ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ಬೆಂಕಿ; ಓರ್ವ ಮಹಿಳೆ ಸಾವು; ಇಬ್ಬರಿಗೆ ಗಾಯ

Update: 2017-02-21 04:50 GMT

ಬೆಂಗಳೂರು, ಫೆ.21: ಹಾಸನದಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಓರ್ವ  ಮಹಿಳೆ ಮೃತಪಟ್ಟು ಇಬ್ಬರು  ಗಾಯಗೊಂಡ ಘಟನೆ ಬೆಂಗಳೂರಿನ ನೆಲಮಂಗಲದ ಬಳಿ ನಿನ್ನೆ ರಾತ್ರಿ  12 :45 ಹೊತ್ತಿಗೆ ನಡೆದಿದೆ.

 ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡು  ಬಸ್‌ನಲ್ಲಿದ್ದ ಬೆಂಗಳೂರಿನ  ಭಾಗ್ಯಮ್ಮ (50)ಎಂಬುವವರು ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ. 

ಭಾಗ್ಯಮ್ಮ ಸಂಬಂಧಿಕರ ಅಂತ್ಯ ಸಂಸ್ಕಾರಕ್ಕಾಗಿ ಚಾಮರಾಜನಗರಕ್ಕೆ ಹೋಗಿ ಬಸ್ ನಲ್ಲಿ ವಾಪಸಾಗುತ್ತಿದ್ದಾಗ ಬೆಂಕಿ ದುರಂತಕ್ಕೆ ಬಲಿಯಾಗಿದ್ದಾರೆ.
 ಗಾಯಗೊಂಡವರಲ್ಲಿ ಕೆಂಗೇರಿ ನಿವಾಸಿ ಸುರೇಶ್ ಎಂಬವರ ಪತ್ನಿ ಮಮತಾ ಎಂಬವರ ಸ್ಥಿತಿ ಚಿಂತಾಜನಕವಾಗಿದ್ದು ,  ಶೇ 70ರಷ್ಟು  ಸುಟ್ಟ  ಗಾಯಗಳೊಂದಿಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾವು ಬದುಕಿನ ಹೋರಾಟದಲ್ಲಿದ್ದಾರೆ. ಎರಡು ದಿನಗಳ ಹಿಂದೆ ಮಮತಾ ಹಾಸನದ ತವರು ಮನೆ ವೀರಾಪುರಕ್ಕೆ ತೆರಳಿದ್ದರು.

ಯಶಸ್ ಎಂಬ ಬಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿದೆ.  25ಕ್ಕೂ ಹೆಚ್ಚು ಪ್ರಯಾಣಿಕರು  ಅಪಾಯದಿಂದ ಪಾರಾಗಿದ್ದಾರೆ.
 ತಕ್ಷಣ  ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿ  ಬೆಂಕಿ ಹತೋಟಿಗೆ ತರುವಲ್ಲಿ  ಸಫಲರಾಗಿದ್ದಾರೆ.  ಅಗ್ನಿ ದುರಂತಕ್ಕೆ ಕಾರಣ ತಿಳಿದು ಬಂದಿಲ್ಲ.ನೆಲಮಂಗಲ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಕೆಎಸ್‌ಆರ್‌ಟಿಸಿ ಅಧಿಕಾರಿ ಲಿಂಗರಾಜು ಅವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News