ತುಮಕೂರು: 32 ಗೋಶಾಲೆಗಳ ನಿರ್ವಹಣೆಗೆ 19.33 ಕೋಟಿ ರೂ. ವೆಚ್ಚ; ಟಿ.ಬಿ.ಜಯಚಂದ್ರ

Update: 2017-04-23 07:11 GMT

ತುಮಕೂರು, ಎ.22: ಜಿಲ್ಲೆಯಲ್ಲಿ ಆರಂಭಿಸಿರುವ 32 ಗೋಶಾಲೆಗಳಲ್ಲಿರುವ 17,555 ಜಾನುವಾರುಗಳಿಗೆ 19.33 ಕೋಟಿ ರೂ. ವೆಚ್ಚದಲ್ಲಿ ಮೇವನ್ನು ಒದಗಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ತುಮಕೂರು ಜಿಲ್ಲಾ ಪಂಚಾಯತ್ ತ್ರೈಮಾಸಿಕ ಕೆಡಿಪಿ ಸಬೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಮೇವಿನ ಲಭ್ಯತೆ ಆಧಾರದಲ್ಲಿ ಜಿಲ್ಲೆಯಲ್ಲಿ ಹೋಬಳಿಗೊಂದರಂತೆ ಗೋಶಾಲೆಗಳನ್ನು ತೆರೆಯಲಾಗುವುದು. ನಲವತ್ತು ವರ್ಷಗಳಲ್ಲಿಯೇ ಕಂಡು ಕೇಳರಿಯದಂತಹ ಬರ ಪರಿಸ್ಥಿತಿ ಈ ವರ್ಷ ಜಿಲ್ಲೆಯಲ್ಲಿ ತಲೆದೋರಿದ್ದು, ಬರಪರಿಸ್ಥಿತಿಯನ್ನು ಸಮರ್ಪಕವಾಗಿ ಎದುರಿಸಲು ರಾಜ್ಯ ಸರಕಾರ ಜಿಲ್ಲಾಡಳಿತದೊಂದಿಗೆ ಜಿಲ್ಲಾ ಜಾಗೃತ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಗೋಶಾಲೆಗಳ ಜೊತೆಗೆ, ಗೋಶಾಲೆಗೆ ಬರುವ ಗೋಪಾಲಕರಿಗೆ ಮಧ್ಯಾಹ್ನದ ಊಟವನ್ನು ಸಹ ಸಂಘ ಸಂಸ್ಥೆಗಳ ಸಹಕಾರದಿಂದ ಮಾಡಲಾಗುತ್ತಿದೆ ಎಂದರು

ನಿರ್ಮಿತಿ ಕೇಂದ್ರ ಮತ್ತು ಭೂ ಸೇನಾನಿಗಮಗಳಿಗೆ ಸರಕಾರಿ ಕಟ್ಟಡಗಳ ನಿರ್ಮಾಣ ಗುತ್ತಿಗೆಯನ್ನು ನೀಡಲಾಗುತ್ತಿದ್ದು, ಈ ಎರಡೂ ಸಂಸ್ಥೆಗಳು ವಿಳಂಬ ನೀತಿಯನ್ನು ಅನುಸರಿಸುತ್ತಿರುವುದರಿಂದ ಜಿಲ್ಲೆಯಲ್ಲಿ ಪ್ರಗತಿ ಕುಂಠಿತವಾಗುತ್ತಿದೆ ಎಂದು ಶಾಸಕರು ಸಚಿವರ ಗಮನ ಸೆಳೆದಾಗ ಇದಕ್ಕೆ ಉತ್ತರಿಸಿದ ಸಚಿವರು, ಇನ್ನು ಮುಂದೆ ಯಾವುದೇ ಕಾಮಗಾರಿಗಳನ್ನು ಈ ಎರಡೂ ಸಂಸ್ಥೆಗಳಿಗೆ ನೀಡದೆ ಟೆಂಡರ್ ಕರೆದು ಬೇರೆಯವರಿಗೆ ನೀಡುವಂತೆ ಸಚಿವರು ಸೂಚಿಸಿದರು.

ಸಬೆಯಲ್ಲಿ ಹಾಜರಿದ್ದ ಕರ್ನಾಟಕ ಸರಕಾರದ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಮಾತನಾಡಿ, ಗೋಶಾಲೆಗಳ ಮಾದರಿಯಲ್ಲಿ ಕುರಿ, ಮೇಕೆಗಳಿಗೂ ಮೇವು-ನೀರೊದಗಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ ಇಲ್ಲಿಯವರೆಗೂ ಮೇವಿಗೆ ತೊಂದರೆಯಾಗದಂತೆ ನೀರಾವರಿ ಸೌಲಭ್ಯವಿರುವ ರೈತರು ಹಸಿರು ಮೇವನ್ನು ಬೆಳೆಯಲು 93.163 ಮಿನಿಕಿಟ್‌ಗಳನ್ನು ಸರಬರಾಜು ಮಾಡಲಾಗಿದೆ. ಜಿಲ್ಲೆಯಲ್ಲಿ ಇನ್ನೂ 6 ವಾರಗಳಿಗಾಗುವಷ್ಟು ಮೇವು ದಾಸ್ತಾನಿದೆ. ಜಾನುವಾರುಗಳಿಗೆ, ಕುರಿ ಮೇಕೆಗಳಿಗೆ ನೀರಿಗೆ ತೊಂದರೆಯಾಗದಂತೆ ಜಿಲ್ಲೆಯಾದ್ಯಂತ 3,460 ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್ ರಾಜ್ ಸಭೆಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 2016-17ನೇ ಸಾಲಿನಲ್ಲಿ ನರೇಗಾ ಯೋಜನೆಯಲ್ಲಿ 186 ಕೋಟಿ ರೂ.ಗಳನ್ನು ವಿತರಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಜಿ. ಶಾಂತಾರಾಮ ತಿಳಿಸಿದರು.

ಜಿಲ್ಲೆಯಲ್ಲಿ 2017ರವರೆಗೆ ಒಟ್ಟು 471 ವಿವಿಧ ಸರಕಾರಿ ವನಗಳನ್ನು ನಿರ್ಮಿಸಲಾಗುತ್ತಿದ್ದು, ಇವುಗಳಲ್ಲಿ 229 ವನಗಳು ಪೂರ್ಣಗೊಂಡಿದ್ದು, ಉಳಿದ ವನಗಳಿಗೆ ಅನುದಾನದ ಕೊರತೆಯಿಂದಾಗಿ ಕಾಮಗಾರಿ ಕುಂಠಿತವಾಗಿದೆ ಎಂದು ಭೂಸೇನಾ ನಿಗಮದ ಅಧಿಕಾರಿ ಸಬೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಜಿ.ಪಂ. ಅಧ್ಯಕ್ಷರಾದ ಲತಾ ರವಿಕುಮಾರ್, ಸಂಸದರಾದ ಮುದ್ದಹನುಮೇಗೌಡ ಮತ್ತು ಚಂದ್ರಪ್ಪ, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಪೊಲೀಸ್ ಅಧೀಕ್ಷಕರಾದ ಲೋಕೇಶ್‌ಕುಮಾರ್, ಶಾಸಕರಾದ ಸುರೇಶ್‌ಗೌಡ, ಡಾ.ರಫೀಕ್ ಅಹಮ್ಮದ್, ಎಂ.ಟಿ.ಕೃಷ್ಣಪ್ಪ, ವಾಸು, ತಿಮ್ಮರಾಯಪ್ಪ, ವಿಧಾನಪರಿಷತ್ ಸದಸ್ಯರಾದ ರಮೇಶ್ ಬಾಬು, ಕಾಂತರಾಜು, ಲಕ್ಷ್ಮಿನಾರಾಯಣ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News