ಕರಾವಳಿ ಜಿಲ್ಲೆಗಳಿಗೆ ‘ಹೊಸ ಮರಳು ನೀತಿ’ ಜಾರಿ: ಕಾನೂನು ಸಚಿವ ಟಿ.ಬಿ.ಜಯಚಂದ್ರ

Update: 2017-04-04 14:24 GMT

ಬೆಂಗಳೂರು, ಎ. 4: ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ಜಿಲ್ಲೆಗಳಿಗೆ ಮಾತ್ರ ಅನ್ವಯ ಆಗುವಂತೆ ಹೊಸ ಮರಳು ನೀತಿ ರೂಪಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ಟಿ.ಬಿ.ಜಯಚಂದ್ರ ಇಂದಿಲ್ಲಿ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸಚಿವ ಸಂಪುಟ ಉಪ ಸಮಿತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಂಡ್ಲೂರು ಎಂಬಲ್ಲಿ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮೇಲೆ ನಡೆದ ಹಲ್ಲೆ ಹಿನ್ನೆಲೆಯಲ್ಲಿ ಸಂಪುಟ ಉಪ ಸಮಿತಿ ಸಭೆ ಸೇರಲಾಗಿತ್ತು ಎಂದರು.

ಮರಳು ಸಮಸ್ಯೆ ನಿವಾರಿಸಲು, ಸಂಪ್ರದಾಯದಂತೆ ಮರಳು ತೆಗೆಯಲು ಹೊಸ ನಿಯಮ ರೂಪಿಸಿ, ಶೀಘ್ರದಲ್ಲೆ ಜಾರಿಗೆ ತರಲಾಗುವುದು ಎಂದ ಅವರು, ಮುಂದಿನ ಸಚಿವ ಸಂಪುಟದಲ್ಲಿ ಮರಳು ತೆಗೆಯಲು ಹೊಸ ನಿಯಮ ಜಾರಿಗೆ ತರುವ ಪ್ರಸ್ತಾಪ ಇರಿಸಲಾಗುವುದು ಎಂದು ಹೇಳಿದರು.

ಸಿಆರ್‌ಝಡ್ ಮತ್ತು ನಾನ್ ಸಿಆರ್‌ಝಡ್ ಪ್ರದೇಶಗಳನ್ನಾಗಿ ವಿಂಗಡಿಸಿದ್ದು, ಮಾ.31ರ ವರೆಗೆ ಮರಳು ಬ್ಲಾಕ್‌ಗಳನ್ನು ಗುರುತಿಸಲು ಸೂಚಿಸಲಾಗಿತ್ತು. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಮರಳು ಲಭ್ಯವಾಗಲಿದೆ. 23ರಿಂದ 24 ಲಕ್ಷ ಮಿಲಿಯನ್ ಟನ್ ಮರಳು ಅಗತವಿದ್ದು, ನೈಸರ್ಗಿಕವಾಗಿ 4ರಿಂದ 5 ಮಿಲಿಯನ್ ಟನ್ ಮರಳಷ್ಟೆ ಸಿಗುತ್ತಿದೆ ಎಂದು ಅವರು ವಿವರಿಸಿದರು.

ರಾಜ್ಯದಲ್ಲಿ ಕೃತಕ ಮರಳು(ಎಂ.ಸ್ಯಾಂಡ್) ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಿದೆ. ಆದರೂ, ಮರಳಿನ ಸಮಸ್ಯೆ ಇದ್ದು, ಮುಂದಿನ ದಿನಗಳಲ್ಲಿ ಮಲೆಷಿಯಾ, ಇಂಡೊನೇಷಿಯಾದಿಂದ ಮರಳು ಆಮದು ಮಾಡಿಕೊಳ್ಳಲು ಸರಕಾರ ಚಿಂತನೆ ನಡೆಸಿದೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದರು.

ಮರಳು ಆಮದು ಮಾಡಿಕೊಂಡರೆ ಪ್ರತಿಟನ್‌ಗೆ 12 ಸಾವಿರ ರೂಪಾಯಿ ಆಗುತ್ತದೆ ಎಂಬ ಲೆಕ್ಕಾಚಾರವಿದೆ. ಅಲ್ಲದೆ, ಎಂ.ಸ್ಯಾಂಡ್ ಉತ್ಪಾದನೆ ಘಟಕ ಸ್ಥಾಪನೆಗೆ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News