ನವ್ಯ-ನವ್ಯೋತ್ತರ ಸಂಧಿಯಲ್ಲಿ ಹುಟ್ಟಿಕೊಂಡ - ಆ ದಿನ

Update: 2017-04-05 18:40 GMT

ಶೂದ್ರ ಅವರು ನವ್ಯ ಮತ್ತು ನವ್ಯೋತ್ತರಗಳೆರಡರಲ್ಲೂ ಹರಡಿ ಕೊಂಡವರು. ಲಂಕೇಶರ ಬಿರುಕು, ತೇಜಸ್ವಿಯ ಸ್ವರೂಪ, ಅನಂತಮೂರ್ತಿ, ಚಿತ್ತಾಲ, ಶಾಂತಿನಾಥ ಮೊದಲಾದವರ ನವ್ಯ ಕಾದಂಬರಿಗಳು ಅಭಿವ್ಯಕ್ತಿಯ ಹೊಸ ಬಾಗಿಲನ್ನು ತೆರೆಯಿತು. ಸಾಹಿತ್ಯವೆನ್ನುವುದು ಹೊರಗಿನ ಚಟುವಟಿಕೆಗಳನ್ನು ಹೇಳುವುದಕ್ಕಿಂತ ಹೆಚ್ಚಾಗಿ ಮನುಷ್ಯನೊಳಗಿನ ಚಟುವಟಿಕೆಗಳನ್ನು ವ್ಯಕ್ತವಾಗಿಸುವುದನ್ನು ಪ್ರಧಾನವಾಗಿಸಿದ್ದು ನವ್ಯ ಬರಹಗಳು. ಕಾಮವನ್ನು ಕೇಂದ್ರವಾಗಿಟ್ಟುಕೊಂಡೂ ಬಹಳಷ್ಟು ಬರಹಗಳು ಬಂದವು. ಶೂದ್ರ ಅವರ ಹೊಸ ಕಾದಂಬರಿ ‘ಆ ದಿನ’ ಕುತೂಹಲವನ್ನು ಸೃಷ್ಟಿಸುವುದು ಈ ಕಾರಣಕ್ಕೆ. ಸದ್ಯದ ಸಂದರ್ಭದಲ್ಲಿ ಬರುವ ನವ್ಯೋತ್ತರ ಕಾದಂಬರಿಗಳು ಚರ್ಚಿಸುತ್ತಿರುವ ವಿಷಯಗಳಿಗೆ ಭಿನ್ನವಾಗಿ ನವ್ಯದ ಅಂತರ್ಮುಖೀ ಭಾವವನ್ನು ಉಳಿಸಿಕೊಂಡು ಬರೆದಿರುವ ಕಾದಂಬರಿ ಇದು. ಕಾಮ ಮನುಷ್ಯನ ವ್ಯಕ್ತಿತ್ವವನ್ನು ಅರಳಿಸುವಲ್ಲಿ, ರೂಪಿಸುವಲ್ಲಿ ಹಾಗೆಯೇ ಕೆಲವೊಮ್ಮೆ ಛೇದಿಸುವಲ್ಲೂ ಬಹಳಷ್ಟು ಪರಿಣಾಮಗಳನ್ನು ಬೀರುತ್ತದೆ. ‘ಆ ದಿನ’ ಹೇಗೆ ಒಬ್ಬ ಹೆಣ್ಣಿನ ಬದುಕನ್ನು ಕೊನೆಯವರೆಗೂ ನಿಯಂತ್ರಿಸುವುದಕ್ಕೆ ಹವಣಿಸುತ್ತದೆ ಮತ್ತು ಆಕೆ ಅದರಿಂದ ಪಾರಾಗಲು ಹವಣಿಸುತ್ತಾ ತನ್ನನ್ನು ತಾನು ಉಳಿಸಿಕೊಳ್ಳಲು ಹೇಗೆ ಯತ್ನಿಸುತ್ತಾಳೆ ಎನ್ನುವುದನ್ನು ಈ ಕಾದಂಬರಿ ತೆರೆದಿಡುತ್ತದೆ.

ಕಾದಂಬರಿ ಒಬ್ಬ ಸಾಹಿತ್ಯ ಅಧ್ಯಾಪಕಿಯ ಅಂತರಂಗದ ನಿರೂಪಣೆಯಾಗಿದೆ. ಜಗತ್ತಿನ ಹಲವು ಕ್ಲಾಸಿಕ್ ಕೃತಿಗಳ ಹಿನ್ನೆಲೆಯನ್ನು ಬಳಸಿಕೊಳ್ಳುತ್ತಾ, ಅವುಗಳೊಂದಿಗೆ ಕಥಾನಾಯಕಿ ಮುಖಾಮುಖಿಯಾಗುತ್ತಾಳೆ, ಒಂದು ಕನ್ನಡಿಯನ್ನು ಎದುರುಗೊಳ್ಳುವಂತೆ. ಆಕೆಯ ಏಕಾಂಗಿತನ, ಅನಾಥ ಪ್ರಜ್ಞೆಗಳಿಗೆ ಕಾರಣವಾಗುವ ‘ಆ ದಿನ’ದ ಘಟನೆ, ಪ್ರತಿಯೊಬ್ಬ ಅಂತರ್ಮುಖಿ ಒಂದಲ್ಲ ಒಂದು ಸಂದರ್ಭದಲ್ಲಿ ಎದುರುಗೊಂಡ ಘಟನೆಯೇ ಆಗಿರುತ್ತದೆ. ಓ. ಎಲ್. ನಾಗಭೂಷಣ ಸ್ವಾಮಿ ಹೇಳುವಂತೆ, ಬದುಕಿನ ಕೆಡುಕನ್ನು ಒಪ್ಪಿಕೊಂಡೂ ಇರುವ ಒಳಿತನ್ನು ಮರೆಯದೆ ಮನುಷ್ಯ ಸಂಬಂಧ, ಸಂಪರ್ಕ, ಸಹವಾಸಗಳ ವೌಲ್ಯವನ್ನು ಎತ್ತಿ ಹಿಡಿಯುವ ಉದ್ದೇಶವನ್ನು ಈ ಕಾದಂಬರಿ ಹೊಂದಿದೆ. ಶೂದ್ರ ಹೆಣ್ಣು ಮನಸ್ಸಿನ ಬರಹಗಾರರು. ಆದುದರಿಂದ ಹೆಣ್ಣೊಬ್ಬಳ ಒಳಸಂಘರ್ಷವನ್ನು ತನ್ನದಾಗಿಸಿಕೊಂಡು ಸರಾಗವಾಗಿ ನಿರೂಪಿಸಲು ಅವರಿಗೆ ಈ ಕಾದಂಬರಿಯಲ್ಲಿ ಸಾಧ್ಯವಾಗಿದೆ. ಬಹುಸಮಯದ ಬಳಿಕ ನವ್ಯ-ನವ್ಯೋತ್ತರ ಸಂಧಿಯಲ್ಲಿ ನಿಂತು ಶೂದ್ರ ಅವರು ಈ ಕಾದಂಬರಿಯನ್ನು ಓದುಗರಿಗೆ ನೀಡಿದ್ದಾರೆ. ಕಾದಂಬರಿ ಒಂದು ವಿಭಿನ್ನ ಅನುಭೂತಿಯನ್ನು ನೀಡುವಲ್ಲಿ ಖಂಡಿತ ಯಶಸ್ವಿ ಯಾಗಿದೆ.

ಅಭಿನವ ಪ್ರಕಾಶನ ಬೆಂಗಳೂರು ಹೊರತಂದಿರುವ ಈ ಕೃತಿಯ ಪುಟಗಳು 156. ಕೃತಿಯ ಮುಖಬೆಲೆ 150 ರೂಪಾಯಿ. ಆಸಕ್ತರು 94488 04905 ದೂರವಾಣಿಯನ್ನು ಸಂಪರ್ಕಿಸಬಹುದು.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News