ಅತೀ ಆತ್ಮವಿಶ್ವಾಸದ ಮುಳ್ಳಿನ ಮೇಲೆ ಮಲಗಿರುವ ರಾಜ್ಯ ಕಾಂಗ್ರೆಸ್

Update: 2017-04-17 19:01 GMT

ಉಪಚುನಾವಣೆಯನ್ನು ಗೆಲ್ಲುವುದರೊಂದಿಗೆ ‘2018ರ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದೇವೆ’ ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ. ಚುನಾವಣೆ ಗೆದ್ದ ದಿನದಿಂದ ರಾಜ್ಯ ಕಾಂಗ್ರೆಸ್, 2018ರ ಚುನಾವಣೆಯನ್ನೇ ಗೆದ್ದಂತೆ ಆಡುತ್ತಿದೆ. ಸಿದ್ದರಾಮಯ್ಯ ಅವರು ಒಂದು ಹೆಜ್ಜೆ ಮುಂದೆ ಹೋಗಿ ‘‘ಯಾರ ಜೊತೆಯೂ ಮೈತ್ರಿ ಮಾಡಿಕೊಳ್ಳದೇ, ಏಕಾಂಗಿಯಾಗಿ ಕಾಂಗ್ರೆಸ್ ಮುಂದಿನ ವಿಧಾನಸಭಾ ಚುನಾವಣೆಯನ್ನು ಎದುರಿಸುತ್ತದೆ’’ ಎಂಬ ಹೇಳಿಕೆಯನ್ನು ನೀಡಿದರು.

ವಿಪರ್ಯಾಸವೆಂದರೆ, ಹೀಗೆ ಹೇಳಿಕೆಕೊಟ್ಟ ಒಂದೇ ವಾರದಲ್ಲಿ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ತಿರುಗಿ ಹೊಡೆದಿದ್ದಾರೆ. ‘‘ಮುಂದಿನ ಚುನಾವಣೆಯನ್ನು ನಾವು ಸಾಮೂಹಿಕ ನಾಯಕತ್ವದ ಮೂಲಕ ಎದುರಿಸಲಿದ್ದೇವೆ’’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಹೇಳಿಕೆಯ ಅರ್ಥ ಸ್ಪಷ್ಟವಾಗಿದೆ. ಮುಂದಿನ ಚುನಾವಣೆ ನನ್ನ ನೇತೃತ್ವದಲ್ಲಿ ನಡೆಯಲಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತ್ಯುತ್ತರವಷ್ಟೇ ಅಲ್ಲ, ಕಳೆದ ಉಪಚುನಾವಣೆಯ ಗೆಲುವೂ, ಸಾಮೂಹಿಕ ನಾಯಕತ್ವದ ಮೂಲಕ ದಕ್ಕಿದೆ ಎನ್ನುವ ಸಂದೇಶವನ್ನು ಪರಮೇಶ್ವರ್ ಅವರು ಸಿದ್ದರಾಮಯ್ಯ ಅವರಿಗೆ ನೀಡಿದ್ದಾರೆ. ಇಡೀ ಗೆಲುವನ್ನು ತನ್ನದು ಎಂಬಂತೆ ಹೇಳಿಕೊಳ್ಳುತ್ತಿರುವ ಸಿದ್ದರಾಮಯ್ಯ ಅವರನ್ನು ಪರಮೇಶ್ವರ್ ಪರೋಕ್ಷವಾಗಿ ಚಿವುಟಲು ಯತ್ನಿಸಿದ್ದಾರೆ.

ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಪ್ರಯತ್ನ ಬಹಳಷ್ಟು ಕೆಲಸ ಮಾಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದೇ ಸಂದರ್ಭದಲ್ಲಿ ಆ ಗೆಲುವನ್ನು ನಂಬಿ ಮುಂದಿನ ಚುನಾವಣೆಗೆ ಅಣಿಯಾದರೆ ಕಾಂಗ್ರೆಸ್ ಹಳ್ಳಕ್ಕೆ ಬೀಳುವುದು ಖಂಡಿತ ಎಂಬ ಸೂಚನೆಯನ್ನು ಪರಮೇಶ್ವರ್ ಹೇಳಿಕೆ ಸ್ಪಷ್ಟಪಡಿಸಿದೆ. ಯಾಕೆಂದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಮೇಶ್ವರ್-ಸಿದ್ದರಾಮಯ್ಯ ಅವರ ನಡುವೆ ಎದ್ದ ಕಲಹ ಎಲ್ಲರಿಗೂ ಗೊತ್ತಿರುವಂತಹದ್ದು. ಮುಂದಿನ ಚುನಾವಣೆಯ ಸಂದರ್ಭದಲ್ಲಿ ಅದು ಮತ್ತೆ ಸ್ಫೋಟಿಸಿದರೆ ಅಚ್ಚರಿಯೇನಿಲ್ಲ. ಆದುದರಿಂದ ಸಿದ್ದರಾಮಯ್ಯ ಅವರ ಮುಂದೆ ಹೊರಗಿನ ಸವಾಲುಗಳಿಗಿಂತ ಒಳಗಿನ ಸವಾಲುಗಳೇ ಹೆಚ್ಚಿವೆ. ಈ ಹಿನ್ನೆಲೆಯಲ್ಲಿ ಅವರು ಜಾಗರೂಕ ಹೆಜ್ಜೆಗಳನ್ನು ಮುಂದಿಡಬೇಕಾಗಿದೆ.

ಗುಂಡ್ಲುಪೇಟೆ ಮತ್ತು ನಂಜನಗೂಡು ಉಪಚುನಾವಣೆಗಳು ಕಾಂಗ್ರೆಸ್‌ನ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು ನಿಜ. ಆದರೆ ಆ ಎರಡು ಚುನಾವಣೆಗಳ ಗೆಲುವು ಖಂಡಿತವಾಗಿಯೂ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಾರದು. ಮುಖ್ಯವಾಗಿ ಆ ಎರಡೂ ಕ್ಷೇತ್ರಗಳು ಈ ಹಿಂದೆ ಕಾಂಗ್ರೆಸ್ ಕೈಯಲ್ಲೇ ಇದ್ದವುಗಳು. ಗುಂಡ್ಲುಪೇಟೆಯಲ್ಲಿ ದಿವಂಗತ ಸಚಿವರ ಅನುಕಂಪದ ಅಲೆಗಳು ಕೆಲಸ ಮಾಡಿದವು. ಹಾಗೆಯೇ ಬಿಜೆಪಿಯ ಅಪಕ್ವ ಸಂಸದನೊಬ್ಬ ಮಾಡಿದ ಅವಾಂತರಗಳೂ ಕಾಂಗ್ರೆಸ್ ಪಾಲಿಗೆ ಮತಗಳಾಗಿ ಪರಿವರ್ತನೆಗೊಂಡವು. ಯಡಿಯೂರಪ್ಪ ವಿರುದ್ಧ ಬಿಜೆಪಿಯೊಳಗೇ ಕೆಲವು ಹಿತಾಸಕ್ತಿಗಳು ಕೆಲಸ ಮಾಡಿರುವುದೂ ಕಾಂಗ್ರೆಸ್ ಗೆಲುವಿಗೆ ಇನ್ನಷ್ಟು ಅನುಕೂಲ ಮಾಡಿಕೊಟ್ಟಿದೆ. ಇತ್ತ ನಂಜನಗೂಡು ಕೂಡ ಕಾಂಗ್ರೆಸ್‌ನ ಕ್ಷೇತ್ರವೇ ಆಗಿತ್ತು. ಶ್ರೀನಿವಾಸ ಪ್ರಸಾದ್ ಅವರ ದ್ವಂದ್ವ , ಸಮಯ ಸಾಧಕ ರಾಜಕೀಯವೂ ಕಾಂಗ್ರೆಸ್‌ಗೆ ಪೂರಕವಾಯಿತು.

ಅಭಿವೃದ್ಧಿಯ ಕಡೆಗೆ ಗಮನ ಹರಿಸಲಿಲ್ಲ ಎಂದು ಕಾಂಗ್ರೆಸ್‌ನಿಂದ ಸಚಿವ ಸ್ಥಾನ ಕಳೆದುಕೊಂಡವರನ್ನೇ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದರಿಂದ, ಶ್ರೀನಿವಾಸ ಪ್ರಸಾದ್ ಅವರ ಪರವಾಗಿ ಮತ ಯಾಚಿಸಲು ಬಿಜೆಪಿಯ ಬಳಿ ಕಾರಣಗಳೇ ಇದ್ದಿರಲಿಲ್ಲ. ಅಷ್ಟೇ ಅಲ್ಲ, ನಂಜನಗೂಡಿನಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಒಂದು ಕಾಲದಲ್ಲಿ ಜೆಡಿಎಸ್‌ನೊಂದಿಗೆ ಗುರುತಿಸಿಕೊಂಡಿದ್ದವರು. ಸ್ವತಃ ವೈಯಕ್ತಿಕ ವರ್ಚಸ್ಸು ಅವರಿಗಿತ್ತು. ಇದೂ ಗೆಲುವಿನಲ್ಲಿ ತನ್ನದೇ ರೀತಿಯಲ್ಲಿ ಪಾತ್ರ ವಹಿಸಿತು.

ಸಿದ್ದರಾಮಯ್ಯ ಅವರ ಅಭಿವೃದ್ಧಿ ರಾಜಕಾರಣ ಸಣ್ಣ ಮಟ್ಟಿನ ಪಾತ್ರವನ್ನು ಈ ಉಪಚುನಾವಣೆಯಲ್ಲಿ ವಹಿಸಿರಬಹುದಾದರೂ, ಮುಂದಿನ ಚುನಾವಣೆಯ ಸಂದರ್ಭದಲ್ಲಿ ಅದನ್ನೇ ಬಳಸಿಕೊಂಡು ಚುನಾವಣೆ ಗೆಲ್ಲಬಹುದು ಎಂದು ಸಿದ್ದರಾಮಯ್ಯ ಭಾವಿಸಿದರೆ ಅದು ಅತೀ ಆತ್ಮವಿಶ್ವಾಸವಾದೀತು. ಯಾಕೆಂದರೆ, ಸದ್ಯಕ್ಕೆ ಕೋಮು ಮತ್ತು ದ್ವೇಷ ರಾಜಕಾರಣ ಎಷ್ಟು ಜನಪ್ರಿಯವೆಂದರೆ, ಸಿದ್ದರಾಮಯ್ಯ ಅವರ ಅಭಿವೃದ್ಧಿ ಯೋಜನೆಗಳನ್ನು ಜನಮಾನಸದಿಂದ ಅಳಿಸಿ, ಅಲ್ಲಿ ಕೋಮು ವಿಷಗಳನ್ನು ತುಂಬಲು ಆರೆಸ್ಸೆಸ್‌ಗೆ ಒಂದು ದಿನ ಸಾಕು.

ಚುನಾವಣೆಯನ್ನು ಗೆದ್ದ ದಿನ, ಸಿದ್ದರಾಮಯ್ಯ ಅವರು ಜೆಡಿಎಸ್‌ಗೆ ತನ್ನ ಕೃತಜ್ಞತೆಯನ್ನು ಸಲ್ಲಿಸಿರುವುದು ಮುತ್ಸದ್ದಿತನಕ್ಕೆ ಸಾಕ್ಷಿಯಾಗಿದೆ. ಇದೇ ಸಂದರ್ಭದಲ್ಲಿ ತನ್ನ ವೈಯಕ್ತಿಕ ಪ್ರತಿಷ್ಠೆಯನ್ನು ಬಿಟ್ಟು, ಜೆಡಿಎಸ್ ಜೊತೆಗೆ ಮುಂದೆಯೂ ಇದೇ ಮೈತ್ರಿ ತಂತ್ರವನ್ನು ಅಳವಡಿಸಿಕೊಂಡಲ್ಲಿ ಮಾತ್ರ ಜಾತ್ಯತೀತ ಮತಗಳು ಪೋಲಾಗದೆ ಬಿಜೆಪಿಗೆ ಹಿನ್ನಡೆಯಾಗಬಹುದು. ಇಲ್ಲವಾದರೆ ಉತ್ತರ ಪ್ರದೇಶದಲ್ಲಿ ನಡೆದಿರುವುದು ಕರ್ನಾಟಕದಲ್ಲೂ ನಡೆಯಬಹುದು. ಇದೇ ಹೊತ್ತಿನಲ್ಲಿ, ಉಪಚುನಾವಣೆಯ ಸೋಲನ್ನು ಮುಂದಿಟ್ಟುಕೊಂಡು ಯಡಿಯೂರಪ್ಪರನ್ನು ಬಿಜೆಪಿಯಿಂದ ಬದಿಗೆ ಸರಿಸುವ ಪ್ರಯತ್ನವೂ ಬಿಜೆಪಿಯೊಳಗೆ ಸದ್ದಿಲ್ಲದೆ ನಡೆಯುತ್ತಿದೆ. ರಾಜ್ಯ ರಾಜಕೀಯಕ್ಕೆ ನೇರ ಪ್ರವೇಶ ಮಾಡಲು ಆರೆಸ್ಸೆಸ್ ಈ ಸಂದರ್ಭವನ್ನು ಬಳಸಿಕೊಳ್ಳುವ ಸಾಧ್ಯತೆಗಳಿವೆ. ಯಡಿಯೂರಪ್ಪ ಅವರ ಮೇಲಿನ ಸಿಟ್ಟಿನಿಂದ ಒಂದು ಗುಂಪು, ಆರೆಸ್ಸೆಸ್ ಮುಖಂಡ ಸಂತೋಷ್ ಅವರ ಕೈಗೆ ಬಿಜೆಪಿಯ ನೇತೃತ್ವ ನೀಡಲು ಅತ್ಯುತ್ಸಾಹದಲ್ಲಿದೆ. ಹಾಗೇನಾದರೂ ಆದರೆ, ಅದು ರಾಜ್ಯ ರಾಜಕೀಯದ ದಿಕ್ಕನ್ನೇ ಬದಲಿಸಲಿದೆ.

ಆರೆಸ್ಸೆಸ್‌ನ ನೇರ ನೇತೃತ್ವದಲ್ಲಿ ಬಿಜೆಪಿ ಚುನಾವಣೆಯನ್ನು ಎದುರಿಸಿದರೆ ಜಾತ್ಯತೀತ ಶಕ್ತಿಗಳು ಒಂದಾಗಿ ಅವುಗಳನ್ನು ಎದುರಿಸುವುದು ಅತ್ಯಗತ್ಯವಾಗುತ್ತದೆ. ಆದರೆ ಇಂದು ಡಿಕೆಶಿ ಮತ್ತು ಕುಮಾರಸ್ವಾಮಿ ನಡುವಿನ ತಿಕ್ಕಾಟ ತಾರಕಕ್ಕೇರಿದೆ. ಮುಂದಿನ ದಿನಗಳಲ್ಲಿ ಈ ತಿಕ್ಕಾಟಗಳು ಕಾಂಗ್ರೆಸ್ -ಜೆಡಿಎಸ್ ನಡುವೆ ಕಂದರವನ್ನು ಹೆಚ್ಚಿಸಿದರೆ ಅದರ ಲಾಭ ಬಿಜೆಪಿಯ ಪಾಲಾಗಲಿದೆ. ಆದುದರಿಂದಲೇ ಸಿದ್ದರಾಮಯ್ಯ ಹಿಂದೆಂದಿಗಿಂತಲೂ ಹೆಚ್ಚು ಮುತ್ಸದ್ದಿತನದಿಂದ ಮುಂದಿನ ಹೆಜ್ಜೆಗಳನ್ನು ಇಡಬೇಕಾಗಿದೆ. ಈ ಹಿಂದೊಮ್ಮೆ ದಲಿತ ಮುಖ್ಯಮಂತ್ರಿ ಕೂಗು ತಾರಕಕ್ಕೇರಿದಾಗ, ‘ನಾನು ಇನ್ನು ಮುಂದೆ ಚುನಾವಣೆಗೆ ನಿಲ್ಲುವುದಿಲ್ಲ’ ಎಂಬ ಹೇಳಿಕೆಯನ್ನು ನೀಡಿ ಪರಮೇಶ್ವರ್‌ರನ್ನು ಸಮಾಧಾನಿಸಲು ಯತ್ನಿಸಿದ್ದರು. ಅಂದರೆ, ಮುಂದಿನ ಬಾರಿ ನೀವೇ ಮುಖ್ಯಮಂತ್ರಿ ಎಂಬ ಸೂಚನೆ ಅದರಲ್ಲಿತ್ತು. ಆದರೆ ಇದೀಗ ಚುನಾವಣೆಯಲ್ಲಿ ಸ್ಪರ್ಧಿಸುವ ಸಿದ್ದರಾಮಯ್ಯರ ನಿರ್ಧಾರ ಇನ್ನಷ್ಟು ಗಟ್ಟಿಯಾಗಿದೆ.

ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೇರಿದರೆ ಸಿದ್ದರಾಮಯ್ಯ ಅವರೇ ಮತ್ತೆ ಮುಖ್ಯಮಂತ್ರಿಯಾಗುವ ಸೂಚನೆಗಳೂ ಕಾಣಿಸಿಕೊಂಡಿವೆ. ಇದು ಪಕ್ಷದೊಳಗೆ ಮತ್ತೆ ಒಡಕುಂಟು ಮಾಡದು ಎನ್ನುವಂತಿಲ್ಲ. ‘ದಲಿತ ಮುಖ್ಯಮಂತ್ರಿ’ ಕೂಗು ಹೊಸದಾಗಿ ಎದ್ದರೆ ಅಚ್ಚರಿಯಿಲ್ಲ. ಈ ಕಾರಣದಿಂದಲೇ, ಸಂಘಟಿತವಾಗಿ, ಸಾಮೂಹಿಕ ನಾಯಕತ್ವದ ಜೊತೆಗೆ ಚುನಾವಣೆಯನ್ನು ಎದುರಿಸುವುದರಲ್ಲೇ ಕಾಂಗ್ರೆಸ್‌ಗೆ ಒಳಿತಿದೆ. ಸಂಘಟಿತವಾಗಿ ಎನ್ನುವುದು ಬರೇ ಕಾಂಗ್ರೆಸ್‌ನೊಳಗಿರುವ ನಾಯಕರಿಗಷ್ಟೇ ಸೀಮಿತ ಮಾಡದೇ, ಇತರ ಜಾತ್ಯತೀತ ಪಕ್ಷಗಳನ್ನೂ ಜೊತೆ ಸೇರಿಸಿಕೊಂಡು ಹೇಗೆ ಮುಂದೆ ಹೆಜ್ಜೆ ಇಡಬಹುದು ಎನ್ನುವುದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಚಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News