ಯುಪಿಐನಲ್ಲಿ ದೋಷ: ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ 25 ಕೋ. ರೂ. ವಂಚನೆ ಬೆಳಕಿಗೆ

Update: 2017-03-31 13:14 GMT

ಮುಂಬೈ, ಮಾ.31: ಇತ್ತೀಚಿನ ವರ್ಷಗಳಲ್ಲಿ ದಾಖಲಾದ ಭಾರೀ ಆರ್ಥಿಕ ವಂಚನೆ ಎನ್ನಲಾದ ಪ್ರಕರಣವೊಂದರಲ್ಲಿ ಯುಪಿಐ ವ್ಯವಸ್ಥೆಯಲ್ಲಿ ಅಳವಡಿಸಲಾದ ಸಾಫ್ಟ್‌ವೇರ್‌ನಲ್ಲಿ ಇದ್ದ ‘ಬಗ್’ (ಕಂಪ್ಯೂಟರ್‌ನಿಂದ ಮಾಹಿತಿ ಕದಿಯುವ ತಂತ್ರಾಂಶ) ನಿಂದ ಬ್ಯಾಂಕ್ ಆಫ್ ಮಹಾರಾಷ್ಟ್ರದ(ಬಿಒಎಮ್) ಖಾತೆಯಿಂದ 25 ಕೋಟಿ ರೂ.ನಷ್ಟು ಮೊತ್ತದ ಹಣ ವರ್ಗಾವಣೆಯಾಗಿದೆ.

ಈ ಹಣವು ಇತರ 19 ಬ್ಯಾಂಕ್‌ಗಳ ಖಾತೆಗೆ ವರ್ಗಾವಣೆಯಾಗಿದ್ದು ಇದನ್ನು ವಸೂಲು ಮಾಡಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ)ದ ಆಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಪಿ.ಹೋಟ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸ್ಥಳೀಯ ಮೂಲದ ಇನ್‌ಫ್ರಾಸಾಫ್ಟ್ ಟೆಕ್ ಎಂಬ ಸಂಸ್ಥೆಯಿಂದ ಏಕೀಕೃತ ಪಾವತಿ ಅಂತರ್‌ಸಂಪರ್ಕ ಸಾಧನವೊಂದನ್ನು (ಯುಪಿಐ) ಬ್ಯಾಂಕ್ ಆಫ್ ಮಹಾರಾಷ್ಟ್ರ ಪಡೆದುಕೊಂಡು ತನ್ನ ಕಂಪ್ಯೂಟರ್ ವ್ಯವಸ್ಥೆಗೆ ಅಳವಡಿಸಿತ್ತು. ಈ ವ್ಯವಸ್ಥೆಯಲ್ಲಿದ್ದ ‘ಬಗ್’ನ ಕಾರಣ ಗ್ರಾಹಕರ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದಿದ್ದರೂ ಅವರ ಖಾತೆಯಿಂದ ಇತರ ಬ್ಯಾಂಕ್‌ನ ಗ್ರಾಹಕರ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ.

 ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ (ಸಿಬಿಎಸ್‌ಸಿ) ಬ್ಯಾಂಕ್‌ನ ವ್ಯವಹಾರವೊಂದನ್ನು ತಿರಸ್ಕರಿಸಿದರೂ,ಬ್ಯಾಂಕಿನಲ್ಲಿರುವ ಯುಪಿಐ ‘ವ್ಯವಹಾರ ಯಶಸ್ವಿ’ ಎಂಬ ಸಂದೇಶವನ್ನು ಎನ್‌ಪಿಸಿಐಗೆ ಕಳುಹಿಸುತ್ತದೆ. ಸಿಬಿಎಸ್‌ಸಿ ‘ಬೇಡ’ ಎಂದು ಸಂದೇಶ ಕಳುಹಿಸಿದರೂ, ಬ್ಯಾಂಕಿನ ಯುಪಿಐ ಮಾಹಿತಿಯ ಆಧಾರದಲ್ಲಿ ನಾವು ವ್ಯವಹಾರವನ್ನು ಮುಗಿಸುತ್ತೇವೆ ಎಂದು ಹೋಟ ತಿಳಿಸಿದ್ದಾರೆ.

ಫೆ.22ರಂದು ಈ ವಂಚನೆಯ ಬಗ್ಗೆ ಮೊದಲು ಮಾಹಿತಿ ದೊರೆಯಿತು ಎಂದೂ ಅವರು ತಿಳಿಸಿದ್ದಾರೆ. ಔರಂಗಾಬಾದ್‌ನ ಸುಮಾರು 50-60 ಮಂದಿ ಈ ‘ಅವ್ಯವಸ್ಥೆ’ಯ ಮಾಹಿತಿ ಪಡೆದು ಸಾಕಷ್ಟು ಮೊತ್ತವನ್ನು ತಮ್ಮ ಖಾತೆಗೆ ಜಮೆ ಮಾಡಿಸಿದ್ದಾರೆ. ಇವರು 19 ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿದವರು. ಈ ಖಾತೆಗಳಿಂದ ಹಣ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ .

ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಇತರ ಮೂರು ಬ್ಯಾಂಕ್‌ಗಳೂ ಇದೇ ಸಂಸ್ಥೆಯಿಂದ ಕಂಪ್ಯೂಟರ್ ಸಾಫ್ಟ್‌ವೇರ್ ಖರೀದಿಸಿದ್ದು ಆ ಬ್ಯಾಂಕ್‌ಗಳಲ್ಲಿ ಯಾವುದೇ ಅವ್ಯವಸ್ಥೆ ಕಂಡು ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.

ಕಳೆದ ವಾರ ಮಹಾರಾಷ್ಟ್ರದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿ ಕೆಲವರನ್ನು ಬಂಧಿಸಿದ ಬಳಿಕ ಪ್ರಕರಣದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇನ್ನು ಮುಂದೆ ಯುಪಿಐಗೆ ಸೇರ್ಪಡೆಗೊಳ್ಳ ಬಯಸುವ ಯಾವುದೇ ಬ್ಯಾಂಕ್ ತಮ್ಮ ಕಂಪ್ಯೂಟರ್ ಅಪ್ಲಿಕೇಷನ್‌ಗಳನ್ನು ಆಡಿಟರ್‌ಗಳಿಂದ ಪರಿಶೋಧನೆಗೆ ಒಳಪಡಿಸಿದ ಬಳಿಕವೇ ಸೇರ್ಪಡೆಗೊಳಿಸಲಾಗುವುದು. ಇದುವರೆಗೆ 44 ಬ್ಯಾಂಕ್‌ಗಳು ಯುಪಿಐಗೆ ಸೇರ್ಪಡೆಗೊಂಡಿವೆ.

45ನೇ ಬ್ಯಾಂಕ್ ಸೇರ್ಪಡೆಗೆ ಅರ್ಜಿ ಸಲ್ಲಿಸುವಾಗ ಸಾಕಷ್ಟು ಮುಂಜಾಗ್ರತೆ ವಹಿಸಬೇಕು ಎಂಬ ಪಾಠ ಕಲಿತಿದ್ದೇವೆ ಎಂದು ಹೋಟ ತಿಳಿಸಿದ್ದಾರೆ. ಆರ್ಥಿಕ ಕ್ಷೇತ್ರಕ್ಕೆ ಪ್ರತ್ಯೇಕ ಸಿಇಆರ್‌ಟಿ-ಇನ್(ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ) ರಚಿಸಲು ಸಿದ್ದತೆ ನಡೆಯುತ್ತಿದೆ ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News