ಕಾನೂನಾತ್ಮಕವಾದ ಕಪ್ಪು ಹಣದ ಪ್ರಮಾಣ ಹೆಚ್ಚು: ಆರ್ಥಿಕ ತಜ್ಞ ಪ್ರೊ.ಅರುಣ್ ಕುಮಾರ್

Update: 2017-02-23 14:04 GMT

ಬೆಂಗಳೂರು, ಫೆ.23: ಕಾನೂನುಬಾಹಿರಕ್ಕಿಂತ ಕಾನೂನಾತ್ಮಕವಾಗಿ ಚಲಾವಣೆಗೊಳ್ಳುವ ಕಪ್ಪು ಹಣದ ಪ್ರಮಾಣ ಹೆಚ್ಚು ಎಂದು ಆರ್ಥಿಕ ತಜ್ಞ ಅರುಣ್ ಕುಮಾರ್ ಅಭಿಪ್ರಾಯಿಸಿದ್ದಾರೆ.

ಗುರುವಾರ ಜನಚಿಂತನಾ ಕೇಂದ್ರ ಹಾಗೂ ಕರ್ನಾಟಕ ಜನಶಕ್ತಿ ನಗರದ ವೆಂಕಟಪ್ಪ ಕಲಾ ಗ್ಯಾಲರಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಕಪ್ಪು ಹಣದ ಮೂಲಗಳು ಯಾವುವು?’ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

1995-96ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ ದೇಶದ ಒಟ್ಟು ಆರ್ಥಿಕ ವ್ಯವಸ್ಥೆಯಲ್ಲಿ ಶೇ.40ರಷ್ಟು ಕಪ್ಪು ಹಣದ ವಹಿವಾಟು ಇತ್ತು. ಇದರಲ್ಲಿ ಶೇ.32 ಕಾನೂನಾತ್ಮಕವಾಗಿಯೇ ಕಪ್ಪು ಹಣದ ಆರ್ಥಿಕತೆ ಇದ್ದರೆ, ಶೇ.8ರಷ್ಟು ಮಾತ್ರ ಕಾನೂನು ಬಾಹಿರವಾಗಿ ಕಪ್ಪು ಹಣದ ವ್ಯವಹಾರ ನಡೆಯುತ್ತಿತ್ತು ಎಂದು ಅವರು ತಿಳಿಸಿದರು.

ಸ್ಟಾಕ್ ಮಾರ್ಕೆಟ್, ರಿಯಲ್ ಎಸ್ಟೇಟ್ ಹಾಗೂ ದೇವಸ್ಥಾನಗಳಲ್ಲಿ ಕಾನೂನಾತ್ಮಕವಾಗಿಯೇ ಕಪ್ಪು ಹಣವನ್ನು ಬಿಳಿಯನ್ನಾಗಿಸಿಕೊಳ್ಳುವಂತಹ ಆರ್ಥಿಕ ವ್ಯವಹಾರದ ಕೇಂದ್ರ ಬಿಂದುಗಳಾಗಿವೆ. ಆದರೆ, ಜನತೆಗೆ ಮಾತ್ರ ಡ್ರಗ್ಸ್, ನಕಲಿ ನೋಟು ಮತ್ತಿತರ ಕಾನೂನು ಬಾಹಿರ ವ್ಯವಹಾರಗಳು ಮಾತ್ರ ಕಪ್ಪು ಹಣದ ಮೂಲವೆಂದು ಬಿಂಬಿಸಲಾಗುತ್ತಿದೆ ಎಂದು ಅವರು ಹೇಳಿದರು.

ಇನ್ನು ಅನೌಪಚಾರಿಕ ವ್ಯವಹಾರಗಳಲ್ಲಿ ನಡೆಯುವ ಆರ್ಥಿಕತೆ ಕಪ್ಪು ಹಣದ್ದಾಗಿದ್ದು, ಔಪಚಾರಿಕ ವ್ಯವಹಾರಗಳು ಮಾತ್ರ ಬಿಳಿ ಹಣದ್ದು ಎಂದು ನಂಬಿಸಲಾಗಿದೆ. ಅಂದಾಜಿನ ಪ್ರಕಾರ ದೇಶದಲ್ಲಿ ಅನೌಪಚಾರಿಕವಾಗಿ ನಡೆಯುವ ವ್ಯವಹಾರಗಳಿಂದಲೇ ದೇಶದ ಶೇ.90ರಷ್ಟು ಜನತೆ ಉದ್ಯೋಗವನ್ನು ಕಂಡಿದ್ದಾರೆ. ಹಾಗೂ ಇವರ್ಯಾರು ಸರಕಾರಕ್ಕೆ ತೆರಿಗೆ ಕಟ್ಟುವಷ್ಟು ಹಣವನ್ನೇನು ಪಡೆಯುವುದಿಲ್ಲ. ಆದರೆ, ಔಪಚಾರಿಕವಾಗಿ ನಡೆಯುವ ಅನೇಕ ವ್ಯವಹಾರಗಳಿಗೆ ಕಪ್ಪು ಹಣವೇ ಮೂಲವಾಗಿರುತ್ತದೆ ಎಂದು ಅವರು ಹೇಳಿದರು.

ಕಪ್ಪು ಹಣವು ಹಲವಾರು ರೀತಿಯಲ್ಲಿ ಜನ್ಮ ತಾಳುತ್ತವೆ. ಮುಖ್ಯವಾಗಿ ಕಂಪೆನಿಗಳು ತಮ್ಮ ಆದಾಯವನ್ನು ಮರೆಮಾಚಿ ತೆರಿಗೆ ಕಟ್ಟದೆ ತಪ್ಪಿಸಿಕೊಳ್ಳುವ ಮೂಲಕ ಕಪ್ಪು ಹಣವನ್ನು ಶೇಖರಿಸಿಕೊಳ್ಳಲು ಪ್ರಾರಂಭಿಸುತ್ತಾರೆ. ಉದಾಹರಣೆಗೆ ಸತ್ಯಂ ಕಂಪೆನಿ 12ಸಾವಿರ ಉದ್ಯೋಗಿಗಳು ಇಲ್ಲದಿದ್ದರು ಇದ್ದಾರೆ ಎಂದು ತೋರಿಸಿ, ಅಷ್ಟು ಜನರ ಸಂಬಳ ಮತ್ತಿತರ ಸೌಲಭ್ಯಗಳ ಮೊತ್ತದ ಪಟ್ಟಿಯನ್ನು ತೋರಿಸಿ ಸರಕಾರಕ್ಕೆ ತೆರಿಗೆ ವಂಚಿಸಲಾಗಿತ್ತು. ಹೀಗೆ ಅನೇಕ ಕಂಪೆನಿಗಳು ತಮ್ಮ ಆದಾಯಗಳನ್ನು ಮರೆಮಾಚುವ ಮೂಲಕ ಸರಕಾರಕ್ಕೆ ತೆರಿಗೆ ವಂಚಿಸುತ್ತಿದ್ದಾರೆ ಎಂದು ಪ್ರೊ.ಅರುಣ್ ಕುಮಾರ್ ಹೇಳಿದರು.

ದೇಶದಲ್ಲಿ ನಡೆಯುತ್ತಿರುವ ಹಗರಣಗಳ ಪ್ರಮಾಣ ಹೆಚ್ಚುತ್ತಿದ್ದಂತೆ ಕಪ್ಪು ಹಣದ ವ್ಯವಹಾರವೂ ಏರಿಕೆಯಾಗುತ್ತದೆ. 1950ರಲ್ಲಿ ಒಂದು ಹಗರಣ ಆಗಿದ್ದರೆ, 1980ರಲ್ಲಿ 8 ಹಗರಣ ಕಂಡುಬಂದಿತ್ತು. ಅದೇ 1991ರಿಂದ 96ರವರೆಗೆ ದೇಶದಲ್ಲಿ 26 ಹಗರಣಗಳು ಬೆಳಕಿಗೆ ಬಂದಿತ್ತು. ಹೀಗೆ ಹಗರಣಗಳು ಹೆಚ್ಚುತ್ತಿದ್ದಂತೆ ದೇಶದಲ್ಲಿ ಕಪ್ಪು ಹಣದ ವ್ಯವಹಾರವು ಸಹ ಲಕ್ಷಾಂತರ ಕೋಟಿ ರೂ.ಗಳಿಗೆ ಮುಟ್ಟಿದೆ ಎಂದು ಅವರು ಹೇಳಿದರು.

ಈ ವೇಳೆ ಕರ್ನಾಟಕ ಜನಶಕ್ತಿಯ ಡಾ.ವಾಸು, ಮಲ್ಲಿಗೆ, ಗೌರಿ, ಮಾನವ ಹಕ್ಕು ಹೋರಾಟಗಾರ ನಗರಿ ಬಾಬಯ್ಯ, ನಗರಗೆರೆ ರಮೇಶ್, ಶಿವಸುಂದರ್, ಶ್ರೀಪಾದ್ ಭಟ್ ಮತ್ತಿತರರಿದ್ದರು.

ಸದ್ಯ ದೇಶದ ತಲಾದಾಯ 1500ರೂ. ಇದೆ. ಒಂದು ವೇಳೆ ದೇಶದಲ್ಲಿ ಕಪ್ಪು ಹಣ ವ್ಯವಹಾರ ಇಲ್ಲದಿದ್ದರೆ ಇದೇ ತಲಾದಾಯ 11ಸಾವಿರ ರೂ.ಆಗಿರುತ್ತಿತ್ತು. ಪ್ರಸ್ತುತ ದೇಶದ ಆರ್ಥಿಕ ಅಭಿವೃದ್ಧಿ 7.7ರಷ್ಟಿದೆ. ಕಪ್ಪು ವ್ಯವಹಾರ ಇಲ್ಲದಿದ್ದರೆ ಶೇ.12ಕ್ಕೆ ಏರಿಕೆಯಾಗುತ್ತಿತ್ತು.

-ಪ್ರೊ.ಅರುಣ್‌ಕುಮಾರ್ ಆರ್ಥಿಕ ತಜ್ಞ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News