ರಾಮಮಂದಿರ ನಿರ್ಮಾಣ ಇತ್ಯರ್ಥ ನ್ಯಾಯಾಲಯದ ಮೂಲಕವೇ ನಡೆಯಲಿ

Update: 2017-03-21 19:04 GMT

ಸೂಕ್ಷ್ಮ ಮತ್ತು ಭಾವನಾತ್ಮಕ ಕಾರಣವನ್ನು ಮುಂದಿಟ್ಟು ಒಂದು ಪ್ರಸಿದ್ಧ ಪ್ರಾಚ್ಯ ಇಲಾಖೆಯ ಕಟ್ಟಡವನ್ನು ಧ್ವಂಸಗೈದರೆ ಅಥವಾ ಅದರ ನೆಪದಲ್ಲಿ ಒಂದು ಹತ್ಯಾಕಾಂಡವನ್ನು ನಡೆಸಿದರೆ ಅದರ ವಿಚಾರಣೆ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲವೇ? ಈ ದೇಶದಲ್ಲಿ ಸಹಸ್ರಾರು ಅಮಾಯಕ ಜನರ ಮಾರಣ ಹೋಮಕ್ಕೆ ಕಾರಣವಾದ, ಹಾಡಹಗಲೇ ಸಂವಿಧಾನದ ಧ್ವಂಸಕ್ಕೆ ಕಾರಣವಾದ ರಾಮಮಂದಿರ ವಿವಾದವನ್ನು ‘ಸೂಕ್ಷ್ಮ ಮತ್ತು ಭಾವನಾತ್ಮಕ’ ವಿಷಯ ಎಂದು ಹೇಳಿ, ಅದನ್ನು ಮಾತುಕತೆಯ ಮೂಲಕ ಇತ್ಯರ್ಥ ಮಾಡಿಕೊಳ್ಳಿ ಎಂದು ಸುಪ್ರೀಂಕೋರ್ಟ್ ಸಲಹೆ ನೀಡಿದೆ. ಈ ದೇಶದಲ್ಲಿ ರಾಮಮಂದಿರ ಚಳವಳಿ ಹುಟ್ಟಿಕೊಂಡಿದ್ದು ರಾಜಕೀಯ ಕಾರಣಗಳಿಗಾಗಿಯೇ ಹೊರತು, ಧಾರ್ಮಿಕ ಕಾರಣಗಳಿಗಾಗಿ ಅಲ್ಲ. ಅದರ ನೇತೃತ್ವವನ್ನು ವಹಿಸಿರುವ ಸನ್ಯಾಸಿಗಳಾಗಲಿ, ಮುಖಂಡರುಗಳಾಗಲಿ ಧರ್ಮದೊಂದಿಗೆ, ಅಧ್ಯಾತ್ಮದೊಂದಿಗೆ ನೇರ ಸಂಬಂಧವನ್ನು ಹೊಂದಿದವರಲ್ಲ. ಬದಲಿಗೆ ಅವರೆಲ್ಲರೂ ರಾಜಕೀಯದೊಂದಿಗೆ ಸಂಬಂಧವನ್ನು ಹೊಂದಿದವರು.

ರಾಮಮಂದಿರ ದೇಶದ ಮತಗಳನ್ನ್ನು ಇಬ್ಭಾಗವಾಗಿಸುವುದಕ್ಕೆ ಒಂದು ನೆಪವಾಗಿತ್ತು. ರಾಮಮಂದಿರವಾಗಲಿ, ಬಾಬರಿ ಮಸೀದಿಯಾಗಲಿ ಈ ದೇಶದ ಹಿಂದೂಗಳನ್ನು ಅಥವಾ ಮುಸ್ಲಿಮರನ್ನು ಪೂರ್ಣವಾಗಿ ಪ್ರತಿನಿಧಿಸುವುದಿಲ್ಲ. ಅಂದರೆ ಬಾಬರಿ ಮಸೀದಿ ಧ್ವಂಸ, ಈ ದೇಶದ ಹಿಂದೂ-ಮುಸ್ಲಿಮರ ನಡುವಿನ ವಿವಾದವೇ ಅಲ್ಲ. ಅದು ಈ ದೇಶದ ಪ್ರಜಾಸತ್ತೆ, ನ್ಯಾಯವ್ಯವಸ್ಥೆಯೊಳಗೆ ನಂಬಿಕೆ ಇರುವವರು ಮತ್ತು ಇಲ್ಲದಿರುವವರ ನಡುವಿನ ವಿವಾದ. ಆ ವಿವಾದವನ್ನು ಹೊರಗಡೆ ಪರಿಹರಿಸಿಕೊಳ್ಳಿ ಎಂದು ನ್ಯಾಯಾಲಯವೇ ಸಲಹೆ ನೀಡುವುದು, ಸಂವಿಧಾನದ ಮೇಲೆ ನಡೆದ ದಾಳಿಯನ್ನು ನ್ಯಾಯಾಲಯವೇ ಪರೋಕ್ಷವಾಗಿ ಸಮ್ಮತಿಸಿದಂತೆ. ಅಂದರೆ, ನ್ಯಾಯಾಲಯ ತನ್ನ ವಿರುದ್ಧವೇ ತಾನು ತೀರ್ಪನ್ನು ನೀಡಿದಂತೆ.

 ಕಟ್ಟಡಕ್ಕೆ ಯಾವುದೇ ಧಕ್ಕೆಯನ್ನುಂಟು ಮಾಡುವುದಿಲ್ಲ ಎಂದು ದುಷ್ಕರ್ಮಿಗಳು ಅಂದು ಭರವಸೆಕೊಟ್ಟಿದ್ದು ಯಾವುದೇ ಮುಸ್ಲಿಮ್ ಸಂಘಟನೆಗಳಿಗಲ್ಲ, ನ್ಯಾಯಾಲಯಕ್ಕೆ! ಅಂತಹದೊಂದು ವಚನವನ್ನು ನೀಡಿ ಬಳಿಕ ದುಷ್ಕರ್ಮಿಗಳು ಅದನ್ನು ಉಲ್ಲಂಘಿಸಿದರು. ಅಂದರೆ ಬಾಬರಿ ಮಸೀದಿ ಕಟ್ಟಡವನ್ನು ಧ್ವಂಸಗೈದಿರುವುದೇ ಸಂವಿಧಾನ ವಿರೋಧಿಕೃತ್ಯವಾಗಿರುವಾಗ, ಅಲ್ಲಿ ಇನ್ನೊಂದು ಮಂದಿರವನ್ನು ನಿರ್ಮಿಸುವುದನ್ನು ನ್ಯಾಯಾಲಯ ಯಾವ ರೀತಿಯಲ್ಲಿ ಒಪ್ಪಿಕೊಳ್ಳುತ್ತದೆ? ತನಗಾದ ವಂಚನೆಯನ್ನು ನ್ಯಾಯಾಲಯ ಈ ಮೂಲಕ ಕ್ಷಮಿಸುವುದಕ್ಕೆ ಹೊರಟಿದೆಯೇ? ಈ ಕ್ಷಮೆ ಮುಂದಿನ ದಿನಗಳಲ್ಲಿ ಇಂತಹ ವಂಚನೆಗಳನ್ನು ಹೆಚ್ಚಿಸುವುದಿಲ್ಲವೇ? ನ್ಯಾಯ ವ್ಯವಸ್ಥೆ ಬದಿಗೆ ಸರಿದು, ಭಾವನಾತ್ಮಕತೆಯೇ ಮುನ್ನೆಲೆಗೆ ಬಂದರೆ ಈ ದೇಶದ ಕಾನೂನು ಸುವ್ಯವಸ್ಥೆ, ಶಾಂತಿ, ನೆಮ್ಮದಿಯನ್ನು ರಕ್ಷಿಸುವವರು ಯಾರು? ಸುಪ್ರೀಂಕೋರ್ಟ್ ಈ ಪ್ರಶ್ನೆಗೆ ಉತ್ತರಿಸುವುದು ಅತ್ಯಗತ್ಯವಾಗಿದೆ. ಪ್ರಶ್ನೆ, ಇಲ್ಲಿ ಎರಡೂವರೆಗೆ ಎಕರೆ ಭೂಮಿ ಮತ್ತು ಮಂದಿರ-ಮಸೀದಿಯದ್ದು ಅಲ್ಲವೇ ಅಲ್ಲ. ಈ ದೇಶದಲ್ಲಿ ಮುಸ್ಲಿಮರಿಗಾಗಲಿ, ಹಿಂದೂಗಳಿಗಾಗಲಿ ಮಸೀದಿ-ಮಂದಿರಗಳ ಕೊರತೆ ಇಲ್ಲ.

ಒಂದು ವೇಳೆ ಮಸೀದಿ ಧ್ವಂಸವನ್ನು ಈ ದೇಶದ ಮುಸ್ಲಿಮರು ಕ್ಷಮಿಸಬಹುದು. ಆದರೆ ನ್ಯಾಯ ವ್ಯವಸ್ಥೆಗಾದ ಅನ್ಯಾಯವನ್ನು ಈ ದೇಶದ ಸಕಲ ಭಾರತೀಯರು ಕ್ಷಮಿಸುತ್ತಾರೆಯೇ? ಆದುದರಿಂದಲೇ, ರಾಮಮಂದಿರದ ಪ್ರಶ್ನೆ ಬರೇ ಎರಡು ಗುಂಪುಗಳ ವಿವಾದವಲ್ಲ ಎನ್ನುವುದನ್ನು ನ್ಯಾಯಾಲಯ ಮೊದಲು ಮನವರಿಕೆ ಮಾಡಿಕೊಳ್ಳಬೇಕಾಗಿದೆ. ಆಗ ಮಾತ್ರ ರಾಮಮಂದಿರ ಕುರಿತಂತೆ ನ್ಯಾಯಾಲಯ ಸಂವಿಧಾನಬದ್ಧವಾದ, ನಿಷ್ಪಕ್ಷಪಾತ ತೀರ್ಪನ್ನು ನೀಡಲು ಯಶಸ್ವಿಯಾಗಬಹುದು. ಇರಲಿ ನ್ಯಾಯಾಲಯವೇ ಹೇಳಿದಂತೆ ಎರಡೂ ಗುಂಪುಗಳು ಈ ಪ್ರಕರಣವನ್ನು ನ್ಯಾಯಾಲಯದ ಹೊರಗಡೆಯೇ ಇತ್ಯರ್ಥಗೊಳಿಸಲು ಒಪ್ಪಿದರು ಎಂದಿಟ್ಟುಕೊಳ್ಳೋಣ ಮತ್ತು ಮುಸ್ಲಿಮ್ ಸಂಘಟನೆ ಆ ಜಾಗವನ್ನು ರಾಮಮಂದಿರ ನಿರ್ಮಾಣಕ್ಕೆ ಬಿಟ್ಟುಕೊಟ್ಟು, ಪರ್ಯಾಯವಾಗಿ ಮಸೀದಿ ನಿರ್ಮಾಣಕ್ಕೆ ಬೇರೆ ಸ್ಥಳವನ್ನು ಪಡೆದುಕೊಂಡಿತು ಎಂದು ಭಾವಿಸೋಣ. ಇಷ್ಟಾದರೂ ಪ್ರಕರಣ ಮುಗಿಯುತ್ತದೆ ಎಂದು ನ್ಯಾಯಾಲಯ ಭಾವಿಸುತ್ತದೆಯೇ? ಸಂಘಪರಿವಾರಕ್ಕೆ ಬೇಕಾಗಿರುವುದು ಮಂದಿರವಲ್ಲ, ವಿವಾದಗಳು.

ರಾಮಮಂದಿರ ಇತ್ಯರ್ಥವಾದರೆ ಅದು ಮುಂದೆ ನಿಸ್ಸಂಶಯವಾಗಿ ಕಾಶಿ ಮತ್ತು ಮಥುರಾವನ್ನು ಮುಂದಿಟ್ಟುಕೊಂಡು ಇದೇ ರೀತಿಯ ಹಿಂಸಾಚಾರದ ಹೋರಾಟಗಳಿಗೆ ಸಿದ್ಧವಾಗುತ್ತದೆ. ಈಗಾಗಲೇ ಈ ಹೇಳಿಕೆಯನ್ನು ವಿವಿಧ ಸಂಘಪರಿವಾರ ಮುಖಂಡರು ಘೋಷಿಸಿಯೂ ಇದ್ದಾರೆ. ನ್ಯಾಯಾಲಯದ ಹೊರಗಡೆ ರಾಮಮಂದಿರ ನಿರ್ಮಾಣ ಇತ್ಯರ್ಥವಾಗುವುದು ಎಂದರೆ ಒಂದು ರೀತಿಯಲ್ಲಿ ನ್ಯಾಯಾಲಯವನ್ನು ಉಲ್ಲಂಘಿಸಿ ಕಟ್ಟಡ ಧ್ವಂಸ ಮಾಡಿದವರಿಗೆ ನೀಡಿದ ಕ್ಷಮೆಯೂ ಆಗುತ್ತದೆ. ಆ ಕ್ಷಮೆ, ದುಷ್ಕರ್ಮಿಗಳಿಗೆ ಇನ್ನಷ್ಟು ವಿಧ್ವಂಸಕಾರಿ ಕೃತ್ಯಗಳನ್ನು ಎಸಗಲು ಪ್ರೋತ್ಸಾಹ ನೀಡಿದಂತಾಗುತ್ತದೆ.

ಇಂತಹ ಪ್ರೋತ್ಸಾಹವನ್ನು ನ್ಯಾಯಾಲಯವೇ ನೀಡಿದರೆ, ಈ ದೇಶದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವವರು ಯಾರು? ಬಾಬರಿ ಮಸೀದಿಯನ್ನು ರಕ್ಷಿಸಲಾಗದ ಪಾಪಪ್ರಜ್ಞೆಯೇ ಹೊಂದಿಲ್ಲದ ನ್ಯಾಯಾಲಯ ಮುಂದಿನ ದಿನಗಳಲ್ಲಿ ಕಾಶಿ, ಮಥುರಾದ ಹೆಸರಿನಲ್ಲಿ ಇನ್ನಷ್ಟು ಮಸೀದಿಗಳನ್ನು ಧ್ವಂಸಗೊಳಿಸಲು ಪರೋಕ್ಷವಾಗಿ ದುಷ್ಕರ್ಮಿಗಳಿಗೆ ಕುಮ್ಮಕ್ಕು ಕೊಡುತ್ತಿದೆಯೋ ಎಂಬ ಅನುಮಾನ ದೇಶದ ಜನರನ್ನು ಕಾಡಿದೆ. ಇಂದು ಪ್ರಜಾಸತ್ತೆಯ ಮೇಲೆ ನಂಬಿಕೆಯಿಲ್ಲದ, ಫ್ಯಾಶಿಸ್ಟ್ ಮನಸ್ಥಿತಿಯ ನಾಯಕರು ಪ್ರಜಾಸತ್ತೆಯ ದೌರ್ಬಲ್ಯಗಳನ್ನು ಬಳಸಿಕೊಂಡು ನಾಡಿನ ಚುಕ್ಕಾಣಿಯನ್ನು ಹಿಡಿದಿರುವ ಸಂದರ್ಭದಲ್ಲಿ ಜನರಿಗಿರುವ ಏಕೈಕ ಭರವಸೆ ನ್ಯಾಯಾಲಯವಾಗಿದೆ. ಆ ನ್ಯಾಯಾಲಯವೇ ಸಂವಿಧಾನದ ವ್ಯಾಪ್ತಿಯನ್ನು ಮೀರಿ, ದುಷ್ಕರ್ಮಿಗಳಿಗೆ ಪೂರಕವಾಗುವಂತಹ ಹೇಳಿಕೆಗಳನ್ನು ನೀಡುವುದು ಇನ್ನಷ್ಟು ಅಪಾಯಗಳ ಸೂಚನೆಗಳನ್ನು ನೀಡುತ್ತಿವೆ. ಆದುದರಿಂದ ಸುಪ್ರೀಂಕೋರ್ಟ್ ತಾನು ನೀಡಿರುವ ಸಲಹೆಯ ಕುರಿತಂತೆ ಪುನರ್ ಪರಿಶೀಲಿಸಿ, ಅದನ್ನು ಹಿಂದೆಗೆದುಕೊಳ್ಳುವ ಮೂಲಕ ನ್ಯಾಯಾಲಯದ ಘನತೆಯನ್ನು ಎತ್ತಿ ಹಿಡಿಯಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News