ಅಂಗನವಾಡಿ ನೌಕರರ ಬೇಡಿಕೆ ನ್ಯಾಯಸಮ್ಮತ

Update: 2017-03-22 19:01 GMT

ನಮ್ಮ ಸರಕಾರಗಳು ತಮ್ಮ ಸಾಧನೆಗಳನ್ನು ಕೊಚ್ಚಿಕೊಳ್ಳಲು ಜಿಡಿಪಿ (ಒಟ್ಟು ಆಂತರಿಕ ಉತ್ಪಾದನೆ) ಬಗ್ಗೆ ಆಗಾಗ ಮಾತನಾಡಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿವೆ. ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದ ನಂತರವಂತೂ ಸರಕಾರ ಹೇಳಿಕೊಳ್ಳುವ ಜಿಡಿಪಿ ಅಂಕಿಅಂಶಗಳ ಬಗ್ಗೆ ಜನ ಸಂದೇಹ ಪಡುವಂತಾಗಿದೆ. ಸಾಮಾನ್ಯ ಜನರು ಮಾತ್ರವಲ್ಲ, ಹೆಸರಾಂತ ಅರ್ಥಶಾಸ್ತ್ರಜ್ಞರು ಕೂಡಾ ಈ ಜಿಡಿಪಿ ಸತ್ಯಾಸತ್ಯತೆಯ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಾರೆ. ಏನೇ ಇರಲಿ ಇಷ್ಟೆಲ್ಲ ಅಭಿವೃದ್ಧಿ ಆಗಿದ್ದರೂ ಜನಸಾಮಾನ್ಯರ ದೈನಂದಿನ ಬದುಕಿನ ಪರಿಸ್ಥಿತಿ ಯಾಕೆ ಬದಲಾಗಿಲ್ಲ ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ. ಈ ದೇಶದಲ್ಲಿ ಒಂದೆಡೆ ತಿಂಗಳಿಗೆ ಒಂದೂವರೆ ಲಕ್ಷಕ್ಕೂ ಹೆಚ್ಚು ಸಂಬಳ ತೆಗೆದುಕೊಳ್ಳುವ ನೌಕರ ವರ್ಗವಿದೆ.

ಇನ್ನೊಂದೆಡೆ ತಮಗೆ ಸಿಗುವ ಐದಾರು ಸಾವಿರ ರೂ. ಸಂಬಳ ಸಾಲುವುದಿಲ್ಲವೆಂದು ಬೀದಿಗೆ ಬಂದು ಪ್ರತಿಭಟನೆ ನಡೆಸುವ ನೌಕರ ವರ್ಗ ಕೂಡಾ ಇದೆ. ಕನಿಷ್ಠ ಮಾನವೀಯ ಸೌಲಭ್ಯವೂ ಇಲ್ಲದೆ ಇವರು ಬದುಕುತ್ತಿದ್ದಾರೆ. ಸರಕಾರ ತಮಗೆ ನೀಡುವ 6 ಸಾವಿರ ರೂ. ಸಂಬಳ ಸಾಲುವುದಿಲ್ಲವೆಂದು ಅಂಗನವಾಡಿ ಕಾರ್ಯಕರ್ತೆಯರು ರಾಜಧಾನಿ ಬೆಂಗಳೂರಿಗೆ ಬಂದು ಧರಣಿ ನಡೆಸುತ್ತಿದ್ದಾರೆ. ತಮಗೆ ಈಗ ಬರುವ ಸಂಬಳ ಸಾಲುವುದಿಲ್ಲ, ತಮ್ಮ ಕನಿಷ್ಠ ಸಂಬಳವನ್ನು ತಿಂಗಳಿಗೆ 10 ಸಾವಿರ ರೂ.ಗೆ ಹೆಚ್ಚಿಸಬೇಕೆಂದು ಆಗ್ರಹಿಸಿ ಕಳೆದ ಮೂರು ದಿನಗಳಿಂದ ರಾಜಧಾನಿಯ ರಸ್ತೆಗಳಲ್ಲಿ ಇವರು ಬೀಡುಬಿಟ್ಟಿದ್ದಾರೆ. ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಸದನದಲ್ಲೂ ಈ ವಿಷಯ ಪ್ರಸ್ತಾಪವಾಗಿದೆ. ಸರಕಾರ ನಮ್ಮಿಂದ ವಿವಿಧ ಕಾರ್ಯಯೋಜನೆಗಳಿಗಾಗಿ ಕೆಲಸ ಮಾಡಿಸಿಕೊಳ್ಳುತ್ತದೆ. ಆದರೆ, ನೀಡುವ ಸಂಬಳ ಮಾತ್ರ 6 ಸಾವಿರ ರೂಪಾಯಿ. ಅಂಗನವಾಡಿಗಳಲ್ಲಿ ಕೆಲಸ ಮಾಡುವ ಸಹಾಯಕಿಯರ ಸಂಬಳ 3 ಸಾವಿರ ರೂಪಾಯಿ. ಇದು ತಮ್ಮ ಬದುಕಿನ ನಿರ್ವಹಣೆಗೆ ಸಾಲುವುದಿಲ್ಲ ಎಂದು ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಅಳಲು ತೋಡಿಕೊಂಡಿದ್ದಾರೆ.

ಇವರ ಬೇಡಿಕೆಯಲ್ಲಿ ಅತಿಶಯವಾದದ್ದೇನೂ ಇಲ್ಲ. ತಿಂಗಳಿಗೆ 6 ಸಾವಿರ ರೂ. ಸಂಬಳ ಪಡೆದು ನಾಲ್ಕು ಜನರ ಕುಟುಂಬ ನಿರ್ವಹಣೆ ಮಾಡುವುದು ಅಷ್ಟು ಸುಲಭದ ಸಂಗತಿಯಲ್ಲ. ಅಂತಲೇ ತಿಂಗಳಿಗೆ 10 ಸಾವಿರ ರೂ. ಸಂಬಳ ಬೇಕೆಂದು ಅವರು ಕೇಳುತ್ತಿದ್ದಾರೆ. ವಾಸ್ತವವಾಗಿ 10 ಸಾವಿರ ರೂ. ಸಂಬಳದಲ್ಲೂ ಕುಟುಂಬ ನಿರ್ವಹಣೆ ಸಾಧ್ಯವಿಲ್ಲ. ಈಗಿನ ದುಬಾರಿ ದಿನಗಳಲ್ಲಿ ಸರಕಾರ ನೀಡುವ ಐದಾರು ಸಾವಿರ ರೂ.ಸಂಬಳ ಯಾವುದಕ್ಕೂ ಸಾಲುವುದಿಲ್ಲ.

ಇದು ಅಂಗನವಾಡಿ ನೌಕರರ ಸಮಸ್ಯೆ ಮಾತ್ರವಲ್ಲ ಬಿಸಿಯೂಟ ನೌಕರರು, ಆಶಾಕಾರ್ಯಕರ್ತೆಯರು, ಅತಿಥಿ ಉಪನ್ಯಾಸಕರು, ಗ್ರಾಮಪಂಚಾಯತ್‌ಗಳಲ್ಲಿ ಕೆಲಸ ಮಾಡುವ ಕಂಪ್ಯೂಟರ್ ನಿರ್ವಾಹಕರು, ಗಾರ್ಮೆಂಟ್ ನೌಕರರು, ಗುತ್ತಿಗೆ ಕಾರ್ಮಿಕರು ಹೀಗೆ ಅತ್ಯಂತ ಕಡಿಮೆ ಸಂಬಳದಲ್ಲಿ ದುಡಿಯುವ ಲಕ್ಷಾಂತರ ಜನ ನಮ್ಮ ರಾಜ್ಯದಲ್ಲಿದ್ದಾರೆ. ದೇಶದಲ್ಲೂ ಇದ್ದಾರೆ. ಅವರು ಕೂಡಾ ತಮ್ಮ ಬೇಡಿಕೆಗಳಿಗಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರ ಪರಿಸ್ಥಿತಿಯಂತೂ ಅತ್ಯಂತ ಶೋಚನೀಯವಾಗಿದೆ. ಶಾಲಾಪೂರ್ವ ಹಂತದಲ್ಲಿ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡುವುದು, ಆಟ ಆಡಿಸುವುದು, ಅಕ್ಷರ ಕಲಿಸುವುದು ಇವುಗಳ ಜೊತೆಗೆ ಸರಕಾರದ ವಿವಿಧ ಕಾರ್ಯಯೋಜನೆಗೆ ತಕ್ಕಂತೆ ನಿತ್ಯವೂ ನೂರೆಂಟು ಕೆಲಸಗಳ ಹೊರೆಯನ್ನು ಇವರ ಮೇಲೆ ಸರಕಾರ ಹೊರಿಸಿದೆ. ಹೀಗೆ ಹತ್ತಾರು ವರ್ಷಗಳಿಂದ ದುಡಿಯುತ್ತಿರುವ ಈ ಕಾರ್ಯಕರ್ತೆಯರ ವೇತನವನ್ನು ಆರು ಸಾವಿರದಿಂದ ಹತ್ತು ಸಾವಿರಕ್ಕೆ ಹಾಗೂ ಸಹಾಯಕಿಯರ ವೇತನವನ್ನು ಮೂರು ಸಾವಿರದಿಂದ ಏಳೂವರೆ ಸಾವಿರ ರೂ.ಗೆ ಹೆಚ್ಚಿಸಬೇಕೆಂದು ಇವರು ಹೋರಾಟ ಮಾಡುತ್ತಲೇ ಬಂದಿದ್ದಾರೆ.

ಪ್ರತೀ ವರ್ಷ ಒಂದೆರಡುಬಾರಿ ಬೆಂಗಳೂರಿಗೆ ಬಂದು ಹೋಗುತ್ತಾರೆ. ಈಬಾರಿ ಬೆಂಗಳೂರಿಗೆ ಬಂದಿರುವ ಅವರು ತಮ್ಮ ಬೇಡಿಕೆ ಈಡೇರುವವರೆಗೂ ವಾಪಸ್ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಧರಣಿ ನಿರತರಲ್ಲಿ ಅಂಗವಿಕಲರು, ಗರ್ಭಿಣಿಯರು, ಪುಟ್ಟ ಮಕ್ಕಳನ್ನು ಹೊತ್ತುಕೊಂಡ ಗೃಹಿಣಿಯರು ಸಹಸ್ರಾರು ಸಂಖ್ಯೆಯಲ್ಲಿ ಬೆಂಗಳೂರಿಗೆ ಬಂದು ನೀರು, ಊಟವಿಲ್ಲದೆ ಸ್ವಾತಂತ್ರ ಉದ್ಯಾನವನದ ಬಯಲಿನಲ್ಲಿ ಧರಣಿ ಆರಂಭಿಸಿದ್ದಾರೆ. ಇವರ ಬೇಡಿಕೆಗೆ ಸರಕಾರ ಈವರೆಗೆ ಸರಿಯಾಗಿ ಸ್ಪಂದಿಸಿದಂತೆ ಕಾಣುತ್ತಿಲ್ಲ. ಸಮಗ್ರ ಶಿಶು ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ 63 ಸಾವಿರ ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿವೆ. ಈ 63 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ 1.26 ಲಕ್ಷ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಕೆಲಸ ಮಾಡುತ್ತಿದ್ದಾರೆ. ಈ ಕೆಲಸದ ಜೊತೆಗೆ ಸರಕಾರ ವಹಿಸಿರುವ ಅನೇಕ ಜವಾಬ್ದಾರಿಗಳನ್ನು ಕೂಡಾ ಅವರು ನಿಭಾಯಿಸಬೇಕಾಗಿದೆ.

ತಮ್ಮ ಬದುಕಿನ ನಿರ್ವಹಣೆಗೆ ಸಾಲುವಷ್ಟಾದರೂ ಸಂಬಳವನ್ನು ಕೊಡಬೇಕೆಂಬುದು ಇವರ ಬೇಡಿಕೆಯಾಗಿದೆ. ಕರ್ನಾಟಕದ ಅಕ್ಕಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ ಮತ್ತು ಕೇರಳಗಳ ಅಂಗನವಾಡಿಗಳಲ್ಲಿ ಕೆಲಸಮಾಡುವ ನೌಕರರ ಸಂಬಳ ಹತ್ತು ಸಾವಿರ ರೂ.ಗಿಂತ ಹೆಚ್ಚು ಇದೆ. ಆದರೆ, 1.82 ಲಕ್ಷ ಕೋಟಿ ರೂ. ಮುಂಗಡಪತ್ರವನ್ನು ಮಂಡಿಸಿರುವ ರಾಜ್ಯಸರಕಾರ ಅದರಲ್ಲಿ ಕೇವಲ 622 ಕೋಟಿ ರೂ. ಒದಗಿಸಿದರೂ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಯನ್ನು ಈಡೇರಿಸಬಹುದು. ಆದರೆ, ರಾಜ್ಯಸರಕಾರ ನೀಡುವ ವಿವರಣೆ ಬೇರೆಯೇ ಆಗಿದೆ. ಕೇಂದ್ರ ಸರಕಾರ 2016-17ರಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನಾ ವೆಚ್ಚ (ಐಸಿಡಿಎಸ್)ವನ್ನು 60:40 ಅನುಪಾತಕ್ಕೆ ಇಳಿಸಿದೆ. ಇದರಿಂದ ಅಂಗನವಾಡಿ ನೌಕರರಿಗೆ ರಾಜ್ಯಸರಕಾರ 5,200 ರೂ. ಹಾಗೂ ಕೇಂದ್ರ ಸರಕಾರ 1,800 ರೂ. ಪಾವತಿ ಮಾಡುವಂತಹ ಪರಿಸ್ಥಿತಿ ಉಂಟಾಗಿದೆ ಎಂಬುದು ಸರಕಾರದ ವಿವರಣೆಯಾಗಿದೆ.

ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಪ್ರತಿವರ್ಷ ಅಂಗನವಾಡಿ ನೌಕರರ ಗೌರವಧನವನ್ನು ಹೆಚ್ಚಿಸುತ್ತಾ ಬರಲಾಗಿದೆ. ಆದರೆ, ಈ ಹೆಚ್ಚಳ ತಮಗೆ ಸಾಲುವುದಿಲ್ಲ ಎಂಬುದು ಅಂಗನವಾಡಿ ನೌಕರರ ಅಸಮಾಧಾನಕ್ಕೆ ಕಾರಣವಾದ ಅಂಶವಾಗಿದೆ. ಕೇಂದ್ರ ಸರಕಾರ ಸಮರ್ಪಕವಾಗಿ ತನ್ನ ಪಾಲಿನ ಹಣವನ್ನು ಒದಗಿಸಿದ್ದರೆ ರಾಜ್ಯದಲ್ಲಿ ಈ ಪರಿಸ್ಥಿತಿ ಉಂಟಾಗಿರುತ್ತಿರಲಿಲ್ಲ. ಸದನದಲ್ಲಿ ಈ ಬಗ್ಗೆ ಪ್ರತಿಭಟನೆ ನಡೆಸುವ ಬಿಜೆಪಿ ಶಾಸಕರು ಕೇಂದ್ರದ ಮೇಲೆ ಒತ್ತಡ ತಂದು ಅಂಗನವಾಡಿ ನೌಕರರ ಸಂಬಳ ಹೆಚ್ಚಳಕ್ಕೆ ಅನುಕೂಲವಾಗುವಂತೆ ಕೇಂದ್ರದ ಅನುದಾನವನ್ನು ಹೆಚ್ಚಿಸಲು ಒತ್ತಡ ತರಬೇಕಾಗಿದೆ.

ಅಂಗನವಾಡಿ ಕಾರ್ಯಕರ್ತೆಯರ ಮಾಸಿಕ ಗೌರವ ಧನ 10 ಸಾವಿರ ರೂ.ಗೆ ಹಾಗೂ ಸಹಾಯಕಿಯರ ಗೌರವ ಧನ ಏಳೂವರೆ ಸಾವಿರ ರೂ.ಗೆ ಹೆಚ್ಚಿಸಬೇಕೆಂದು ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲೂ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದರು. ಆಗ ಕಾರ್ಯಕರ್ತೆಯರ ಸಂಘದ ಮುಖಂಡರೊಂದಿಗೆ ಸಂಧಾನ ನಡೆಸಿದ ಸರಕಾರ ಮುಂಗಡ ಪತ್ರದಲ್ಲಿ ಅವರ ಬೇಡಿಕೆಯನ್ನು ಈಡೇರಿಸುವ ಭರವಸೆಯನ್ನು ನೀಡಿತ್ತು. ಆದರೆ, ಈ ಬಾರಿ ಬಜೆಟ್‌ನಲ್ಲಿ ಕೊಟ್ಟಮಾತನ್ನು ಸರಕಾರ ಉಳಿಸಿಕೊಂಡಿಲ್ಲ ಎಂಬುದು ಅಂಗನವಾಡಿ ನೌಕರರ ಅಸಮಾಧಾನವಾಗಿದೆ.

ಇದೆಲ್ಲದರ ಒಟ್ಟು ಪರಿಣಾಮವಾಗಿ ರಾಜಧಾನಿಗೆ ಬಂದ ಅಂಗನವಾಡಿ ನೌಕರರು ನೀರು ನೆರಳಿಲ್ಲದೆ ನಡುರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸರಕಾರ ತಕ್ಷಣ ಸಂಧಾನ ಸಭೆ ಕರೆದು ಈ ಅಸಹಾಯಕ ಹೆಣ್ಣು ಮಕ್ಕಳ ಬೇಡಿಕೆಯನ್ನು ಈಡೇರಿಸುವುದು ಅಗತ್ಯವಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ ಗೌರವ ತರುವಷ್ಟು ಸಂಬಳವನ್ನಾದರೂ ಸರಕಾರ ನೀಡಬೇಕು. ಈ ಕುರಿತು ಮಂಗಳವಾರ ನಡೆದ ಮಾತುಕತೆ ವಿಫಲಗೊಂಡಿದ್ದರೂ ಮತ್ತೆ ಮಾತುಕತೆಗೆ ಸರಕಾರ ಮುಂದಾಗಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News