ಹೆದ್ದಾರಿಗಳಲ್ಲಿ ಮದ್ಯದಂಗಡಿ: ತೂರಾಡುತ್ತಿರುವ ಸರಕಾರಗಳು!

Update: 2017-04-07 18:47 GMT

ಕಾನೂನು ಚಾಪೆಯಡಿಗೆ ನುಸುಳಿದರೆ, ಅದನ್ನು ಉಲ್ಲಂಘಿಸುವವರು ರಂಗೋಲಿಯಡಿಗೆ ತೂರುತ್ತಾರೆ ಎನ್ನುವ ಮಾತಿದೆ. ಆದರೆ ಕಾನೂನನ್ನು ರಚಿಸುವವರೇ ಇಂತಹ ಕೃತ್ಯಗಳಲ್ಲಿ ಭಾಗಿಯಾದರೆ ಕಾನೂನನ್ನು ರಕ್ಷಿಸುವವರು ಯಾರು? ಕಾನೂನು ಇರುವುದೇ ಅನುಷ್ಠಾನಗೊಳಿಸುವುದಕ್ಕಾಗಿ. ಒಂದೆಡೆ ಕಾನೂನನ್ನು ಜಾರಿಗೊಳಿಸಿದಂತೆ ಮಾಡಿ, ಇನ್ನೊಂದೆಡೆ ಆ ಕಾನೂನು ಜಾರಿಯಾಗದಂತೆ ನೋಡಿಕೊಳ್ಳಲು ಮಗದೊಂದು ತಂತ್ರವನ್ನು ಹೆಣೆಯುತ್ತಾರೆ. ಹೆದ್ದಾರಿ ಬದಿಯಲ್ಲಿರುವ ಮದ್ಯದಂಗಡಿಗಳ ತೆರವು ಪ್ರಕರಣದಲ್ಲಿ ಮತ್ತೊಮ್ಮೆ ಜನಪ್ರತಿನಿಧಿಗಳ ಸಮಯಸಾಧಕತನ ಬೆಳಕಿಗೆ ಬಂದಿದೆ. ಹೆದ್ದಾರಿಗಳ ಅಕ್ಕಪಕ್ಕ 500 ಮೀಟರ್ ವ್ಯಾಪ್ತಿಯಲ್ಲಿರುವ ಮದ್ಯದಂಗಡಿಗಳನ್ನು ತೆರವುಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.

ಇದೇ ಸಂದರ್ಭದಲ್ಲಿ ರಾಜ್ಯ ಸರಕಾರಗಳಿಗೋ ಈ ಆದೇಶ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ರೈತರನ್ನು, ಜೋಪಡಾ ಪಟ್ಟಿಗಳನ್ನು ತೆರವುಗೊಳಿಸಲು ಈ ಸರಕಾರಗಳಿಗೆ ಯಾವ ಆದೇಶಗಳ ಅಗತ್ಯವೂ ಇಲ್ಲ. ನೂರಾರು ಕುಟುಂಬಗಳು ಬೀದಿಪಾಲಾದರೂ, ಕೃಷಿ ಭೂಮಿ ಸರ್ವನಾಶವಾದರೂ ಅದರಿಂದ ನಾಡಿಗೆ ಕೆಡುಕಾಗುತ್ತದೆ ಎಂದು ಸರಕಾರಗಳು ಹೇಳಿಕೆ ನೀಡಿದ ಒಂದೇ ಒಂದು ಉದಾಹರಣೆಗಳಿಲ್ಲ. ಬಡವರ ಗುಡಿಸಲುಗಳನ್ನು ಗುಡಿಸಿ ಹಾಕಲು ಸರಕಾರಕ್ಕೆ ನ್ಯಾಯಾಲಯದ ಆದೇಶವೇ ಬೇಕಾಗಿಲ್ಲ. ಆದರೆ ಯಾವಾಗ ಹೆದ್ದಾರಿಯ ಪಕ್ಕದಲ್ಲಿರುವ ಮದ್ಯದಂಗಡಿಗಳನ್ನು ಎತ್ತಂಗಡಿ ಮಾಡಲು ನ್ಯಾಯಾಲಯ ಆದೇಶ ನೀಡಿತೋ, ಆಗ ಸರಕಾರಕ್ಕೆ ಅದು ಸಾವು ಬದುಕಿನ ಪ್ರಶ್ನೆಯಾಗಿ ಪರಿಣಮಿಸಿತು.

ಹೆದ್ದಾರಿಯಲ್ಲಿರುವ ಮದ್ಯದಂಗಡಿಗಳನ್ನು ತೆಗೆದುಹಾಕಿದರೆ ರಾಜ್ಯ ಸರಕಾರಗಳಿಗೆ ಸಾವಿರಾರು ಕೋಟಿ ರೂಪಾಯಿ ನಷ್ಟವುಂಟಾಗಿ ಸರಕಾರ ದಿವಾಳಿಯಾಗಲಿದೆ ಎಂದು ಈಗಾಗಲೇ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಗೋಳಾಡತೊಡಗಿದ್ದಾರೆ.ಸಾರ್ವಜನಿಕರಿಗೆ ಹೆಂಡವನ್ನು ಮಾರಿ ಖಜಾನೆಯನ್ನು ತುಂಬಿಸಿಕೊಳ್ಳುವ ದೈನೇಸಿ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ಹೇಳುವುದಕ್ಕೆ ಈ ನಾಯಕರಿಗೆ ಯಾವ ನಾಚಿಕೆಯೂ ಇಲ್ಲ. ಮದ್ಯ ಮಾರಿ ಶ್ರೀಸಾಮಾನ್ಯರ ಬದುಕನ್ನು ನಾಶ ಮಾಡಿ, ಈ ನಾಡನ್ನು ಅಭಿವೃದ್ಧಿಗೊಳಿಸುತ್ತೇವೆ ಎನ್ನುವ ರಾಜಕೀಯ ನಾಯಕರ ಮಾತುಗಳೇ ಅಪ್ರಾಮಾಣಿಕತೆಯಿಂದ ಕೂಡಿದೆ. ಹೆಂಡ, ಡ್ರಗ್ಸ್‌ನಂತಹ ಮಾರಕ ಚಟಗಳ ಜೊತೆಗೆ ಒಂದು ನಾಡನ್ನು ಆರೋಗ್ಯಪೂರ್ಣವಾಗಿ, ಅಭಿವೃದ್ಧಿಯ ಕಡೆಗೆ ಕೊಂಡೊಯ್ಯುವುದು ಸಾಧ್ಯ ಎನ್ನುವುದೇ ಆಷಾಡಭೂತಿ ಹೇಳಿಕೆಯಾಗಿದೆ. ನಾವಿಂದು ವಿಶಾಲ ಹೆದ್ದಾರಿಗಳನ್ನು ಹೊಂದಿದ್ದೇವೆ.

ವಿವಿಧ ನಗರಗಳನ್ನು ಸಂಪರ್ಕಿಸುವ ಈ ಹೆದ್ದಾರಿಯನ್ನು ಅಭಿವೃದ್ಧಿಯ ನರಗಳು ಎಂದು ಕರೆಯುತ್ತೇವೆ. ಆದರೆ ಈ ನರನಾಡಿಗಳಲ್ಲಿರುವ ಅಡೆತಡೆಗಳನ್ನು ನಿವಾರಿಸುವಲ್ಲಿ ಮಾತ್ರ ವಿಫಲರಾಗುತ್ತಿದ್ದೇವೆ. ಹೆದ್ದಾರಿಗಳು ಇಂದು ದರೋಡೆಗಳಿಗೆ ಮತ್ತು ಅಪಘಾತಗಳಿಗೆ ಕುಖ್ಯಾತವಾಗುತ್ತಿವೆ. ಹೆದ್ದಾರಿಗಳು ಕ್ರಿಮಿನಲ್‌ಗಳ ಅಡ್ಡೆಯಾಗುತ್ತಿವೆ. ನ್ಯಾಯಾಲಯವು ಇಂತಹದೊಂದು ಆದೇಶವನ್ನು ನೀಡಲು ಮುಖ್ಯ ಕಾರಣ, ಹೆಚ್ಚುತ್ತಿರುವ ರಸ್ತೆ ದುರಂತಗಳು. ಲಾರಿಗಳಂತಹ ಘನವಾಹನಗಳ ಅಪಘಾತಗಳ ಹಿಂದೆ ಮದ್ಯ ಸೇವನೆ ಪ್ರಮುಖ ಪಾತ್ರವಹಿಸಿರುವುದನ್ನು ನ್ಯಾಯಾಲಯ ಗಂಭೀರವಾಗಿ ಸ್ವೀಕರಿಸಿದೆ. ನ್ಯಾಯಾಲಯದ ನಿರ್ಧಾರ ಅತ್ಯಂತ ವಿವೇಕದಿಂದ ಮತ್ತು ಮಾನವೀಯತೆಯಿಂದ ಕೂಡಿದೆ. ನಮ್ಮನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ಯುವುದು ಕಾಂಕ್ರೀಡ್ ಹೆದ್ದಾರಿಗಳಲ್ಲ.

ಆ ಹೆದ್ದಾರಿಗಳು ಶ್ರೀಸಾಮಾನ್ಯನ ಬದುಕನ್ನೂ ತನ್ನ ಜೊತೆಗೆ ಸುಗಮವಾಗಿ ಕೊಂಡೊಯ್ದಾಗ ಅಭಿವೃದ್ಧಿಯ ಅರ್ಥಪೂರ್ಣವಾಗುತ್ತದೆ. ಲಾರಿ ಚಾಲಕನೊಬ್ಬ ಹೆದ್ದಾರಿ ಬದಿಯ ಮದ್ಯದಂಗಡಿಯಲ್ಲಿ ಕಂಠಪೂರ್ತಿ ಕುಡಿದು ಪಾನಮತ್ತನಾಗಿ ಚಾಲನೆಗೈದು ಅಪಘಾತ ಸಂಭವಿಸಿ ಆಗುವ ಸಾವು, ನೋವು ಹಾಗೂ ನಷ್ಟ ದೇಶದ ಖಜಾನೆಗೆ ಎರಗುವ ಆಘಾತವೇ ಅಲ್ಲವೇ? ತಿಳಿದು ಮಾಡುವ ಈ ಅಪರಾಧಗಳಿಗೆ ಅದೆಷ್ಟೋ ಅಮಾಯಕರು ತಮ್ಮ ಜೀವವನ್ನು ಕಳೆದುಕೊಳ್ಳಬೇಕಾಗುತ್ತದೆ. ಅಷ್ಟೇ ಅಲ್ಲ, ರಾತ್ರಿಯಲ್ಲಿ ಹೆದ್ದಾರಿ ಕ್ರಿಮಿನಲ್‌ಗಳ ಅಡ್ಡೆಯಾಗುತ್ತಿವೆ. ಒಂಟಿ ಪ್ರಯಾಣಿಕರ ಪಾಲಿಗೆ ಮೃತ್ಯು ದಾರಿಯಾಗಿ ಪರಿಣಮಿಸಿವೆ ಹೆದ್ದಾರಿಗಳು. ಮದ್ಯದಂಗಡಿಗಳನ್ನು ಕೇಂದ್ರವಾಗಿಟ್ಟುಕೊಂಡೇ ಇಂತಹ ಕ್ರಿಮಿನಲ್‌ಗಳು ಹುಟ್ಟಿಕೊಳ್ಳುತ್ತಿದ್ದಾರೆ ಎನ್ನುವ ಅಂಶವನ್ನು ನಾವು ಗಮನಿಸಬೇಕಾಗಿದೆ. ಅಪಘಾತಗಳು ಮತ್ತು ಅಪರಾಧಗಳು ಎರಡನ್ನೂ ಇಳಿಕೆ ಮಾಡುವ ಉದ್ದೇಶವನ್ನು ಮುಂದಿಟ್ಟುಕೊಂಡು ನ್ಯಾಯಾಲಯ ಆದೇಶ ನೀಡಿರುವಾಗ, ಅದನ್ನು ಪ್ರಾಮಾಣಿಕವಾಗಿ ಜಾರಿಗೊಳಿಸುವುದು ಆಯಾ ಸರಕಾರಗಳ ಕರ್ತವ್ಯವಾಗಿದೆ.

ದುರದೃಷ್ಟವಶಾತ್, ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯ ಸರಕಾರಗಳ ಪಾಲಿಗೆ ಈ ಆದೇಶ ‘ಮಾರಕ’ವಾಗಿ ಕಂಡಿದೆ. ಈ ಆದೇಶದಿಂದ ಪಾರಾಗುವುದಕ್ಕೆ ಅವರು ಹೊಸ ತಂತ್ರ ಹೂಡಿದ್ದಾರೆ. ಅದರ ಭಾಗವಾಗಿ, ಹೆದ್ದಾರಿಗಳನ್ನು ಡಿನೋಟಿಫೈ ಮಾಡಿ ನಗರರಸ್ತೆಗಳಾಗಿ ಬದಲಾಯಿಸಲು ಹೊರಟಿವೆ. ಉಳಿದಂತೆ ಈ ರಸ್ತೆಯ ಉದ್ದಗಲಗಳಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಹೆದ್ದಾರಿಗಳಲ್ಲಿ ಮದ್ಯದಂಗಡಿ ಇಡಬಾರದು, ಆದರೆ ಅವುಗಳನ್ನು ಹೆದ್ದಾರಿ ಎಂದು ಗುರುತಿಸದೆ ಬೇರೆ ಹೆಸರಿನಲ್ಲಿ ಗುರುತಿಸಿದರೆ ಅಲ್ಲಿ ಮದ್ಯದಂಗಡಿ ಇಡುವುದಕ್ಕೆ ಅವಕಾಶವಿದೆಯಲ್ಲ ಎನ್ನುವುದು ರಾಜ್ಯ ಸರಕಾರಗಳ ಆಲೋಚನೆ. ರಾಜ್ಯ ಸರಕಾರಗಳು ಈ ಮೂಲಕ ತಮಗೆ ತಾವೇ ಮೋಸ ಮಾಡಿಕೊಳ್ಳುತ್ತಿವೆ. ಹೆಸರು ಬದಲಾಯಿಸಿದಾಕ್ಷಣ ಹೆದ್ದಾರಿಗಳಲ್ಲಿ ನಡೆಯುವ ಅಪಘಾತ ಮತ್ತು ಅಪರಾಧ ಪ್ರಕರಣಗಳು ಇಳಿಯುತ್ತವೆ ಎಂದಾಗಿದ್ದರೆ ಸರಕಾರಗಳ ಈ ಕ್ರಮವನ್ನು ಒಪ್ಪಿಕೊಳ್ಳಬಹುದಾಗಿದೆ. ಆದರೆ ಹೆಸರಷ್ಟೇ ಬದಲಾಗಿದೆ, ಉಳಿದಂತೆ ಅಪಘಾತ, ಅಪರಾಧಗಳು ಇನ್ನಷ್ಟು ಹೆಚ್ಚಾದರೆ ಅದರಿಂದ ನಷ್ಟ ಯಾರಿಗೆ? ಇದೇ ಸಂದರ್ಭದಲ್ಲಿ ನಗರ ರಸ್ತೆಗಳಾಗಿ ಪರಿವರ್ತನೆಗೊಂಡರೆ, ಹೆದ್ದಾರಿಗಳ ಅಭಿವೃದ್ಧಿಗಾಗಿ ಕೇಂದ್ರ ಸರಕಾರದಿಂದ ಯಾವ ಮುಖದಿಂದ ಅನುದಾನವನ್ನು ಪಡೆಯುತ್ತದೆ? ಅನುದಾನ ಪಡೆಯುವ ಸಂದರ್ಭದಲ್ಲಷ್ಟೇ ಹೆದ್ದಾರಿಗಳೆಂದು ಘೋಷಿಸಿ ಬಳಿಕ ಅವುಗಳನ್ನು ನಗರ ರಸ್ತೆಗಳಾಗಿ ಅಥವಾ ರಾಜ್ಯ ರಸ್ತೆಯಾಗಿ ಉಳಿಸಿಕೊಳ್ಳಲು ಹೊರಟಿದೆಯೇ?

 ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಪಾಲಿಸುವುದಕ್ಕೆ ರಾಜ್ಯ ಸರಕಾರಗಳು ಹಿಂಜರಿದರೆ, ಅದು ಜನತೆಗೆ ಬಗೆಯುವ ದ್ರೋಹವಾಗುತ್ತದೆ. ಜನ ಸಾಮಾನ್ಯರ ಬದುಕನ್ನು ಸಂಕಷ್ಟಕ್ಕೆ ತಳ್ಳಿ, ಅದರಿಂದ ವಸೂಲಾಗುವ ಹಣದಿಂದ ಈ ನಾಡಿನ ಅಭಿವೃದ್ಧಿ ಸಾಧ್ಯವಿಲ್ಲ ಮತ್ತು ಅಂತಹ ಅಭಿವೃದ್ಧಿಯ ಅಗತ್ಯವೂ ಇಲ್ಲ. ಅಂತಹ ಹೆಂಡದಂಗಡಿಗಳಿಂದ ಬರುವ ಆದಾಯ, ಆಸ್ಪತ್ರೆ, ಪರಿಹಾರ ಎಂದು ವಿತರಿಸುವುದರಲ್ಲೇ ಮುಗಿದು ಹೋಗಬಹುದು. ಜೊತೆಗೆ ಅದೆಷ್ಟೋ ಕುಟುಂಬ ತಮ್ಮ ಮನೆ ಯಜಮಾನನ್ನು ಕಳೆದುಕೊಂಡು ಅತಂತ್ರವಾಗಬೇಕಾಗುತ್ತದೆ. ಕುಡಿತದ ಚಟದಿಂದಾಗಿ ಆರ್ಥಿಕವಾಗಿ ಸದಾ ಸಂಕಷ್ಟವನ್ನು ಎದುರಿಸುವ ಜನರು ಈ ನಾಡಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿದ್ದಾರೆ. ಮದ್ಯದಂಗಡಿ ಮುಚ್ಚಿದರೆ ನಷ್ಟಕ್ಕೊಳಗಾಗುವವರು ಮದ್ಯದ ಮಾಫಿಯಾಗಳಹಿಂದಿರುವ ಶಕ್ತಿಗಳು ಮಾತ್ರ. ಆ ಬೆರಳೆಣಿಕೆಯ ಜನರಿಗಾಗಿ ಈ ನಾಡಿನ ಅಭಿವೃದ್ಧಿ, ಆರೋಗ್ಯ, ಸ್ವಾಸ್ಥಗಳನ್ನು ಬಲಿಕೊಡುವುದು ರಾಜ್ಯ ಸರಕಾರಗಳ ಘನತೆಗೆ ಶೋಭೆ ತರುವಂತಹದ್ದಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News