ಹರಾಜಾದ ಶರೀಫ್ ಮಾನವನ್ನು ಆರೆಸ್ಸೆಸ್ 'ಚಡ್ಡಿ' ಕಾಪಾಡೀತೇ?

Update: 2017-04-02 19:03 GMT

ಮಾಜಿ ಸಚಿವರಾಗಿರುವ ಜಾಫರ್ ಶರೀಫ್ ನಿಜಕ್ಕೂ ಯಾವ ಪಕ್ಷದಲ್ಲಿದ್ದಾರೆ? ‘ತಾನು ಕಾಂಗ್ರೆಸ್‌ನಲ್ಲಿದ್ದೇನೆ’ ಎಂದು ಅವರು ಸ್ವಯಂ ಘೋಷಿಸಿಕೊಂಡಿದ್ದಾರೆ ಮತ್ತು ಕಾಂಗ್ರೆಸನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೈಕಮಾಂಡ್‌ಗೆ ಬೆದರಿಕೆಯನ್ನೂ ಹಾಕಿದ್ದಾರೆ. ಇತ್ತ ಕೆಲವೊಮ್ಮೆ ಜೆಡಿಎಸ್‌ನಲ್ಲಿದ್ದಂತೆಯೂ ನಟನೆ ಮಾಡುತ್ತಿರುತ್ತಾರೆ. ದೇವೇಗೌಡರೊಂದಿಗೆ ಒಳಗೊಳಗೆ ಸಂಬಂಧವನ್ನು ಚೆನ್ನಾಗಿಯೇ ಇಟ್ಟುಕೊಂಡಿದ್ದಾರೆ ಎಂಬ ವರದಿಗಳಿವೆ. ಆದರೆ ಇದೇ ಸಂದರ್ಭದಲ್ಲಿ ತಾನು ಬಿಜೆಪಿ ಅದರಲ್ಲೂ ಆರೆಸ್ಸೆಸ್‌ನೊಳಗೂ ಇದ್ದೇನೆ ಎನ್ನುವುದನ್ನು ಸಾಬೀತು ಪಡಿಸುವ ಭಾಗವಾಗಿ ‘ಆರೆಸ್ಸೆಸ್‌ನ ನಾಯಕ ಮೋಹನ್ ಭಾಗವತ್’ ದೇಶದ ರಾಷ್ಟ್ರಾಧ್ಯಕ್ಷರಾಗಲಿ ಎಂಬ ಸಲಹೆಯನ್ನು ಪ್ರಧಾನಿ ಮೋದಿಯವರಿಗೆ ನೀಡಿದ್ದಾರೆ.

ಸದ್ಯಕ್ಕೆ ಜಾಫರ್ ಶರೀಫ್ ಅವರ ಸಲಹೆಗಳನ್ನು ಅವರ ಮೊಮ್ಮಕ್ಕಳೇ ಸ್ವೀಕರಿಸುವ ಸ್ಥಿತಿಯಲ್ಲಿಲ್ಲ. ಹೀಗಿರುವಾಗ, ಮೋಹನ್ ಭಾಗವತ್‌ರನ್ನು ರಾಷ್ಟ್ರಪತಿ ಮಾಡುವ ಪ್ರಸ್ತಾಪವನ್ನು ನರೇಂದ್ರ ಮೋದಿ ಗಂಭೀರವಾಗಿ ಸ್ವೀಕರಿಸುವುದು ಅನುಮಾನ. ಆದರೆ ಈ ಮೂಲಕ, ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ಅದೆಷ್ಟು ಆಳವಾಗಿರುವ ‘ಮ್ಯಾನ್ ಹೋಲ್’ ನೊಳಗೂ ಇಳಿಯಬಲ್ಲೆ ಎನ್ನುವುದನ್ನಂತೂ ಅವರು ಸಾಬೀತು ಪಡಿಸಿದ್ದಾರೆ. ಈವರೆಗೆ ‘ಮುಸ್ಲಿಮ್ ಮುಖಂಡ’ ಎಂಬ ಟೋಪಿಯನ್ನು ಧರಿಸಿಕೊಂಡು, ಕಾಂಗ್ರೆಸ್‌ನೊಳಗಿನ ಸರ್ವ ಅಧಿಕಾರವನ್ನೂ ಸವಿದು, ಇದೀಗ ಟೋಪಿಯನ್ನು ಕೆಳಗಿಟ್ಟು, ಆರೆಸ್ಸೆಸ್ ಚಡ್ಡಿಯನ್ನು ತಲೆಗೇರಿಸಲು ಹೊರಟಿದ್ದಾರೆ. ರಾಜಕೀಯವಾಗಿ ಜಾಫರ್ ಶರೀಫ್ ಯಾಕೆ ಅಪ್ರಸ್ತುತರು ಎನ್ನುವುದನ್ನು ಅವರೇ ಈ ಮೂಲಕ ಸಾಬೀತು ಪಡಿಸಿದ್ದಾರೆ. ಬಹುಶಃ ಈ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷದ ನಾಯಕರಿಗೆ ಮುಜುಗರವಾಗಬಹುದು ಎಂದು ಜಾಫರ್ ಶರೀಫ್ ತಿಳಿದುಕೊಂಡಿರಬಹುದು.

ಆದರೆ ಇಂತಹ ಸಮಯಸಾಧಕ ಹೇಳಿಕೆಯಿಂದ ಕಾಂಗ್ರೆಸ್ ನಿರಾಳವಾಗಿದೆ. ಜಾಫರ್ ಶರೀಫ್ ಅವರನ್ನು ದೂರವಿಟ್ಟಿರುವುದಕ್ಕೆ ಕಾರಣವನ್ನು ಕಾಂಗ್ರೆಸ್ ಈಗ ಪ್ರತ್ಯೇಕವಾಗಿ ವಿವರಿಸುವ ಅಗತ್ಯವೇ ಇಲ್ಲ. ಇಷ್ಟಕ್ಕೂ ಈ ದೇಶದ ರಾಷ್ಟ್ರಪತಿ ಯಾರಾಗಬೇಕು ಎಂದು ಜಾಫರ್ ಶರೀಫ್ ಅವರನ್ನು ಮೋದಿಯಾಗಲಿ, ಇನ್ನಿತರ ಬಿಜೆಪಿ ಮುಖಂಡರಾಗಲಿ ಕೇಳಿಕೊಂಡಿಲ್ಲ. ಕನಿಷ್ಠ ರಾಜ್ಯದ ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ಜಾಫರ್ ಶರೀಫ್ ಹೇಳಿಕೆಯನ್ನೇ ಗಂಭೀರವಾಗಿ ತೆಗೆದುಕೊಳ್ಳುವ ಜನರಿಲ್ಲದೇ ಇರುವಾಗ, ತಾವಾಗಿಯೇ ನರೇಂದ್ರ ಮೋದಿಯವರಿಗೆ ಪತ್ರ ಬರೆದು ‘ಆರೆಸ್ಸೆಸ್ ಸಂಚಾಲಕ ಮೋಹನ್ ಭಾಗವತ್ ರಾಷ್ಟ್ರಪತಿಯಾಗಲಿ’ ಎಂದು ಸಲಹೆ ನೀಡುವುದು ಅವರ ಸದ್ಯದ ದೈನೇಸಿ ಸ್ಥಿತಿಗೂ, ಅವರ ರಾಜಕೀಯದ ಕೊನೆಯ ದಿನಗಳ ದುರಂತಗಳಿಗೂ ಸಾಕ್ಷಿಯಾಗಿದೆ. ಭಾಗವತ್ ರಾಷ್ಟ್ರಪತಿಯಾಗಲಿ ಎಂಬ ಸಲಹೆಯ ಮೂಲಕ ಜಾಫರ್ ಶರೀಫ್ ಮೋದಿಯನ್ನು ವ್ಯಂಗ್ಯಮಾಡಿರಬಹುದೇ ಎಂದು ಕೆಲವರು ಅನುಮಾನ ಪಟ್ಟಿದ್ದರು.

ಆದರೆ ಆರೆಸ್ಸೆಸ್ ಭಾರತದ ಜಾತ್ಯತೀತ ಸಂಘಟನೆ ಎಂದೂ ಶಿಫಾರಸು ಮಾಡುವ ಮೂಲಕ ತಾವೇ ವ್ಯಂಗ್ಯದ ವಸ್ತುವಾಗಿದ್ದಾರೆ. ಜಾಫರ್ ಶರೀಫ್ ಅವರ ಪಾಲಿನ ಜಾತ್ಯತೀತ ಸಂಘಟನೆಯಾಗಿರುವ ಆರೆಸ್ಸೆಸ್‌ನ ಬೈಠಕ್‌ನಲ್ಲಿ ಚಡ್ಡಿ ಹಾಗೂ ಲಾಠಿ ಹಿಡಿದುಕೊಂಡು ಅವರು ಕವಾಯತು ನಡೆಸುವ ದೃಶ್ಯವನ್ನು ನೋಡುವ ದಿನಗಳಿಗಾಗಿ ನಾಡಿನ ಅಲ್ಪಸಂಖ್ಯಾತರು ಕಾಯುತ್ತಿದ್ದಾರೆ. ಬಹುಶಃ ಬಿಜೆಪಿಯ ನಾಯಕರು ತನಗೂ ತನ್ನ ಮಕ್ಕಳಿಗೂ ಎಸೆಯಬಹುದಾದ ಬ್ರೆಡ್ ತುಂಡಿನ ಆಸೆಗಾಗಿ ಅವರು ಈ ಹೇಳಿಕೆಯನ್ನು ನೀಡಿರಬಹುದು.

ತನ್ನ ವೈಯಕ್ತಿಕ ರಾಜಕೀಯ ನಿಲುವುಗಳನ್ನು ವ್ಯಕ್ತಪಡಿಸಲು ಅವರು ಸಂಪೂರ್ಣ ಸ್ವತಂತ್ರರು. ಆದರೆ ದುರಂತವೆಂದರೆ, ಅವರು ಈ ಹೇಳಿಕೆಯನ್ನು ಸ್ವಯಂಘೋಷಿತ ಮುಸ್ಲಿಮ್ ನಾಯಕ ಎಂಬ ಪ್ರಾತಿನಿಧ್ಯದೊಂದಿಗೇ ನೀಡಿದ್ದಾರೆ. ಯಾವ ಸಮುದಾಯದ ಹೆಸರನ್ನು ಬಳಸಿಕೊಂಡು ಈವರೆಗೆ ಅಧಿಕಾರ, ಅಂತಸ್ತು, ಘನತೆಯನ್ನು ಸಮಾಜದಲ್ಲಿ ಪಡೆದುಕೊಂಡರೋ ಅದೇ ಸಮುದಾಯವನ್ನು ಬಲಿಕೊಟ್ಟು ಇಂದು ಅವರು ತಮ್ಮ ಕುಟುಂಬವನ್ನು ಮೇಲೆತ್ತುವುದಕ್ಕೆ ಹೊರಟಿದ್ದಾರೆ. ಇದೊಂದು ರೀತಿಯಲ್ಲಿ ‘ಮಗ ಸತ್ತರೂ ಪರವಾಗಿಲ್ಲ, ಸೊಸೆ ವಿಧವೆಯಾಗಬೇಕು’ ಎನ್ನುವ ಮನಸ್ಥಿತಿ. ತನ್ನ ಮಕ್ಕಳಿಗೆ, ಮೊಮ್ಮಕ್ಕಳಿಗೆ ಸ್ಥಾನ ಸಿಗಲಿಲ್ಲವೆನ್ನುವ ಹತಾಶೆಯ ಪರಮಾವಧಿಯಲ್ಲಿ ಕಾಂಗ್ರೆಸನ್ನು ಮುಜುಗರಕ್ಕೆ ಸಿಲುಕಿಸಲು ಈ ಹೇಳಿಕೆಯನ್ನು ನೀಡಿದ್ದಾರೆ ಎಂದೂ ನಾವಿದನ್ನು ಅರ್ಥೈಸಿಕೊಳ್ಳಬಹುದು. ಆದರೆ ಈ ಹೇಳಿಕೆ ಅವರಿಗೇ ತಿರುಗುಬಾಣವಾಗಲಿದೆ.

ಮುಂದಿನ ದಿನಗಳಲ್ಲಿ ಎರಡನೆ ದರ್ಜೆಯ ಪ್ರಜೆಯಾಗಿ ಬದುಕಲು ತಮ್ಮ ಕುಟುಂಬ ಸಮೇತ ಶರೀಫ್ ವಲಸೆ ಹೋಗುವ ಸಾಧ್ಯತೆಗಳಿವೆ. ಇದರಿಂದ ಅವರು ಈವರೆಗೆ ಗಳಿಸಿದ ಅಷ್ಟಿಷ್ಟು ವರ್ಚಸ್ಸನ್ನೂ ಸಂಪೂರ್ಣ ಕಳೆದುಕೊಳ್ಳುತ್ತಾರೆ. ಬಿಜೆಪಿಯಿಂದ ಅವರಿಗೆ ದೊರಕುವ ಸವಲತ್ತಿಗೆ ಹೋಲಿಸಿದರೆ ಅವರ ಪಾಲಿಗೆ ಇದು ತುಂಬಲಾದ ನಷ್ಟ. ಉಳಿದಂತೆ, ಕಾಂಗ್ರೆಸ್‌ಗೆ ಮುಜುಗರವಾಗಬೇಕು, ಅವಮಾನವಾಗಬೇಕು ಎಂಬ ದುರುದ್ದೇಶದಿಂದ ಈ ಹೇಳಿಕೆ ನೀಡಿದ್ದಿದ್ದರೆ ಅದೂ ಈಡೇರುವುದಿಲ್ಲ. ಈ ಹೇಳಿಕೆ ಜಾಫರ್ ಶರೀಫ್ ಮತ್ತು ಅವರ ಕುಟುಂಬವನ್ನು ಕಾಂಗ್ರೆಸ್‌ನಿಂದ ದೂರ ಇಡಲು ಇನ್ನಷ್ಟು ಸಮರ್ಥನೆಗಳು ಸಿಕ್ಕಿದಂತಾಯಿತು.

ಆದರೆ ಅಲ್ಪಸಂಖ್ಯಾತ ಸಮುದಾಯ ಮಾತ್ರ ಈ ಹೇಳಿಕೆಯಿಂದ ಅಪಾರ ನೋವು ಮತ್ತು ಅವಮಾನವನ್ನು ಅನುಭವಿಸಬೇಕಾಗಿದೆ. ಜಾಫರ್ ಶರೀಫ್ ಅಲ್ಪಸಂಖ್ಯಾತ ಸಮುದಾಯಕ್ಕೆ ನೀಡಿದ ಕೊಡುಗೆ ಏನು ಎಂದು ಕೇಳಿದರೆ, ಒಂದು ವಿಷಾದಭರಿತ ವೌನ ಆವರಿಸಿಕೊಳ್ಳುತ್ತದೆ. ಅವರು ಈ ಹಿಂದೆ ಪ್ರತಿನಿಧಿಸಿದ ಕ್ಷೇತ್ರಗಳಿಗಾಗಲಿ, ನಾಡಿನ ಮುಸ್ಲಿಮರ ಶಿಕ್ಷಣ, ಸಾಮಾಜಿಕ ಜೀವನಕ್ಕಾಗಲಿ ಅವರಿಂದ ಸಿಕ್ಕಿದ ಕೊಡುಗೆ ಶೂನ್ಯ. ತನ್ನ ಸಮುದಾಯವನ್ನು ಬಳಸಿಕೊಂಡು ತಾನೇನು ಪಡೆದುಕೊಂಡೆನೋ ಅದರ ಶೇ. 1ರಷ್ಟು ಋಣವನ್ನೂ ಸಂದಾಯ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ತಾನು ಮತ್ತು ತನ್ನ ಕುಟುಂಬದ ಅಭಿವೃದ್ಧಿಗಾಗಿಯಷ್ಟೇ ಮುಸ್ಲಿಮ್ ಸಮುದಾಯವನ್ನು ಬಳಕೆ ಮಾಡಿಕೊಂಡು ಬಂದ ಜಾಫರ್ ಶರೀಫ್ ಇದೀಗ ಅವರಿಗೆ ದ್ರೋಹವೆಸಗಿ, ತನ್ನ ಕುಟುಂಬವನ್ನು ಉಳಿಸಿಕೊಳ್ಳಲು ಹೊರಟಿದ್ದಾರೆ.

ಆರೆಸ್ಸೆಸ್ ಜಾತ್ಯತೀತ ಸಂಘಟನೆಯೇ ಆಗಿದ್ದರೆ, ಇತ್ತೀಚೆಗೆ ಮಾಲೆಗಾಂವ್ ಸ್ಫೋಟ ಆರೋಪದಲ್ಲಿ ಜೈಲು ಪಾಲಾಗಿರುವ ಉಗ್ರರು ಜಾಫರ್ ಶರೀಫ್ ಅವರ ಪಾಲಿಗೆ ಅಮಾಯಕರಾಗಿರಬಹುದು. ಗುಜರಾತ್‌ನಲ್ಲಿ ನಡೆದಿರುವ ಹತ್ಯಾಕಾಂಡ ಸಮರ್ಥನೀಯವಾಗಿರಬಹುದು. ಬಾಬರಿ ಮಸೀದಿ ಧ್ವಂಸಕ್ಕೆ ಅವರ ಸಮ್ಮತಿಯಿರಬಹುದು. ಹಾಗೆಯೇ ಅಲ್ಲಿ ರಾಮಮಂದಿರ ಕಟ್ಟಲೇಬೇಕು ಎಂದೂ ಶರೀಫ್ ಇನ್ನೊಂದು ದಿನ ಮೋದಿಗೆ ಪತ್ರ ಬರೆಯಬಹುದು. ಹಾಗೆಯೇ ಮಥುರಾ, ಕಾಶಿ ಮೊದಲಾದ ಮಂದಿರಗಳನ್ನು ಜಾತ್ಯತೀತ ಸಂಘಟನೆಯಾಗಿರುವ ಆರೆಸ್ಸೆಸ್‌ಗೆ ಒಪ್ಪಿಸಬೇಕು ಎಂದು ಮುಸ್ಲಿಮ್ ಸಂಘಟನೆಗಳಿಗೂ ಪತ್ರ ಬರೆಯಬಹುದು. ಬೇಲಿಯ ಮೇಲಿರುವ ಊಸರವಳ್ಳಿಯಂತೆ ನಾಲಗೆ ಚಾಚಿಕೊಂಡು ಕೂತಿರುವ ಶರೀಫ್ ತನ್ನ ವೈಯಕ್ತಿಕ ಸ್ವಾರ್ಥದ ಪರಮಾವಧಿಯ ಕಾರಣಕ್ಕಾಗಿ ಯಾವ ಸಿದ್ಧಾಂತಕ್ಕೂ, ಯಾವ ಸಮುದಾಯಕ್ಕೂ, ಯಾವ ಪಕ್ಷಗಳಿಗೂ ಸಲ್ಲದೆ ಅಸ್ಪಶ್ಯರಾಗುವ ಸ್ಥಿತಿಗೆ ಬಂದಿದ್ದಾರೆ. ಹರಾಜಾಗಿರುವ ಅವರ ಮಾನವನ್ನು ಆರೆಸ್ಸೆಸ್‌ನ ಚಡ್ಡಿಯಾದರೂ ಕಾಪಾಡೀತೇ ಎನ್ನುವುದನ್ನು ಕಾದು ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News