ಸರಕಾರದ ಯೋಜನೆಗಳ ಮೂಲಕ 70,000 ಕೋ.ರೂ.ಕಪ್ಪುಹಣ ಪತ್ತೆ : ಸಿಟ್ ಉಪಾಧ್ಯಕ್ಷ ನ್ಯಾ.ಪಸಾಯತ್

Update: 2017-03-03 15:16 GMT

ಕಟಕ್,ಮಾ.3: ಸರಕಾರದ ವಿವಿಧ ಯೋಜನೆಗಳ ಮೂಲಕ 70,000 ಕೋ.ರೂ. ಗಳಷ್ಟು ಕಪ್ಪುಹಣವನ್ನು ಪತ್ತೆ ಹಚ್ಚಲಾಗಿದೆ ಎಂದು ಕಪ್ಪುಹಣ ಕುರಿತು ಸರ್ವೋಚ್ಚ ನ್ಯಾಯಾಲಯವು ನೇಮಕಗೊಳಿಸಿರುವ ವಿಶೇಷ ತನಿಖಾ ತಂಡ(ಸಿಟ್)ದ ಉಪಾಧ್ಯಕ್ಷ ನ್ಯಾ.ಅರಿಜಿತ್ ಪಸಾಯತ್ ಅವರು ಗುರುವಾರ ಇಲ್ಲಿ ತಿಳಿಸಿದರು.

ಕಪ್ಪುಣ ಕುರಿತು ಆರನೇ ಮಧ್ಯಂತರ ವರದಿಯನ್ನು ಎಪ್ರಿಲ್‌ನಲ್ಲಿ ಸರ್ವೋನ್ಯಾಯಾಲಯಕ್ಕೆ ಸಲ್ಲಿಸಲಾಗುವುದೆಂದು ತಿಳಿಸಿದ ಅವರು, 70,000 ಕೋ.ರೂ.ಗಳ ಪೈಕಿ 16,000 ಕೋ.ರೂ.ಗೂ ಅಧಿಕ ಮೊತ್ತ ವಿದೇಶಗಳಲ್ಲಿ ಹಣವನ್ನು ಕೂಡಿಟ್ಟಿರುವ ಭಾರತೀಯರ ಕುರಿತ ಜಾಗತಿಕ ಸೋರಿಕೆಗಳ ಬಳಿಕ ನಡೆಸಲಾದ ತನಿಖೆಯಲ್ಲಿ ಪತ್ತೆಯಾಗಿದೆ ಎಂದರು.

ಕಪ್ಪುಹಣ ಸೃಷ್ಟಿಯನ್ನು ತಡೆಯಲು ಸಿಟ್ ಕಳೆದ ಎರಡು ವರ್ಷಗಳಲ್ಲಿ ತನ್ನ ಮಧ್ಯಂತರ ವರದಿಗಳ ಮೂಲಕ ಹಲವಾರು ಶಿಫಾರಸುಗಳನ್ನು ಮಾಡಿದೆ. ಹೆಚ್ಚಿನ ಶಿಫಾರಸುಗಳನ್ನು ಸರಕಾರವು ಒಪ್ಪಿಕೊಂಡಿದ್ದು, ಇನ್ನು ಕೆಲವು ಪರಿಶೀಲನೆಯಲ್ಲಿವೆ ಎಂದರು.

 15 ಲ.ರೂ. ಅಥವಾ ಹೆಚ್ಚಿನ ನಗದು ಹಣವನ್ನು ಹೊಂದಿದ್ದರೆ ಅದನ್ನು ಅಘೋಷಿತ ಆದಾಯವೆಂದು ಪರಿಗಣಿಸುವ ನಮ್ಮ ಶಿಫಾರಸನ್ನು ಸರಕಾರವು ಗಂಭೀರವಾಗಿ ಪರಿಶೀಲಿಸುತ್ತಿದೆ ಎಂದ ನ್ಯಾ.ಪಸಾಯತ್, ಸಿಟ್ ಶಿಫಾರಸಿನ ಮೇರೆಗೆ ಮೂರು ಲಕ್ಷ ರೂ.ಗಿಂತ ಅಧಿಕ ನಗದು ವಹಿವಾಟನ್ನು ಅಕ್ರಮ ಮತ್ತು ದಂಡನೀಯವೆಂದು ಪರಿಗಣಿಸುವುದಾಗಿ ಕೇಂದ್ರ ಸರಕಾರವು ಈಗಾಗಲೇ ಘೋಷಿಸಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News