ಕೆಂಪು ದೀಪಕ್ಕೆ ವಿದಾಯ

Update: 2017-04-21 19:04 GMT

ವಾಹನ ಜಂಗುಳಿಯಿಂದ ಜರ್ಜರಿತವಾಗಿರುವ ನಮ್ಮ ರಸ್ತೆಗಳ ಅತೀ ದೊಡ್ಡ ಸವಾಲು ಕೆಂಪು ದೀಪ ಹೊಂದಿದ ವಾಹನಗಳಾಗಿವೆ. ಇದು ಕೆಂಪು ದೀಪ ಹೊಂದಿರುವ ಆ್ಯಂಬುಲೆನ್ಸ್ ವಾಹನಗಳ ಕುರಿತ ಚರ್ಚೆಯಲ್ಲ. ಆ್ಯಂಬುಲೆನ್ಸ್ ಸೈರನ್‌ಗಳು ದೀಪದ ಜೊತೆಗೆ ಚೀತ್ಕರಿಸುತ್ತಿದ್ದರೂ ಅದು ಈ ದೇಶದಲ್ಲಿ ಗಂಭೀರ ವಿಷಯ ಅನ್ನಿಸಿದ್ದು ಕಡಿಮೆ. ಆ್ಯಂಬುಲೆನ್ಸ್ ವಾಹನದ ನೆತ್ತಿಯ ಮೇಲಿರುವ ಕೆಂಪು ದೀಪವೇನಾದರೂ ವಿಐಪಿ ವಾಹನದ ಮೇಲಿದ್ದರೆ ಒಮ್ಮಿಂದೊಮ್ಮೆಲೆ ರಸ್ತೆಗಳೆಲ್ಲ ದಾರಿ ಬಿಟ್ಟುಕೊಡುತ್ತವೆ. ಪೊಲೀಸರು ತಮ್ಮ ಲಾಠಿ, ವಿಸಿಲ್‌ಗಳ ಜೊತೆಗೆ ಜಾಗೃತರಾಗುತ್ತಾರೆ. ವಿಐಪಿ ಕಾರಿನ ಕೆಂಪುದೀಪ ಮತ್ತು ಸೈರನ್‌ಗಳು ಬಹುದೂರ ತಲುಪುವವರೆಗೂ ಇಡೀ ರಸ್ತೆ ಸ್ತಬ್ಧವಾಗುತ್ತದೆ. ಆ ಸ್ತಬ್ಧವಾದ ರಸ್ತೆಯ ಮಧ್ಯೆ ಅದ್ಯಾವುದೋ ಆ್ಯಂಬುಲೆನ್ಸ್‌ನೊಳಗಿರುವ ಅಮಾಯಕ ಜೀವವೂ ಅಷ್ಟರಲ್ಲಿ ಉಸಿರು ಕಳೆದುಕೊಂಡಿರುತ್ತದೆ.

ರಸ್ತೆಯ ಮಧ್ಯೆ ಈ ವಿಐಪಿ ಕೆಂಪು ದೀಪದ ಸಂಸ್ಕೃತಿಯ ವಿರುದ್ಧ ಸುಮಾರು 6 ವರ್ಷಗಳ ಹಿಂದೆ ಉತ್ತರ ಪ್ರದೇಶದ ಅಭಯ ಸಿಂಗ್ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಜಿ. ಎಸ್. ಸಿಂಘ್ವಿ ನೇತೃತ್ವದ ಪೀಠವು, ಈ ಕಾಯ್ದೆಗೆ ಮೂರು ತಿಂಗಳೊಳಗೆ ತಿದ್ದುಪಡಿ ತಂದು, ಕೆಂಪು ದೀಪವನ್ನು ಯಾರೆಲ್ಲ ಹೊಂದಬಹುದು ಎನ್ನುವುದರ ಪಟ್ಟಿಯನ್ನು ತಯಾರಿಸಲು ಸೂಚನೆ ನೀಡಿತ್ತು. ಆದರೆ ಕೇಂದ್ರ ಸರಕಾರ ಸುಮಾರು ಎರಡು ವರ್ಷಗಳ ಕಾಲ ತಿದ್ದುಪಡಿಯ ಬಗ್ಗೆ ಅಸಡ್ಡೆ ವ್ಯಕ್ತಪಡಿಸಿತು. ಯಾಕೆಂದರೆ, ತಮ್ಮ ಕಾರಿನ ಜುಟ್ಟಿಗೆ ಕೆಂಪು ದೀಪವನ್ನು ಸಿಲುಕಿಸಿ, ಶ್ರೀಸಾಮಾನ್ಯರ ಗೌರವರಕ್ಷೆಯನ್ನು ನಿರೀಕ್ಷಿಸುವುದು ಅವರಿಗೆ ಅಭ್ಯಾಸವಾಗಿತ್ತು. ಕೆಂಪು ದೀಪವನ್ನು ಕಿತ್ತು ಹಾಕುವುದು ಎಂದರೆ ತಮ್ಮ ತಲೆಯ ಮೇಲಿರುವ ಕಿರೀಟವನ್ನೇ ಇಳಿಸಿದಂತೆ ಎಂದು ಭಾವಿಸುವ ರಾಜಕಾರಣಿಗಳು ನಮ್ಮ ನಡುವೆ ಹೆಚ್ಚಿದ್ದಾರೆ.

ಆದುದರಿಂದಲೇ ಸುಪ್ರೀಂಕೋರ್ಟ್‌ನ ಆದೇಶ ಜನಪ್ರತಿನಿಧಿಗಳ ಪಾಲಿಗೆ ಗಂಟಲಲ್ಲಿ ಇಳಿಯದ ಕಡುಬಾಗಿತ್ತು. ಕೊನೆಗೂ ಎರಡು ವರ್ಷಗಳ ಬಳಿಕ ಅಂದರೆ, 2015 ಮಾರ್ಚ್ ತಿಂಗಳಲ್ಲಿ ಈ ಕುರಿತಂತೆ ಕಾಯ್ದೆಯೊಂದನ್ನು ರೂಪಿಸಲು ಸರಕಾರ ಮನ ಮಾಡಿತು. ಇದೀಗ ಎರಡು ವರ್ಷಗಳ ಬಳಿಕ ಆ ಕಾಯ್ದೆ ಅನುಷ್ಠಾನಕ್ಕೆ ಬರಲಿದೆ. ಮೇ 1ರಿಂದ ದೇಶಾದ್ಯಂತ ನಿಯಮ ಜಾರಿಗೆ ಬರಲಿದೆ. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಲೋಕಸಭೆ ಸ್ಪೀಕರ್, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹೊರತು ಪಡಿಸಿದಂತೆ ಯಾವುದೇ ವಿವಿಐಪಿಗಳ ವಾಹನಗಳ ಮೇಲೆ ಮೇ 1ರಿಂದ ಕೆಂಪು ದೀಪ ಕಾಣುವಂತಿಲ್ಲ. ಅಷ್ಟೇ ಅಲ್ಲ, ಉನ್ನತ ಅಧಿಕಾರಿಗಳು, ಸಚಿವರು ಮತ್ತು ನ್ಯಾಯಾಧೀಶರು ಕೂಡ ತಮ್ಮ ವಾಹನಗಳ ಮೇಲೆ ಬೀಕನ್ ದೀಪ ಬಳಕೆಗೆ ನಿಷೇಧ ಹೇರಲಾಗಿದೆ. ಕೆಂಪು ದೀಪವೆನ್ನುವುದು ಸದ್ಯದ ರಾಜಕೀಯ ವ್ಯವಸ್ಥೆಯಲ್ಲಿ ಸದ್ಬಳಕೆಯಾಗಿರುವುದಕ್ಕಿಂತ ದುರ್ಬಳಕೆಯಾಗಿರುವುದೇ ಹೆಚ್ಚು.

ಸಚಿವರಾಗದಿದ್ದರೂ ಪರವಾಗಿಲ್ಲ, ತಮ್ಮ ಕಾರಿಗೊಂದು ಕೆಂಪು ದೀಪ ಬೇಕು ಎಂದು ಹಂಬಲಿಸುವವರ ಸಂಖ್ಯೆ ರಾಜಕೀಯದಲ್ಲಿ ಹೆಚ್ಚಿದೆ. ಜನಪ್ರತಿನಿಧಿಯಾಗಿ ಆಯ್ಕೆಯಾದ ಸಚಿವರ ಚೇಲಾಗಳೂ ಈ ಕೆಂಪು ದೀಪದ ಪ್ರಯೋಜನ ಪಡೆದುದಿದೆ. ಇತ್ತ ಟ್ರಾಫಿಕ್ ಸಿಬ್ಬಂದಿಯೂ ಈ ಕೆಂಪುದೀಪವನ್ನು ಕಂಡಾಕ್ಷಣ, ದೆವ್ವ ಕಂಡಂತೆ ಭಯಭೀತರಾಗುತ್ತಾರೆ. ಕೆಂಪು ದೀಪವೆಂದ ಮೇಲೆ ಅದರಲ್ಲಾರೋ ಸಚಿವರು ಪ್ರಯಾಣಿಸುತ್ತಿರಬೇಕು ಎನ್ನುವ ನಂಬಿಕೆ ಅವರದು. ಆದುದರಿಂದ ಅದನ್ನು ತಡೆಯುವಂತಿಲ್ಲ. ತಡೆದು ವಿಚಾರಿಸುವಂತಿಲ್ಲ. ಅಷ್ಟೇ ಅಲ್ಲ, ಇಡೀ ನಗರ ಸಂಚಾರ ವ್ಯವಸ್ಥೆಯನ್ನೇ ತಡೆದು, ಕೆಂಪುದೀಪಕ್ಕೆ ಮುಂದೆ ಹೋಗಲು ದಾರಿ ಸುಗಮ ಮಾಡಿಕೊಡಬೇಕು. ಈ ದೀಪವೆನ್ನುವುದು ಅವರ ಪಾಲಿಗೆ ಎಚ್ಚರಿಕೆಯ ಕರೆಗಂಟೆ. ಯಾವಾಗ ಅವರ ಕೆಲಸಕ್ಕೆ ಕುತ್ತು ತರಬಹುದು ಎಂದು ಹೇಳುವಂತಿಲ್ಲ.

ಒಂದು ವೇಳೆ ಕೆಂಪು ದೀಪವನ್ನು ಇತರರು ದುರುಪಯೋಗಪಡಿಸಿಕೊಂಡರೂ, ಅವರು ಅಸಹಾಯಕರಾಗಬೇಕಾಗುತ್ತದೆ. ಜನರೂ ಅಷ್ಟೇ ಈ ದೀಪದ ಸರ್ವಾಧಿಕಾರಕ್ಕೆ ತಲೆಬಾಗಲೇ ಬೇಕಾದಂತಹ ಸ್ಥಿತಿ. ಪ್ರಜಾಸತ್ತೆಯನ್ನು ಅಣಕಿಸುವಂತೆ ನಗರಗಳ ರಸ್ತೆಗಳಲ್ಲಿ ಈ ದೀಪಗಳು ಈವರೆಗೆ ಓಡಾಡುತ್ತಿದ್ದವು. ಇದೀಗ ಕೇಂದ್ರ ಸರಕಾರದ ನಿರ್ಧಾರದಿಂದಾಗಿ ಕೆಂಪು ದೀಪದಿಂದ ಸಂತ್ರಸ್ತನಾದ ಶ್ರೀಸಾಮಾನ್ಯನಿಗೆ ನ್ಯಾಯ ಸಿಕ್ಕಿದಂತಾಗಿದೆ. ಆ ಮೂಲಕ ಜನಪ್ರತಿನಿಧಿಗಳನ್ನು ಶ್ರೀಸಾಮಾನ್ಯನ ಮಟ್ಟಕ್ಕೆ ಇಳಿಸಿದಂತಾಗಿದೆ. ತಮ್ಮ ಕೆಂಪು ದೀಪದ ದರ್ಪದಿಂದ ಹೊರ ಬಂದು, ಸಾಮಾನ್ಯ ಮನುಷ್ಯರಾಗಿ ಮತದಾರರ ಜೊತೆಗೆ ಸಂವಹನ ನಡೆಸುವುದನ್ನು ಅವರು ಕಲಿಯಬೇಕಾಗಿದೆ.

 ಇದೇ ಸಂದರ್ಭದಲ್ಲಿ ಬರೀ ಕೆಂಪು ದೀಪಗಳನ್ನಷ್ಟೇ ಅಲ್ಲ, ಅವರನ್ನು ಹಿಂಬಾಲಿಸುವ ಹಲವಾರು ಕಾರುಗಳಿಗೂ ಕಡಿವಾಣ ಹಾಕಬೇಕಾಗಿದೆ. ಕೆಲವೊಮ್ಮೆ ಅನಗತ್ಯವಾಗಿ ಸಚಿವರನ್ನು ಭದ್ರತಾ ಕಾರುಗಳು, ಹಿಂಬಾಲಕರ ಕಾರುಗಳು, ಅಧಿಕಾರಿಗಳು ಹಿಂಬಾಲಿಸುತ್ತವೆ. ಒಬ್ಬ ಸಚಿವ ನಗರಕ್ಕೆ ಕಾಲಿಡುತ್ತಾನೆ ಎಂದರೆ, ಅಂದಿನ ದಿನ, ಇಡೀ ನಗರದ ಪಾಲಿಗೆ ‘ಟ್ರಾಫಿಕ್ ಜಾಮ್’ ದಿನವಾಗಿ ಪರಿವರ್ತನೆಯಾಗುತ್ತದೆ. ಆದುದರಿಂದ ಒಬ್ಬ ಸಚಿವನನ್ನು ಅನಗತ್ಯವಾಗಿ ಹಿಂಬಾಲಿಸುವ ಬೆಂಗಾವಲು ಕಾರುಗಳ ಸಂಖ್ಯೆಯೂ ಇಳಿಮುಖವಾಗಬೇಕಾಗಿದೆ. ಆತನ ಭದ್ರತಾಧಿಕಾರಿಗಳಿರುವ ಕಾರುಗಳು ಹೊರತು ಪಡಿಸಿದಂತೆ, ಅನಗತ್ಯವಾಗಿ ಸರಕಾರಿ ಕಾರುಗಳು ಹಿಂಬಾಲಿಸುವಂತೆ ಮಾಡುವ ರಾಜಕಾರಣಿಗಳ ಪ್ರವೃತ್ತಿಗೆ ತಡೆಯೊಡ್ಡಬೇಕಾಗಿದೆ.

ಇದೇ ಸಂದರ್ಭದಲ್ಲಿ ಸಚಿವರು ಬಳಸುವ ವಾಹನಗಳು ದುಬಾರಿ ಪ್ರಮಾಣದಲ್ಲಿ ಇಂಧನಗಳನ್ನು ಮುಗಿಸುವುದರ ಕುರಿತಂತೆಯೂ ಆಕ್ಷೇಪಗಳಿವೆ. ಈ ಹಿಂದೆ ಕಾಂಟೆಸ್ಸಾ ಕಾರು ರಾಜಕಾರಣಿಗಳಿಗಾಗಿಯೇ ಮೀಸಲಾಗಿತ್ತು. ಇದೀಗ ಆ ಚಪ್ಪಟೆ ಕಾರುಗಳು ಇಲ್ಲವಾಗಿದ್ದರೂ, ಅದರ ಬದಲಿಗೆ ಇನ್ನಷ್ಟು ದುಬಾರಿ ಪೆಟ್ರೋಲ್ ನುಂಗುವ ಕಾರುಗಳು ಬಂದಿವೆ. ಸಚಿವರು ಬಳಸುವ ಕಾರುಗಳಿಗೂ ಒಂದು ಮಾನದಂಡವಿರಬೇಕಾಗಿದೆ. ಅನಗತ್ಯವಾಗಿ ಸರಕಾರಿ ಹಣವನ್ನು ನುಂಗುವ ಕಾರುಗಳಿಗೆ ತಡೆಯೊಡ್ಡಿ, ಸರಳ ವಾಹನಗಳಲ್ಲಿ ಓಡಾಡುವ ಅಭ್ಯಾಸವನ್ನು ರಾಜಕಾರಣಿಗಳು ಮಾಡಬೇಕಾಗಿದೆ. ಈ ಮೂಲಕ ಟ್ರಾವೆಲಿಂಗ್ ಅಲವೆನ್ಸ್‌ಗಳ ಹೆಸರಲ್ಲಿ ಬೊಕ್ಕಸಕ್ಕೆ ಹೊರೆ ಮಾಡುವ ರಾಜಕಾರಣಿಗಳಿಗೂ ಒಂದು ಪಾಠ ಕಲಿಸಿದಂತಾಗುತ್ತದೆ.

ಅದೇನೇ ಇರಲಿ, ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ರಾಜಕಾರಣಿಗಳು ಹೆಚ್ಚು ಹೆಚ್ಚು ಸರಳವಾದಷ್ಟು ಜನರಿಗೆ ಹೆಚ್ಚು ಹತ್ತಿರವಾಗುತ್ತಾರೆ. ಜನರೂ ಅವರ ಜೊತೆಗೆ ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳಲು ಧೈರ್ಯ ತೋರುತ್ತಾರೆ. ಈ ನಿಟ್ಟಿನಲ್ಲಿ ರಾಜಕಾರಣಿಗಳು ಮತ್ತು ಜನಸಾಮಾನ್ಯರ ನಡುವೆ ಅಡ್ಡವಾಗಿ ನಿಂತಿದ್ದ ಕೆಂಪುದೀಪ ಇಲ್ಲವಾಗಿರುವುದು ಒಳ್ಳೆಯ ಸೂಚನೆ. ಮುಂದೆ ಇನ್ನಿತರ ಬದಲಾವಣೆಗಳಿಗೆ ಇದು ಸ್ಫೂರ್ತಿಯನ್ನು ನೀಡಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News