ಕುವೆಂಪು ಕುರಿತ ಮರು ಓದು

Update: 2017-03-03 18:47 GMT

ಡಾ. ಆರ್. ಚಲಪತಿಯವರು ‘ಕುವೆಂಪು ಬರಹಗಳ ಓದಿನ ರಾಜಕಾರಣ’ ಎಂಬ ವಿಷಯವನ್ನು ಕುರಿತು ಅಧ್ಯಯನ ಮಾಡಿ ಮಂಡಿಸಿದ ಪ್ರಬಂಧವನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿದೆ. ಕುವೆಂಪು ಅವರ ಕುರಿತ ಹಲವು ವಿಮರ್ಶಾತ್ಮಕ ಬರಹಗಳು ಬಂದಿವೆಯಾದರೂ, ಈ ಬೃಹತ್ ಪುಸ್ತಕ ಒಂದು ಮುಖ್ಯ ಸೇರ್ಪಡೆಯಾಗಿದೆ. ನವೋದಯ ಕಾಲದಲ್ಲಿ ಕುವೆಂಪು ಗುರುತಿಸಲ್ಪಡುತ್ತಾರಾದರೂ ಎಲ್ಲ ಕಾಲಕ್ಕೂ ಸಲ್ಲುವಂತಹ ಪ್ರಖರ ಚಿಂತನೆಯನ್ನು ತಮ್ಮ ಬರಹಗಳಲ್ಲಿ ಮೈಗೂಡಿಸಿಕೊಂಡವರು ಕುವೆಂಪು. ಇಂದಿನ ಬಂಡಾಯ ಸಾಹಿತಿಗಳಿಂದ ಹಿಡಿದು ದಲಿತ ಹೋರಾಟಗಾರರಿಗೂ ಬೇರೆ ಬೇರೆ ಕಾರಣಕ್ಕೆ ಕುವೆಂಪು ಇಷ್ಟವಾಗುತ್ತಾರೆ. ವೈದಿಕ ರಾಜಕಾರಣವನ್ನು ತನ್ನದೇ ವಿಶಿಷ್ಟ ರೂಪಕಗಳ ಮೂಲಕ ವಿರೋಧಿಸುತ್ತಾ ಬಂದವರು ಕುವೆಂಪು. ಅವರ ಮಹಾಕಾವ್ಯ, ಕಾದಂಬರಿ, ಕವಿತೆಗಳ ವಿಶಾಲ ನೆಲೆಗಳನ್ನು ನಮ್ಮದಾಗಿಸಿಕೊಳ್ಳಬೇಕಾದರೆ ಒಂದಿಷ್ಟು ತಯಾರಿಯ ಅಗತ್ಯವೂ ಇರುತ್ತದೆ. ಈ ನಿಟ್ಟಿನಲ್ಲಿ ಚಲಪತಿ ಬರೆದಿರುವ ‘ಕುವೆಂಪು ಬರಹಗಳ ಓದಿನ ರಾಜಕಾರಣ’ ನಮಗೆ ಬಹಳಷ್ಟು ಸಹಾಯವನ್ನು ಮಾಡುತ್ತದೆ.

ಇಲ್ಲಿ ಒಟ್ಟು ಒಂಬತ್ತು ಅಧ್ಯಾಯಗಳಿವೆ. ಮೊದಲ ಅಧ್ಯಾಯ ಪ್ರಾಸ್ತಾವಿಕ ರೂಪದಲ್ಲಿದೆ. ವರ್ತಮಾನದಲ್ಲಿ ಕುವೆಂಪು ಅವರ ಮರು ಓದಿನ ಅಗತ್ಯವನ್ನು ಅದು ಎತ್ತಿ ಹಿಡಿಯುತ್ತದೆ. ಓದಿನ ಗುರಿ, ಹೊಣೆ ಮತ್ತು ಓದುವ ರೀತಿಯನ್ನು ತಿಳಿಸುವ ಪ್ರಯತ್ನ ಮಾಡುತ್ತದೆ. ಎರಡನೆ ಅಧ್ಯಾಯದಲ್ಲಿ ಕುವೆಂಪು ಓದಿನ ಚರಿತ್ರೆ ಅಂದರೆ ಅವರ ವಿವಿಧ ಸಾಹಿತ್ಯ ಪ್ರಕಾರಗಳ ಮೇಲು ನೋಟವಿದೆ ಮತ್ತು ಅದನ್ನು ಬೇರೆ ಬೇರೆ ವರ್ಗವಾಗಿ ವಿಂಗಡಿಸಲಾಗಿದೆ. ಮೂರನೆ ಅಧ್ಯಾಯ ಲೇಖಕ ಮತ್ತು ಓದುಗರ ಅಂತರ್ಗತ ಸಂಬಂಧಗಳನ್ನು ವಿವರಿಸುತ್ತದೆ. ಅವರ ಬದುಕು, ಸಾಹಿತ್ಯ ಮತ್ತು ಸಾಂಸ್ಕೃತಿಕ ವಿದ್ಯಮಾನಗಳನ್ನು ತೆರೆದಿಡುತ್ತದೆ. ನಾಲ್ಕನೆ ಅಧ್ಯಾಯದಲ್ಲಿ ಕಾದಂಬರಿ, ನಾಟಕಗಳ ಮರು ಓದನ್ನು ಚರ್ಚಿಸುತ್ತದೆ. ಬ್ರಾಹ್ಮಣ ಕಣ್ಣಿನಲ್ಲಿ ಕುವೆಂಪು ಬರಹೆಗಳನ್ನು 5ನೆ ಅಧ್ಯಾಯ ಕಟ್ಟಿಕೊಟ್ಟರೆ, ದಲಿತ ಕಣ್ಣಿನಲ್ಲಿ ಕುವೆಂಪು ಬರಹಗಳನ್ನು ಹೇಗೆ ನೋಡಬಹುದು ಎನ್ನುವುದನ್ನು 6ನೆ ಅಧ್ಯಾಯ ಚರ್ಚಿಸುತ್ತದೆ. ಶೂದ್ರರ ಕಣ್ಣಲ್ಲಿ ಕುವೆಂಪು ಬರಹಗಳನ್ನು 7ನೆ ಅಧ್ಯಾಯ ಕಟ್ಟಿಕೊಡುತ್ತದೆ. ಅಂತೆಯೇ ಎಲ್ಲ ಮತ, ಗಡಿಗಳನ್ನು ತೂರಿ ಕುವೆಂಪು ಬರಹ ಹೇಗೆ ಅನಿಕೇತನವಾಗುತ್ತದೆ ಎನ್ನುವುದನ್ನು 8ನೆ ಅಧ್ಯಾಯ ಹೇಳುತ್ತದೆ. 9ನೆ ಅಧ್ಯಾಯದಲ್ಲಿ ಕುವೆಂಪು ಓದಿನ ಕೊಂಡಿಗಳನ್ನು ನೀಡಲಾಗಿದೆ. ಒಬ್ಬ ಸೃಜನಶೀಲ ಲೇಖಕನನ್ನು ಇಷ್ಟು ಶಿಸ್ತಿನಿಂದ ಓದುವ ಅಗತ್ಯವನ್ನು ಚಲಪತಿ ತನ್ನದೇ ಆದ ರೀತಿಯಲ್ಲಿ ಮಂಡಿಸಿದ್ದಾರೆ. 264 ಪುಟಗಳಿರುವ ಕೃತಿಯ ಮುಖಬೆಲೆ 150 ರೂ.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News