ಕ್ರಾಂತಿಕಾರಿ ಗದ್ದರ್ ಏಕೆ ಹೀಗಾದರು...

Update: 2017-04-02 18:59 GMT

ಆಂಧ್ರಪ್ರದೇಶದ ಕ್ರಾಂತಿಕಾರಿ ಕವಿ ಮತ್ತು ಹಾಡುಗಾರ ಗದ್ದರ್ ಏಕೆ ಹೀಗಾದರು? ಈ ಪ್ರಶ್ನೆಯನ್ನು ಕೇಳಿ ಕೆಲ ಮಿತ್ರರು ನನಗೆ ಫೋನ್ ಮಾಡಿದರು. ಅದರಲ್ಲೂ ಯುವಕರು ಕೆದಕಿ ಕೆದಕಿ ಕೇಳಿದರು. ತಮ್ಮ ಹಾಡುಗಳಲ್ಲಿ ಕಂದಾಚಾರ, ದೇವರ ಪೂಜೆ, ಗಣೇಶ ಮತ್ತು ಪುಟ್ಟಪರ್ತಿ ಸಾಯಿಬಾಬಾ ಅವರನ್ನು ಲೇವಡಿ ಮಾಡುತ್ತಿದ್ದ ಗದ್ದರ್ ಇತ್ತೀಚೆಗೆ ತೆಲಂಗಾಣದ ಕೆಲ ದೇವಾಲಯಗಳಿಗೆ ಹೋಗಿ, ಅಭಿಷೇಕ ಮತ್ತು ಬಿಲ್ವಾರ್ಚನೆ ಮಾಡಿಸಿದರು ಎಂಬ ಸಂಗತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದೆ. ಪುರೋಹಿತರೊಬ್ಬರ ಮುಂದೆ ಮಂಡಿಯೂರಿ ಕುಳಿತ ಛಾಯಾಚಿತ್ರ ಬೆಳಕಿಗೆ ಬಂದಿದೆ. ಆದರೆ ಮಾಧ್ಯಮಗಳಲ್ಲಿ ಇದು ಅಷ್ಟು ಪ್ರಾಮುಖ್ಯತೆ ಪಡೆಯಲಿಲ್ಲ. ಹಿಂದೂಸ್ತಾನ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಮಾತ್ರ ಅಂತರ್ಜಾಲ ತಾಣಗಳಲ್ಲಿ ಸುಳಿದಾಡಿತು.

ಬೇರೆ ಯಾರೋ ಈ ರೀತಿ ಮಾಡಿದ್ದರೆ, ಅದು ಅಷ್ಟು ದೊಡ್ಡ ಸುದ್ದಿಯಾಗುತ್ತಿರಲಿಲ್ಲ. ಅನೇಕ ಎಡಪಂಥೀಯ ನಾಯಕರು ಕೂಡ ತಮ್ಮ ಕುಟುಂಬ ಸದಸ್ಯರೊಂದಿಗೆ ದೇವರ ದರ್ಶನ ಮಾಡಿ ಬಂದ ಉದಾಹರಣೆಗಳು ಇವೆ. ಇದನ್ನೆಲ್ಲ ವೈಯಕ್ತಿಕ ನಂಬಿಕೆಗಳೆಂದು ತಳ್ಳಿ ಹಾಕಿಬಿಡಬಹುದು. ಆದರೆ ಗದ್ದರ್ ಉಳಿದವರಂತೆ ಅಲ್ಲ. ತಮ್ಮ ಹಾಡುಗಳಿಂದಲೇ ಲಕ್ಷಾಂತರ ಯುವಕರಿಗೆ ಮೈ ನೆತ್ತರು ಉಕ್ಕುವಂತೆ ಮಾಡಿದವರು. ಇವರ ಹಾಡುಗಳನ್ನು ಕೇಳಿ, ಅನೇಕ ಯುವಕರು ಎಡಪಂಥೀಯ ಚಳವಳಿಗೆ ಬಂದರು.

 ಅಷ್ಟೇ ಅಲ್ಲ, ಹೆಗಲ ಮೇಲೆ ಬಂದೂಕು ಹೊತ್ತುಕೊಂಡು ನಲ್ಲಮಲ್ಲ ಕಾಡುಗಳಲ್ಲೂ ಅಲೆದಾಡಿದ್ದಾರೆ. ಗಡಿ ದಾಟಿ ಛತ್ತೀಸ್‌ಗಡಕ್ಕೂ ಹೋಗಿದ್ದಾರೆ. ಬಂದೂಕಿಗೆ ಎದೆಯೊಡ್ಡಿ ಹುತಾತ್ಮರಾಗಿದ್ದಾರೆ. ಗದ್ದರ್ ಹಾಡುತ್ತಾರೆಂದರೆ, ಆಂಧ್ರದಲ್ಲಿ ಸರಕಾರಗಳೇ ನಡುಗಿ ಹೋಗಿವೆ. ಕರ್ನಾಟಕಕ್ಕೂ ಅವರು ಅನೇಕ ಬಾರಿ ಬಂದು ಹೋಗಿದ್ದಾರೆ. ರಾಯಚೂರಿನಲ್ಲಿ ಮಾವೋವಾದಿ ಚಳವಳಿ ತೀವ್ರವಾಗಿದ್ದಾಗ, ಗದ್ದರ್ ಬಂದಿದ್ದರು. ಅವರ ಭಾಷಣ ಮತ್ತು ಹಾಡಿನ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಅನುಮತಿ ನೀಡಲಿಲ್ಲ. ಇದಕ್ಕೆ ಹೆದರದ ಗದ್ದರ್, ಮನೆಮನೆ ಬಾಗಿಲಿಗೆ ಹೋಗಿ ಹಾಡುತ್ತೇನೆ. ಅದಕ್ಕೆ ಅನುಮತಿ ಬೇಕಿಲ್ಲ ಎಂದು ಸವಾಲು ಹಾಕಿದ್ದರು.

ಗದ್ದರ್ ಬರೀ ಹಾಡಿ, ಮನೆಗೆ ಹೋಗಲಿಲ್ಲ. ಬಂದೂಕನ್ನು ಹೆಗಲ ಮೇಲೆ ಹೊತ್ತುಕೊಂಡು ತೆಲಂಗಾಣ ಕಾಡಿನಲ್ಲೂ ಅಲೆದಾಡಿದರು. ದಟ್ಟ ಅಡವಿಗಳಲ್ಲಿ ಇದ್ದ ಆದಿವಾಸಿಗಳ ಜೋಪಡಿಗಳಿಗೆ ಹೋಗಿ, ಹಾಡಿನ ಮೂಲಕ ಕ್ರಾಂತಿಯ ಸಂದೇಶ ನೀಡಿದರು. ಬೆನ್ನಟ್ಟಿ ಬಂದ ಪೊಲೀಸರಿಂದ ತಪ್ಪಿಸಿಕೊಂಡು ಉಪವಾಸ, ವನವಾಸ ಅನುಭವಿಸಿದರು. ಎಂಬತ್ತರ ಆ ದಶಕದಲ್ಲಿ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಸರಕಾರ ಮನವಿ ಮಾಡಿಕೊಂಡಾಗ, ಗದ್ದರ್ ಕೂಡ ಕಾಡಿನಿಂದ ಹೊರಬಂದರು. ಹೊರಗೆ ಬಂದ ಆ ದಿನ, ಹೈದರಾಬಾದಿನ ನಿಜಾಮ ಕಾಲೇಜಿನ ಮೈದಾನದಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಜನ ಅವರ ಕ್ರಾಂತಿಕಾರಿ ಹಾಡುಗಳನ್ನು ಕೇಳಲು ಸೇರಿದ್ದರು.

ಆಂಧ್ರದ ಮೇದಕ್ ಜಿಲ್ಲೆಯ ದಲಿತ ಕೂಲಿಕಾರರ ಕುಟುಂಬದಲ್ಲಿ ಜನಿಸಿದ ಗದ್ದರ್ ಅಸ್ಪಶ್ಯತೆ ಮತ್ತು ಬಡತನದ ನೋವನ್ನು ಬಾಲ್ಯದಲ್ಲೇ ಅನುಭವಿಸಿದರು. ಇಂಜಿನಿಯರಿಂಗ್ ಓದಲು ಹೈದರಾಬಾದ್‌ಗೆ ಬಂದ ಅವರು ಕೆನರಾ ಬ್ಯಾಂಕ್‌ನಲ್ಲಿ ನೌಕರಿಗೆ ಸೇರಿದರು. ಈ ನೌಕರಿ ಮಾಡುತ್ತಿರುವಾಗಲೇ ಕಲೆ, ಸಾಹಿತ್ಯಕ್ಕೆ ಮಾರು ಹೋದ ಅವರು ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಾಡತೊಡಗಿದರು. ಆರಂಭದಲ್ಲಿ ಸಿನೆಮಾ ಹಾಡುಗಳು, ನಂತರ ಜನಪದ ಹಾಡುಗಳ ಮೂಲಕ ಜನಪ್ರಿಯರಾದರು. ಈ ನಡುವೆ ನರಸಿಂಗರಾವ್ ಎಂಬ ಕಮ್ಯುನಿಸ್ಟ್ ವಿಚಾರವಾದಿಯ ಸಂಪರ್ಕದಿಂದ ಮಾರ್ಕ್ಸ್‌ವಾದದತ್ತ ಹೊರಳಿದರು. ಆ ರೀತಿ ಹೊರಳಿ ನಿಂತವರು ಮತ್ತೆ ದಿಕ್ಕನ್ನು ಬದಲಿಸಲಿಲ್ಲ. ಜನಸಂಸ್ಕೃತಿಯ ಭಾಗವಾದ ಜಾನಪದ ಹಾಡುಗಳಿಗೆ ಕ್ರಾಂತಿಕಾರಿ ಸ್ಪರ್ಶ ನೀಡಿ ಹೋರಾಟದ ಹಾಡುಗಳಿಗೆ ಹೊಸ ಆಯಾಮ ನೀಡಿದರು.

ಹಾಡುತ್ತ, ಹಾಡುತ್ತ ಜನಸಾಮಾನ್ಯರ ಮನೆ ಮತ್ತು ಮನಸ್ಸುಗಳಲ್ಲಿ ಸ್ಥಾನ ಕಲ್ಪಿಸಿಕೊಂಡರು. ಆಂಧ್ರಪ್ರದೇಶದ ‘ವಿಪ್ಲವ ರಚಯಿತಲು ಸಂಘ’ (ವಿರಸಂ-ಕ್ರಾಂತಿಕಾರಿ ಲೇಖಕರ ಸಂಘ) ಸೇರಿದರು. ಖ್ಯಾತ ಕವಿ ಶ್ರೀ ಶ್ರೀ ಮತ್ತು ಚರಬಂಡ ರಾಜು ಅವರಿಂದ ಪ್ರಭಾವಿತರಾದ ಗದ್ದರ್ ಬರೀ ಮೈಯಲ್ಲಿ ಹೆಗಲ ಮೇಲೆ ಕಂಬಳಿ ಹೊತ್ತುಕೊಂಡು, ಕೈಯಲ್ಲಿ ಕೆಂಬಾವುಟ ಹಿಡಿದು ಹಾಡತೊಡಗಿದರು. ಜನರು ಹುಚ್ಚೆದ್ದು ಕುಣಿದರು. 2003-2004ರ ಆಸುಪಾಸಿನಲ್ಲಿ ಅದೇ ನಿಜಾಮ ಕಾಲೇಜು ಮೈದಾನದಲ್ಲಿ ಗದ್ದರ್ ಹಾಡು ಕೇಳುವ ಅವಕಾಶ ನನಗೂ ದೊರೆತಿತ್ತು. ಆಗಲೂ ಲಕ್ಷಕ್ಕೂ ಮೀರಿ ಜನರು ಸೇರಿದ್ದರು. 70 ಮತ್ತು 80ರ ದಶಕದ ತೆಲುಗು ಸಿನೆಮಾಗಳೂ ಸಹ ಗದ್ದರ್ ಹಾಡುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಿನೆಮಾಗಳಲ್ಲಿ ಹಾಡಲು ಗದ್ದರ್‌ಗೆ ಮಾವೋವಾದಿ ಪಾರ್ಟಿ ಅನುಮತಿ ನೀಡಲಿಲ್ಲ. ಹೀಗಾಗಿ ಎರ್ರಸೈನಂದಂತಹ ಸಿನೆಮಾಗಳಲ್ಲಿ ಗದ್ದರ್ ಹಾಡುಗಳನ್ನೇ ಎಸ್.ಪಿ.ಬಾಲಸುಬ್ರಮಣ್ಯಂ ಹಾಡಿದರು. ಈ ಹಾಡುಗಳನ್ನು ಆಂಧ್ರದ ಹಳ್ಳಿಗಳಲ್ಲಿ ಜನ ಮತ್ತೆ ಮತ್ತೆ ಹಾಡುತ್ತಾರೆ.

ಇಂಥ ಗದ್ದರ್ ಅವರನ್ನು ಬಾಗಲಕೋಟೆಯ ಮಹಾಲಿಂಗಪುರಕ್ಕೆ ಬಂಡಾಯ ಸಾಹಿತ್ಯ ಸಮ್ಮೇಳನದ ಉದ್ಘಾಟನೆಗೆ ಆಹ್ವಾನಿಸಿದ್ದೆವು. ಆಗ ಅಲ್ಲಿ ಬಂದು, ಹಾಡಿದ ಗದ್ದರ್ ನೆನಪು ಇನ್ನೂ ಹಸಿರಾಗಿದೆ. ಅಷ್ಟರೊಳಗೆ ಗದ್ದರ್, ಪೊಲೀಸರು ಛೂ ಬಿಟ್ಟ ಬಾಡಿಗೆ ಹಂತಕರಿಂದ ಗುಂಡಿನ ದಾಳಿಗೆ ಒಳಗಾಗಿದ್ದರು. ಈ ದಾಳಿಯಲ್ಲಿ ಬದುಕುಳಿದರೂ ಎದೆಗೂಡಿನಲ್ಲಿ ಎರಡು ಗುಂಡುಗಳನ್ನು ಹೊರತೆಗೆಯಲು ಆಗಿರಲಿಲ್ಲ. ಶಸ್ತ್ರಚಿಕಿತ್ಸೆ ಮೂಲಕ ಈ ಗುಂಡುಗಳನ್ನು ಹೊರತೆಗೆದರೆ, ಜೀವಕ್ಕೆ ಅಪಾಯವೆಂದು ವೈದ್ಯರು ಹೇಳಿದ್ದರು. ಅಂತಲೇ ಈ ಗುಂಡುಗಳನ್ನು ದೇಹದಲ್ಲಿ ಇಟ್ಟುಕೊಂಡೇ ಮಹಾಲಿಂಗಪುರಕ್ಕೆ ಬಂದಿದ್ದ ಗದ್ದರ್ ಅದೇ ಉತ್ಸಾಹದಿಂದ ವೇದಿಕೆ ಮೇಲೆ ಕುಣಿದಾಡಿ, ಹಾಡಿದರು. ಅವರ ಹಾಡುಗಳನ್ನು ಕೇಳಲು ಸುತ್ತಮುತ್ತಲಿನ ಜಿಲ್ಲೆಗಳಿಂದ ಸಾವಿರಾರು ಜನ ಬಂದಿದ್ದರು.

ಗದ್ದರ್ ಅವರನ್ನು ಮೂರನೆ ಬಾರಿ ನೋಡಿದ್ದು ಚಿತ್ರದುರ್ಗದಲ್ಲಿ. ಮುರುಘಾಮಠದ ಶರಣರು ನೀಡಿದ ಬಸವಶ್ರೀ ಪ್ರಶಸ್ತಿ ಸ್ವೀಕರಿಸಲು ಗದ್ದರ್ ಬಂದಿದ್ದರು. ಯಾವುದೇ ಕಾರಣಕ್ಕೂ ಗದ್ದರ್‌ಗೆ ಪ್ರಶಸ್ತಿ ನೀಡಬಾರದೆಂದು ಪೊಲೀಸರಿಂದ, ಸರಕಾರದಿಂದ ಮತ್ತು ಕೆಲ ಮಠಾಧೀಶರಿಂದ ಒತ್ತಡ ಬಂದರೂ ಕೂಡ ಮುರುಘಾ ಶರಣರು ಮಣಿಯಲಿಲ್ಲ. ಆಗ ಎಬಿವಿಪಿಯವರು ದಾವಣಗೆರೆಯಲ್ಲಿ ಮುರುಘಾಶರಣರ ಪ್ರತಿಕೃತಿ ದಹನ ಮಾಡಿದ್ದರು. ಈ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕೇಂದ್ರ ಸಚಿವರಾಗಿದ್ದ ಜಾರ್ಜ್ ಫೆರ್ನಾಂಡಿಸ್ ಮುಖ್ಯ ಅತಿಥಿಯಾಗಿ ಬರಬೇಕಿತ್ತು. ಆದರೆ ಗದ್ದರ್ ಕಾರ್ಯಕ್ರಮಕ್ಕೆ ಹೋಗಕೂಡದೆಂದು ಆಗಿನ ಗೃಹ ಸಚಿವ ಅಡ್ವಾಣಿ ತಾಕೀತು ಮಾಡಿದ್ದರು. ಹೀಗಾಗಿ ಜಾರ್ಜ್ ಫೆರ್ನಾಂಡಿಸ್ ಬರಲಿಲ್ಲ. ಅವರ ಬದಲಿಗೆ ಖ್ಯಾತ ನ್ಯಾಯವಾದಿ ರವಿವರ್ಮಕುಮಾರ ಬಂದರು. ಆ ನಂತರ, ಮತ್ತೊಂದು ತಿಂಗಳು ಬಿಟ್ಟು ಚಿಕ್ಕಮಗಳೂರಿನಲ್ಲಿ ಕೋಮು ಸೌಹಾರ್ದ ವೇದಿಕೆ ಸಂಘ ಪರಿವಾರದ ಹುನ್ನಾರಗಳ ವಿರುದ್ಧ ಕಾರ್ಯಕ್ರಮ ರೂಪಿಸಿದಾಗ, ಅಲ್ಲಿಗೆ ಬಂದಿದ್ದ ಗದ್ದರ್ ಮೊವಣಿಗೆಯಲ್ಲಿ ಪಾಲ್ಗೊಂಡಿದ್ದರು.

80ರ ದಶಕದಲ್ಲಿ ಗದ್ದರ್ ಆಗಾಗ ಬೆಂಗಳೂರಿಗೆ ಬರುತ್ತಿದ್ದರು. ಗದ್ದರ್ ಹಾಡುಗಳೆಂದರೆ ವಿಚಾರವಾದಿ ಎಚ್.ನರಸಿಂಹಯ್ಯ ಅವರಿಗೆ ತುಂಬಾ ಇಷ್ಟ. ಅದರಲ್ಲೂ ಮೂಢನಂಬಿಕೆಗಳನ್ನು ಲೇವಡಿ ಮಾಡಿ ಗದ್ದರ್ ಹಾಡುತ್ತಿದ್ದುದನ್ನು ಇಷ್ಟಪಟ್ಟು ಆಲಿಸುತ್ತಿದ್ದರು. ತಮ್ಮ ನ್ಯಾಷನಲ್ ಕಾಲೇಜಿನ ಆವರಣದಲ್ಲಿ ಗದ್ದರ್ ಕಾರ್ಯಕ್ರಮ ಏರ್ಪಡಿಸಿದ್ದರು. ರಂಗಕರ್ಮಿ ಸಿಜಿಕೆ ಕೂಡ ಬೆಂಗಳೂರು ವಿಶ್ವವಿದ್ಯಾನಿಲಯದ ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ ಗದ್ದರ್ ಕಾರ್ಯಕ್ರಮ ಆಯೋಜಿಸಿದ್ದರು.

2005ರಲ್ಲಿ ಗದ್ದರ್ ಅವರ ಮಗ ಆಕಸ್ಮಿಕವಾಗಿ ಸಾವಿಗೀಡಾದ. ಇದರಿಂದ ತೀವ್ರ ಆಘಾತಗೊಂಡಂತೆ ಕಂಡ ಗದ್ದರ್ ಬಹಿರಂಗವಾಗಿ ತೋರಿಸಿಕೊಳ್ಳಲಿಲ್ಲ. ಆ ತಿಂಗಳಲ್ಲಿ ಮುಂಬೈಯಲ್ಲಿ ನಡೆದ ಸಾಮ್ರಾಜ್ಯಶಾಹಿ ವಿರೋಧಿ (ಮುಂಬೈ ಪ್ರತಿರೋಧ) ಕಾರ್ಯಕ್ರಮಕ್ಕೆ ಬಂದು ಉತ್ಸಾಹದಿಂದಲೇ ಹಾಡಿದರು.

ಇಂತಹ ಗದ್ದರ್ ಈಗ ಒಮ್ಮಿಂದೊಮ್ಮೆಲೇ ದೇವಾಲಯಕ್ಕೆ ಯಾಕೆ ಸುತ್ತಾಡತೊಡಗಿದ್ದಾರೆ? ಈ ಬಗ್ಗೆ ನನಗೂ ಗೊಂದಲ ಉಂಟಾಗಿದೆ. ಆದರೆ ಇದನ್ನೇ ನೆಪವಾಗಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಬಾಯಿಗೆ ಬಂದಂತೆ ಮಾತನಾಡುವ, ಕೀಳು ಭಾಷೆಯಲ್ಲಿ ಟೀಕಿಸುವ ಕೆಲವರ ವರ್ತನೆ ಸರಿಯಲ್ಲ. ಜೀವನವಿಡೀ ಒಂದು ವಿಚಾರಧಾರೆ, ಚಳವಳಿಗೆ ಅರ್ಪಿಸಿಕೊಂಡು ಅದಕ್ಕಾಗಿ ಗುಂಡೇಟು ತಿಂದು ನಾನಾ ಸಂಕಟ ಅನುಭವಿಸಿದ ವ್ಯಕ್ತಿಯ ಬಗ್ಗೆ ಎಲುಬಿಲ್ಲದ ನಾಲಿಗೆಯಿಂದ ಏನೇನೋ ಮಾತನಾಡಬಾರದು.

ದೇವಾಲಯಕ್ಕೆ ಹೋಗಿ, ಪುರೋಹಿತರ ಮುಂದೆ ಮಂಡಿಯೂರಿ ಕುಳಿತ ಗದ್ದರ್ ತಮ್ಮ ಕ್ರಮವನ್ನು ಆಧ್ಯಾತ್ಮಿಕ ಪ್ರಜಾಪ್ರಭುತ್ವ ಎಂದು ಸಮರ್ಥಿಸಿಕೊಂಡರು. ಈವರೆಗಿನ ಮಾರ್ಗಗಳಿಂದ ಜನಸಾಮಾನ್ಯರನ್ನು ಬದಲಿಸಲು ಆಗಲಿಲ್ಲ. ಆದ್ದರಿಂದ ಅವರಿದ್ದಲ್ಲಿ ಹೋಗಿ, ಮನವೊಲಿಸೋಣ ಎಂದು ಹೇಳಿಕೊಂಡರು. ಆದರೆ ಈ ಸಮರ್ಥನೆ ನನಗೆ ಸರಿ ಅನ್ನಿಸಲಿಲ್ಲ. ಜ್ಯೋತಿ ಬಸು, ಇಎಂಎಸ್‌ರಂತಹ ಕಮ್ಯುನಿಸ್ಟ್ ನಾಯಕರು ಯಾವ ದೇವಾಲಯಕ್ಕೂ ಹೋಗದೆ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಗಳಾದ ಉದಾಹರಣೆ ನಮ್ಮ ಕಣ್ಣು ಮುಂದಿದೆ. ಈ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ದೇವಾಲಯಕ್ಕೆ ಹೋಗುತ್ತಿರಲಿಲ್ಲ. ಜನ ತಮ್ಮ ಐಕಾನ್‌ಗಳಿಂದ ಪ್ರಾಮಾಣಿಕತೆ ನಿರೀಕ್ಷಿಸುತ್ತಾರೆ. ದೇವರ ದರ್ಶನವನ್ನಲ್ಲ.

ಗದ್ದರ್ ಅವರು ಹೇಳಿದ ಆಧ್ಯಾತ್ಮಿಕ ಪ್ರಜಾಪ್ರಭುತ್ವ ಅಂದರೆ ಏನು ಎಂಬುದು ನನಗೆ ಅರ್ಥವಾಗಲಿಲ್ಲ. ಶ್ರೇಣೀಕೃತ ಜಾತಿ ವ್ಯವಸ್ಥೆ ಬೇರು ಬಿಟ್ಟ ಈ ದೇಶದಲ್ಲಿ ವಿಗ್ರಹ ಪೂಜೆ, ದೇವಾಲಯ ಸಂಸ್ಕೃತಿಗಳನ್ನು ವಿರೋಧಿಸಿದ ದೊಡ್ಡ ಪರಂಪರೆಯೇ ಇದೆ. ದೇವರನ್ನೇ ನಿರಾಕರಿಸಿದ ಬುದ್ಧ, ದೇಹವೇ ದೇಗುಲ ಎಂದ ಬಸವಣ್ಣ, ಪಂಡರಪುರ ವಿಠಲನ ಭಜನೆಯಲ್ಲಿ ಲೀನವಾಗುತ್ತಲೇ ಜಾತಿ ವ್ಯವಸ್ಥೆ ವಿರೋಧಿಸಿದ ಸಂತ ತುಕಾರಾಂ ಇಂತಹ ಒಂದು ದೊಡ್ಡ ಪರಂಪರೆಯೇ ಇಲ್ಲಿದೆ. ಇವರಲ್ಲಿ ಬಸವಣ್ಣ ಮತ್ತು ತುಕಾರಾಂ ಜಾತಿ ವಾದಿಗಳಿಂದ ಹತ್ಯೆಗೆ ಒಳಗಾದರು. ಭಕ್ತಿಯ ಈ ಮಾರ್ಗವನ್ನು ಅನುಸರಿಸಿದ್ದರೆ, ಗದ್ದರ್ ಇಷ್ಟೊಂದು ಟೀಕೆಯನ್ನು ಎದುರಿಸಬೇಕಾಗುತ್ತಿರಲಿಲ್ಲ. ಸೋವಿಯತ್ ರಶ್ಯದ ಸಮಾಜವಾದಿ ವ್ಯವಸ್ಥೆ ಕುಸಿದು ಬಿದ್ದ ನಂತರ, ಕಮ್ಯುನಿಸ್ಟ್ ಚಳವಳಿಯಲ್ಲಿದ್ದ ಅನೇಕರಿಗೆ ಭ್ರಮ ನಿರಸನ ಉಂಟಾಯಿತು. 70ರ ದಶಕದಲ್ಲಿ ಉಗ್ರ ಕಮ್ಯುನಿಸ್ಟರಾಗಿದ್ದ ಕೆಲವರು ಈಗ ಸ್ವಾಮಿಗಳಾಗಿದ್ದಾರೆ. ಜ್ಯೋತಿಷಿಗಳಾಗಿದ್ದಾರೆ. ಅಂದ ಮಾತ್ರಕ್ಕೆ, ಅವರೆಲ್ಲ ಕೆಟ್ಟವರೆಂದೇನಲ್ಲ. ಅದೇ ಪ್ರೀತಿ, ವಿಶ್ವಾಸ, ಅಂತಃಕರಣ ಈಗಲೂ ಇಟ್ಟುಕೊಂಡಿದ್ದಾರೆ. ತಮಗೆ ಸರಿ ಕಂಡ ದಾರಿಯಲ್ಲಿ ಸಾಗಿ ನೆಮ್ಮದಿಯಾಗಿ ಇದ್ದಾರೆ. ಅಂಥವರನ್ನು ನಾವು ಖಳನಾಯಕರೆಂದು ಬಿಂಬಿಸುವುದು ಸರಿ ಅನ್ನಿಸುವುದಿಲ್ಲ. ತಮಗೆ ಸರಿ ಕಂಡ ಮಾರ್ಗದಲ್ಲಿ ಸಾಗುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಸಂಘರ್ಷ ವೈಚಾರಿಕವಾಗಿ ಇರಬೇಕೇ ಹೊರತು ವೈಯಕ್ತಿಕವಾಗಿ ಇರಬಾರದು.

 ಭಾರತ ಎಂಬುದು ವಿಭಿನ್ನ ಭಾಷೆ, ಧರ್ಮ, ಸಂಸ್ಕೃತಿ, ಪರಂಪರೆಗಳನ್ನು ಹೊಂದಿದ ದೇಶ. ಇಲ್ಲಿ ದ್ವೈತ, ಅದ್ವೈತ ಇರುವಂತೆ, ಸೂಫಿ ಮತ್ತು ನಾಥ ಪರಂಪರೆಗಳಿವೆ. ಕರ್ನಾಟಕದಲ್ಲಿ ಆರೂಢ ಪರಂಪರೆ ಇದೆ. ಉತ್ತರ ಕರ್ನಾಟಕ ಭಾಗದಲ್ಲಿ ಅದು ಪ್ರಭಾವಶಾಲಿಯಾಗಿದೆ. ಹುಬ್ಬಳ್ಳಿಯ ಸಿದ್ಧಾರೂಢರ ಚಿಂತನ-ಮಂಥನ ಗೋಷ್ಠಿಗಳಲ್ಲಿ ಶಿಶುನಾಳ ಶರೀಫ ಸಾಹೇಬರು, ನವಲಗುಂದದ ನಾಗಲಿಂಗ ಸ್ವಾಮೀಜಿ ಪಾಲ್ಗೊಳ್ಳುತ್ತಿದ್ದರು. ಇಂಥ ವೈವಿಧ್ಯಮಯ ನೆಲದಲ್ಲಿ ಈ ಪ್ರಭಾವಗಳಿಂದ ತಪ್ಪಿಸಿಕೊಂಡು ಬದುಕುವುದು ಸುಲಭವಲ್ಲ. ಬದುಕಿನಲ್ಲಿ ಭರವಸೆ ಕಳೆದುಕೊಂಡಾಗ, ಈ ತಾಣಗಳು ನೆಮ್ಮದಿ ನೀಡುತ್ತವೆ ಎಂದು ಜನ ಹೋಗುತ್ತಾರೆ.

ಗದ್ದರ್ ಕೂಡ ಆ ರೀತಿ ಹೋಗಿರಬಹುದು. ಬದುಕಿನುದ್ದಕ್ಕೂ ನಾಸ್ತಿಕವಾದವನ್ನೇ ಪ್ರತಿಪಾದಿಸಿದ ಎಂ.ಡಿ.ನಂಜುಂಡಸ್ವಾಮಿಯವರು ಕ್ಯಾನ್ಸರ್ ಕಾಯಿಲೆಯಿಂದ ನರಳುತ್ತಿರುವ ಕೊನೆಯ ದಿನಗಳಲ್ಲಿ ಮನೆಯವರು ಕಟ್ಟಿದ ಸಾಯಿಬಾಬಾ ತಾಯತ ಅವರ ಕೊರಳಲ್ಲಿತ್ತು. ಇಂಥದನ್ನೆಲ್ಲ ಟೀಕಿಸಲು ಹೊರಟರೆ, ಅಮಾನವೀಯ ಆಗುತ್ತದೆ. ಇದು ಅವರಿಗೆ ಮತ್ತು ಅವರ ಕುಟುಂಬಕ್ಕೆ ವೈಯಕ್ತಿಕ ವಿಷಯ. ನೀವು ಹೀಗೇ ಇರಬೇಕೆಂದು ಉಪದೇಶ ನೀಡುವ ಹಕ್ಕು ಯಾರಿಗೂ ಇಲ್ಲ. ತಿಂಗಳು ಪೂರ್ತಿ ದೇವಾಲಯ ಸುತ್ತಾಡಿ ಬಂದ ಗದ್ದರ್ ಮಾರ್ಚ್ 31ರಂದು ಉಸ್ಮಾನಿಯಾ ವಿಶ್ವವಿದ್ಯಾನಿಲಯದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ಸೀತಾರಾಂ ಯೆಚೂರಿ ಮತ್ತು ಮಾವೋವಾದಿ ಚಿಂತಕ ವರವರ ರಾವ್ ಜೊತೆ ಪಾಲ್ಗೊಂಡಿದ್ದರು. ಫ್ಯಾಶಿಸ್ಟ್ ಶಕ್ತಿಗಳು ಆರ್ಭಟಿಸುತ್ತಿರುವ ಈ ಕಾಲದಲ್ಲಿ ಎಡಪಂಥೀಯರೆಲ್ಲ ಒಂದೇ ವೇದಿಕೆಯಲ್ಲಿ ಬರಬೇಕು ಎಂಬ ಸಂದೇಶವನ್ನು ಈ ಕಾರ್ಯಕ್ರಮ ನೀಡಿತು.

ಬದುಕಿನುದ್ದಕ್ಕೂ ಕಲ್ಲುಮುಳ್ಳಿನ ದಾರಿಯಲ್ಲಿ ನಡೆದು, ಬಾಳಿನ ಇಳಿಸಂಜೆಯಲ್ಲಿ ಒಂದೆರಡು ದೇವಾಲಯಗಳಿಗೆ ಹೋದರೆಂದು ಗದ್ದರ್ ಅವರನ್ನು ನಾವು ಟೀಕಿಸಬೇಕಿಲ್ಲ. ಆದರೆ ಚಳವಳಿಗೆ ಗದ್ದರ್ ನೀಡಿರುವ ಕೊಡುಗೆ ಮರೆಯಬಾರದು. ಮುಂಬೈಗೆ ಗದ್ದರ್ ಬಂದಾಗ, ಅವರ ಹಾಡನ್ನು ಕೇಳಿ ತಾನು ಎಡಪಂಥೀಯ ಸಿದ್ಧಾಂತದ ಕಡೆ ಬಂದುದಾಗಿ ನಿರಂಜನಿ ಶೆಟ್ಟಿ ಎಂಬವರು ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇಂಥವರು ಸಾವಿರ ಸಾವಿರ ಸಂಖ್ಯೆಯಲ್ಲಿ ಈ ದೇಶದಲ್ಲಿದ್ದಾರೆ. ನಾವು ಪಡೆಯಬೇಕಾಗಿದ್ದು ಗದ್ದರ್ ಹಿಂದೆ ಹಾಡಿದ ಹಾಡುಗಳ ಸ್ಫೂರ್ತಿಯನ್ನು. ಈಗ ಅವರು ಮಾಡಿ ಬಂದ ಅಭಿಷೇಕಗಳು ನಮಗೆ ಮಾದರಿಯಾಗಬೇಕಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News