ಎಲೆಗಳನ್ನು ತಿಂದು ಬದುಕುವ ಪಾಕಿಸ್ತಾನದ ಬಟ್‌ .. !

Update: 2017-04-23 07:20 GMT

ಲಾಹೋರ್,ಎ.23: ಐವತ್ತರ ಹರೆಯದ ಆತನಿಗೆ  ಮರದ ತಾಜಾ ಎಲೆಗಳು ಮತ್ತು ಮರದ ದಂಟುಗಳು ಆಹಾರವಾಗಿದೆ. ಹಸಿ ಎಲೆಗಳನ್ನು ತಿನ್ನುವ  ಮೆಹಮೂದ್‌ ಬಟ್ ಕಳೆದ ಇಪ್ಪತ್ತೈದು ವರ್ಷಗಳಿಂದ ಈ ಅಭ್ಯಾಸವನ್ನು ರೂಢಿಸಿಕೊಂಡಿದ್ದರೂ, ಈತನಕ  ಅವರಿಗೆ ಕಾಯಿಲೆ ಬಾಧಿಸಿಲ್ಲ.
ಪಂಜಾಬ್ ಪ್ರಾಂತದ ಗುಜ್ರನ್‌ವಾಲಾ ಜಿಲ್ಲೆಯ ಮೆಹಮೂದ್ ಬಟ್ ಅವರು ನಿರುದ್ಯೋಗಿಯಾಗಿ ಕೆಲಸವಿಲ್ಲದೆ ಅಲೆದಾಡುತ್ತಿದ್ದರು. ಊಟಕ್ಕೂ ಗತಿಯಿಲ್ಲದೆ ಇದ್ದಾಗ ಭಿಕ್ಷೆ ಬೇಡಿ ಇನ್ನೊಬ್ಬರಿಗೆ ತೊಂದರೆ ಕೊಡುವುದಕ್ಕಿಂತ   ಎಲೆಗಳನ್ನು ತಿಂದು ಬದುಕುವುದೇ  ಉತ್ತಮ ಎಂಬ ನಿರ್ಧಾರಕ್ಕೆ ಬಂದರು. ದಿನ ನಿತ್ಯ ಅವರು   ಎಲೆಗಳನ್ನು ತಿಂದು ಹಸಿವನ್ನು ನಿವಾರಿಸಿಕೊಳ್ಳುವ ಕಡೆಗೆ ಗಮನ ಹರಿಸಿದ್ದರು. ಆಗ ಬಟ್ಇಪ್ಪತ್ತೈದರ ಹರೆಯದ ಯುವಕ. ಅಂದಿನಿಂದ ಇಂದಿನ ತನಕ ಅದೇ ಅಭ್ಯಾಸವನ್ನು ಮುಂದುವರಿಸಿಕೊಂಡು ಬಂದರು.
" 25 ವರ್ಷಗಳ ಹಿಂದೆ ನನ್ನಕುಟುಂಬ ಬಡತನದಿಂದ ತತ್ತರಿಸಿತ್ತು. ಒಂದು ಹೊತ್ತಿನ ಊಟವೂ ಸಿಗದೆ ಪರದಾಡುತ್ತಿದ್ದಾಗ ನನಗೆ ಬೀದಿಯಲ್ಲಿ ಭಿಕ್ಷೆ ಬೇಡಲು ಮನಸ್ಸಾಗಲಿಲ್ಲ. ಭಿಕ್ಷೆ ಬೇಡುವುದಕ್ಕಿಂತ ಮರಗಳನ್ನು ತಿನ್ನುವುದೇ ಲೇಸು ಎಂಬ ನಿರ್ಧಾರಕ್ಕೆ ಬಂದೆ. ಅಂದಿನಿಂದ ಆರಂಭಗೊಂಡ ಹವ್ಯಾಸ ಹಾಗೆಯೇ ಮುಂದುವರಿದಿದೆ” ಎಂದು ಬಟ್‌ ಹೇಳುತ್ತಾರೆ.
ಬಟ್‌ ಎಲೆಗಳನ್ನು ತಿಂದು ಜೀವಿಸುವ ಕಡೆಗೆ ಗಮನ ಹರಿಸಿದ ಬಳಿಕ ಕೆಲಸ ಸಿಕ್ಕಿತು.  ತನ್ನ ಸಂಪಾದನೆಯಿಂದ ಬದುಕಿನ  ಅಗತ್ಯತೆಯನ್ನು ಪೂರೈಸಲು ಅವರು ಶಕ್ತರಾದರೂ, ಎಲೆಗಳನ್ನು ತಿನ್ನುವ ಚಟ ಬಿಡಲಿಲ್ಲ. ಕತ್ತೆಯ ಗಾಡಿಯನ್ನು ಹೊಂದಿರುವ ಬಟ್‌ಗೆ ಇವತ್ತು   ದಿನಕ್ಕೆ 600 ರೂ. ಆದಾಯ ಕೈಗೆ  ಸಿಗುತ್ತಿದೆ. ಆದರೆ ಅವರು ಎಲೆಗಳನ್ನು ತಿನ್ನುವುದನ್ನು ಕೈ ಬಿಡಲಿಲ್ಲ. ಇದರಿಂದ ತಾನು ಹೆಚ್ಚು ಬಲಿಷ್ಠನಾಗಿರುವುದಾಗಿ ಅವರು ಹೇಳುತ್ತಾರೆ. ಬನ್ಯನ್, ಟಾಲಿ ಮತ್ತು ಸಕ್ ಚೈನ್ ಮರಗಳು ಅವರ ಫೆವರಿಟ್‌ ಮರಗಳಾಗಿವೆ. 
"ಬಟ್‌ ಈ ತನಕ ಯಾವುದೇ ಆಸ್ಪತ್ರೆಗೆ ಭೇಟಿ ನೀಡಿಲ್ಲ. ಮರದ ಎಲೆಗಳನ್ನು ತಿಂದು ಈ ತನಕ ಅಸೌಖ್ಯದಿಂದಾಗಿ ಹಾಸಿಗೆ ಹಿಡಿದಿಲ್ಲ.” ಎಂದು ಬಟ್‌ ಅವರ ನೆರೆಮನೆಯ ಗುಲಾಮ್‌ ಮುಹಮ್ಮದ್‌ ಹೇಳುತ್ತಾರೆ.
ಬಟ್‌ ಗಾಡಿಯಲ್ಲಿ ತೆರಳುವಾಗ ಚಿಗುರೆಲೆ ಇರುವ ಮರಗಳು ಕಣ್ಣಿಗೆ ಬಿದ್ದರೆ ಕೂಡಲೇ ಗಾಡಿಯನ್ನು ನಿಲ್ಲಿಸಿ ತನಗೆ ತೃಪ್ತಿಯಾಗುವಷ್ಟು ಎಲೆಗಳನ್ನು ತಿನ್ನುತ್ತಾರೆ. ಇದರಿಂದಾಗಿ ಮೆಹಮೂದ್‌ ಬಟ್ ಎಲ್ಲರ ಗಮನ ಸೆಳೆದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News