ಕಳ್ಳನೆಂದು ಭಾವಿಸಿ ಪತ್ನಿಯನ್ನೇ ಗುಂಡಿಕ್ಕಿ ಕೊಂದ

Update: 2017-01-22 18:33 GMT

 ವಾಶಿಂಗ್ಟನ್,ಜ.22: ಮನೆಗೆ ಬಂದ ಪತ್ನಿಯನ್ನು ಕಳ್ಳನೆಂದು ತಪ್ಪಾಗಿ ಭಾವಿಸಿ ಪತಿಯೇ ಗುಂಡಿಕ್ಕಿ ಕೊಂದ ಧಾರುಣ ಘಟನೆ ಅಮೆರಿಕದ ಉತ್ತರ ಕರೋಲಿನಾ ರಾಜ್ಯದ ಗೋಲ್ಡ್ಸ್‌ಬೊರೊ ಪಟ್ಟಣದಲ್ಲಿ ನಡೆದಿದೆ.

   ಕಚೇರಿಯೊಂದರಲ್ಲಿ ರಾತ್ರಿ ಪಾಳಿಯಲ್ಲಿ ದುಡಿಯುತ್ತಿದ್ದ ಗೀನಾ ವಿಲಿಯಮ್ಸ್ ಸಂಜೆ ಆರುಗಂಟೆಗೆ ಮನೆ ಬಿಟ್ಟಿದ್ದರು. ಆಕೆ ಶುಕ್ರವಾರ ಬೆಳಗ್ಗೆ 8:00 ಗಂಟೆಗೆ ಮನೆಗೆ ಆಗಮಿಸುವವರಿದ್ದರು. ಆದರೆ ಆಕೆ, ಕೆಲಸದ ಅರ್ಧದಲ್ಲೇ ಕಚೇರಿಯನ್ನು ತೊರೆದು, ಮನೆಗೆ ಆಗಮಿಸಿದ್ದರು. ಮನೆಯೊಳಗೆ ಪತಿ ಬಿಲ್ಲಿ ವಿಲಿಯಮ್ಸ್ ತನ್ನ ಇಬ್ಬರು ಮಕ್ಕಳೊಂದಿಗೆ ಮಲಗಿದ್ದರು. ಗೀನಾ ಮನೆಯ ಬಾಗಿಲಿನ ಬಳಿ ಬಂದಾಗ, ಸದ್ದು ಕೇಳಿದ ದಂಪತಿಯ ಓರ್ವ ಮಗ, ಯಾರೊ ಕಳ್ಳ ಮನೆಗೆ ನುಗ್ಗಲು ಯತ್ನಿಸುತ್ತಿದ್ದಾನೆಂದು ಗ್ರಹಿಸಿ ತಂದೆಯನ್ನು ಎಚ್ಚರಿಸಿದ. ಆಗ ವಿಲಿಯಮ್ಸ್, ಬೆಡ್‌ರೂಮ್‌ನಲ್ಲಿ ಆತ್ಮರಕ್ಷಣೆಗಾಗಿ ಇರಿಸಿದ್ದ ಹ್ಯಾಂಡ್‌ಗನ್ ಹಿಡಿದು ಬಾಗಿಲು ತೆರೆದಾಗ ಎದುರಿನಲ್ಲಿ ವಿದ್ಯುತ್‌ದೀಪ ಇರಲಿಲ್ಲ. ಆತ ಎದುರಿಗಿರುವ ವ್ಯಕ್ತಿ ಕಳ್ಳನೆಂದೇ ಭಾವಿಸಿ ಗುಂಡುಹಾರಿಸಿದ. ಪತಿ ಹಾರಿಸಿದ ಗುಂಡು ಗೀನಾ ಅವರ ಕುತ್ತಿಗೆ ತಗಲಿದ್ದು, ಆಕೆ ಸ್ಥಳದಲ್ಲೇ ಮೃತಪಟ್ಟರು. ಪೊಲೀಸರು ವಿಲಿಯಮ್ಸ್‌ರನ್ನು ಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News