ಮುನ್ಸೂಚನೆ ನೀಡದೆ ಗುಡಿಸಲುಗಳ ತೆರವು: 175 ಕುಟುಂಬಗಳು ಬೀದಿಗೆ

Update: 2017-04-23 13:39 GMT

ಮೂಡಿಗೆರೆ, ಎ.23: ಹಳೆ ಮೂಡಿಗೆರೆ ಗ್ರಾಪಂ ವ್ಯಾಪ್ತಿಯ ಸ.ನಂ.7ರ ಸರಕಾರಿ ಜಾಗದಲ್ಲಿ ಗುಡಿಸಲುಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದ ವಸತಿ ರಹಿತರ 175 ಗುಡಿಸಲುಗಳನ್ನು ಯಾವುದೇ ಮುನ್ಸೂಚನೆ ನೀಡದೇ ತಹಶೀಲ್ದಾರ್ ನೇತೃತ್ವದ ತಂಡ ರವಿವಾರ ಮುಂಜಾನೆ ಪೊಲೀಸ್ ಬಿಗಿ ಭದ್ರತೆಯಲ್ಲಿ ತೆರವುಗೊಳಿಸಿದೆ.

ಈ ವೇಳೆ ಗುಡಿಸಲಿನಲ್ಲಿ ಮಲಗಿದ್ದ ಮಕ್ಕಳು ಸೇರಿದಂತೆ ನಿವಾಸಿಗಳು ಬೊಬ್ಬಿರಿದುಕೊಂಡರು. ಗುಡಿಸಲು ತೆರವುಗೊಳಿಸುತ್ತಿದ್ದುದ್ದನ್ನು ನೋಡಿದ ನಿವಾಸಿಗಳು ತೀವ್ರ ಪ್ರತಿರೋಧ ಒಡ್ಡಿದರು.

ಅಯ್ಯಯ್ಯೋ ನಮ್ಮ ಗುಡಿಸಲನ್ನು ತೆರವುಗೊಳಿಸಬೇಡಿ. ನಿಮ್ಮ ಕಾಲಿಗೆ ಬೀಳುತ್ತೇವೆ. ವಾಸಿಸಲು ನಮಗೆ ಬೇರೆ ಮನೆಯಿಲ್ಲ. ನಮ್ಮ ಮೇಲೆ ಕನಿಕರ ತೋರಿಸಿ. ಇಲ್ಲವಾದರೆ ನಾವು ಸೀಮೆಎಣ್ಣೆ ಸುರಿದುಕೊಂಡು ಸಾಯುತ್ತೇವೆಂದು ಮಹಿಳೆಯರು ಗೋಳಾಡುತ್ತಾ ಅಳತೊಡಗಿದರು.ಇದನ್ನು ಲೆಕ್ಕಿಸದ ಅಧಿಕಾರಿಗಳು ಹಾಗೂ ಸಿಬ್ಬಂದಿ ತೆರವು ಪ್ರಕ್ರಿಯೆಯನ್ನು ಮುಂದುವರಿಸಿದರು.

ಜಿಪಂ ಸದಸ್ಯರ ಕುಮ್ಮಕ್ಕಿನಿಂದ ಈ ಗುಡಿಸಲುಗಳನ್ನು ತೆರವುಗೊಳಿಸಲಾಗಿದೆ ಎಂದು ಆರೋಪಿಸಿ ಜಿಪಂ ಸದಸ್ಯೆ ಸೇರಿದಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಆಗ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ಏರ್ಪಟ್ಟಿತ್ತು.

ಅಪಾಯದ ಮುನ್ಸೂಚನೆ ಅರಿತ ಪೊಲೀಸರು ಸಶಸ್ತ್ರ ಮೀಸಲು ಪಡೆಯ ತುಕಡಿ ಸಹಿತ ತಾಲೂಕಿನ ಎಲ್ಲ ಠಾಣೆಗಳಿಂದ ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಂಡರು. ನಂತರ ಎಲ್ಲಾ ಗುಡಿಸಲುಗಳನ್ನು ತೆರವುಗೊಳಿಸಿ ಗುಡಿಸಲು ಸಲಕರಣಿಗಳನ್ನು ಪಪಂ ಟ್ರಾಕ್ಟರ್‌ಗೆ ತುಂಬಿಸಲು ಮುಂದಾದಾಗ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಾರಸುದಾರರಿಗೆ ಒಪ್ಪಿಸಿದರು.

 ತಹಶೀಲ್ದಾರ್ ನಂದಕುಮಾರ್ ನೇತೃತ್ವದಲ್ಲಿ ಕಂದಾಯ ಇಲಾಖೆಯ 40 ಸಿಬ್ಬಂದಿ ಕಾರ್ಯಚರಣೆಯಲ್ಲಿ ತೊಡಗಿದ್ದರು. ಡಿವೈಎಸ್ಪಿ ಶೇಖ್ ಹುಸೇನ್, ವೃತ್ತ ನಿರೀಕ್ಷಕ ಜಗದೀಶ್, ಎಲ್ಲ ಠಾಣೆಯ ಪಿಎಸೈಗಳು ಹಾಗೂ 80 ಸಿಬ್ಬಂದಿ ಬಂದೂಬಸ್ತ್ ಕೈಗೊಂಡಿದ್ದರು.

ಅನಧೀಕೃತವಾಗಿ ನಿರ್ಮಿಸಿದ ಎಲ್ಲಾ ಗುಡಿಸಲುಗಳನ್ನು ತೆರವುಗೊಳಿಸಲಾಗಿದೆ. ಸರ್ವೇ ವೇಳೆ ಈ ಜಾಗ ಸರಕಾರಕ್ಕೆ ಸೇರಿದ್ದೆಂದು ದೃಢಪಟ್ಟಿದೆ. ಈ ಜಾಗದಲ್ಲಿ ನಿವೇಶನಗಳನ್ನು ನಿರ್ಮಿಸಿ ನಿವೇಶನ ರಹಿತ ಫಲಾನುಭವಿಗಳಿಗೆ ಗ್ರಾಪಂ ಮೂಲಕ ಹಂಚುವ ಬಗ್ಗೆ ಜಿಲ್ಲಾಧಿಕಾರಿಗಳಿಂದ ಒಪ್ಪಿಗೆ ಪಡೆದು ಮುಂದಿನ ಕ್ರಮ ಕೈ ಗೊಳ್ಳಲಾಗುವುದು ಎಂದು ತಹಶೀಲ್ದಾರ್ ನಂದಕುಮಾರ್ ತಿಳಿಸಿದ್ದಾರೆ.

ವಾಸಿಸಲು ಸ್ಥಳವಿಲ್ಲದ ಮೇಲೆ ನಾವು ಬದುಕಿ ಏನು ಪ್ರಯೋಜನ

ಕಳೆದ 13 ದಿನಗಳಿಂದ ನಾವು ಇಲ್ಲಿ ಗುಡಿಸಲುಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದೇವೆ. ಶನಿವಾರ ತಹಶೀಲ್ದಾರ್ ಬಂದು ಇಲ್ಲಿಯೇ ನಿವೇಶನ ನೀಡುವುದಾಗಿ ತಿಳಿಸಿದ್ದರು. ಆದ್ದರಿಂದ ನಾವು ಚಿಂತೆ ಬಿಟ್ಟು ಸಮಾಧಾನದಿಂದ ನಿಟ್ಟುಸಿರು ಬಿಟ್ಟಿದೇವು. ಬೆಳಗಾಗುವಷ್ಟರಲ್ಲಿ ಯಾರದ್ದೋ ಮಾತು ಕೇಳಿ ಪೊಲೀಸರನ್ನು ಕರೆ ತಂದು, ನಾವು ಕೂಲಿ ಮಾಡಿ ದುಡಿದ ಹಣದಲ್ಲಿ ತಂದಿದ್ದ ಟಾರ್ಪಲ್‌ಗಳನ್ನು ಹರಿದುಹಾಕಿ ನಮ್ಮ ಗುಡಿಸಲುಗಳನ್ನು ತೆರವುಗೊಳಿಸಿದ್ದಾರೆ.

ನಮ್ಮನ್ನು ಬೀದಿಗೆ ತಳ್ಳಿಬಿಟ್ಟಿದ್ದಾರೆ. ನಮಗೆ ವಾಸಿಸಲು ಸ್ಥಳವಿಲ್ಲದ ಮೇಲೆ ನಾವು ಬದುಕಿ ಏನು ಪ್ರಯೋಜನ ಎಂದು ನೆಲಕ್ಕೆ ಕೈ ಬಡಿದುಕೊಳ್ಳುತ್ತಾ, ಅವರ ಮನೆಯೂ ಹಾಳಾಗಿ ಹೋಗಲಿ ಎಂದು ಮಹಿಳೆಯರು ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.


ಇಲ್ಲಿನ 11 ಎಕರೆ ಸರಕಾರಿ ಜಾಗದಲ್ಲಿ 175 ವಸತಿರಹಿತರು ಗುಡಿಸಲು ನಿರ್ಮಿಸಿಕೊಂಡಿದ್ದಾರೆ. ತಾಲೂಕು ಆಡಳಿತ ಶನಿವಾರ ಸರ್ವೇ ನಡೆಸಿದ್ದು, ಈ ಜಾಗ ಸರಕಾರಕ್ಕೆ ಸೇರಿದ್ದೆಂದು ದೃಢಪಟ್ಟಿದೆ. ಸಂಜೆಯ ವೇಳೆಗೆ ತಹಶೀಲ್ದಾರ್ ಅವರು ಸ್ಥಳಕ್ಕೆ ಬಂದು ಗುಡಿಸಲು ತೆರವುಗೊಳಿಸುವಂತೆ ಕೋರಿದರು. ಈ ಜಮೀನನ್ನು ನಿವೇಶನ ಮಾಡಿ ವಿತರಿಸುವುದಾಗಿ ಅವರು ಭರವಸೆ ನೀಡಿದಾಗ ಬರೆದುಕೊಡಲು ಕೇಳಿಕೊಂಡೆವು. ಆದರೆ ತಹಶೀಲ್ದಾರ್ ಬರೆದು ಕೊಡಲಿಲ್ಲ. ಇಂದು ಪೊಲೀಸರನ್ನು ಕರೆತಂದು ಗುಡಿಸಲನ್ನು ತೆರವುಗೊಳಿಸಿದ್ದಾರೆ.
 
-ಬಿ.ರುದ್ರಯ್ಯ, ಅಧ್ಯಕ್ಷ, ವಸತಿಗಾಗಿ ಹೋರಾಟ ವೇದಿಕೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News