ಪತ್ರಕರ್ತನಿಂದ ಪ್ರಶಸ್ತಿ ವಾಪಸ್

Update: 2017-01-23 18:51 GMT

  ಅಹ್ಮದಾಬಾದ್, ಜ.23: ಎಸ್ಸಿ, ಎಸ್ಟಿ ಹಾಗೂ ಒಬಿಸಿಗಳಿಗೆ ಸಂವಿಧಾನದತ್ತವಾಗಿ ನೀಡಲಾಗಿರುವ ಮೀಸಲಾತಿಯನ್ನು ಕೊನೆಗೊಳಿಸುವ ಬಗ್ಗೆ ಪರಾಮರ್ಶೆ ನಡೆಸಬೇಕೆಂದು ಆರೆಸ್ಸೆಸ್ ವಕ್ತಾರ ಮನಮೋಹನ್ ವೈದ್ಯ ಅವರ ಹೇಳಿಕೆಯನ್ನು ಪ್ರತಿಭಟಿಸಿ, ಗುಜರಾತ್‌ನ ದಲಿತ ಪತ್ರಕರ್ತ ಡಾ. ಸುನೀಲ್ ಜಾಧವ್ ತನಗೆ ನೀಡಲಾದ ಪುರಸ್ಕಾರವನ್ನು ವಾಪಸ್ ಮಾಡಿದ್ದಾರೆ.

ಪ್ರಸ್ತುತ ಫ್ರೀಲಾನ್ಸ್ ಪತ್ರಕರ್ತರಾಗಿರುವ ಸುನೀಲ್ ಜಾಧವ್ ಅವರಿಗೆ 2011ರಲ್ಲಿ ‘ಮಹಾತ್ಮಾ ಫುಲೆ ಅಸಾಧಾರಣ ದಲಿತ ಪತ್ರಕರ್ತ’ ಪ್ರಶಸ್ತಿಯನ್ನು ಗುಜರಾತ್ ಸರಕಾರ ನೀಡಿತ್ತು. ಗುಜರಾತಿ ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆಗಾಗಿ ಅವರಿಗೆ ಈ ಪ್ರಶಸ್ತಿ ದೊರೆತಿತ್ತು.

ಮೀಸಲಾತಿ ವಿರುದ್ಧ ವೈದ್ಯ ಅವರ ಹೇಳಿಕೆಯನ್ನು ಖಂಡಿಸಿ, ಈ ತಿಂಗಳು ನಡೆಯುವ ಸಾರ್ವಜನಿಕರ ಸಮಾರಂಭವೊಂದರಲ್ಲಿ ತಾನು ಪ್ರಶಸ್ತಿಯನ್ನು ಹಿಂದಿರುಗಿಸುವುದಾಗಿ ಜಾಧವ್, ಆನ್‌ಲೈನ್ ಸುದ್ದಿ ಸಂಸ್ಥೆ ‘ಸೌತ್‌ಲೈವ್’ಗೆ ತಿಳಿಸಿದ್ದಾರೆ.

 ‘‘ ಸಂಘಪರಿವಾರದ ದಲಿತ ವಿರೋಧಿ ನಿಲುವಿನ ವಿರುದ್ಧ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸುವ ಪ್ರಾಮಾಣಿಕ ಪ್ರಯತ್ನ ಇದಾಗಿದೆ. ದಲಿತರು ತೀರಾ ಅನ್ಯಾಯಕ್ಕೊಳಗಾಗುತ್ತಿದ್ದಾರೆ. ಪ್ರಶಸ್ತಿಯನ್ನು ಹಿಂದಿರುಗಿಸುವ ತನ್ನ ನಿರ್ಧಾರವು ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಒಂದಿಷ್ಟು ಗಮನಸೆಳೆಯಲು ನೆರವಾಗುವುದು ಎಂಬ ಆಶಾವಾದವನ್ನು ತಾನು ಹೊಂದಿದ್ದೇನೆ’’ ಎಂದು ಜಾಧವ್ ತಿಳಿಸಿದ್ದಾರೆ.

‘‘ಗುಜರಾತ್‌ನಲ್ಲಿ ದಲಿತರಿಗೆ ನ್ಯಾಯ ವೆಂಬುದು ಕನಸಷ್ಟೇ ಆಗಿದೆ. ಉನಾ ದಲಿತ ದೌರ್ಜನ್ಯ ಪ್ರಕರಣದ ತನಿಖೆಯಲ್ಲೂ ಏನೂ ಆಗಿಲ್ಲ ಮತ್ತು ಆರೋಪಿಗಳು ಸ್ವಚ್ಛಂದವಾಗಿ ಓಡಾಡುತ್ತಿದ್ದಾರೆ’’ ಎಂದು ಜಾಧವ್ ಆಕ್ರೋಶ ವ್ಯಕ್ತಪಡಿಸಿದರು.

 
ಪ್ರಶಸ್ತಿಯನ್ನು ಹಿಂದಿರುಗಿಸುವ ಸುನೀಲ್ ಜಾಧವ್ ಅವರ ನಿರ್ಧಾರವನ್ನು ಗುಜರಾತ್‌ನ ಖ್ಯಾತ ದಲಿತ ನಾಯಕ ಜಿಗ್ನೇಶ್ ಮೇವಾನಿ ಸ್ವಾಗತಿಸಿದ್ದು, ಮನಮೋಹನ್ ವೈದ್ಯ ಅವರಿಗೆ ನೀಡಿದ ಸೂಕ್ತ ಉತ್ತರ ಇದಾಗಿದೆಯೆಂದಿದ್ದಾರೆ. ಆರೆಸ್ಸೆಸ್‌ನ ಮೀಸಲಾತಿ ವಿರೋಧಿ ನೀತಿಯ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ ಆರಂಭಿಸುವುದಾಗಿ ಅವರು ತಿಳಿಸಿದ್ದಾರೆ. ಗುಜರಾತ್‌ನಲ್ಲಿ ದಲಿತರ ಹತಾಶ ಪರಿಸ್ಥಿತಿಯನ್ನು ವಿವರಿಸಲು ಜಾಧವ್ ಅವರನ್ನು ವಿಧಾನಸಭಾ ಚುನಾವಣೆ ನಡೆಯಲಿರುವ ಉತ್ತರಪ್ರದೇಶ ಹಾಗೂ ಪಂಜಾಬ್ ರಾಜ್ಯಗಳಿಗೆ ಕರೆದುಕೊಂಡುಹೋಗುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News