ಈ ದೇಶ ಮಹಾಬಲಿಯದೋ? ಅಥವಾ ವಾಮನನದೋ?

Update: 2017-04-11 18:53 GMT

ದಕ್ಷಿಣ ಭಾರತ-ಉತ್ತರ ಭಾರತದ ನಡುವಿನ ಸಾಂಸ್ಕೃತಿಕ-ರಾಜಕೀಯ ತಿಕ್ಕಾಟ ಇಂದು ನಿನ್ನೆಯದಲ್ಲ. ಸಿನೆಮಾ ಇರಲಿ, ರಾಜಕೀಯ ಇರಲಿ, ಮಾಧ್ಯಮ ಕ್ಷೇತ್ರ ಇರಲಿ, ಸದಾ ದಕ್ಷಿಣ ಭಾರತೀಯರ ಮೇಲೆ ಉತ್ತರ ಭಾರತ ತನ್ನ ಹೇರಿಕೆಯನ್ನು ವಿವಿಧ ರೀತಿಯಲ್ಲಿ ಹೇರುತ್ತಲೇ ಬಂದಿದೆ. ದಕ್ಷಿಣ ಭಾರತೀಯರ ಆಲೋಚನೆಗಳನ್ನು, ಬದುಕನ್ನು ತನ್ನ ಮೂಗಿನ ನೇರಕ್ಕೆ ವ್ಯಾಖ್ಯಾನಿಸುತ್ತಾ, ನಿಯಂತ್ರಿಸುತ್ತಾ ಬರುತ್ತಿದ್ದಾರೆ ಉತ್ತರ ಭಾರತೀಯರು. ಪ್ರಾದೇಶಿಕ ಭಾಷೆಗಳ ಮೇಲಿನ ಹಿಂದಿ ಹೇರಿಕೆಯೂ ಇದರ ಭಾಗವೇ ಆಗಿದೆ. ಕೇಂದ್ರ ಸರಕಾರ ರಾಜ್ಯಗಳ ಸರ್ವ ನಿಯಂತ್ರಕಗಳನ್ನು ತನ್ನ ಕೈವಶ ಮಾಡಿಕೊಳ್ಳುತ್ತಿರುವ ಸದ್ಯದ ಸಂದರ್ಭದಲ್ಲಿ, ದಕ್ಷಿಣ ಭಾರತೀಯರ ಮೇಲೆ ಬೇರೆ ಬೇರೆ ಮುಖವಾಡಗಳ ಮೂಲಕ ಒತ್ತಡಗಳು ಆರಂಭವಾಗಿವೆ.

ಎಲ್ಲೆಲ್ಲ ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿದೆಯೋ ಆ ರಾಜ್ಯಗಳಿಗಷ್ಟೇ ಕೇಂದ್ರ ಸರಕಾರ ಒಂದಿಷ್ಟು ಹೆದರುತ್ತವೆ. ಉಳಿದಂತೆ ರಾಷ್ಟ್ರೀಯ ಪಕ್ಷಗಳು ಮೇಲ್ಗೈ ಆಗಿರುವ ರಾಜ್ಯಗಳಲ್ಲಿ ಯಾವ ದಾಕ್ಷಿಣ್ಯವೂ ಇಲ್ಲದೆ ತನ್ನ ವರ್ಣ ರಾಜಕೀಯವನ್ನು ಹೇರುತ್ತಿದೆೆ. ಆದುದರಿಂದಲೇ ಬಿಜೆಪಿ ನಾಯಕ ತರುಣ್ ವಿಜಯ್ ನೀಡಿರುವ ಹೇಳಿಕೆ ಒಂದು ಆಕಸ್ಮಿಕ ಅಥವಾ ನಾಲಗೆ ಜಾರುವಿಕೆ ಅಲ್ಲ. ಅದು ಉತ್ತರ ಭಾರತದಲ್ಲಿ ಇಳಿ ಬಿಟ್ಟಿರುವ ಆರ್ಯ ಮನಸ್ಥಿತಿಯನ್ನು ಬಹಿರಂಗಪಡಿಸಿದೆ. ಈ ಜನಾಂಗೀಯ ತಾರತಮ್ಯ ಮನಸ್ಥಿತಿ ಉತ್ತರ ಭಾರತದ ಬಹುತೇಕ ರಾಜಕಾರಣಿಗಳಲ್ಲಿ ಅದರಲ್ಲೂ ಬಿಜೆಪಿ ಮುಖಂಡರಲ್ಲಿ ಭಾರೀ ಪ್ರಮಾಣದಲ್ಲಿ ಜಾತಿಯ ರೂಪದಲ್ಲಿ, ಬಣ್ಣದ ರೂಪದಲ್ಲಿ ಆಗಾಗ ಹೊರ ಬರುತ್ತಲೂ ಇರುತ್ತದೆ. ಉತ್ತರ ಭಾರತೀಯರ ಈ ಆರ್ಯ ಸಿದ್ಧಾಂತಕ್ಕೆ ಪ್ರತಿರೋಧವಾಗಿ, ತಮಿಳು ನಾಡಿನಲ್ಲಿ ದ್ರಾವಿಡ ಚಳವಳಿ ಹುಟ್ಟಿಕೊಂಡಿತು.

ಪೆರಿಯಾರ್ ಕಾಲದಲ್ಲಿ ಇದು ಉಚ್ಛಾಯ ಸ್ಥಿತಿ ತಲುಪಿ, ಅದರ ತಳಹದಿಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳೂ ಹುಟ್ಟಿಕೊಂಡವು. ಈ ಪ್ರತಿರೋಧದ ಬೇರುಗಳು ಇತಿಹಾಸದಲ್ಲಿ ಮಾತ್ರವಲ್ಲ, ಪುರಾಣಗಳಲ್ಲೂ ನಮಗೆ ದೊರಕುತ್ತವೆ. ಭಾರತೀಯ ಪುರಾಣಗಳನ್ನು ಉತ್ತರ ಭಾರತೀಯರು ಮತ್ತು ದಕ್ಷಿಣ ಭಾರತೀಯರ ನಡುವಿನ ತಿಕ್ಕಾಟವೆಂದೇ ವ್ಯಾಖ್ಯಾನಿಸಲಾಗುತ್ತದೆ. ಹೇಗೆ ಆರ್ಯರು ದ್ರಾವಿಡರ ಮೇಲೆ ದಬ್ಬಾಳಿಕೆಯನ್ನು ನಡೆಸಿ ಅವರನ್ನು ಪಾತಾಳಕ್ಕೆ ಅಥವಾ ದಕ್ಷಿಣ ಭಾರತಕ್ಕೆ ತಳ್ಳಿದರು ಎನ್ನುವುದನ್ನು ರೂಪಕಗಳ ಮೂಲಕ ಪುರಾಣಗಳಲ್ಲಿ ಕಟ್ಟಿಕೊಡಲಾಗಿದೆ ಎನ್ನುವುದನ್ನು ಹಲವು ಸಂಶೋಧಕರು ಈಗಾಗಲೇ ಬರೆದಿದ್ದಾರೆ. ‘ಓಣಂ’ ಸಂದರ್ಭದಲ್ಲಿ ಅಮಿತ್ ಶಾ ಅವರ ‘ವಾಮನ ಜಯಂತಿ’ ಜಾಹೀರಾತನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಶ್ರೇಷ್ಠ ಚಕ್ರವರ್ತಿ ಯಾಗಿರುವ ಮಹಾಬಲಿಯನ್ನು ಮೋಸದಿಂದ ವಾಮನ ವಂಚಿಸಿ, ಆತನ ರಾಜ್ಯವನ್ನು ಕಿತ್ತುಕೊಳ್ಳುತ್ತಾನೆ. ಅಂತಿಮವಾಗಿ ಪ್ರಜೆಗಳು ಬಲಿ ಚಕ್ರವರ್ತಿಯ ಪರವಾಗಿ ಬಂಡಾಯ ಏಳುತ್ತಾರೆ ಎನ್ನುವುದನ್ನು ಗಮನಿಸಿ, ವರ್ಷಕ್ಕೊಮ್ಮೆ ತನ್ನ ರಾಜ್ಯವನ್ನು ವೀಕ್ಷಿಸಲು ಆತ ಆಗಮಿಸಬಹುದು ಎಂಬ ಧಾರಾಳತನವನ್ನು ಪ್ರದರ್ಶಿಸುತ್ತಾನೆೆ. ಹೀಗೆ, ಗಡಿಪಾರಾಗಿರುವ ತಮ್ಮ ಮೆಚ್ಚಿನ ಚಕ್ರವರ್ತಿ ವರ್ಷಕ್ಕೊಮ್ಮೆ ಆಗಮಿಸುವ ದಿನವನ್ನೇ ದಕ್ಷಿಣ ಭಾರತೀಯರು ‘ಓಣಂ’ ಎಂದು ಗೌರವಪೂರ್ವಕ ವಾಗಿ ಆಚರಿಸುತ್ತಾರೆ. ನಮ್ಮ ನಾಡಿನ ಒಳಿತು ಕೆಡುಕುಗಳನ್ನು ಅವನು ಬಂದು ನೋಡುತ್ತಾನೆ ಎನ್ನುವ ಕಲ್ಪನೆಯೇ ಅಪೂರ್ವವಾದುದು. ತಲೆ ತಲಾಂತರಗಳಿಂದ ಮಹಾಬಲಿಗೆ ದಕ್ಷಿಣ ಭಾರತೀಯರು ನೀಡುತ್ತಾ ಬಂದಿರುವ ಗೌರವ ಇದು. ಆದರೆ ಅಮಿತ್ ಶಾ ಅವರು ಓಣಂ ಹಬ್ಬದ ಉದ್ದೇಶವನ್ನೇ ತಿರುಚಲು ಯತ್ನಿಸಿ ದಕ್ಷಿಣ ಭಾರತೀಯರ ತೀವ್ರ ಟೀಕೆಗೆ ಗುರಿಯಾದರು. ಜಾಹೀರಾತೊಂದರಲ್ಲಿ, ಮಹಾಬಲಿಯನ್ನು ಬ್ರಾಹ್ಮಣ ವಟು ವಾಮನ ತನ್ನ ಪಾದದಿಂದ ತುಳಿಯುವ ಚಿತ್ರವನ್ನು ಹಾಕಿ, ಓಣಂ ದಿನವನ್ನು ‘ವಾಮನ ಜಯಂತಿ’ಯನ್ನಾಗಿ ಆಚರಿಸಬೇಕು ಎಂದು ಘೋಷಿಸಿದ್ದರು. ಆರೆಸ್ಸೆಸ್‌ನ ನಾಯಕರೊಬ್ಬರು ಇದೇ ಹೇಳಿಕೆಯನ್ನು ನೀಡಿ ವಿವಾದಕ್ಕೊಳಗಾದರು. ಅಂದರೆ, ಈ ದೇಶ ವಾಮನ ಮತ್ತು ಬಲಿ ಚಕ್ರವರ್ತಿಯ ಹೆಸರಿನಲ್ಲಿ ಮಾನಸಿಕವಾಗಿ ಹೇಗೆ ಒಡೆದು ಹೋಗಿದೆ ಎನ್ನುವುದನ್ನು ಇದು ತಿಳಿಸುತ್ತದೆ. ಮಧ್ಯ ಏಶ್ಯಾದಿಂದ ಬಂದ ಆರ್ಯ ಸಮುದಾಯ ಈ ದೇಶದ ಮೂಲನಿವಾಸಿಗಳನ್ನು ಹೀಗೆ ಬಗೆಬಗೆಯಾಗಿ ತುಳಿದು ಹಾಕಿರುವುದು ಆರೆಸ್ಸೆಸ್ ಮತ್ತು ಅವರ ಗೆಳೆಯರಿಗೆ ಹೆಮ್ಮೆಯ ವಿಷಯವಾಗಿದ್ದರೆ, ತುಳಿತಕ್ಕೊಳಗಾಗಿರುವ ದಕ್ಷಿಣ ಭಾರತೀಯರಿಗೆ ಅದು ನೋವಿನ ವಿಷಯವಾಗಿದೆ. ಆದುದರಿಂದಲೇ ಅವರು ವರ್ಷಕ್ಕೊಮ್ಮೆ ಸಾಂಕೇತಿಕವಾಗಿ ಮಹಾಬಲಿಯನ್ನು ಆಹ್ವಾನಿಸಿ ಸಂಭ್ರಮಿಸುತ್ತಾರೆ. ಇದು ಉತ್ತರ ಭಾರತೀಯರಿಗೆ ಅದರಲ್ಲೂ ಆರೆಸ್ಸೆಸ್ ಮನಸ್ಥಿತಿಯ ಜನರಿಗೆ ದೇಶದ್ರೋಹವಾಗಿ ಕಂಡಿದೆ.

ಮಹಾ ಬಲಿ ಮಾತ್ರವಲ್ಲ, ಮಹಿಷಾಸುರನ ವಿಷಯದಲ್ಲೂ ಇದೇ ನಡೆದಿದೆ. ಇಂದು ರಾಜ್ಯವೂ ಸೇರಿದಂತೆ ವಿವಿಧ ಬುಡಕಟ್ಟು ಸಮುದಾಯದಲ್ಲಿ ಮಹಿಷಾಸುರನನ್ನು ಪೂಜೆ ಮಾಡುತ್ತಾರೆ. ಮಹಿಷಾಸುರ ಇತಿಹಾಸದಲ್ಲಿ ಆಗಿಹೋಗಿರುವ ಶ್ರೇಷ್ಟ ಬುಡಕಟ್ಟು ರಾಜ. ಜನರ ಕೃಷಿ ಬದುಕಿಗೆ ಪೂರಕವಾಗಿ ಸಮಾಜವನ್ನು ನಿರ್ಮಿಸಿದವನು ಆತ. ಮಹಿಳೆಯೊಬ್ಬಳನ್ನು ಬಳಸಿಕೊಂಡು ಆತನನ್ನು ಮೋಸದಿಂದ ಕೊಂದು, ರಾಜ್ಯವನ್ನು ಕಬಳಿಸಲಾಗುತ್ತದೆ. ಪುರಾಣದಲ್ಲಿ ಇದನ್ನೂ ರಾಕ್ಷಸ-ದೇವತೆಗಳ ನಡುವಿನ ಘರ್ಷಣೆಯಾಗಿ ಗುರುತಿಸಿ ಮಹಿಷಾಸುರನನ್ನು ಕೊಂದು ಹಾಕಿದ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಆಚರಣೆ, ಉತ್ತರ ಭಾರತೀಯರು ಮತ್ತು ಆರ್ಯ ಮನಸ್ಥಿತಿಗೆ ಪೂರಕವಾಗಿದೆ. ದಕ್ಷಿಣ ಭಾರತದ ಶ್ರೀಸಾಮಾನ್ಯರ ಪಾಲಿಗೆ ಮಹಿಷಾಸುರನನ್ನು ಮೋಸದಿಂದ ಕೊಂದು ಹಾಕಿದ ದಿನ ಖಂಡಿತವಾಗಿಯೂ ಸಂಭ್ರಮದ ವಿಷಯವಲ್ಲ. ಒಂದೆಡೆ ಮೈಸೂರು ಸೇರಿದಂತೆ ಈಶಾನ್ಯ ಭಾರತದಲ್ಲಿ ಮಹಿಷಾಸುರನನ್ನು ಆರಾಧಿಸುತ್ತಾರೆ. ಇನ್ನೊಂದೆಡೆ ಮಹಿಷಾಸುರನ ದಿನವನ್ನಾಗಿ ಆಚರಿಸಿದ ಜೆಎನ್‌ಯು ವಿದ್ಯಾರ್ಥಿಗಳನ್ನು ರಾಜಕೀಯ ಮುಖಂಡರು ದೇಶದ್ರೋಹಿಗಳೆಂದು ಕರೆಯುತ್ತಾರೆ.

ಈ ದೇಶದ ಹೈನುಗಾರಿಕೆ ನಿಂತಿರುವುದೇ ಮಹಿಷ ಅಥವಾ ಎಮ್ಮೆಯ ಮೂಲಕ. ಈ ದೇಶದ ನಿಜವಾದ ಸಂಸ್ಕೃತಿ ಎಮ್ಮೆಯಿಂದ ರೂಪುಗೊಂಡಿರುವುದು. ಅದಕ್ಕೆ ಪರ್ಯಾಯವಾಗಿ ಆರ್ಯರು ಗೋವುಗಳನ್ನು ಮುಂದಿಟ್ಟರು ಮತ್ತು ಅದರ ಹೆಸರಿನಲ್ಲೂ ಜನಾಂಗೀಯ ದಾಳಿಗಳು ಮುಂದುವರಿಯುತ್ತಿದೆ. ಹಾಗಾದರೆ ಈ ದೇಶ ಯಾರದು? ಮಹಾಬಲಿ ಚಕ್ರವರ್ತಿ, ಮಹಿಷಾಸುರನನ್ನು ನಂಬಿದವರದೋ ಅಥವಾ ವಾಮನ, ನರಸಿಂಹಾದಿ ಮನಸ್ಥಿತಿಯ ಆರ್ಯರದೋ? ಎಮ್ಮೆಯನ್ನು ಅವಲಂಬಿಸಿದ ಕೃಷಿಕರದೋ ಅಥವಾ ಗೋವನ್ನು ಪೂಜಿಸುವ ವೈದಿಕರದೋ? ಬಿಜೆಪಿ ಮುಖಂಡ ತರುಣ್ ವಿಜಯ್ ಅವರ ವಿವಾದಾತ್ಮಕ ಹೇಳಿಕೆ ಈ ಚರ್ಚೆಯನ್ನು ಮತ್ತೆ ಮೇಲೆ ತಂದಿದೆ. ದಕ್ಷಿಣ ಆಫ್ರಿಕಾದ ವಿದ್ಯಾರ್ಥಿಗಳ ಮೇಲೆ ನಡೆದಿರುವ ಹಲ್ಲೆ ‘ಜನಾಂಗೀಯವಾದುದಲ್ಲ’ ಎಂದು ಹೇಳುವ ಭರದಲ್ಲಿ ಭಾರತ ಹೇಗೆ ಅಪ್ಪಟ ಜನಾಂಗೀಯವಾದಿ ದೇಶ ಎನ್ನುವುದನ್ನು ವಿಶ್ವಕ್ಕೇ ಅವರು ಘೋಷಿಸಿದ್ದಾರೆ.

ಇದು ಭಾರತದ ಪಾಲಿಗೆ ಅವಮಾನಕಾರಿಯಾದ ಹೇಳಿಕೆಯಾಗಿದೆ. ಕ್ಷಮೆಯಾಚನೆಯಿಂದ ಆ ಹೇಳಿಕೆಯ ಪರಿಣಾಮ ಮುಗಿದು ಹೋಗುವುದಿಲ್ಲ. ಬದಲಿಗೆ ತರುಣ್‌ವಿಜಯ್ ಪಕ್ಷ ನಂಬಿರುವ ಸಿದ್ಧಾಂತವೇ ಈ ಜನಾಂಗೀಯವಾದವನ್ನು ಬೆಂಬಲಿಸುತ್ತದೆ. ಅದುದರಿಂದ, ಈ ಸಿದ್ಧಾಂತ ಈ ದೇಶದಿಂದ ಅಳಿಯುವವರೆಗೆ ಈ ದೇಶದೊಳಗೆ ಜನಾಂಗೀಯ ಹಲ್ಲೆಗಳು ಮುಂದುವರಿಯುತ್ತಲೇ ಹೋಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News