ಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಸರಳ ಸಾಮೂಹಿಕ ವಿವಾಹ

Update: 2017-04-23 10:50 GMT

ಮಡಿಕೇರಿ ಏ.23 : ಪ್ರತಿಯೊಂದು ಸಮಾಜದಲ್ಲೂ ಬಡವರ್ಗದ ಮಂದಿ ಇದ್ದು, ಇವರ ಅಭ್ಯುದಯಕ್ಕಾಗಿ ಆಯಾ ಸಮಾಜದ ಚಿಂತಕರು ಸಹಾಯಹಸ್ತ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಮ್ ಕರೆ ನೀಡಿದ್ದಾರೆ.

ಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ನಗರದಲ್ಲಿ ನಡೆದ 14 ಜೋಡಿಗಳ ಸರಳ ಸಾಮೂಹಿಕ ವಿವಾಹ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲಾ ಸಮಾಜದಲ್ಲಿ ಕಂಡು ಬರುವ ಬಡವರ್ಗದ ಮಂದಿಯ ಸಂಕಷ್ಟಗಳಿಗೆ ಸ್ಪಂದಿಸುವ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕು. ಇತ್ತೀಚಿನ ವರ್ಷಗಳಲ್ಲಿ ಸಂಘ ಸಂಸ್ಥೆಗಳು ಸಾಮೂಹಿಕ ವಿವಾಹವನ್ನು ಆಯೋಜಿಸುವ ಮೂಲಕ ಬಡ ಕುಟುಂಬಗಳ ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ ಲಭಿಸುವಂತೆ ಮಾಡುತ್ತಿವೆ. ಸಂಸ್ಥೆಗಳ ಇಂತಹ ಕಾರ್ಯಗಳು ಪ್ರಶಂಸನಾರ್ಹ ಎಂದರು.

 ಕಾಂಗ್ರೆಸ್ ಸರಕಾರ ಕೂಡ ನಾಲ್ಕು ವರ್ಷಗಳಿಂದ ಶಾದಿ ಭಾಗ್ಯ ಯೋಜನೆಯ ಮೂಲಕ ಅಲ್ಪಸಂಖ್ಯಾತ ಹೆಣ್ಣು ಮಕ್ಕಳ ವಿವಾಹಕ್ಕಾಗಿ ತಲಾ 50 ಸಾವಿರ ರೂ. ನೆರವು ನೀಡುತ್ತಿದೆ. ಕೊಡಗು ಜಿಲ್ಲೆಯ ಸುಮಾರು 400 ಮಂದಿ ಫಲಾನುಭವಿಗಳು ಶಾದಿ ಭಾಗ್ಯ ಯೋಜನೆಯ ಲಾಭ ಪಡೆದುಕೊಂಡಿದ್ದು, ಸದ್ಯದಲ್ಲೆ ಇನ್ನೂ ನೂರು ಫಲಾನುಭವಿಗಳಿಗೆ ಚೆಕ್ ವಿತರಿಸಲಾಗುವುದೆಂದರು.

ವೆಚ್ಚ ಭರಿಸುವ ಭರವಸೆ:  ಮುಂದಿನ ಸಾಲಿನ ಸಾಮೂಹಿಕ ವಿವಾಹದಲ್ಲಿ ಒಬ್ಬ ಹುಡುಗಿಯ ಮದುವೆಯ ಖರ್ಚುವೆಚ್ಚವನ್ನು ತಾವೇ ಭರಿಸುವುದಾಗಿ ಸಚಿವ ಸೀತಾರಾಮ್ ಈ ಸಂದರ್ಭ ಘೋಷಿಸಿದರು.

ಜಿಲ್ಲಾಧಿಕಾರಿ ಡಾರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಮಾತನಾಡಿ, ಮಾಜಿ ಶಾಸಕ ಹಾಗೂ ಸಮಿತಿಯ ಮಹಾ ಪೋಷಕ ಕೆ.ಎಂ. ಇಬ್ರಾಹಿಂ ಮಾಸ್ಟರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಾಮೂಹಿಕ ವಿವಾಹ ಸಮಾರಂಭಕ್ಕೆ ವರ್ಷಂಪ್ರತಿ ನೆರವನ್ನು ನೀಡುತ್ತಾ ಬರುತ್ತಿರುವ ಸ್ಥಳೀಯರು ಹಾಗೂ ಕತಾರ್‌ನಲ್ಲಿ ಉದ್ಯೋಗಿಯಾಗಿರುವ ಎಂ.ಎಂ.ಅಬ್ದುಲ್ ಲತೀಫ್ ಹಾಗೂ ಬ್ಯಾರಿ ಸಮಾಜದ ಹಿರಿಯರಾದ ಹಾಜಿ ಫಕೀರ್ ಸಾಹೇಬ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಸೈಯದ್ ಕೆ.ಎಸ್.ಮುಕ್ತಾರ್ ತಂಙಳ್ ಕುಂಬೋಳ್, ಸಮಿತಿಯ ಅಧ್ಯಕ್ಷರಾದ ಎಫ್.ಎ.ಮಹಮ್ಮದ್ ಹಾಜಿ, ವಕ್ಫ್ ಸಲಹಾ ಸಮಿತಿ ಜಿಲ್ಲಾಧ್ಯಕ್ಷರಾದ ಎಂ.ಎಚ್. ಅಬ್ದುರ್ರಹ್ಮಾನ್, ಉದ್ಯಮಿ ಮುಹಮ್ಮದ್ ಹಾಜಿ, ಕೆಪಿಸಿಸಿ ಪ್ರಮುಖ ಮಿಟ್ಟು ಚಂಗಪ್ಪ, ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಕೆ.ಎ. ಯಾಕೂಬ್, ಪ್ರಮುಖರಾದ ಅಬ್ದುಲ್ ಮಜೀದ್, ತೋಡಾರು ಶಂಸುಲ್ ಉಲಮಾ ಅರೆಬಿಕ್ ಕಾಲೇಜಿನ ಅಹಮ್ಮದ್ ನಹೀಂ, ನಗರದ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಎಂ.ಜಿ. ಯೂಸುಫ್ ಹಾಜಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News