ಕಟುಕನಿಗೆ ಮಾರಲೆಂದೇ ಈಶ್ವರಪ್ಪ ಸಾಕುತ್ತಿರುವ ‘ಹಿಂದ’ ಕುರಿಗಳು

Update: 2017-01-23 18:50 GMT

‘‘ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಿಲ್ಲಿಸುವ ಮಾತೇ ಇಲ್ಲ’’
‘‘ಸಂಗೊಳ್ಳಿ ಬ್ರಿಗೇಡ್ ಕಾರ್ಯ ಚಟುವಟಿಕೆಗಳನ್ನು ಈ ಜನ್ಮದಲ್ಲಿ ಒಪ್ಪುವ ಪ್ರಶ್ನೆಯೇ ಇಲ್ಲ’’

 
ಬಿಜೆಪಿಯೊಳಗೆ ಈಶ್ವರಪ್ಪ ಮತ್ತು ಯಡಿಯೂರಪ್ಪ ಅವರ ನಡುವಿನ ತಿಕ್ಕಾಟ ನಿರ್ಣಾಯಕ ಹಂತ ತಲುಪಿದೆ. ವರಿಷ್ಠರು ಈ ತಿಕ್ಕಾಟದ ನಡುವೆ ಅದೆಷ್ಟು ಗೊಂದಲಕ್ಕೀಡಾಗಿದ್ದಾರೆ ಎಂದರೆ, ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವಂತಹ ಸನ್ನಿವೇಶ ಎದುರಾಗಿದೆ. ಆದರೆ ಯಾರನ್ನು ತಿರಸ್ಕರಿಸಿದರೂ ಪಕ್ಷ ಒಡೆಯುವಂತಹ ಸನ್ನಿವೇಶ. ಯಡಿಯೂರಪ್ಪರನ್ನು ಬದಿಗಿಟ್ಟು ಈಶ್ವರಪ್ಪರಿಗೆ ಮಾನ್ಯತೆ ನೀಡಿದರೆ ಮತ್ತೆ ಪಕ್ಷದೊಳಗೆ ಹಿಂದಿನ ಸ್ಥಿತಿ ಪುನರ್ನಿರ್ಮಾಣವಾಗುವ ಸಾಧ್ಯತೆಗಳಿವೆ. ಮತ್ತೆ ಹೊಸ ಪಕ್ಷ ಕಟ್ಟುವ ಶಕ್ತಿ ಯಡಿಯೂರಪ್ಪ ಅವರಲ್ಲಿ ಇಲ್ಲವಾದರೂ, ತಮ್ಮ ಲಿಂಗಾಯತ ಮತಗಳನ್ನು ಮುಂದಿಟ್ಟುಕೊಂಡು ಬಿಜೆಪಿಯನ್ನು ಮಟ್ಟ ಹಾಕುವ ಸಾಮರ್ಥ್ಯವನ್ನು ಅವರು ಇನ್ನೂ ಉಳಿಸಿಕೊಂಡಿದ್ದಾರೆ. ಇತ್ತ ಈಶ್ವರಪ್ಪ ಅವರು ಹಿಂದುಳಿದ ವರ್ಗಗಳನ್ನು ಒಂದುಗೂಡಿಸುವ ಯತ್ನವನ್ನು ಮಾಡಿರುವ ಕಾರಣಕ್ಕಾಗಿ ವಜಾಗೊಳ್ಳಲ್ಪಟ್ಟರೆ, ಬಿಜೆಪಿಯೊಳಗಿರುವ ಹಿಂದುಳಿದ ವರ್ಗಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ, ಶೆಟ್ಟರ್, ಅಶೋಕ್, ಅನಂತಕುಮಾರ್ ಮೊದಲಾದ ರಾಜ್ಯ ಬಿಜೆಪಿ ಮುಖಂಡರು ಒಳಗೊಳಗೆ ಈಶ್ವರಪ್ಪ ಅವರನ್ನು ಬೆಂಬಲಿಸುತ್ತಿದ್ದಾರೆ. ಯಡಿಯೂರಪ್ಪ ಅವರು ರಾಜ್ಯಾಧ್ಯಕ್ಷರಾಗಿ ಪಕ್ಷದ ಮೇಲೆ ಸಂಪೂರ್ಣ ಹತೋಟಿ ಸಾಧಿಸುವುದರ ವಿರುದ್ಧ ಇವರೆಲ್ಲರೂ ಒಂದಾಗಿದ್ದಾರೆ. ಮೇಲ್ನೋಟಕ್ಕೆ ಯಡಿಯೂರಪ್ಪ ಅವರ ಜೊತೆಗಿರುವಂತೆ ಇವರು ನಟಿಸುತ್ತಿದ್ದಾರಾದರೂ, ಯಡಿಯೂರಪ್ಪ ಅವರ ಸರ್ವಾಧಿಕಾರ ಮನಸ್ಥಿತಿಯನ್ನು ವಿರೋಧಿಸುವ ನಿಟ್ಟಿನಲ್ಲಿ ಮಾನಸಿಕವಾಗಿ ಈಶ್ವರಪ್ಪ ಅವರ ಜೊತೆಗಿದ್ದಾರೆ. ಮತ್ತು ಈಶ್ವರಪ್ಪ ಪರವಾಗಿರುವ ಅಭಿಪ್ರಾಯಗಳನ್ನು ಅವರು ವರಿಷ್ಠರಿಗೆ ನೀಡುತ್ತಿದ್ದಾರೆ. ಆದುದರಿಂದಲೇ ಈವರೆಗೆ ಯಡಿಯೂರಪ್ಪ ಅವರನ್ನು ಹೊರತು ಪಡಿಸಿದರೆ ಯಾವುದೇ ವರಿಷ್ಠರು ಈಶ್ವರಪ್ಪ ವಿರುದ್ಧವಾಗಲಿ, ಅವರ ಬ್ರಿಗೇಡ್ ವಿರುದ್ಧವಾಗಲಿ ಸ್ಪಷ್ಟ ಹೇಳಿಕೆಯನ್ನು ನೀಡಿಲ್ಲ.

ಯಡಿಯೂರಪ್ಪ ಅವರನ್ನು ಬಿಜೆಪಿಯ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡುವಾಗ ಬಿಜೆಪಿಯೊಳಗಿರುವ ಒಳಗುದಿಯನ್ನು ಇಲ್ಲವಾಗಿಸಿ, ಪರಸ್ಪರ ಅನುಮಾನಗಳನ್ನು ಪರಿಹರಿಸುವ ಹೊಣೆಗಾರಿಕೆ ಬಿಜೆಪಿ ವರಿಷ್ಠರಿಗಿತ್ತು. ಕೆಲವೇ ವರ್ಷಗಳ ಹಿಂದೆ ಹಾವು ಮುಂಗುಸಿಗಳಂತೆ ದ್ವೇಷಿಸುತ್ತಿದ್ದ ರಾಜಕೀಯ ನಾಯಕರು, ಯಡಿಯೂರಪ್ಪ ಅವರ ಆಯ್ಕೆಯನ್ನು ಸಂಪೂರ್ಣ ಒಪ್ಪುವುದು ಅಷ್ಟು ಸುಲಭವೇನೂ ಅಲ್ಲ. ಇದೇ ಸಂದರ್ಭದಲ್ಲಿ ತನ್ನನ್ನು ಬಳಸಿ ಎಸೆಯುವ ಭಯ ಯಡಿಯೂರಪ್ಪ ಅವರನ್ನು ಇನ್ನೂ ಕಾಡುತ್ತಿದೆ. ತನ್ನ ಸಹೋದ್ಯೋಗಿಗಳನ್ನು ಬಿಡಿ, ವರಿಷ್ಠರನ್ನೇ ಅವರು ಪೂರ್ಣವಾಗಿ ನಂಬುತ್ತಿಲ್ಲ. ತನ್ನ ಸುತ್ತ ಮುತ್ತಲಿರುವವರು ಒಳ ಶತ್ರುಗಳು ಎನ್ನುವ ಭಯ ಅವರಲ್ಲಿದ್ದುದರ ಪರಿಣಾಮ, ಪದಾಧಿಕಾರಿಗಳ ಆಯ್ಕೆ ಸಂದರ್ಭದಲ್ಲಿ ತನ್ನ ಮೂಗಿನ ನೇರಕ್ಕಿರುವವರನ್ನೇ ಆಯ್ಕೆ ಮಾಡಿದ್ದರು. ಪಕ್ಷಾಧ್ಯಕ್ಷನಾಗಿ ಎಲ್ಲರನ್ನು ಒಂದಾಗಿ ತೆಗೆದುಕೊಂಡು ಹೋಗುವ ಹೊಣೆಗಾರಿಕೆಯನ್ನು ಅವರು ಪಾಲಿಸಲೇ ಇಲ್ಲ. ಯಡಿಯೂರಪ್ಪ ಅವರ ನೇರ ಶತ್ರು ಈಶ್ವರಪ್ಪ ಬಳಗವನ್ನು ಸಂಪೂರ್ಣ ಹೊರಗಿಟ್ಟ ಪರಿಣಾಮವಾಗಿ ಈಶ್ವರಪ್ಪ ಅವರಿಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಕಾರ್ಯತಂತ್ರ ರೂಪಿಸುವುದು ಅನಿವಾರ್ಯವಾಯಿತು. ಆದುದರಿಂದಲೇ, ಅವರು ಹಿಂದುಳಿದ ವರ್ಗವನ್ನು ಸಂಘಟಿಸಿ ತನ್ನ ಅಗತ್ಯವನ್ನು ಬಿಜೆಪಿ ವರಿಷ್ಠರಿಗೆ ಮನವರಿಕೆ ಮಾಡಲು ಹೊರಟಿದ್ದಾರೆ.

ಒಂದೆಡೆ ಯಡಿಯೂರಪ್ಪ ಲಿಂಗಾಯತ ಸಮುದಾಯವನ್ನು ಮುಂದಿಟ್ಟುಕೊಂಡು ಬಿಜೆಪಿಯೊಳಗೆ ತನ್ನ ಶಕ್ತಿಯನ್ನು ಸ್ಥಾಪಿಸಬಹುದಾದರೆ, ಹಿಂದುಳಿದ ವರ್ಗವನ್ನು ಸಂಘಟಿಸಿ ಈಶ್ವರಪ್ಪ ಯಾಕೆ ಬಿಜೆಪಿಯೊಳಗೆ ತನ್ನ ಶಕ್ತಿಯನ್ನು ಸ್ಥಾಪಿಸಬಾರದು ಎನ್ನುವ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ಲಿಂಗಾಯತರು, ಒಕ್ಕಲಿಗರ ಸಮುದಾಯವನ್ನು ಮುಂದಿಟ್ಟು ಆಯಾ ನಾಯಕರು ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿರುವಾಗ, ಆ ದಾರಿಯಲ್ಲಿ ಕುರುಬ ಸಮುದಾಯದ ಈಶ್ವರಪ್ಪ ಯಾಕೆ ಸಾಗಬಾರದು ಎನ್ನುವ ಪ್ರಶ್ನೆಗೆ ಬಿಜೆಪಿ ನಾಯಕರು ಉತ್ತರಿಸಲೇ ಬೇಕಾಗುತ್ತದೆ. ಇದೇ ಸಂದರ್ಭದಲ್ಲಿ, ಹಿಂದುಳಿದ ವರ್ಗ ಮತ್ತು ದಲಿತ ಸಮುದಾಯವನ್ನು ಈಶ್ವರಪ್ಪ ತನ್ನ ರಾಜಕೀಯ ಅಗತ್ಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎನ್ನುವುದೂ ಅಷ್ಟೇ ಸತ್ಯ. ಸದಾ ಹಿಂದುತ್ವದ ಮಾತುಗಳಿಗೆ ತಲೆದೂಗುತ್ತಾ ಬಂದಿರುವ ಈಶ್ವರಪ್ಪ ಅವರಲ್ಲಿ ಹಿಂದುಳಿದವರ್ಗ ಮತ್ತು ದಲಿತವರ್ಗದ ಏಳಿಗೆಯ ಕುರಿತಂತೆ ಯಾವ ದೂರದೃಷ್ಟಿಯೂ ಇಲ್ಲ. ಬಿಜೆಪಿ ಮತ್ತು ಆರೆಸ್ಸೆಸ್ ಜಾತಿ ಮೀಸಲಾತಿಯನ್ನು ವಿರೋಧಿಸುತ್ತದೆ. ಈಗಾಗಲೇ ಆರೆಸ್ಸೆಸ್‌ನ ಮುಖಂಡರೊಬ್ಬರು ಈ ಬಗ್ಗೆ ಹೇಳಿಕೆಯನ್ನೂ ನೀಡಿದ್ದಾರೆ.

ಹಿಂದುಳಿದವರ್ಗ ಮತ್ತು ದಲಿತ ನಾಯಕರಾಗಿ ಈಶ್ವರಪ್ಪ ಅವರಿಗೆ ಈ ಹೇಳಿಕೆಯನ್ನು ವಿರೋಧಿಸುವ ಸಾಮರ್ಥ್ಯ ಇದೆಯೇ? ಅದನ್ನು ವಿರೋಧಿಸಿ ಈಶ್ವರಪ್ಪ ಬಿಜೆಪಿಯೊಳಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬಲ್ಲರೇ? ಒಂದು ರೀತಿಯಲ್ಲಿ ಕುರಿಗಳನ್ನು ಸಾಕಿ ಕಟುಕನಿಗೆ ಮಾರಿದಂತೆಯೇ ಇದು. ಇಂದು ತಾನು ಸಂಘಟಿಸಿದ ಹಿಂದುಳಿದ ವರ್ಗವನ್ನು ಈಶ್ವರಪ್ಪ, ಅತ್ಯುತ್ತಮ ದರ ನಿಗದಿಯಾದರೆ ಯಾವ ದಯೆದಾಕ್ಷಿಣ್ಯವಿಲ್ಲದೆ ಅವರು ಆರೆಸ್ಸೆಸ್ ಮತ್ತು ಬಿಜೆಪಿಗೆ ಮಾರಲಿದ್ದಾರೆ. ವೈಯಕ್ತಿಕವಾಗಿ ಬಿಜೆಪಿಯೊಳಗೆ ರಾಜಕೀಯ ನಾಯಕನಾಗಿ ಬೆಳೆಯಲು ಅವರು ಹಿಂದವನ್ನು ಸಂಘಟಿಸಿದ್ದಾರೆ. ಇಂತಹ ಸಂಘಟನೆ ಸಮುದಾಯದ ಅಭಿವೃದ್ಧಿಯನ್ನು ಕೇಂದ್ರೀಕರಿಸಿಕೊಂಡಿಲ್ಲ, ಬದಲಿಗೆ ಕೇವಲ ಈಶ್ವರಪ್ಪ ಅವರ ರಾಜಕೀಯ ಅಳಿವುಉಳಿವಿನ ಮೇಲಷ್ಟೇ ನಿಂತಿದೆ. ಆದುದರಿಂದಲೇ ಈಶ್ವರಪ್ಪ ಅವರ ರಾಯಣ್ಣ ಬ್ರಿಗೇಡ್ ಸಂಘಟನೆಯೇ ಒಂದು ದೊಡ್ಡ ಅಣಕ. ಬಿಎಸ್‌ವೈ ಮತ್ತು ಈಶ್ವರಪ್ಪ ಈ ಎರಡೂ ನಾಯಕರು ತಮ್ಮ ತಮ್ಮ ಹಿತಾಸಕ್ತಿಗಾಗಿ ತಮ್ಮ ತಮ್ಮ ಸಮುದಾಯವನ್ನು ಬಳಸಿಕೊಂಡು ಬಿಜೆಪಿಯಲ್ಲಿ ಅಸ್ತಿತ್ವ ಸ್ಥಾಪಿಸಲು ಹೊರಟಿದ್ದಾರೆ. ಈ ಹಗ್ಗ ಜಗ್ಗಾಟ ಅಂತಿಮವಾಗಿ ಮತ್ತೊಮ್ಮೆ ಬಿಜೆಪಿಯನ್ನು ಹೋಳಾಗಿಸಲಿದೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News