ಈ ಹೊತ್ತಿನ ಹೊತ್ತಿಗೆ

Update: 2017-04-22 17:36 GMT

ಖಲೀಲ್ ಗಿಬ್ರಾನ್ ಓದಿದಷ್ಟೂ ಮುಗಿಯದ ಆಕಾಶ. ಅವನ ಬರಹಗಳು ಒಮ್ಮೆ ಓದಿದಾಗ ಕೊಡುವ ಅನುಭವ ಇನ್ನೊಮ್ಮೆ ಕೊಡುವುದಿಲ್ಲ. ಒಬ್ಬನ ಅನುವಾದ ಒಂದು ಭಾವವನ್ನು ತೆರೆದಿಟ್ಟರೆ, ಇನ್ನೋರ್ವನ ತರ್ಜುಮೆ ಮಗದೊಂದು ಸತ್ಯವನ್ನು ತೆರೆದಿಡುತ್ತದೆ. ಆದುದರಿಂದಲೇ ಖಲೀಲ್ ಗಿಬ್ರಾನ್ ಅವರ ಯಾವ ಅನುವಾದವೂ ಪರಿಪೂರ್ಣವಲ್ಲ. ಈ ಕಾರಣಕ್ಕಾಗಿಯೇ ಎಲ್ಲ ಭಾಷೆಗಳಲ್ಲೂ ಖಲೀಲ್ ಗಿಬ್ರಾನ್‌ನ ಅನುವಾದಗಳು ಪದೇ ಪದೇ ನಡೆಯುತ್ತದೆ. ಮತ್ತು ಎಲ್ಲ ಅನುವಾದಗಳೂ ನಮ್ಮನ್ನು ಹೊಸ ಹೊಸದಾಗಿ ಮುಟ್ಟುತ್ತವೆ. ಈ ಕಾರಣದಿಂದಲೇ ಜಿ. ಎನ್. ರಂಗನಾಥ ರಾವ್ ಅವರ ‘ಕಾಲಾತೀತ ವಿಖ್ಯಾತ ಖಲೀಲ್ ಗಿಬ್ರಾನ್’ ಆಯ್ದ ಅತ್ಯುತ್ತಮ ಬರಹಗಳ ಅನುವಾದ ಕನ್ನಡಕ್ಕೆ ಇನ್ನಷ್ಟು ಜೀವ ಚೈತನ್ಯ ತುಂಬುತ್ತದೆ.

ಲೇಖಕನಾಗಿ, ಚಿತ್ರಕಾರನಾಗಿ, ಚಿಂತಕನಾಗಿ, ಮನುಕುಲದ ಹಿತಚಿಂತಕ ನಾಗಿ ಇಡೀ ಜಗತ್ತಿನ ಗಮನ ಸೆಳೆದ ಖಲೀಲ್ ಗಿಬ್ರಾನ್ ಬದುಕಿದ್ದು ಕೇವಲ 48 ವರ್ಷ. ಆದರೆ ಆ ಅತ್ಯಲ್ಪ ಕಾಲದಲ್ಲಿ ಅವನು ತನ್ನ ಸುತ್ತಮುತ್ತಲಿಂದ ಗ್ರಹಿಸಿ, ಅದನ್ನು ಅಭಿವ್ಯಕ್ತಿಗೊಳಿಸಿದ ರೀತಿ, ಅಗಾಧವಾದುದು. ಕಾವ್ಯಮೂಲವಾದ ಆಧ್ಯಾತ್ಮಿಕ ಬಂಡಾಯವೊಂದನ್ನು ತನ್ನ ಬರಹಗಳ ಮೂಲಕ ಮಾಡಿದವನು ಗಿಬ್ರಾನ್. ಆದುದರಿಂದ ಆತ ಕವಿಯಾಗಿ, ಚಿಂತಕನಾಗಿ, ಕಲಾಕಾರನಾಗಿ ಬೇರೆ ಬೇರೆ ವರ್ಗಗಳನ್ನು ತಲುಪುತ್ತಾನೆ.

ಕೃತಿಯ ಆರಂಭದಲ್ಲಿ ಜಿ. ಎನ್. ರಂಗನಾಥ್ ಅವರು ಗಿಬ್ರಾನ್ ಬರಹಗಳ ಕುರಿತಂತೆ ನೀಡುವ ಸುದೀರ್ಘ ಪ್ರಸ್ತಾವನೆ ಕನ್ನಡದ ಕಣ್ಣಲ್ಲಿ ಗಿಬ್ರಾನ್‌ನನ್ನು ಹೊಸದಾಗಿ ನೋಡುವಂತೆ ಮಾಡುತ್ತದೆ. ಗಿಬ್ರಾನ್ ಹುಟ್ಟಿದ ಲೆಬನಾನ್ ಪರಿಸರದ ಕುರಿತಂತೆ, ಆತನ ಕುಟುಂಬ ಹಿನ್ನೆಲೆ, ಆತನ ಯೌವನ, ಬದುಕು ಇವೆಲ್ಲವೂ ಈ ಪ್ರಸ್ತಾವನೆಯಲ್ಲಿದೆ. ಈ ಪ್ರಸ್ತಾವನೆಯಲ್ಲಿ ಗಿಬ್ರಾನ್ ಹಿನ್ನೆಲೆಯ ಕುರಿತಂತೆ ಅಪಾರ ಅಧ್ಯಯನವಿದೆ. ಉಳಿದಂತೆ ಗಿಬ್ರಾನ್‌ನ ಬರಹಗಳ ಅನು ವಾದಗಳನ್ನು ಸೃಷ್ಟಿ, ಮನುಜಗೀತೆ, ಪ್ರವಾದಿ, ದೃಷ್ಟಾಂತ ಕಥೆಗಳು, ಕಾವ್ಯ, ಹುಚ್ಚ, ಮಿನುಗು-ಮಿಂಚು, ಅಳು ನಗು, ಬಂಡಾಯಗಾರ, ಮುರಿದ ರೆಕ್ಕೆಗಳು ಹೀಗೆ 11 ಅಧ್ಯಾಯಗಳಲ್ಲಿ ಕಟ್ಟಿಕೊಡುತ್ತಾರೆ. ಆತ್ಮಕ್ಕೆ ಧಕ್ಕೆಯಾಗದಂತೆ ಗಿಬ್ರಾನ್‌ನ ಚಿಂತನೆಗಳನ್ನು ಕನ್ನಡಕ್ಕಿಳಿಸುವಲ್ಲಿ ರಂಗನಾಥ್ ಯಶಸ್ವಿಯಾಗಿದ್ದಾರೆ.ಕನ್ನಡದಲ್ಲಿ ಗಿಬ್ರಾನ್‌ನ ಪ್ರಭುಶಂಕರ್ ಅನುವಾದ ಸಾಕಷ್ಟು ಗಮನ ಸೆಳೆದಿತ್ತು. ಇದೀಗ ರಂಗನಾಥ್ ಅವರ ಈ ಬರಹ ಕಾಲಾತೀತ ಗಿಬ್ರಾನ್‌ನ್ನು ತಮ್ಮದೇ ಶೈಲಿಯಲ್ಲಿ ಮೊಗೆದುಕೊಟ್ಟಿದೆ. ಗಿಬ್ರಾನ್‌ನನ್ನು ಇನ್ನಷ್ಟು ಓದುವವರಿಗೆ ಇದೊಂದು ಅಮೂಲ್ಯ ಕೃತಿ.
ವಸಂತ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 278. ಮುಖಬೆಲೆ 190 ರುಪಾಯಿ.
 

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News