ನಾಲ್ಕು ಕಾಲು, ಎರಡು ಅಂಗವಿರುವ ಶಿಶುವಿಗೆ ಜನ್ಮ ನೀಡಿದ ತಾಯಿ

Update: 2017-01-23 06:10 GMT

ಬಳ್ಳಾರಿ, ಜ.23: ರಾಯಚೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಹಿಳೆಯೊಬ್ಬರು ನಾಲ್ಕು ಕಾಲು ಹಾಗೂ ಎರಡು ಅಂಗಾಂಗವಿರುವ ಗಂಡು ಶಿಶುವಿಗೆ ಜನ್ಮ ನೀಡಿದ್ದಾರೆ.

ರಾಯಚೂರಿನ ಸಿಂಧನೂರು ತಾಲೂಕಿನ ಲಲಿತಮ್ಮ(23ವರ್ಷ) ಹಾಗೂ ಚೆನ್ನಬಸವ(26) ದಂಪತಿಗೆ ಈ ವಿಚಿತ್ರ ಮಗು ಜನಿಸಿದೆ. ಮಗುವನ್ನು ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ(ವಿಮ್ಸ್)ಗೆ ಶನಿವಾರ ಸಂಜೆ ಕರೆದೊಯ್ಯಲಾಗಿದ್ದು, ವಿಮ್ಸ್‌ನ ನವಜಾತ ಶಿಶು ನಿಗಾ ಘಟಕದಲ್ಲಿ ಇಡಲಾಗಿದೆ.

‘‘ಶಿಶು ಶನಿವಾರ ಬೆಳಗ್ಗೆ 4.23ಕ್ಕೆ ಜನಿಸಿದೆ. ಮಗು ಜನನದ ವೇಳೆ ಕರ್ತವ್ಯದಲ್ಲಿದ್ದ ತಾನು ಶಿಶುವನ್ನು ವಿಮ್ಸ್‌ಗೆ ಸ್ಥಳಾಂತರಿಸುವ ಬಗ್ಗೆ ಅಗತ್ಯವಿರುವ ಎಲ್ಲ ವ್ಯವಸ್ಥೆ ಮಾಡಿದ್ದೆ. ಹೆರಿಗೆ ಸಾಮಾನ್ಯವಾಗಿತ್ತು’’ ಎಂದು ಡಾ.ವಿರೂಪಾಕ್ಷ ಟಿ. ಹೇಳಿದ್ದಾರೆ.

ಆರಂಭದಲ್ಲಿ ತಾಯಿ ಲಲಿತಮ್ಮ ಶಿಶುವನ್ನು ವಿಮ್ಸ್ ಆಸ್ಪತ್ರೆಗೆ ಕೊಂಡೊಯ್ಯಲು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಶಿಶು ದೇವರು ಕೊಟ್ಟ ವರ ಎಂದು ವೈದ್ಯರ ಬಳಿ ಹೇಳಿಕೊಂಡಿದ್ದರು.

 ತಾಯಿಯ ಕುಟುಂಬ ಸದಸ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಶಿಶುವಿನ ತಾಯಿಯ ಮನವೊಲಿಸಲು ಯಶಸ್ವಿಯಾದರು. ಶಿಶುವಿನ ತಾಯಿ ಮಗುವನ್ನು ಬಳ್ಳಾರಿಗೆ ಕೊಂಡೊಯ್ಯಲು ಸಮ್ಮತಿ ನೀಡಿದರು.

‘‘ಸರ್ಜನ್‌ಗಳ ತಂಡ ಮಗುವಿನ ಆರೋಗ್ಯಸ್ಥಿತಿಯನ್ನು ನೋಡಿಕೊಳ್ಳುತ್ತಿದೆ. ಇದು ನಮಗೆ ಅತ್ಯಂತ ಸವಾಲಿನ ಪ್ರಕರಣವಾಗಿದೆ’’ ಎಂದು ವಿಮ್ಸ್‌ನಲ್ಲಿ ಶಿಶುವನ್ನು ನೋಡಿಕೊಳ್ಳುತ್ತಿರುವ ಡಾ.ದಿವಾಕರ್ ಗಡ್ಡಿ ಹೇಳಿದ್ದಾರೆ.

‘‘ನನ್ನ ಮೊದಲ ಮಗ ಮೂರು ವರ್ಷದ ಹಿಂದೆ ಜನಿಸಿದ್ದ. ಆತ ಆರೋಗ್ಯವಾಗಿದ್ದಾನೆ. ನಾವು ಬಡವರು. ದುಬಾರಿ ಚಿಕಿತ್ಸೆ ನೀಡಲು ನಮ್ಮಿಂದ ಸಾಧ್ಯವಿಲ್ಲ. ಶಿಶುವನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಮ್ಸ್ ಆಸ್ಪತ್ರೆಗೆ ಸೇರಿಸಲಾಗುತ್ತಿದೆ ಎಂದು ನಮ್ಮ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಮಗು ಸಹಜವಾಗುತ್ತದೆ ಎಂಬ ವಿಶ್ವಾಸವಿದೆ’’ ಎಂದು ಲಲಿತಮ್ಮ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News