ನಮ್ಮ ಸರದಿಗಾಗಿ ಹೊಂಚು ಹಾಕಿ ಕಾಯುತ್ತಿರುವ ಬೀದಿನಾಯಿಗಳು!

Update: 2017-04-09 18:57 GMT

ಕಳೆದ ಮಾರ್ಚ್ 27ರಂದು ಮಧ್ಯ ಪ್ರದೇಶದಲ್ಲಿ ನಡೆದ ಘಟನೆ ಇದು. ಇಲ್ಲಿ ಸರಕಾರಿ ಆಸ್ಪತ್ರೆಯಿಂದ 70 ವರ್ಷದ ವೃದ್ಧೆಯೊಬ್ಬರು ಇದ್ದಕ್ಕಿದ್ದಂತೆಯೇ ಕಾಣೆಯಾಗಿ ಬಿಡುತ್ತಾರೆ. ಕಾಣೆಯಾದ ಒಂದು ದಿನದ ಬಳಿಕ ಅದೇ ಆಸ್ಪತ್ರೆಯ ಆವರಣದ ಸಮೀಪ ಆಕೆಯ ಮೃತದೇಹ ಪತ್ತೆಯಾಗುತ್ತದೆ. ಬೀದಿ ನಾಯಿಗಳು ಸೇರಿ ಆಕೆಯ ದೇಹವನ್ನು ಅರ್ಧ ತಿಂದು ಬಿಟ್ಟು ಹೋಗಿದ್ದವು. ನಾಯಿಗಳೇನೂ ಆಸ್ಪತ್ರೆಯ ಒಳಗೆ ನುಗ್ಗಿ ಆಕೆಯನ್ನು ಎಳೆದುಕೊಂಡು ಹೋಗಿರಲಿಲ್ಲ. 70 ವರ್ಷದ ವೃದ್ಧೆ ತಮಗೆ ಯಾವ ಮಾಹಿತಿಯೂ ನೀಡದೆ ಕಾಣೆಯಾಗಿದ್ದರು ಎಂದು ಆಸ್ಪತ್ರೆಯ ಮೂಲಗಳು ಹೇಳುತ್ತವೆಯಾದರೂ, ಇನ್ನೊಂದು ಮೂಲದ ಪ್ರಕಾರ ಆಕೆಯನ್ನು ಸಿಬ್ಬಂದಿಯೇ ಆಸ್ಪತ್ರೆಯಿಂದ ಹೊರಗಟ್ಟಿದ್ದರು. ಕುಟುಂಬವೂ, ನಾಗರಿಕ ಸಮಾಜವೂ ಕೈ ಬಿಟ್ಟ ಈ ವೃದ್ಧೆ ಬೀದಿನಾಯಿಗಳಿಗೆ ಆಹಾರವಾಗಿ ಬಳಕೆಯಾದರು.

ಮನುಷ್ಯನ ಘನತೆ ಈ ರೀತಿ ಹಾಡು ಹಗಲೇ, ಬೀದಿ ನಾಯಿಗಳ ಪಾಲಾಗುತ್ತಿರುವುದು ಇದೇ ಮೊದಲಲ್ಲ. ಮಧ್ಯಪ್ರದೇಶದಲ್ಲಿ ಕಳೆದ ಕೆಲವು ತಿಂಗಳ ಹಿಂದೆ ಆಸ್ಪತ್ರೆಗಳ ಆವರಣಗಳಲ್ಲಿ ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿರುವುದು ಮಾಧ್ಯಮಗಳಿಂದ ಬಹಿರಂಗವಾಗುತ್ತಿವೆ. ಬೀದಿ ನಾಯಿಗಳಿಗೆ ಆಹಾರವಾಗುವ ಜೀವಗಳಲ್ಲಿ ಒಂದೋ ಆಗಷ್ಟೇ ಹುಟ್ಟಿದ ಹೆಣ್ಣು ಶಿಶು ಅಥವಾ ಯಾರಿಗೂ ಬೇಡವಾದ ವೃದ್ಧರು. ಇದು ಕೇವಲ ಮಧ್ಯ ಪ್ರದೇಶಕ್ಕಷ್ಟೇ ಸೀಮಿತವಾಗಿಲ್ಲ. ಪಕ್ಕದ ಕೇರಳದಲ್ಲೂ ಬೀದಿ ನಾಯಿಗಳಿಗೆ ವೃದ್ಧರು ಎರವಾಗು ತ್ತಿರುವ ಘಟನೆಗಳು ಹೆಚ್ಚುತ್ತಿವೆ.

ತಿರುವನಂತಪುರದಲ್ಲಿ ಶನಿವಾರ 85 ವರ್ಷ ಪ್ರಾಯದ ವೃದ್ಧರೋರ್ವರನ್ನು ಬೀದಿನಾಯಿಗಳು ಅರ್ಧ ತಿಂದು ಎಸೆದು ಹೋಗಿವೆ. ಬೀದಿ ನಾಯಿಗಳಿಗೆ ನವಜಾತ ಶಿಶುಗಳಾಗಲಿ, ವೃದ್ಧರಾಗಲಿ ಪದೇ ಪದೇ ಬಲಿಯಾಗುತ್ತಿರುವುದು ಆಕಸ್ಮಿಕವಲ್ಲ. ನಮ್ಮಿಳಗಿನ ಮನುಷ್ಯತ್ವಕ್ಕೆ ರೇಬಿಸ್ ರೋಗಾಣುಗಳು ಅಂಟಿಕೊಂಡಿರು ಪರಿಣಾಮವಾಗಿಯೇ ನಾವು ಹುಟ್ಟಿದ ಮಕ್ಕಳನ್ನು, ನಮ್ಮನ್ನು ಸಾಕಿ ಬೆಳೆಸಿದ ವೃದ್ಧರ್ನು ಬೀದಿನಾಯಿಗಳಿಗೆ ಆಹಾರವಾಗಿ ಬಿಟ್ಟು ಕೊಡುವುದಕ್ಕೆ ಆರಂಭಿಸಿದ್ದೇವೆ. ನವಜಾತ ಶಿಶುಗಳು ಕಸದ ತೊಟ್ಟಿಯಲ್ಲಿ, ರಸ್ತೆಗಳಲ್ಲಿ, ಚರಂಡಿಗಳಲ್ಲಿ ಪತ್ತೆಯಾಗುವುದು ಸಾಧಾರಣವಾಗಿ ಮಾಧ್ಯಮಗಳಲ್ಲಿ ಚರ್ಚೆಯಾ ಗುತ್ತವೆ. ಅವುಗಳನ್ನು ತಡೆಯುವುದಕ್ಕೆ ಕಾನೂನನ್ನೂ ಬಿಗಿಗೊಳಿಸಲಾಗುತ್ತಿದೆ. ಆದರೆ ವೃದ್ಧರನ್ನು ರಸ್ತೆಯಲ್ಲಿ, ಆಸ್ಪತ್ರೆಗಳಲ್ಲಿ, ವೃದ್ಧಾಶ್ರಮಗಳಲ್ಲಿ ಎಸೆದು ಹೋಗುತ್ತಿರುವ ಕೃತ್ಯಗಳ ವಿರುದ್ಧ ಸಮಾಜ ಇನ್ನೂ ಜಾಗೃತವಾದಂತಿಲ್ಲ. ವೃದ್ಧರ ಬದುಕನ್ನು ಸರಕಾರವೂ ಗಂಭೀವಾಗಿ ತೆಗೆದುಕೊಂಡಂತಿಲ್ಲ.

ವಯಸ್ಸು ಎನ್ನುವುದನ್ನು ರೋಗ ಎಂದು ತಿಳಿದುಕೊಂಡಿರುವ ಮನಸ್ಥಿತಿಗಳು ನಮ್ಮ ನಡುವೆ ಹೆಚ್ಚುತ್ತಿವೆ. ತಮಗೂ ಒಂದು ದಿನ ವಯಸ್ಸಾಗಲಿದೆ ಎನ್ನುವುದನ್ನು ಮರೆತು ತಮ್ಮನ್ನು ಹೆತ್ತು, ಸಾಕಿ ಸಲಹಿದ ವೃದ್ಧ ಜೀವಗಳನ್ನು ಸರಕಾರಿ ಆಸ್ಪತ್ರೆಗಳಲ್ಲಿ ಎಸೆದು ಹೋಗುತ್ತಿರುವ ಘಟನೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಈ ಜೀವಗಳು ಅತ್ತ ಕುಟುಂಬಕ್ಕೂ ಬೇಡವಾಗಿ, ಆಸ್ಪತ್ರೆಯ ಸಿಬ್ಬಂದಿಗೂ ಹೊರೆಯಾಗಿ ಬದುಕುತ್ತಿವೆ. ಅನೇಕ ಸಂದರ್ಭಗಳಲ್ಲಿ ಇವರು ಆಸ್ಪತ್ರೆಯಿಂದ ಏಕಾಏಕಿ ಕಾಣೆಯಾಗಿ ಬಿಡುತ್ತಾರೆ. ಇವರ ಹುಡುಕಾಟದ ಕುರಿತಂತೆ ಕುಟುಂಬಗಳಿಗೂ ವಿಶೇಷ ಆಸಕ್ತಿಯಿರುವುದಿಲ್ಲ. ಹೆಚ್ಚೆಂದರೆ ‘ಕಾಣೆಯಾಗಿದ್ದಾರೆ’ ಎಂಬ ಜಾಹೀರಾತಿನೊಂದಿಗೆ ತಮ್ಮ ಹೊಣೆಯಿಂದ ಮುಕ್ತರಾಗುತ್ತಾರೆ. ಕೆಲವೊಮ್ಮೆ ಇವರು ಯಾವುದೋ ರಸ್ತೆಗಳಲ್ಲಿ ಭಿಕ್ಷೆ ಬೇಡುತ್ತಾ ಬದುಕುವುದುಂಟು. ಹಲವರು ಯಾವುದೋ ಬೀದಿಯಲ್ಲಿ ನಾಯಿಗಳಿಗೆ ಆಹಾರವಾಗಿ ತಮ್ಮ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳುತ್ತಾರೆ.

ಒಂದೆಡೆ ಇಂತಹ ಹೀನಾಯ ಕೃತ್ಯಗಳಿಗೆ ಭಾರತೀಯ ಸಂಸ್ಕೃತಿ, ಸಂಪ್ರದಾಯಗಳನ್ನೂ ನೆಪವಾಗಿ ಬಳಸಿಕೊಳ್ಳುವುದಿದೆ. ಗಂಡನನ್ನು ಕಳೆದುಕೊಂಡು, ಇತ್ತ ಮಗ, ಸೊಸೆಯರಿಂದಲೂ ತಿರಸ್ಕೃತರಾಗಿ ಅಂತಿಮವಾಗಿ ಮಥುರಾದ ವೃಂದಾವನಕ್ಕೆ ಸೇರ್ಪಡೆಯಾಗುವ ನೂರಾರು ವೃದ್ಧೆಯರನ್ನು ಪತ್ರಿಕೆಗಳ ಮುಖಪುಟದಲ್ಲಿ ಕಾಣುತ್ತಿದ್ದೇವೆ. ವೃಂದಾವನವೆನ್ನುವುದು ಗಂಡನನ್ನು ಕಳೆದುಕೊಂಡ ವೃದ್ಧ ಮಹಿಳೆಯರ ಕೇರಿ ಎಂದೇ ಕುಖ್ಯಾತವಾಗಿದೆ. ಅವರು ಅಲ್ಲಿ ಭಿಕ್ಷೆ ಬೇಡುತ್ತಾ ತಮ್ಮ ಶೇಷ ಬದುಕನ್ನು ಮುಗಿಸಬೇಕಾದ ಹೃದಯವಿದ್ರಾವಕ ಸ್ಥಿತಿಯಿದೆ. ಇದೇ ಸಂದರ್ಭದಲ್ಲಿ ಜೈನಧರ್ಮದಲ್ಲಿ ವೃದ್ಧರಾದಾಕ್ಷಣ ‘ಸಲ್ಲೇಖನ’ದ ನೆಪದಲ್ಲಿ ಇಹಲೋಕ ತ್ಯಜಿಸುವ ಅವಕಾಶವನ್ನು ಅವರಿಗೆ ಕೊಡುಗೆಯಾಗಿ ನೀಡಲಾಗುತ್ತದೆ. ಬೆರಳೆಣಿಕೆಯಷ್ಟು ಜನರು ಸಲ್ಲೇಖನವನ್ನು ವೈರಾಗ್ಯ ಮತ್ತು ಅಧ್ಯಾತ್ಮದ ನೆಲೆಯಲ್ಲಿ ಸ್ವೀಕರಿಸಬಹುದಾದರೂ, ಬಹುತೇಕ ವೃದ್ಧರು ತಮ್ಮ ಮಕ್ಕಳ ಪರೋಕ್ಷ ಅಥವಾ ನೇರ ಒತ್ತಡಕ್ಕೆ ಮಣಿದು ಅಥವಾ ಸಮಾಜದ ಕೆಂಗಣ್ಣಿಗೆ ದಣಿದು ಅನ್ನಾಹಾರ ತ್ಯಜಿಸಿ ಪ್ರಾಣ ತೊರೆಯಬೇಕಾಗುತ್ತದೆ. ಹೊರಜಗತ್ತಿಗೆ ಮಾತ್ರ ಅವರು ‘ಸಲ್ಲೇಖನ’ದ ಮೂಲಕ ಪ್ರಾಣ ತೊರೆದ ಮಹನೀಯರಾಗುತ್ತಾರೆ.

ವೃದ್ಧರನ್ನು ನಮ್ಮ ಮುಖ್ಯವಾಹಿನಿಯಿಂದ ಅಥವಾ ಈ ಜಗತ್ತಿನಿಂದಲೇ ದೂರವಿಡಲು ಸಕಲ ತಂತ್ರಗಳನ್ನು ಬಳಸುವ ‘ನಾಗರಿಕರು’ ‘ಆಧುನಿಕರು’ ಎಂದು ಕರೆಸಿಕೊಳ್ಳುವ ನೀಚ ಮನುಷ್ಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆೆ. ಕುಟುಂಬ ಯೋಜನೆ ಜನಸಂಖ್ಯೆಯ ಪ್ರಮಾಣವನ್ನು ಇಳಿಸುವಲ್ಲಿ ಮಹತ್ತರ ಪಾತ್ರವಹಿಸಿರಬಹುದು. ಇದೇ ಸಂದರ್ಭದಲ್ಲಿ ವಯಸ್ಕರ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಮತ್ತು ಅವರನ್ನು ನಾವು ಸಂಪನ್ಮೂಲಗಳೆಂದು ಬಗೆಯದೆ, ಸಮಸ್ಯೆಯಾಗಿ ಪರಿವರ್ತಿಸಿಕೊಳ್ಳುತ್ತಿದ್ದೇವೆ. ಭಾರತದ ಜನಸಂಖ್ಯೆಯ ಆಧಾರದಲ್ಲಿ ಈ ದೇಶದಲ್ಲಿ ಸುಮಾರು 9 ಕೋಟಿಗೂ ಅಧಿಕ ಮಂದಿ 60 ವರ್ಷ ದಾಟಿದ ಹಿರಿಯ ನಾಗರಿಕರಿದ್ದಾರೆ. 2050ಲ್ಲಿ ಇವರ ಸಂಖ್ಯೆ 30 ಕೋಟಿಗೆ ತಲುಪುವ ಎಲ್ಲ ಸೂಚನೆಗಳು ಕಾಣಿಸುತ್ತಿವೆ. ಕೌಟುಂಬಿಕ ಬದುಕು, ಆರ್ಥಿಕ ಸಾಧ್ಯತೆಗಳು ದಿನದಿಂದ ದಿನಕ್ಕೆ ಸಂಕುಚಿತಗೊಳ್ಳುತ್ತಿರುವುದರಿಂದ ಭಾರತದಂತಹ ದೇಶದಲ್ಲಿ ಈ ಹಿರಿಯರ ಬದುಕು ಭಾರೀ ಬಿಕ್ಕಟ್ಟುಗಳನ್ನು ಎದುರಿಸಬೇಕಾಗುತ್ತದೆ.

ಇಂದಿಗೂ ಶೇ.50ಕ್ಕಿಂತ ಅಧಿಕ ಹಿರಿಯರು ಪರಾವಲಂಬಿಗಳು ಅಥವಾ ಬದುಕಿನ ಸಂಕಷ್ಟಗಳು, ಸವಾಲುಗಳು ಅವರನ್ನು ಅಂತಹ ಸ್ಥಿತಿಗೆ ತಂದು ನಿಲ್ಲಿಸಿರುತ್ತದೆ. ಒಂದು ಕುಟುಂಬ ತಲೆ ಎತ್ತಿ ನಿಲ್ಲುವುದಕ್ಕಾಗಿ ಸಕಲವನ್ನ್ನೂ ತ್ಯಾಗಮಾಡಿ ದುರ್ಬಲರಾಗಿ ನಿಂತ ಹಿರಿಯರಿಗೆ ಹೆಗಲು ಕೊಟ್ಟು ಅವರ ಶೇಷ ಬದುಕನ್ನು ಸಹ್ಯಗೊಳಿಸುವುದು ಹೊಸ ಚಿಗುರುಗಳ ಕರ್ತವ್ಯ. ಇಂದು ತನ್ನ ವೃದ್ಧ ತಂದೆ ತಾಯಿಗಳ ಹೊಣೆಗಾರಿಕೆಯನ್ನು ಹೊತ್ತುಕೊಂಡರೆ, ನಾಳೆ ತಾವು ತಮ್ಮ ಮಕ್ಕಳಿಂದ ಬೀದಿಪಾಲಾಗುವುದರಿಂದ ಪಾರಾಗಬಹುದು ಎನ್ನುವುದನ್ನು ಹೊಸ ತಲೆಮಾರು ನೆನಪಲ್ಲಿಟ್ಟುಕೊಳ್ಳಬೇಕು. ಇಂದು ನಾವು ನಮ್ಮ ತಂದೆತಾಯಿಗಳಿಗೆ ನೀಡಿದ ಅನ್ನದ ತಟ್ಟೆಯನ್ನೇ, ನಾಳೆ ನಮ್ಮ ಮಕ್ಕಳು ನಮಗೆ ನೀಡುವುದಕ್ಕಾಗಿ ಬಳಸುತ್ತಾರೆ. ಸರಕಾರ ವೃದ್ಧರ ಪರವಾಗಿ ವಿವಿಧ ಯೋಜನೆಗಳನ್ನು ರೂಪಿಸುವುದು ಆನಂತರದ ವಿಷಯ. ಅಂತಹ ಯೋಜನೆಗಳ ಅಗತ್ಯವೇ ಬರದಂತಹ ಮಾನವೀಯ ಸಮಾಜವನ್ನು ನಿರ್ಮಿಸುವ ಹೊಣೆಗಾರಿಕೆ ನಮ್ಮೆಲ್ಲರದಾಗಬೇಕು. ಇಲ್ಲವಾದರೆ, ಇಂದು ನಮ್ಮ ಹಿರಿಯರನ್ನು ತಿಂದ ಬೀದಿ ನಾಯಿಗಳು, ನಾಳೆ ನಮ್ಮ ಸರದಿಗಾಗಿ ಹೊಂಚಿ ಕಾಯುತ್ತಿರುತ್ತವೆ ಎಂಬುದನ್ನು ಮರೆಯಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News