ಯಾವ ಪಕ್ಷಕ್ಕೆ ಒಲಿಯಲಿದೆ ಅಧಿಕಾರ ಭಾಗ್ಯ?

Update: 2017-02-24 17:33 GMT

ಮಾರ್ಚ್ 3ರಂದು ಎಪಿಎಂಸಿ ತಿಕ್ಕಾಟ
ಗದ್ದುಗೆಗೆ ಅಭ್ಯರ್ಥಿಗಳ ಕಸರತ್ತು!
ಅನಿವಾರ್ಯವಾಗಲಿರುವ ಮೈತ್ರಿ?

ಶಿವಮೊಗ್ಗ, ಫೆ. 24: ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಮಾರ್ಚ್ 3ರಂದು ಚುನಾವಣೆ ನಿಗದಿಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಯಾವ ಪಕ್ಷಕ್ಕೆ ಅಧಿಕಾರ ಭಾಗ್ಯ ಒಲಿಯಲಿದೆ ಎಂಬ ಕುತೂಹಲ ಮನೆ ಮಾಡಿದೆ. ಇತ್ತೀಚೆಗೆ ನಡೆದ ಎಪಿಎಂಸಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ.

ಆದರೆ, ಸ್ವತಂತ್ರವಾಗಿ ಅಧಿಕಾರ ಚುಕ್ಕಾಣಿ ಹಿಡಿಯಲು ಅಗತ್ಯವಾದ ಬಹುಮತ ಯಾವುದೇ ಪಕ್ಷಕ್ಕೂ ಇಲ್ಲವಾಗಿದ್ದು, ಮೈತ್ರಿ ಆಳ್ವಿಕೆ ಅನಿವಾರ್ಯವಾಗಿದೆ. ಇದರಿಂದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ಯಾವ ಪಕ್ಷಗಳ ನಡುವೆ ಮೈತ್ರಿ ಏರ್ಪಡಲಿದೆ? ಯಾರು ಅಧ್ಯಕ್ಷ - ಉಪಾಧ್ಯಕ್ಷರಾಗಲಿದ್ದಾರೆ? ಪಕ್ಷೇತರ ಸದಸ್ಯರ ಬೆಂಬಲ ಯಾರಿಗೆ ದೊರಕಲಿದೆ? ಎಂಬಿತ್ಯಾದಿ ವಿಷಯಗಳು ಇನ್ನಷ್ಟೇ ಸ್ಪಷ್ಟವಾಗಬೇಕಾಗಿದೆ.

ರೇಸ್‌ನಲ್ಲಿ ಪ್ರಭಾವಿಗಳು: ಎಪಿಎಂಸಿ ಅಧ್ಯಕ್ಷ ಸ್ಥಾನದ ಮೇಲೆ ಪ್ರಭಾವಿ ಸದಸ್ಯರು ಕಣ್ಣಿಟ್ಟಿದ್ದಾರೆ. ಬಿಜೆಪಿಯ ಎಸ್.ಎಸ್. ಜ್ಯೋತಿ ಪ್ರಕಾಶ್, ಜೆಡಿಎಸ್ ಪಕ್ಷದ ಟಿ.ಬಿ. ಜಗದೀಶ್, ಕಾಂಗ್ರೆಸ್ ಪಕ್ಷದ ದುಗ್ಗಪ್ಪಗೌಡ ಹಾಗೂ ಕುಂಸಿ ಕ್ಷೇತ್ರದಿಂದ ಆಯ್ಕೆಯಾಗಿರುವ ಪಕ್ಷೇತರ ಅಭ್ಯರ್ಥಿ ಆರ್. ಬಾಬು (ಬಾಬಣ್ಣ) ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಈಗಾಗಲೇ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು, ಸದಸ್ಯರ ಬೆಂಬಲ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸಲಾರಂಭಿಸಿದ್ದಾರೆ.
ಈಗಾಗಲೇ ಆಕಾಂಕ್ಷಿಗಳು ಸದಸ್ಯರ ಮನವೊಲಿಸಲು ನಾನಾ ರೀತಿಯ ಕಸರತ್ತು ಮಾಡುತ್ತಿರುವ ಮಾಹಿತಿಗಳು ಕೇಳಿಬರುತ್ತಿದೆ.
ಕಾರ್ಯತಂತ್ರ?: ಕಾಂಗ್ರೆಸ್- ಜೆಡಿಎಸ್ ನಡುವೆ ಮೈತ್ರಿ ಏರ್ಪಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದ್ದು, ಈ ನಡುವೆ ಬಿಜೆಪಿ ಪಕ್ಷವು ಶತಾಯಗತಾಯ ಅಧ್ಯಕ್ಷ ಸ್ಥಾನದ ಗದ್ದುಗೆ ಪಡೆಯಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿರುವ ಮಾಹಿತಿ ಇದೆ. ಜೆಡಿಎಸ್, ಪಕ್ಷೇತರ ಸದಸ್ಯರ ಬೆಂಬಲ ಪಡೆದು ಅಧಿಕಾರದ ಗದ್ದುಗೆಯೇರುವ ಸನ್ನಾಹ ಮಾಡುತ್ತಿದೆ.

ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಸ್.ಎಸ್.ಜ್ಯೋತಿ ಪ್ರಕಾಶ್ ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಯಾವುದೇ ಪಕ್ಷಗಳ ನಡುವೆ ಮೈತ್ರಿ ಏರ್ಪಟ್ಟರೂ ತಲಾ ಒಂದೊಂದು ವರ್ಷದ ಅವಧಿಗೆ ಅಧಿಕಾರ ಹಂಚಿಕೆಯ ಒಪ್ಪಂದ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ. ಈಗಾಗಲೇ ವಿವಿಧ ಪಕ್ಷಗಳ ಮುಖಂಡರು ಅಧಿಕಾರ ಹಂಚಿಕೆಯ ಒಪ್ಪಂದದ ಸೂತ್ರಗಳನ್ನು ಸಿದ್ಧಪಡಿಸಿಟ್ಟುಕೊಂಡು ಮಾತುಕತೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.


ಮತದಾನಕ್ಕೆ ಅರ್ಹತೆ ಪಡೆದ ಸದಸ್ಯರು 17
ಎಪಿಎಂಸಿಯಲ್ಲಿ 17 ಸದಸ್ಯರ ಬಲಾಬಲವಿದ್ದು 14 ಸದಸ್ಯರು ಚುನಾವಣೆಯಲ್ಲಿ ಆಯ್ಕೆಯಾಗುತ್ತಾರೆ. ಉಳಿದ ಮೂವರು ಸದಸ್ಯರು ಸರಕಾರದಿಂದ ನಾಮ ನಿರ್ದೇಶನಗೊಳ್ಳಲಿದ್ದಾರೆ. ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆಯ ವೇಳೆ ಇವರಿಗೂ ಮತದಾನದ ಹಕ್ಕಿದೆ. ಇದರಿಂದ ಅಧಿಕಾರದ ಗದ್ದುಗೆಯೇರಲು 9 ಸದಸ್ಯರ ಬಹುಮತ ಅಗತ್ಯವಾಗಿದೆ. ಪ್ರಸ್ತುತ ಬಿಜೆಪಿಯಿಂದ 6, ಜೆಡಿಎಸ್ 4, ಕಾಂಗ್ರೆಸ್ ಬೆಂಬಲಿತ ಇಬ್ಬರು ಹಾಗೂ ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಆಡಳಿತಾರೂಢ ಪಕ್ಷದ ಮೂವರು ಸದಸ್ಯರು ನಾಮಕರಣಗೊಳ್ಳಲಿದ್ದು, ಇದರಿಂದ ಕಾಂಗ್ರೆಸ್ ಪಕ್ಷದ ಬಲ 5 ಆಗಲಿದೆ. ಇದರಿಂದ ಯಾವ್ಯಾವ ಪಕ್ಷಗಳ ನಡುವೆ ಮೈತ್ರಿ ಏರ್ಪಡಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸದಸ್ಯರು ಬಿಜೆಪಿಯ ಎಸ್.ಎಸ್.ಜ್ಯೋತಿಪ್ರಕಾಶ್, ಕಾಂಗ್ರೆಸ್‌ನ ದುಗ್ಗಪ್ಪಗೌಡ, ಜೆಡಿಎಸ್‌ನ ಟಿ.ಬಿ.ಜಗದೀಶ್, ಕುಂಸಿ ಕ್ಷೇತ್ರದ ಪಕ್ಷೇತರ ಸದಸ್ಯ ಆರ್.ಬಾಬು (ಬಾಬಣ್ಣ) ರವರು ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿರುವ ಪ್ರಮುಖರು. ಇವರೆಲ್ಲರೂ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳಲು ಇನ್ನಿಲ್ಲದ ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದ್ದು, ಯಾರಿಗೆ ಅಧ್ಯಕ್ಷ ಸ್ಥಾನದ ಭಾಗ್ಯ ಒಲಿದು ಬರಲಿದೆ ಎಂಬುದು ಮಾರ್ಚ್ 3 ರಂದು ಸ್ಪಷ್ಟವಾಗಲಿದೆ.


ಚುನಾವಣೆ ನಿಶ್ಚಿತ, ಅವಿರೋಧ ಆಯ್ಕೆ ಕ್ಷೀಣ?
ಎಪಿಎಂಸಿಯ ಅಧಿಕಾರದ ಗದ್ದುಗೆಯೇರಲು ಕಾಂಗ್ರೆಸ್- ಬಿಜೆಪಿ-ಜೆಡಿಎಸ್ ಪಕ್ಷಗಳ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಇದರಿಂದ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯುವುದು ಬಹುತೇಕ ನಿಶ್ಚಿತವೆಂದೇ ಹೇಳಲಾಗುತ್ತಿದ್ದು, ಅವಿರೋಧ ಆಯ್ಕೆ ನಡೆಯುವ ಸಾಧ್ಯತೆ ಅತ್ಯಂತ ಕಡಿಮೆ ಎಂದು ಕೆಲ ಎಪಿಎಂಸಿ ಸದಸ್ಯರು ಅಭಿಪ್ರಾಯ ಪಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News