ಮುಸ್ಲಿಂ ಮಹಿಳಾ ಸಬಲೀಕರಣಕ್ಕೆ ಶಿಕ್ಷಣವೇ ಅಸ್ತ್ರ

Update: 2017-04-24 04:25 GMT

ಮುಂಬೈ, ಎ.24: ತಲಾಖ್, ಬುರ್ಖಾದಂಥ ವಿಷಯಗಳ ಬಗ್ಗೆ ಎಲ್ಲೆಡೆ ವಾದ ವಿವಾದಗಳು ಕೇಳಿಬರುತ್ತಿದ್ದರೆ, ಎಲ್ಲ ಸಾಮಾಜಿಕ ಅಡೆತಡೆಗಳನ್ನೂ ಮೀರಿ, ಮುಸ್ಲಿಂ ಮಹಿಳೆಯರು ಶಿಕ್ಷಣವನ್ನು ಅಸ್ತ್ರವಾಗಿ ಬಳಸಿಕೊಂಡು, ಸಾಮಾಜಿಕ ಸ್ಥಾನಮಾನ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಹಲವೆಡೆ ಕುಟುಂಬದ ಯಜಮಾನಿಯರಾಗಿಯೂ ಯಶಸ್ವಿಯಾಗಿ ಸಂಸಾರ ನಿರ್ವಹಿಸುವ ಮೂಲಕ ಮೌನಕ್ರಾಂತಿಗೆ ಕಾರಣರಾಗಿದ್ದಾರೆ.

ಮುಂಬೈನ ಅರೀಬಾ ಇಮ್ತಿಯಾಝ್ ಅವರ ಉದಾಹರಣೆ ನೋಡಿ. ಇಮ್ತಿಯಾಝ್ ಹಾಗೂ ಸಫಿಯಾ ಶೇಖ್ ಅವರ ಕಿರಿಯ ಮಗಳಾದ ಇವರು ಕಸಾಯಿಬಾಡಾ ಎಂಬ ಕಟುಕರ ಕಾಲನಿಯಲ್ಲಿ ಬೆಳೆದವರು. ಆದರೆ ಶಿಕ್ಷಣದ ಬಗೆಗಿನ ಅದಮ್ಯ ಆಸಕ್ತಿಯಿಂದಾಗಿ ಇಂದು ದಂತವೈದ್ಯೆ. ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಬಳಿಕ ಎದುರಾದ ಬೆದರಿಕೆಯಿಂದಾಗಿ ತಂದೆತಾಯಿ, ಕುರ್ಲಾದ ನೆಹರೂ ನಗರದಿಂದ ವಲಸೆ ಬರಬೇಕಾಯಿತು. ಎಲ್ಲ ಅಡೆತಡೆಗಳ ನಡುವೆಯೂ ಶಿಕ್ಷಣ ಪೂರೈಸಿ ವೃತ್ತಿ ಮಾಡುತ್ತಿರುವ ಅರೀಬಾ (24) ವಿವಾಹಕ್ಕೆ ಮುನ್ನ ನಾಗರಿಕ ಸೇವಾ ಪರೀಕ್ಷೆ ಉತ್ತೀಣರಾಗುವ ಕನಸು ಕಾಣುತ್ತಿದ್ದಾರೆ. ಹೀಗೆ ಶಿಕ್ಷಣವನ್ನು ಸಬಲೀಕರಣದ ಅಸ್ತ್ರವಾಗಿ ಮಾಡಿಕೊಂಡ ಲಕ್ಷಾಂತರ ಮುಸ್ಲಿಂ ಹೆಣ್ಣುಮಕ್ಕಳ ಪೈಕಿ ಇದೊಂದು ಉದಾಹರಣೆ ಮಾತ್ರ.

2011ರ ಜನಗಣತಿ ಅಂಕಿ ಅಂಶಗಳ ಪ್ರಕಾರ, ಕಳೆದ ಒಂದು ದಶಕದಲ್ಲಿ ಪದವೀಧರ ಮುಸ್ಲಿಂ ಹೆಣ್ಣುಮಕ್ಕಳ ಸಂಖ್ಯೆ ಶೇಕಡ 168ರಷ್ಟು ಹೆಚ್ಚಿದೆ. ಪದವೀಧರ ಹೆಣ್ಣುಮಕ್ಕಳ ಏರಿಕೆ ರಾಷ್ಟ್ರಮಟ್ಟದಲ್ಲಿ ಶೇಕಡ 115 ಇದ್ದು, ಅದನ್ನೂ ಮೀರಿಸುವ ಸಾಧನೆ ಮುಸ್ಲಿಂ ಹೆಣ್ಣುಮಕ್ಕಳಿಂದ ಆಗಿದೆ. 2001ರಲ್ಲಿ ದೇಶದಲ್ಲಿ 6.58 ಲಕ್ಷ ಪದವೀಧರ ಮುಸ್ಲಿಂ ಹೆಣ್ಣುಮಕ್ಕಳಿದ್ದರೆ, 2011ರಲ್ಲಿ ಇದು 17.42 ಲಕ್ಷಕ್ಕೆ ಹೆಚ್ಚಿದೆ.

ಮುಸ್ಲಿಂ ಸಮುದಾಯದಲ್ಲಿ ಹಲವು ಪ್ರಕರಣಗಳಲ್ಲಿ ಗಂಡುಮಕ್ಕಳು ಅರ್ಧದಲ್ಲಿ ಶಿಕ್ಷಣ ತೊರೆದು ಉದ್ಯೋಗ ಸೇರಿದರೆ, ಹೆಣ್ಣುಮಕ್ಕಳ ಶಿಕ್ಷಣ ಪೂರ್ಣಗೊಳಿಸಲು ಕುಟುಂಬಗಳು ಆದ್ಯತೆ ನೀಡುತ್ತಿವೆ ಎಂದು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ಉಪನಿರ್ದೇಶಕ ಡಾ.ಅಬ್ದುಲ್ ಶಬಾನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News