ರೈಲು ಆ್ಯಂಬುಲೆನ್ಸ್: ಏನಿದರ ವಿಶೇಷ?

Update: 2017-03-10 03:53 GMT

ಮುಂಬೈ, ಮಾ.10: ದೇಶದ ಮೊಟ್ಟಮೊದಲ ಹವಾನಿಯಂತ್ರಿತ ರೈಲು ಆ್ಯಂಬುಲೆನ್ಸ್ ಸೇವೆಯನ್ನು ಕೇಂದ್ರ ರೈಲ್ವೆ ಆರಂಭಿಸಿದೆ. ಅಪಘಾತ ಸಂದರ್ಭದಲ್ಲಿ ಗಾಯಾಳುಗಳ ಪಾಲಿನ ಗೋಲ್ಡನ್ ಅವರ್‌ನಲ್ಲಿ ಅವರ ರಕ್ಷಣೆಗೆ ಇದು ಧಾವಿಸಲಿದೆ.

ಒಂದು ಗಂಟೆ ಅಥವಾ ಮುಂಚಿತವಾಗಿ ಸೂಕ್ತ ಚಿಕಿತ್ಸೆ ದೊರೆತಲ್ಲಿ, ಅಪಘಾತಗಳಲ್ಲಿ ಗಾಯಗೊಂಡ ಸಂತ್ರಸ್ತರು ಬದುಕಿ ಉಳಿಯುವ ಸಾಧ್ಯತೆ ಇದ್ದು, ಇದನ್ನು ಗೋಲ್ಡನ್ ಅವರ್ ಎಂದು ಪರಿಣಿಸಲಾಗುತ್ತದೆ. ಕಲ್ಯಾಣ್‌ನಲ್ಲಿ ಈ ರೈಲು ಆ್ಯಂಬುಲೆನ್ಸ್ ಲಭ್ಯವಿದ್ದು, ಹವಾನಿಯಂತ್ರಿಕ ಬೋಗಿಯನ್ನು ಆಧುನೀಕರಿಸಿ ಆ್ಯಂಬುಲೆನ್ಸ್ ಆಗಿ ಪರಿವರ್ತಿಸಲಾಗಿದೆ.
"ಇದು ಭಾರತೀಯ ರೈಲ್ವೆಯ ಮೊಟ್ಟಮೊದಲ ಸುಸಜ್ಜಿತ ಹಾಗೂ ಹವಾನಿಯಂತ್ರಿತ ವೈದ್ಯಕೀಯ ನೆರವು ವ್ಯಾನ್ ಆಗಿದ್ದು, ನಾಲ್ಕು ಬೋಗಿಗಳನ್ನು ಹೀಗೆ ಪರಿವರ್ತಿಸಲಾಗಿದೆ" ಎಂದು ಕೇಂದ್ರ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ನರೇಂದ್ರ ಪಾಟೀಲ್ ವಿವರಿಸಿದ್ದಾರೆ.

ದಿವಾ- ಸಾವಂತವಾಡಿ ರೈಲು 2014ರ ಮೇ ತಿಂಗಳಲ್ಲಿ ನಾಗೊ ಠಾಣೆ ಹಾಗೂ ರೋಹಾ ನಿಲ್ದಾಣಗಳ ನಡುವೆ ಹಳಿತಪ್ಪಿ 19 ಮಂದಿ ಸಾವಿಗೀಡಾಗಿ ಇತರ 145 ಮಂದಿ ಗಾಯಗೊಂಡ ಹಿನ್ನೆಲೆಯಲ್ಲಿ ಇಂಥ ಅತ್ಯಾಧುನಿಕ ವ್ಯವಸ್ಥೆಯನ್ನು ಆರಂಭಿಸುವ ಯೋಚನೆ ಬಂದಿತ್ತು. ತುರ್ತು ಸಂದರ್ಭದಲ್ಲಿ ತಕ್ಷಣಕ್ಕೆ ಸ್ಪಂದಿಸಲು ಇದು ಅಗತ್ಯ ಎಂದು ಪ್ರಧಾನ ವ್ಯವಸ್ಥಾಪಕ ಎಸ್.ಕೆ.ಸೂದ್ ವಿವರಿಸಿದರು. ಇತರ ಆ್ಯಂಬುಲೆನ್ಸ್ಗಳಿಗಿಂತ ಹೆಚ್ಚಿನ ಗಾಯಾಳುಗಳನ್ನು ವೇಗವಾಗಿ ಕರೆದೊಯ್ಯಲು ಇದು ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News