ಫೇಸ್ ಬುಕ್ ಲೈವ್ ನಲ್ಲಿ ವೀಡಿಯೋ ಅಪ್ ಲೋಡ್ ಮಾಡಿ ಆತ್ಮಹತ್ಯೆಗೈದ ಇಂಜಿನಿಯರಿಂಗ್ ವಿದ್ಯಾರ್ಥಿ

Update: 2017-04-04 06:39 GMT

ಮುಂಬೈ,ಏ.4 : ನಗರದ ಪ್ರತಿಷ್ಠಿತ ಕಾಲೇಜಿನ ಮೂರನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಬಾಂದ್ರಾ (ಪಶ್ಚಿಮ)ದಲ್ಲಿನ ಪಂಚತಾರಾ ಹೊಟೇಲೊಂದರ 19ನೇ ಮಹಡಿಯಿಂದ ಕೆಳಕ್ಕೆ ಜಿಗಿದು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಯುವ ಕೆಲವೇ ಕ್ಷಣಗಳ ಮುನ್ನ ಆತ ವೀಡಿಯೋವೊಂದನ್ನು ತೆಗೆದು ಅದನ್ನು ಫೇಸ್ ಬುಕ್ ಲೈವ್ ಆ್ಯಪ್ ನಲ್ಲಿ ಅಪ್ ಲೋಡ್ ಮಾಡಿದ್ದ.

ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಯನ್ನು ಅರ್ಜುನ್ ಭಾರದ್ವಾಜ್ ಎಂದು ಗುರುತಿಸಲಾಗಿದೆ.

ಸೋಮವಾರ ಸಂಜೆ ಸುಮಾರು 6.30ಕ್ಕೆ ಆತ ಕಿಟಿಕಿಯ ಬಾಗಿಲನ್ನು ಮುರಿದು ಕೆಳಕ್ಕೆ ಹಾರಿದ್ದ. ಆತ ತಂಗಿದ್ದ 1925 ಸಂಖ್ಯೆಯ ಕೊಠಡಿ ಮೇಜಿನ ಮೇಲೆ ಒಂಬತ್ತು ಸಣ್ಣ ಸುಸೈಡ್ ನೋಟ್ ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆತ ಸಾಯುವ ಮುನ್ನ ಅಪ್ ಲೋಡ್ ಮಾಡಿದ್ದ ವೀಡಿಯೋ 1 ನಿಮಿಷ 43 ಸೆಕೆಂಡುಗಳ ಅವಧಿಯದ್ದಾಗಿದ್ದು ಆತ್ಮಹತ್ಯೆಗೈಯ್ಯುವ ಮುನ್ನ ಕೈಗೊಳ್ಳಬೇಕಾದ ‘ಕ್ರಮ’ಗಳ ಬಗ್ಗೆ ಮಾತನಾಡಿದ್ದಾನೆ. ಹೊಟೇಲಿಗೆ ಬೆಳಿಗ್ಗೆ 3 ಗಂಟೆಗೆ ಆಗಮಿಸಿದ್ದ ಆತ ದಿನವಿಡೀ ತನ್ನ ಕೊಠಡಿಯಲ್ಲಿಯೇ ಇದ್ದ. ವೀಡಿಯೋದಲ್ಲಿ ಆತ ಆತ್ಮಹತ್ಯೆಗೈಯ್ಯುವ ಮುನ್ನ ಸಿಗರೇಟ್, ಮದ್ಯ ಮತ್ತು ಆಹಾರ ಸೇವಿಸಿದ್ದು ಕಾಣಿಸುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಆತ ಬರೆದಿರುವ ಹಲವು ಸುಸೈಡ್ ನೋಟುಗಳಲ್ಲಿ ಒಂದರಲ್ಲಿ ತಾನು ಖಿನ್ನತೆಯಿಂದ ಬಳಲುತ್ತಿರುವುದಾಗಿ ಹಾಗೂ ತನ್ನ ನಿರ್ಧಾರಕ್ಕೆ ತಾನೇ ಕಾರಣನೆಂದು ಬರೆದಿದ್ದ ಮತ್ತು ತನ್ನ ಹೆತ್ತವರ ಕ್ಷಮೆ ಯಾಚಿಸಿದ್ದ.

ಬೆಂಗಳೂರಿನ ಉದ್ಯಮಿಯೊಬ್ಬರ ಪುತ್ರನಾಗಿರುವ ಭಾರಧ್ವಾಜ್ ಮೂರನೇ ವರ್ಷದ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ಸತತ ಅನುತ್ತೀರ್ಣನಾಗಿದ್ದ ಎಂದು ತಿಳಿದು ಬಂದಿದೆ. ಆತ ಅಂಧೇರಿ ಪೂರ್ವ ಪ್ರದೇಶದಲ್ಲಿ ಪೇಯಿಂಗ್ ಗೆಸ್ಟ್ ಆಗಿ ವಾಸಿಸುತ್ತಿದ್ದ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News