ಸಾಹಿತಿಗಳ ಬರಹ ಸಮಾಜವನ್ನು ತಿದ್ದುವಂತಿರಲಿ: ಶಾಸಕ ಮಂಕಾಳ ವೈದ್ಯ

Update: 2017-02-16 17:21 GMT

ಭಟ್ಕಳ, ಫೆ.16: ಶಿರಾಲಿ ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಬುಧವಾರ ಬೆಳಗ್ಗೆ ಏರ್ಪಡಿಸಲಾಗಿದ್ದ ಭಟ್ಕಳ ತಾಲೂಕಿನ ಎಂಟನೆ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶಾಸಕ ಮಂಕಾಳ ವೈದ್ಯ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಸಮಾಜದಲ್ಲಿ ಸಾಹಿತಿಗಳಿಗೆ ಉತ್ತಮ ಸ್ಥಾನಮಾನವಿದ್ದು, ಅವರನ್ನು ಜನರು ಗುರುತಿಸುತ್ತಾರೆ. ರಾಜ್ಯ, ಜಿಲ್ಲೆ ಹಾಗೂ ತಾಲೂಕಿಗೆ ಸಾಹಿತಿಗಳ ಆವಶ್ಯಕತೆ ತುಂಬಾ ಇದೆ. ಕನ್ನಡ ಭಾಷೆ ಉಳಿಸಿ, ಬೆಳೆಸುವಲ್ಲಿ ಸಾಹಿತಿಗಳ ಪಾತ್ರ ಮುಖ್ಯವಾಗಿದೆ.

ಸಾಹಿತಿಗಳು ತಮ್ಮ ಬರಹದ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡುವುದರ ಜೊತೆಗೆ ಒಳ್ಳೆಯ ವಿಚಾರದ ಬಗ್ಗೆ ಮಾರ್ಗದರ್ಶನ ಕೂಡ ಮಾಡುವವರಾಗಿದ್ದಾರೆ. ಕನ್ನಡ ಭಾಷೆ ಉಳಿಸಿ, ಬೆಳೆಸಲು ನಾವೆಲ್ಲರೂ ಶ್ರಮಿಸಬೇಕಾಗಿದೆ. ಭಟ್ಕಳದಲ್ಲಿ ಕನ್ನಡ ಭಾಷೆ ಉಳಿಸಿ, ಬೆಳೆಸುವ ಯಾವುದೇ ಚಟುವಟಿಕೆಗಳಿಗೆ ತಮ್ಮ ಸಹಾಯ, ಸಹಕಾರ ಎಂದಿಗೂ ಇರುತ್ತದೆ ಎಂದು ಅವರು ಹೇಳಿದರು

ಸಮ್ಮೇಳನಾಧ್ಯಕ್ಷ ಉಮೇಶ ಮುಂಡಳ್ಳಿಯವರಿಗೆ ಕನ್ನಡ ಬಾವುಟ ಹಸ್ತಾಂತರಿಸಿ ಆಶಯ ಭಾಷಣ ಮಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಅರವಿಂದ ಕರ್ಕಿಕೋಡಿ, ಕನ್ನಡ ಭಾಷೆಗೆ ಯಾರ ಆವಶ್ಯಕತೆಯೂ ಇಲ್ಲ. ಆದರೆ, ಕನ್ನಡ ಭಾಷೆಯ ಆವಶ್ಯಕತೆ ನಮಗೆಲ್ಲರಿಗೂ ಇದೆ. ಭಾಷೆ ತನ್ನಿಂದ ತಾನಾಗೀಯೇ ಬೆಳೆಯುತ್ತದೆ. ನಾವೆಲ್ಲರೂ ಇಂದು ಉತ್ತಮ ಸ್ಥಾನ ಮಾನದಲ್ಲಿರಲು ನಮ್ಮ ಕನ್ನಡ ಭಾಷೆಯೇ ಕಾರಣ ಎಂದು ಅವರುಡಿ ಹೇಳಿದರು.

ಹಿರಿಯ ಸಾಹಿತಿ ಡಾ.ಝಮೀರುಲ್ಲಾ ಶರೀಫ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‌ಗೆ ಅತೀ ಹೆಚ್ಚು ಅಜೀವ ಸದಸ್ಯರನ್ನು ಹೊಂದಿರುವ ಭಟ್ಕಳದಲ್ಲಿ ಸಾಹಿತಿಗಳ ಕೊರತೆ ಎದ್ದು ಕಾಣುತ್ತಿದೆ. ಇಲ್ಲಿ ಸಾಹಿತ್ಯ ಚಟುವಟಿಕೆ ಹೆಚ್ಚಾಗಬೇಕು. ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವವರು ಕಥೆ, ಕವನ ಮುಂತಾದವುಗಳನ್ನು ಬರೆಯಲು ಮುಂದಾಗಬೇಕು.ಸಾಹಿತ್ಯ ಸಮಾಜದಲ್ಲಿ ಎತ್ತರ ಸ್ಥಾನವನ್ನು ನೀಡುತ್ತದೆ. ಭಟ್ಕಳದಲ್ಲಿ ಕನಿಷ್ಠ 30ರಿಂದ 40 ಮಂದಿಯಾದರೂ ಸಾಹಿತಿಗಳು ತಯಾರಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

 ಜಾನಪದ ವಿದ್ವಾಂಸ ಎನ್‌ಆರ್ ನಾಯಕ ಮಾತನಾಡಿ, ರಾಜ್ಯದ ರಾಜಧಾನಿಯಲ್ಲಿ ಕನ್ನಡ ಭಾಷೆಯ ಪರಿಸ್ಥಿತಿಚಿಂತಾಜನಕವಾಗಿದೆ. ಕನ್ನಡವನ್ನು ಹುಡುಕುವ ಪರಿಸ್ಥಿತಿ ನಿರ್ಮಾಣಗೊಂಡಿರುವುದು ವಿಷಾದನೀಯ. ಕನ್ನಡಿಗರು ಅನ್ಯಾಯದವಿರುದ್ಧಹೋರಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಹೋರಾಟದ ಕಿಚ್ಚು ಕಡಿಮೆ ಇದೆ ಎಂದ ಅವರು , ಪ್ರತಿಯೊಬ್ಬರೂ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಹೊಂದಬೇಕು. ಕನ್ನಡ ಭಾಷೆಗೆ ಕುತ್ತು ಉಂಟಾದರೆ ಎಲ್ಲರೂ ಸಿಡಿದೆದ್ದು ಹೋರಾಟ ಮಾಡಬೇಕು ಎಂದರು. ಉಮೇಶ ಮುಂಡಳ್ಳಿ ಸಮ್ಮೇಳನಾಧ್ಯಕ್ಷತೆ ವಹಿಸಿದ್ದರು.

ಮುಖ್ಯಅತಿಥಿಯಾಗಿ ಉಪಸ್ಥಿತರಿದ್ದ ತಾಪಂ. ಕಾರ್ಯನಿರ್ವಹಣಾಧಿಕಾರಿ ಸಿ ಟಿ ನಾಯಕ, ಬಿಇಒ ವೆಂಕಟೇಶ ಪಟಗಾರ, ಶಿರಾಲಿ ಗ್ರಾಪಂ. ಅಧ್ಯಕ್ಷ ವೆಂಕಟೇಶ ನಾಯ್ಕ, ಅಳ್ವೆಕೋಡಿದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ನಾರಾಯಣ ದೈಮನೆ, ಮಾರಿಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ರಾಮಾ ಮೊಗೇರ ಮಾತನಾಡಿದರು. ವೇದಿಕೆಯಲ್ಲಿ ತುಮಕೂರಿನ ಹಿರಿಯ ಸಾಹಿತಿ ಈಚನೂರು ಇಸ್ಮಾಯೀಲ್ ಉಪಸ್ಥಿತರಿದ್ದರು.ಕಸಾಪ ತಾಲೂಕು ಅಧ್ಯಕ್ಷ ಗಂಗಾಧರ ನಾಯ್ಕ ಸ್ವಾಗತಿಸಿದರು. ಕಸಾಪ ಕೋಶಾಧ್ಯಕ್ಷ ಶ್ರೀಧರ ಶೇಟ್ ಪ್ರಾಸ್ತಾವಿಕ ಮಾತನಾಡಿದರು.


ಎಂ ಪಿ ಭಂಡಾರಿ ಸಮ್ಮೇಳನಾಧ್ಯಕ್ಷರ ಪರಿಚಯ ಮಾಡಿದರು. ಗಣೇಶಯಾಜಿ ವಂದಿಸಿದರು.ಶಿಕ್ಷಕರಾದ ಪರಮೇಶ್ವರ ನಾಯ್ಕ ಮತ್ತು ಮಂಜುಳಾ ಶಿರೂರಕರ್ ನಿರೂಪಿಸಿದರು. ಇದೇ ಸಂದಭರ್ದಲ್ಲಿ ಕಸಾಪದಿಂದ ಶಾಸಕ ಮಂಕಾಳ ವೈದ್ಯರಿಗೆ ಜನ ಮತ್ತು ನುಡಿ ಸೇವಕ ಬಿರುದು ನೀಡಿ ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಸಹಾಯಕ ಕಮಿಷನರ್ ಎಂ ಎನ್ ಮಂಜುನಾಥ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಸಭಾಕಾರ್ಯಕ್ರಮದ ನಂತರದಲ್ಲಿ ಸಮ್ಮೇಳನಾಧ್ಯಕ್ಷರ ಸಾಹಿತ್ಯ-ಗಾಯನ ಹಾಗೂ ಕವಿ ಗೋಷ್ಠಿ ನಡೆಯಿತು.

ಕನ್ನಡ ಭಾಷೆ ಉಳಿವಿಗೆ ಎಲ್ಲರ ಶ್ರಮ ಅಗತ್ಯ: ಸಮ್ಮೇಳನಾಧ್ಯಕ್ಷ ಮುಂಡಳ್ಳಿ
ಭಟ್ಕಳ: ಸಾಹಿತ್ಯವೆಂದರೆ ಕೇವಲ ಬರವಣಿಗೆ, ಘೋಷಣೆಗಳಿಗಷ್ಟೇ ಸೀಮಿತವಾಗದೇ ಅದು ಕನ್ನಡ ಭಾಷೆ ಮೇಲಿನ ಪ್ರೀತಿಯಾಗಿರಬೇಕು. ಕನ್ನಡಿಗರ ಬದುಕಿನ ಪ್ರತೀ ಪದರುಗಳನ್ನೂ ಕಾಯ್ದುಕೊಳ್ಳುವುದೇ ಸಾಹಿತ್ಯ ಮತ್ತು ಹೋರಾಟದ ಮೂಲದ್ರವ್ಯವಾಗಬೇಕು ಎಂದು ಭಟ್ಕಳ ತಾಲೂಕಿನ ಎಂಟನೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಉಮೇಶ ಮುಂಡಳ್ಳಿ ಹೇಳಿದರು.

ಬುಧವಾರ ಬೆಳಗ್ಗೆ ಶಿರಾಲಿ ಅಳ್ವೆಕೋಡಿಯಲ್ಲಿ ಆಯೋಜಿಸಲಾದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲರೂ ಒಟ್ಟಾಗಿ ಹೋದರೆ ಮಾತ್ರಕನ್ನಡದ ಸೇವೆ ಮಾಡಿದಂತಾಗುತ್ತದೆ. ಕನ್ನಡ ಭಾಷೆ ಉಳಿವಿಗೆ ಎಲ್ಲರ ಶ್ರಮ ಅಗತ್ಯವಿದೆ. ಹೊರನೋಟಕ್ಕೆ ಭಟ್ಕಳ ತುಂಬ ವೈಭವವಾಗಿ ಕಂಡರೂ ಹೊಟ್ಟೆಯೊಳಗೆ ಹಸಿವು ಮಿಸುಕಾಡುತ್ತಿದೆ. ತುಂಬಾ ಶ್ರಮಜೀವಿಗಳಾದ ಇಲ್ಲಿಯ ಜನರು ಭ್ರಷ್ಟ ವ್ಯವಸ್ಥೆಯ ಬಲಿಪಶುಗಳಾಗುತ್ತಿರುವುದು ವಿಷಾದನೀಯ. ಇಂಥ ವಿಕೃತಿಗಳನ್ನು ನಾವು ಹೊರಗಟ್ಟಿ ಸಂಸ್ಕೃತಿಯನ್ನು ಚಿಗುರಿಸಬೇಕಾಗಿದೆ.


ದಿನಂಪ್ರತಿ ನದಿ, ಸಮುದ್ರದಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುವ ಮೀನುಗಾರರ ಸಮಸ್ಯೆಯನ್ನು ನಗಣ್ಯ ಮಾಡಬಾರದು. ಅಡಿಕೆ, ಭತ್ತ, ಕಲ್ಲಂಗಡಿ, ಕಬ್ಬು, ಶೇಂಗಾ ಇನ್ನಿತರ ಬೆಳೆಗಾರರ ಬವಣೆಕೂಡ ವ್ಯವಸ್ಥೆಯ ವ್ಯಂಗ್ಯವನ್ನು ಪ್ರದರ್ಶಿಸುತ್ತದೆ.


ಈ ಬೆಳೆಗಳಿಗೆ ಬರುವ ಕಾಯಿಲೆಗಳ ಬಗ್ಗೆ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ತೀವ್ರ ನಿರ್ಲಕ್ಷ್ಯ ವಹಿಸುತ್ತಿದ್ದು, ಬೆಂಕಿರೋಗ, ಕೊಳೆರೋಗ, ಹುಳಕೊರಕ ರೋಗಗಳಂಥ ಕಾಯಿಲೆಗಳನ್ನು ತಡೆಗಟ್ಟಲು ಅಧಿಕಾರಿಗಳು, ಕೃಷಿಕರ ಬೆನ್ನಿಗಿರದಿದ್ದರೆ ಸಣ್ಣರೈತರು ಸಂಕಷ್ಟ ಅನುಭವಿಸಬೇಕಾದೀತು.


ಇದರಿಂದ ಅಧಿಕಾರಿಗಳು ರೈತರ ಜಮೀನು ಕಡೆ ಹೆಜ್ಜೆ ಹಾಕಿ ಅವರ ಸಂಕಷ್ಟಕ್ಕೆ ಸ್ಪಂದಿಸುವಂತಾಗಬೇಕು. ಭಟ್ಕಳದಲ್ಲಿ ಹಂಚಿನ ಕಾರ್ಖಾನೆಗಳು ಮುಚ್ಚುತ್ತಿರುವುದರಿಂದ ಸಾವಿರಾರು ಕಾರ್ಮಿಕರು ಅತಂತ್ರರಾಗಿದ್ದಾರೆ. ಅದಕ್ಕಾಗಿ ಇಲ್ಲಿಗೆ ಉದ್ಯೋಗಾವಕಾಶವಾಗುವಂತಹ ಪರಿಸರಕ್ಕೆ ಮಾರಕವಾಗದಂತಹ ಕೈಗಾರಿಕೆಗಳನ್ನು ತರಲು ಜನಪ್ರತಿನಿಧಿಗಳು, ಸರಕಾರ ಮುಂದಾಗಬೇಕು.

ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯು ಒಂದು ಮಹತ್ವಾಕಾಂಕ್ಷಿ ಚಿಂತನೆಯಾಗಿದ್ದು, ದುಡಿಯುವ ಕೈಗಳಿಗೆ ಒಂದು ಆಶಾಕಿರಣವಾಗಿದೆ ಎಂದು ಅವರು ತಮ್ಮ ಭಾಷಣದಲ್ಲಿ ಅಭಿಪ್ರಾಯಪಟ್ಟಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News