಿದೆ. ಈ ಪೋಸ್ಟ್ ಕೇವಲ ಅರ್ಧ ಗಂಟೆಯಲ್ಲೇ ಆರು ಸಾವಿರಕ್ಕೂ ಹೆಚ್ಚು ಮಂದಿಯ ಲೈಕ್ ಗೆ ಪಾತ್ರವಾಗಿದೆ. ನೂರಾರು ಮಂದಿ ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಬಾಲ್ಯದಿಂದ ಉಡುಪಿಯಲ್ಲಿ ಅಜ್ಜಿ ಮನೆಯೆದುರು ನೋಡುತ್ತಿದ್ದ ಕಂಬಳದ ರುದ್ರ ರಮಣೀಯ ದೃಶ್ಯವನ್ನು ನೆನಪಿಸಿಕೊಂಡಿರುವ ರಕ್ಷಿತ್ ಶೆಟ್ಟಿ ಈ ಕ್ರೀಡೆಯಲ್ಲಿ ಕೋಣಗಳಿಗೆ ಯಾವುದೇ ರೀತಿಯ ಹಿಂಸೆ ಆಗುವುದನ್ನು ನಾನು ನೋಡಿಲ್ಲ ಎಂದು ಹೇಳಿದ್ದಾರೆ. ಕಂಬಳದ ಕೋಣಗಳನ್ನು ಜನರು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ, ಮಕ್ಕಳು ಒಂದು ಹೊತ್ತಿನ ಊಟ ಮಾಡದಿದ್ದರೂ ಕೋಣಗಳಿಗೆ ಸರಿಯಾದ ಸಮಯಕ್ಕೆ ಭರ್ಜರಿ ಆಹಾರ ನೀಡಲಾಗುತ್ತದೆ.

ಈ ಕೋಣಗಳಿಗೆ ಒಂಚೂರು ನೋವಾದರೂ ನಮಗೆ ಅಳು ಬರುತ್ತಿತ್ತು, ಆ ಕೋಣಗಳು ಆರೋಗ್ಯವಂತವಾಗಿದ್ದರೆ  ಅದನ್ನು ನೋಡಿ ನಮಗೆ ಆಗುವ ಸಂತಸಕ್ಕೆ ಪಾರವೇ ಇರುತ್ತಿರಲಿಲ್ಲ. ಕಂಬಳ ತುಳುನಾಡು ಹಾಗು ಕರ್ನಾಟಕದ ಸಂಸ್ಕೃತಿ ಹಾಗು ಹೆಮ್ಮೆ . ಇದನ್ನು ಉಳಿಸಬೇಕು ಎಂದು ರಕ್ಷಿತ್ ಶೆಟ್ಟಿ ಈ ಪೋಸ್ಟ್ ನಲ್ಲಿ ಹೇಳಿದ್ದಾರೆ. 
ಅವರ ಪೋಸ್ಟ್ ಈ ಕೆಳಗಿದೆ : 

 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News