ಉ.ಕ. ಸಹ್ಯಾದ್ರಿ ಕಪ್ಪತಗುಡ್ಡ ಅಗ್ನಿ ಆರ್ಭಟಕ್ಕೆ ಧಗಧಗ!

Update: 2017-03-04 17:39 GMT

ಗದಗ, ಮಾ.4: ಉತ್ತರ ಕರ್ನಾಟಕದ ಸಹ್ಯಾದ್ರಿಯೆಂದೇ ಪ್ರಸಿದ್ಧಿ ಪಡೆದಿರುವ ಕಪ್ಪತಗುಡ್ಡದಲ್ಲಿನ ಔಷಧೀಯ ಸಸ್ಯಕಾಶಿ ಉಳಿಯುವಿಕೆಗೆ ಬೃಹತ್ ಹೋರಾಟ ನಡೆಯುತ್ತಿದೆ. ಆದರೆ ಮತ್ತೊಂದೆಡೆ ಗಣಿಕಳ್ಳರ ವಕ್ರದೃಷ್ಟಿಗೆ ಒಳಗಾದ ಆ ಗಿರಿ ಶಿಖರ ಇದೀಗ ಮತ್ತೆ ಬೆಂಕಿಗೆ ಆಹುತಿಯಾಗಿದೆ. ಪದೇಪದೇ ಈ ಅರಣ್ಯ ಪ್ರದೇಶಕ್ಕೆ ಬೆಂಕಿ ಬೀಳಲು ಕಾರಣವಾದರೂ ಏನು? ಎನ್ನುವ ಅನುಮಾನ ಕಪ್ಪತಗುಡ್ಡ ಸೆರಗಿನ ಭಾಗದ ಜನರಲ್ಲಿ ಕಾಡುತ್ತಿದೆ.


 ಹೌದು. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಭಾಗದಲ್ಲಿ ಕಪ್ಪತಗುಡ್ಡದಲ್ಲಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಯಿಂದ ಅಪಾರ ಪ್ರಮಾಣದ ಸಸ್ಯಗಳು, ಪ್ರಾಣಿಗಳು ಬೆಂಕಿಗೆ ಆಹುತಿಯಾಗಿವೆ. ಒಂದೆಡೆ ಹುಲ್ಲಿಗಾಗಿ ಕುರಿಗಾಹಿಗಳು ಗುಡ್ಡಕ್ಕೆ ಬೆಂಕಿ ಹಾಕಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ ವಾಸ್ತವದಲ್ಲಿ ಪವನ ವಿದ್ಯುತ್ ಯಂತ್ರ ಕಂಪೆನಿಗಳೇ ಆ ಗಿರಿಯನ್ನು ಸುಡುತ್ತಿವೆ ಎನ್ನುವ ಆರೋಪ ಸಹ ಕೇಳಿ ಬರುತ್ತಿದೆ.

ಇದೆಲ್ಲದರ ಮಧ್ಯೆೆ ಕಪ್ಪತಗುಡ್ಡ ಭಾರೀ ಚರ್ಚಿತ ವಿಷಯವಾಗಿರುವಾಗಲೇ ಬೆಂಕಿ ಕೆನ್ನಾಲಿಗೆಗೆ ತುತ್ತಾಗುತ್ತಿರುವುದರ ಹಿಂದೆ ಗಣಿಕುಳಗಳ ಕೈವಾಡವೂ ಇದೆ ಎನ್ನುವ ಶಂಕೆ ಸ್ಥಳೀಯರದ್ದು. ಕಪ್ಪತಗುಡ್ಡದ ಸಂಪತ್ತನ್ನು ಅನ್ಯಮಾರ್ಗದ ಮೂಲಕ ನಾಶಪಡಿಸುವ ಮೂಲಕ ತಮ್ಮ ಗುರಿ ಸಾಧಿಸಲು ಗಣಿಕುಳಗಳು ಹವಣಿ ಸುತ್ತಿವೆ ಅನ್ನುವ ಅನುಮಾನವು ಸ್ಥಳೀಯ ಜನರದ್ದಾಗಿದೆ.


 ಇನ್ನು ಹಲವು ದಶಕದಿಂದ ಪದೇಪದೇ ಕಪ್ಪತಗುಡ್ಡಕ್ಕೆ ಬೆಂಕಿ ಬೀಳುತ್ತಿದ್ದರೂ ಈತನಕ ಅರಣ್ಯ ಇಲಾಖೆ ದುಷ್ಕರ್ಮಿಗಳ ಪತ್ತೆಗೆ ಮುಂದಾಗದೇ ಇರುವುದು ವಿಪರ್ಯಾಸ. ಪದೇಪದೇ ಬೆಂಕಿ ಹಚ್ಚುವವರಾದರು ಯಾರು ಎಂಬ ಪ್ರಶ್ನೆ ಜನರಲ್ಲಿ ಕಾಡುತ್ತಿದೆ.


ಮುಂಡರಗಿ ತಾಲೂಕಿನ ಬಿಡನಾಳ ಹಾಗೂ ವಿರೂಪಾಪುರ ಗ್ರಾಮದ ಬಳಿ ಅಗ್ನಿ ಆರ್ಭಟಕ್ಕೆ ಕಪ್ಪತ್ತಗುಡ್ಡ ನಲುಗುತ್ತಿದೆ. ಕಪ್ಪತಗುಡ್ಡ ಆಕ್ರಮಿಸಲು ಗಣಿಕಂಪೆನಿ ಹಾಗೂ ಪವನ ವಿದ್ಯುತ್ ಕಂಪೆನಿಯ ಕರಿನೆರಳು ಬಿದ್ದಿದೆ. ತಮ್ಮ ಸಾಮ್ರಾಜ್ಯ ವಿಸ್ತರಿಸಲು ಪವನ ಕಂಪೆನಿಗಳು ಕಪ್ಪತಗುಡ್ಡಕ್ಕೆ ಬೆಂಕಿ ಹಾಕಿಸುತ್ತಿವೆ ಎನ್ನುವ ಆರೋಪವೂ ಇದೆ. ಆದರೆ ನೂರಾರು ಜನ ಗುಡ್ಡ ಕಾಯಲು ಪವನ ವಿದ್ಯುತ್ ಕಂಪೆನಿ ಸಿಬ್ಬಂದಿ ನೇಮಕ ಮಾಡಿದ್ದು, ರಾತ್ರೋರಾತ್ರಿ ಅಮಾ ಯಕರಾಗಲಿ ಅಥವಾ ಕುರಿಗಾಹಿಗಳಾಗಲಿ ಗುಡ್ಡ ಸುಡಲು ಹೇಗೆ ಸಾಧ್ಯ ಎನ್ನುವುದು ಸಾರ್ವಜನಿಕ ವಲಯದ ಪ್ರಶ್ನೆ.


ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಪದೇಪದೇ ಇಂತಹ ಘಟನೆಗಳು ಮುಂದೆ ಸಂಭವಿಸದಂತೆ ಅರಣ್ಯ ರಕ್ಷಣೆಗೆ ಮುಂದಾಗಬೇಕು. ಒಟ್ಟಾರೆ ಇನ್ನು ಕಪ್ಪತಗಿರಿ ಸಂರಕ್ಷಿಸಲು ಶ್ರೀಸಾಮಾನ್ಯ ಸಹ ಜಾಗೃತರಾಗುವ ಆವಶ್ಯಕತೆ ಇದೆ ಎನ್ನುವುದು ಪರಿಸರವಾದಿಗಳ ಆಶಯ.

Writer - ಫಾರೂಕ್ ಮಕಾನದಾರ

contributor

Editor - ಫಾರೂಕ್ ಮಕಾನದಾರ

contributor

Similar News