ತನ್ನ ಪ್ರಚಂಡ ರಾಜಕೀಯ ಜಯದ ಸಂಭ್ರಮದಲ್ಲಿ ದೇಶವನ್ನು ಸೋಲಿಸಿದ್ದಾರೆ ಮೋದಿ

Update: 2017-03-25 08:11 GMT

ಆದಿತ್ಯನಾಥ್ ಅವರನ್ನು ಆಯ್ಕೆ ಮಾಡಿರುವ ಶಾಸಕಾಂಗ ಪಕ್ಷದ ನಿರ್ಧಾರವನ್ನು ಜನಾದೇಶದ ಉತ್ತಮ ವಿಶ್ಲೇಷಣೆ ಎಂದು ಪರಿಗಣಿಸಿದರೆ, ಭಾರತದ ಪ್ರಜಾಪ್ರಭುತ್ವದ ತಿರುಳಿಗೇ ತುಕ್ಕು ಹಿಡಿದಿದೆ ಎಂದು ಅರ್ಥ. 


ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಗಾದಿ ಏರಿರುವುದು ದ್ವೇಷ ಕೆರಳಿಸುವ ಮತ್ತು ಭೀತಿ ಹುಟ್ಟಿಸುವ ಬೆಳವಣಿಗೆ. ಉತ್ತರ ಪ್ರದೇಶದ ಧ್ರುವೀಕರಣ, ನಿಂದನಾತ್ಮಕ ಹಾಗೂ ವಿಭಜನಕಾರಿ ರಾಜಕೀಯದ ಏಕೈಕ ನಾಯಕ ಎಂದು ಬಿಜೆಪಿ ಅವರನ್ನು ಪರಿಗಣಿಸಿರುವುದರಿಂದ ಇದು ದ್ವೇಷಪೂರ್ವಕ ಆಯ್ಕೆ ಎನ್ನಲೇಬೇಕಾಗುತ್ತದೆ. ಉಗ್ರ ಹಿಂದುತ್ವವಾದಿ, ಪಂಥವಾದ ಪ್ರತಿಪಾದಿಸುವ, ಪ್ರತಿಕ್ರಿಯಾತ್ಮಕ ಯೋಚನಾ ಲಹರಿ, ಸಂಘರ್ಷ ಹಿನ್ನೆಲೆಯ ಮುಖದ ಮೂಲಕವೇ ರಾಜ್ಯ ರಾಜಕೀಯದಲ್ಲಿ ಗುರುತಿಸಿಕೊಂಡವರು. ರಾಜಕೀಯದಲ್ಲಿ ಹಿಂಸೆಯನ್ನು ನ್ಯಾಯಸಮ್ಮತ ಎಂದು ಪ್ರತಿಪಾದಿಸುವವರಿಂದ ಇವರೂ ಹೊರತಲ್ಲ. ಎರಡನೆಯದಾಗಿ ಇದು ಭೀತಿ ಹುಟ್ಟಿಸುವ ಬೆಳವಣಿಗೆ; ಏಕೆಂದರೆ, ಒಂದು ಬಾರಿಗೆ ಯಾವೆಲ್ಲ ಸಂದೇಶವನ್ನು ರವಾನಿಸಲು ಸಾಧ್ಯವಿದೆಯೋ ಆ ಎಲ್ಲ ಸಂದೇಶವನ್ನು ಇದು ರವಾನಿಸಿದೆ. ಈಗಾಗಲೇ ಅಲ್ಪಸಂಖ್ಯಾತರನ್ನು ಉತ್ತರ ಪ್ರದೇಶ ಹಾಗೂ ಇತರೆಡೆಗಳ ರಾಜಕೀಯದಲ್ಲಿ ಮೂಲೆಗುಂಪು ಮಾಡಿರುವುದು ಎಲ್ಲರಿಗೂ ತಿಳಿದ ವಿಚಾರ. ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಹಾಗೂ ಸಾಂಕೇತಿಕವಾಗಿ ಆ ವರ್ಗವನ್ನು ದಾಸ್ಯದಂತೆ ಮಾರ್ಪಡಿಸಿದಂತಾಗಿದೆ.

ಬಿಜೆಪಿಯಲ್ಲಿ ಈಗ ಉಗ್ರವಾದಿಗಳ ಪ್ರಾಬಲ್ಯ ಇರುವ ಸಂಕೇತವನ್ನು ಇದು ರವಾನಿಸಿದೆ. ಅದರ ರಾಜಕೀಯ ಈಗ ನಿರೀಕ್ಷೆಯ ಬದಲು ನಿರಾಶೆಯ ರಾಜಕಾರಣವಾಗಿ ಮಾರ್ಪಟ್ಟಿದೆ. ಬಹುತ್ವದ ಬದಲಾಗಿ ಸಂಘಟಿತ ನಾರ್ಸಿವಾದವಾಗಿದೆ. ಸರ್ವಸಮ್ಮತಿಯ ಬದಲು ದ್ವೇಷಕ್ಕೆ ಇಲ್ಲಿ ಮಾನ್ಯತೆ; ಶಿಷ್ಟತೆಯ ಬದಲಾಗಿ ಹಿಂಸೆ ವಿಜೃಂಭಿಸುತ್ತಿದೆ. ತಾನು ಏನು ಮಾಡಬೇಕು ಎಂದುಕೊಂಡಿದೆಯೋ ಅದೆಲ್ಲವನ್ನೂ ಈಗ ಮಾಡಬಹುದು ಎಂಬ ನಂಬಿಕೆಯಲ್ಲಿದೆ.

ಮೊನ್ನೆಯ ಚುನಾವಣೆಯು ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭೂತಪೂರ್ವ ಜನಬೆಂಬಲವನ್ನು ದೃಢಪಡಿಸಿದೆ. ಇಂಥ ಜನಮತವನ್ನು ನಿರೀಕ್ಷಿಸದ ನಮ್ಮಂಥ ಬಹಳಷ್ಟು ಮಂದಿ, ಈ ಚುನಾವಣೆ ಏನನ್ನು ಪ್ರತಿನಿಧಿಸುತ್ತದೆ ಎಂದು ಹೇಳುವ ಸ್ಥಿತಿಯಲ್ಲಿಲ್ಲ. ವಿಭಿನ್ನ ಕಾರಣಗಳಿಂದಾಗಿ, ಮತದಾರರು ಮೋದಿಯವರ ಪ್ರತಿಸ್ಪರ್ಧಿಗಳ ಬದಲಾಗಿ ಮೋದಿ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದಾರೆ. ಪಕ್ಷದ ಮುಂಚೂಣಿ ನಾಯಕರಾಗಿ ಯಶಸ್ಸಿನ ಸಂಪೂರ್ಣ ಕೀರ್ತಿ ಅವರಿಗೇ ಸಲ್ಲುತ್ತದೆ. ಈ ಜನಮನ್ನಣೆಯನ್ನು ಅವರು ತಮ್ಮದೇ ಯೋಚನಾ ಲಹರಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ. ಇದು ಕೇವಲ ಉತ್ತರ ಪ್ರದೇಶ ಬಗೆಗಿನ ಹೇಳಿಕೆಯಲ್ಲ. ಇದು ಪ್ರಧಾನಿಯವರ ಪ್ರವೃತ್ತಿ ಹಾಗೂ ತೀರ್ಮಾನ ಬಗೆಗಿನ ಹೇಳಿಕೆ. ತನ್ನ ಪ್ರಚಂಡ ರಾಜಕೀಯ ಜಯದ ಸಂಭ್ರಮದಲ್ಲಿ ಮೋದಿ, ದೇಶವನ್ನು ಸೋಲಿಸಿದ್ದಾರೆ.

ಬಿಜೆಪಿ ಬೆಂಬಲಿಗರು ಪಕ್ಷದ ಪ್ರಜಾಪ್ರಭುತ್ವದ ಮುಖವಾಡದ ಹಿಂದೆ ಹುದುಗಿಸಿಕೊಂಡು, ಈ ಆಯ್ಕೆಯನ್ನು ಅಧಿಕೃತಗೊಳಿಸಿದ್ದಾರೆ. ಇವರ ಆಯ್ಕೆಗೆ ಶಾಸಕಾಂಗ ಪಕ್ಷದ ಅಧಿಕೃತ ಮುದ್ರೆ ಇದೆ. ಆದರೆ ಮೋದಿಯವರಿಗೆ ನೀಡಿರುವ ಅಧಿಕಾರದಿಂದಾಗಿ ಈ ವಿವರಣೆಯನ್ನು ಅರಗಿಸಿಕೊಳ್ಳುವುದು ಕಷ್ಟ. ಆದಿತ್ಯನಾಥ್ ಅವರು ಸ್ಪಷ್ಟವಾಗಿ ಜನಪ್ರಿಯ ಆಯ್ಕೆಯಾಗಿದ್ದರೆ, ಚುನಾವಣೆಗಿಂತ ಮೊದಲು ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲು ಪಕ್ಷ ಹಿಂಜರಿದದ್ದು ಏಕೆ? ರಾಜ್ಯಾದ್ಯಂತ ಪಕ್ಷಕ್ಕೆ ಜಯ ತಂದುಕೊಡುವ ಸಾಮರ್ಥ್ಯದ ಬಗ್ಗೆ ಅನಿಶ್ಚಿತತೆ ಇದ್ದರೆ, ಈ ಫಲಿತಾಂಶ ಅಂಥ ಅನಿಶ್ಚಿತತೆಯನ್ನು ಕಡಿಮೆ ಮಾಡಿಲ್ಲ. ಆದರೆ ಮೋದಿಯವರ ಭಾಷಣಗಳಲ್ಲಿ ಹಾಗೂ ಬಿಜೆಪಿಯ ಪ್ರಣಾಳಿಕೆಯಲ್ಲಿ ಸೈದ್ಧಾಂತಿಕ ಪ್ರವಾಹ ಗುಪ್ತಗಾಮಿನಿಯಾಗಿ ಹರಿದಿತ್ತು ಎಂಬ ನಿರ್ಧಾರಕ್ಕಷ್ಟೇ ಬರಬಹುದಾಗಿದೆ.

ಈ ಆಯ್ಕೆಯನ್ನು ಸಮರ್ಥಿಸುವ ಪ್ರತಿಯೊಂದು ವಾದವೂ ದೇಶದ ಪಾಲಿಗೆ ಮಾರಕ ಎನ್ನಬೇಕಾಗುತ್ತದೆ. ಆದಿತ್ಯನಾಥ್ ಅವರನ್ನು ಆಯ್ಕೆ ಮಾಡಿರುವ ಶಾಸಕಾಂಗ ಪಕ್ಷದ ನಿರ್ಧಾರವನ್ನು ಜನಾದೇಶದ ಉತ್ತಮ ವಿಶ್ಲೇಷಣೆ ಎಂದು ಪರಿಗಣಿಸಿದರೆ, ಭಾರತದ ಪ್ರಜಾಪ್ರಭುತ್ವದ ತಿರುಳಿಗೇ ತುಕ್ಕು ಹಿಡಿದಿದೆ ಎಂಬ ಅರ್ಥ. ಆದಿತ್ಯನಾಥ್ ಅವರಂಥ ನಾಯಕರು ಜನಪ್ರಿಯ ಆಯ್ಕೆಯಾಗುತ್ತಾರೆ ಎನ್ನುವಷ್ಟರ ಮಟ್ಟಿಗೆ ಭಾರತದ ರಾಜಕೀಯ ಕೋಮುವಾದೀಕರಣಗೊಂಡಿದೆ ಎನ್ನಬಹುದು. ಹಾಗಾದರೆ ಕೆಲವೊಮ್ಮೆ ಜನರು ತಪ್ಪುನಿರ್ಧಾರ ಕೈಗೊಳ್ಳುತ್ತಾರೆ ಇಲ್ಲವೇ ಪ್ರಮಾದ ಎಸಗುತ್ತಾರೆ ಎಂಬ ಕಟ್ಟಕಡೆಯ ಪ್ರಜಾಸತ್ತಾತ್ಮಕ ನಿರೀಕ್ಷೆಗಳನ್ನೂ ಬಿಡಬೇಕಾಗುತ್ತದೆ. ಕೆಲವೊಮ್ಮೆ ಅವರು ಅಪರಾಧವನ್ನು ಮನ್ನಿಸುತ್ತಾರೆ; ಮೂಲಭೂತ ಮೌಲ್ಯಗಳು ಸಾರಾಸಗಟಾಗಿ ವಿನಾಶವಾಗುವುದರ ಪರವಾಗಿ ಅವರು ಮತ ಚಲಾಯಿಸುವುದಿಲ್ಲ ಎಂಬ ತರ್ಕಗಳನ್ನು ಕೈಬಿಡಬೇಕಾಗುತ್ತದೆ. ಭಾರತದ ಪ್ರಜಾಪ್ರಭುತ್ವದಲ್ಲಿ ಮಾನವದ್ವೇಷಕ್ಕೆ ಪ್ರತಿರೋಧ ಒಡ್ಡುವ ಭಾರತೀಯ ನಾಗರಿಕರ ಪಾತ್ರವನ್ನು ಕಲ್ಪಿಸಿಕೊಳ್ಳುವುದೂ ಕಷ್ಟ.

ಹಲವು ಮಂದಿ ಪ್ರಾಜ್ಞರು ಸ್ವಯಂ ಸೋಲುವ ಮಾರ್ಗಕ್ಕೆ ಮಣಿದಿದ್ದಾರೆ. ಆದರೆ ಬಹುಶಃ ಪ್ರಜಾಪ್ರಭುತ್ವದ ಬಗೆಗೆ ಇರುವ ಗೌರವ, ರಾಜಕೀಯ ದುಷ್ಟಶಕ್ತಿಯನ್ನು ದೃಢೀಕರಿಸುವ ನಮ್ಮ ಸಾಮರ್ಥ್ಯವನ್ನು ಕೀಳಂದಾಜು ಮಾಡಿದೆ ಎನ್ನಬಹುದು.

ಪ್ರಜಾಪ್ರಭುತ್ವದ ಮೇಲಿರುವ ನಂಬಿಕೆ ಕಳೆದುಕೊಳ್ಳದೆ, ಪ್ರಜಾಸತ್ತಾತ್ಮಕ ಜನಾದೇಶದ ವಿರುದ್ಧ ನಿಲುವು ತೆಗೆದುಕೊಳ್ಳುವುದು, ಸುಲಭದ ರಾಜಕೀಯ ಕಪಟನಾಟಕವಲ್ಲ. ಆದಿತ್ಯನಾಥ್ ಅವರು ಜನಪ್ರಿಯ ಆಯ್ಕೆಯಾಗಿದ್ದರೆ, ಭಾರತೀಯ ಪ್ರಜಾಪ್ರಭುತ್ವದ ಸಂಘರ್ಷ ಮತ್ತಷ್ಟು ಉಲ್ಬಣಿಸಿದೆ ಎಂಬ ಅರ್ಥ. ಆಗ ಅದು ಮೂಲಭೂತವಾದ ಹಾಗೂ ಪ್ರಜಾಸತ್ತಾತ್ಮಕ ಮಾನವದ್ವೇಷದ ನಡುವಿನ ಸ್ಪರ್ಧೆ ಎನಿಸಿಕೊಳ್ಳುತ್ತದೆ. ಇನ್ನೊಂದು ಮಗ್ಗುಲಲ್ಲಿ ಯೋಚಿಸುವುದಾದರೆ, ಅವರು ಸಿಎಂ ಗಾದಿ ಏರಿರುವುದು ಜನಾದೇಶದ ತಪ್ಪುಅರ್ಥೈಸುವಿಕೆ ಎನ್ನುವುದಾದರೆ, ಆಗಲೂ ಗಂಭೀರ ತೊಂದರೆ ಇದೆ ಎಂದೇ ಅರ್ಥ; ಅಂದರೆ ಅದು ಪ್ರಜಾಪ್ರಭುತ್ವ ಹೊಂದಿರುವ ಇತಿಮಿತಿ ಎಂದು ಅರ್ಥೈಸಿಕೊಳ್ಳಬೇಕಾಗುತ್ತದೆ. ಹೇಗೆ ನೋಡಿದರೂ, ಸೈದ್ಧಾಂತಿಕ ಮರುಸೃಷ್ಟಿಯ ಕಲ್ಪನೆ ಇಲ್ಲದಿದ್ದರೆ, ಭಾರತೀಯ ಪ್ರಜಾಪ್ರಭುತ್ವ ಅಧಿಕಾರಕ್ಕಾಗಿ ಮೈಮರೆತಿದೆ ಎಂಬ ಅರ್ಥ.

ಪ್ರತಿಯೊಬ್ಬ ಸಂತನಿಗೂ ಗತಕಾಲ ಎನ್ನುವುದಿದೆ ಹಾಗೂ ಪ್ರತಿ ಪಾಪಿಗೂ ಭವಿಷ್ಯವಿದೆ. ಭಾರತದಲ್ಲಿ ದೊಡ್ಡಮಟ್ಟದ ರಾಜಕೀಯ ಅಪರಾಧಗಳಿಗೆ ಅಪವಾದವಾಗಿ ಈ ನಿಗ್ರಹವನ್ನು ಬಳಸಲಾಗುತ್ತದೆ. ರಾಜೀವ್‌ಗಾಂಧಿಯವರಿಂದ ಹಿಡಿದು ಇಂದಿನ ಪ್ರಧಾನಿವರೆಗೂ, ನಾಯಕರು ದೊಡ್ಡ ಪ್ರಮಾಣದ ರಾಜಕೀಯ ತೆಗಳಿಕೆಗೆ ಅರ್ಹರು ಎಂದು ಪರಿಗಣಿಸಬೇಕಾಗುತ್ತದೆ. ಆದರೆ ನಮ್ಮ ಪ್ರಜಾಪ್ರಭುತ್ವದಲ್ಲಿ ಕಳಂಕಿತ ಚಾರಿತ್ರಿಕ ದಾಖಲೆಗಳಲ್ಲೂ, ಪಾಪಿಗಳು ತಮ್ಮನ್ನು ಮರುಶೋಧ ಮಾಡಿಕೊಂಡು, ಕಳಂಕದ ಹೊರತಾಗಿಯೂ ಸಮಾಜಕ್ಕೆ ನೀಡಲು ಸಾಧ್ಯ ಎಂದು ಬಿಂಬಿಸಿಕೊಂಡಿದ್ದಾರೆ. ಆದಿತ್ಯನಾಥ್ ಅವರ ರಾಜಕೀಯ ವೃತ್ತಿಜೀವನದಲ್ಲಿ ಎದ್ದುಕಾಣುವ ಅಂಶವೆಂದರೆ, ನಾಗರಿಕತೆಯನ್ನು, ವಿಸ್ತೃತವಾಗಿ ಮಾತನಾಡುವುದನ್ನು ಮಾನ್ಯ ಮಾಡದಿರುವುದು ಅಥವಾ ಭೀತಿ ಹುಟ್ಟಿಸುವ ಹಾಗೂ ಹಿಂಸೆಯನ್ನು ಸಮರ್ಥಿಸುವ ಕ್ರಿಯೆಗಳಿಂದ ದೂರ ಉಳಿಯದಿರುವುದು. ಗೋರಖ್‌ಪುರ ರಾಜಕೀಯ ಮಾದರಿಯನ್ನು ಅಭಿವೃದ್ಧಿಯ ಶುಭಸೂಚಕ ಎಂದು ಪರಿಗಣಿಸುವುದು ಹೊರತುಪಡಿಸಿದರೆ, ಉಳಿದಂತೆ ಇಲ್ಲಿ ಏನೂ ಧನಾತ್ಮಕ ಅಂಶಗಳಿಲ್ಲ.

ಬಿಜೆಪಿ ಜಾತಿಯನ್ನು ಮೀರಿದ ರಾಜಕೀಯವನ್ನು ಕ್ರೋಡೀಕರಿ ಸುತ್ತಿದೆ ಎನ್ನುವ ಯೋಗಿ ಆದಿತ್ಯನಾಥ್ ಅವರ ಪ್ರತಿಪಾದನೆಯನ್ನು ಸಾಂಪ್ರದಾಯಿಕ ವಿಧಾನದಲ್ಲಿ ಅರ್ಥ ಮಾಡಿಕೊಂಡರೆ ಒಂದಷ್ಟು ಸತ್ಯಾಂಶವಿದೆ. ಆದರೆ ಆದಿತ್ಯನಾಥ್ ರೂಢಿಸಿಕೊಂಡಿರುವ ಜಾತಿ ಮೀರಿದ ರಾಜಕೀಯ ಕ್ರೋಡೀಕರಣವು ಹೆಚ್ಚು ಅಪಾಯಕಾರಿಯಾದ ಕೋಮು ರಾಜಕಾರಣವನ್ನು ಒಳಗೊಂಡಿದೆ ಎಂಬ ಆತಂಕಕಾರಿ ನಿರ್ಧಾರಕ್ಕೆ ನಾವು ಬರಬೇಕಾಗಿದೆ. ತಕ್ಷಣಕ್ಕೆ ರಾಜಕೀಯ ಸವಾಲುಗಳು ಸಾಕಷ್ಟಿವೆ. ಮೋದಿಯವರ ಅಧಿಕಾರದ ಉದಯವೇ, ಹಲವು ಕೊಳಕು ಲಕ್ಷಣಗಳನ್ನು ಹೊಂದಿದೆ. ಇದು ಈಗ ಭಾರತದ ಅತಿದೊಡ್ಡ ರಾಜ್ಯವನ್ನು ಪೂರ್ಣಪ್ರಮಾಣದಲ್ಲಿ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಅವರ ಕಲ್ಪನೆಗೆ ಅನುಸಾರವಾಗಿ ಮರುರೂಪಿಸುವ ಉದ್ದೇಶವನ್ನು ಹೊಂದಿವೆ.

ರಾಮಮಂದಿರ ವಿವಾದಕ್ಕೆ ಒತ್ತು ನೀಡುವುದು ಅವರಿಗೆ ಇರುವ ವಿಪುಲ ಅವಕಾಶ. ಬಿಜೆಪಿಯ ಪ್ರಾಬಲ್ಯದಿಂದಾಗಿ ಅದಕ್ಕೆ ಬಾಹ್ಯವಾಗಿ ವಿರೋಧ ವ್ಯಕ್ತವಾಗುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟ. ಇದು ಪರಿಸ್ಥಿತಿ ಮತ್ತಷ್ಟು ಹದಗೆಡಲು ಕಾರಣವಾಗುತ್ತದೆ. ಭಾರತೀಯ ಪ್ರಜಾಪ್ರಭುತ್ವದ ಸುರಕ್ಷಾ ವಾಲ್ವ್ ನಿಧಾನವಾಗಿ ಮುಚ್ಚುತ್ತಿದೆ. ಈ ಉಸಿರುಗಟ್ಟಿಸುವ ವಾತಾವರಣದಲ್ಲಿ ಯಾವ ಬಗೆಯ ರಾಜಕೀಯ ಮೊಳಕೆಯೊಡೆಯುತ್ತದೆ ಎನ್ನುವ ಕಲ್ಪನೆ ಇಲ್ಲ. ವಿಶ್ವ ಇತಿಹಾಸದ ಈ ಕ್ಷಣದಲ್ಲಿ ವಿವೇಚನಾತ್ಮಕ ನೀತಿ ಕೈಗೊಳ್ಳಬೇಕಾದ ಭಾರತ, ಅಧೋಗತಿಗೆ ಇಳಿಯುತ್ತಿರುವ ಬಗ್ಗೆ ಭಾರತದ ವಿರೋಧಿಗಳು ಒಳಗೊಳಗೇ ಖುಷಿಪಡುತ್ತಿದ್ದಾರೆ.

ನಾಥ ಪಂಥಕ್ಕೆ ತನ್ನದೇ ಆದ ಆಧ್ಯಾತ್ಮಿಕ ಪರಂಪರೆ ಇದೆ. ಆದರೆ ಉಗ್ರಗಾಮಿ ನಾಥ ಯೋಗಿಗಳು ರಾಜಕೀಯದಲ್ಲಿ ವಿನಾಶಕಾರಿ ಇತಿಹಾಸವನ್ನು ಹೊಂದಿದ್ದಾರೆ. ಅವರನ್ನು ಔರಂಗಜೇಬ್ ಕೂಡಾ ಪೋಷಿಸಿದ್ದರು. ನನ್ನ ಹುಟ್ಟೂರು ಜೋಧಪುರದಲ್ಲೂ ಅವರ ಪ್ರಭಾವ ದಟ್ಟವಾಗಿದೆ. 19ನೆ ಶತಮಾನದ ರಾಜ ಮಾನ್‌ಸಿಂಗ್ ಈ ಪಂಥದ ಅನುಯಾಯಿ. ಅದ್ಭುತ ಪ್ರತಿಭಾವಂತ. ತಮ್ಮ ಸಾಮ್ರಾಜ್ಯವನ್ನು ನಾಥರಿಗೆ ಅರ್ಪಿಸಿದವರು. ಸ್ವತಃ ಕವಿ, ರಾಜ ಹಾಗೂ ಯೋಗಿಯಾಗಿದ್ದರು. ಆದರೆ ಅವರಲ್ಲಿ ಆದರ್ಶ ರಾಜನ ಗುಣಗಳಿರಲಿಲ್ಲ. ಹಲವು ಹುಚ್ಚಾಟಗಳಿಗೂ ಹೆಸರಾಗಿದ್ದವರು. ಅವರಿಗೆ ಅಧಿಕಾರ ಇದ್ದರೂ ಅದರ ಮೇಲೆ ಪ್ರಭುತ್ವ ಹೊಂದಿದ ವರಲ್ಲ; ಅವರೊಬ್ಬ ಬುದ್ಧಿಭ್ರಮಣೆಯ ರಾಜ. ಇದೀಗ ನಾವು ಮತ್ತೆ ನಾಥರ ರಾಜಕೀಯ ಅರ್ಪಣೆಯ ಹಂತದಲ್ಲಿದ್ದೇವೆ. ಬಹುಶಃ ಹುಚ್ಚುತನ ಕೂಡಾ ದೂರ ಇರಲಾರದು.

ಕೃಪೆ : indianexpress.com

Writer - ಪ್ರತಾಪ್‌ಭಾನು ಮೆಹ್ತಾ

contributor

Editor - ಪ್ರತಾಪ್‌ಭಾನು ಮೆಹ್ತಾ

contributor

Similar News