ನನ್ನ ಕೈಗಂಟಿದ ನೆತ್ತರು :ಸೇನಾಧಿಕಾರಿಗಳ ಪಾಪ ನಿವೇದನೆಗಳು

Update: 2017-04-24 17:47 GMT

ಇದೊಂದು ಪಾಪನಿವೇದನೆಯ ಕೃತಿ. ಸೈನ್ಯದ ಹಿರಿಯ ಅಧಿಕಾರಿಯೊಬ್ಬರು ಅನಾಮಧೇಯರಾಗಿ ಪತ್ರಕರ್ತನ ಮುಂದೆ ನಿವೇದಿಸಿಕೊಂಡ ತಪ್ಪೊಪ್ಪಿಗೆಯ ದಾಖಲೆ ಈ ಪುಸ್ತಕ. ಹೆಸರು ‘ನನ್ನ ಕೈಗಂಟಿದ ನೆತ್ತರು’. ಮುಖಪುಟವೇ ಹೇಳುವಂತೆ ಆಯೋಜಿತ ಎನ್‌ಕೌಂಟರ್‌ಗಳ ಪಾಪನಿವೇದನೆಗಳು ಇವು. ಅವುಗಳನ್ನು ಜನರ ಮುಂದಿಟ್ಟಿದ್ದಾರೆ ಹಿರಿಯ ಪತ್ರಕರ್ತ ಕಿಶಾಲಯ್ ಭಟ್ಟಾಚಾರ್ಜಿ. ಆಂತರಿಕ ನಿರಾಶ್ರಿತ ಜನರ ಸುದ್ದಿ ವರದಿಗಾರಿಕೆಗಾಗಿ ರಮಾನಾಥ ಗೊಯೆಂಕಾ ಪ್ರಶಸ್ತಿಯನ್ನು ಭಟ್ಟಾಚಾರ್ಜಿ ಪಡೆದಿದ್ದಾರೆ. ಈ ಕೃತಿ, ಗೌಪ್ಯತೆಯ ಹೆಸರಲ್ಲಿ ಸೇನೆ ಮುಚ್ಚಿಟ್ಟಿರುವ ರಕ್ತ ಸಿಕ್ತ ಸತ್ಯಗಳನ್ನು ತೆರೆದಿಡುತ್ತದೆ. ಪ್ರಶಸ್ತಿಗಾಗಿ, ಭಡ್ತಿಗಾಗಿ ಸೈನಿಕರು ಮಾಡುವ ಅಮಾಯಕರ ಕೊಲೆಗಳು, ಭೂಗತ ಜಗತ್ತಿನೊಂದಿಗೆ ಸೈನ್ಯಾಧಿಕಾರಿಗಳಿಗೆ ಇರುವ ನಂಟು, ಅಫೀಮು ಮಾರಾಟ ಮತ್ತು ನಾಟ ಕಳ್ಳ ಸಾಗಣೆೆಗಳಿಂದ ಅವರು ಗಳಿಸುವ ಕೋಟ್ಯಂತರ ರೂಪಾಯಿಗಳು, ತಮ್ಮ ಅಕ್ರಮಗಳನ್ನು ಮುಚ್ಚಿ ಹಾಕವು ಅವರು ವ್ಯವಸ್ಥೆಯ ದೌರ್ಬಲ್ಯಗಳನ್ನೇ ಬಳಸಿಕೊಳ್ಳುವ ರೀತಿ...ಎಲ್ಲವೂ ಈ ಕೃತಿಯೊಳಗೆ ಇದೆ.
ಸಾಧಾರಣವಾಗಿ ಪತ್ರಕರ್ತನೊಬ್ಬ ವರದಿ ಮಾಡುವಾಗ, ಅಧಿಕೃತ ಮೂಲಗಳನ್ನು ಆಧರಿಸಿರಬೇಕು. ಅನೇಕ ಸಂದರ್ಭದಲ್ಲಿ ತಾನು ಮಾಡುತ್ತಿರುವ ವರದಿಗಳೆಲ್ಲವೂ ಸುಳ್ಳು ಎನ್ನುವುದು ವರದಿಗಾರನಿಗೆ ಗೊತ್ತಿರುತ್ತದೆ ಮತ್ತು ಸತ್ಯ ಏನು ಎನ್ನುವುದು ಗೊತ್ತಿದ್ದರೂ ಅದನ್ನು ಬರೆಯಲಾಗದ ಅಸಹಾಯಕತೆಯಲ್ಲಿ ಅವನಿರುತ್ತಾನೆ. ಪ್ರತೀ ಅಧಿಕೃತ ವರದಿಯ ತಳಹದಿಯಲ್ಲಿ ಒಂದು ಅಧಿಕೃತ ವರದಿ ಜೀವ ಪಡೆದುಕೊಳ್ಳುವುದಕ್ಕೆ ಕೊಸರಾಡುತ್ತಿರುತ್ತದೆ. ಭಟ್ಟಾಚಾರ್ಯರ ಮೂಲಕ ಆ ಸತ್ಯ ಈ ಕೃತಿಯಲ್ಲಿ ಜೀವ ಪಡೆದಿದೆ.
ಮುನ್ನುಡಿ ಹೇಳುವಂತೆ, ಈ ಪುಸ್ತಕ ಸೇನೆಯ ಅಧಿಕಾರಿಗಳು ನೀಡಿದ ಒಳ ಮಾಹಿತಿಯ ಆಧಾರದಿಂದಷ್ಟೇ ರೂಪುಕೊಂಡಿರುವುದಲ್ಲ. ಸೇನೆಯಲ್ಲೂ ಕೆಲವರಿಗೆ ಇರಬಹುದಾದ ಮಾನವೀಯ ವೌಲ್ಯಗಳನ್ನು ಬಿಂಬಿಸುವ ಕೃತಿಯೂ ಆಗಿದೆ. ಆ ಮಾನವೀಯ ತಳಮಳ ಸೇನೆಯೊಳಗೆ ಇದ್ದುದರಿಂದಲೇ, ಹಲವು ಅಧಿಕಾರಿಗಳು ತಮ್ಮಳಗೆ ಉಸಿರಾಡುತ್ತಿದ್ದ ಸತ್ಯಗಳನ್ನು ಈ ಕೃತಿಯಲ್ಲಿ ಬಹಿರಂಗಪಡಿಸಿದರು. ಸೇನೆಯನ್ನು ಮುಂದಿಟ್ಟು ಪ್ರಭುತ್ವ ನಡೆಸುತ್ತಿರುವ ವರ್ತಮಾನದ ಮೇಲಾಟಗಳನ್ನು ಅರ್ಥ ಮಾಡಿಕೊಳ್ಳಲು ಈ ಕೃತಿ ನಮಗೆ ತುಂಬಾ ಸಹಾಯ ಮಾಡುತ್ತದ. ಗಿರೀಶ್ ತಾಳಿಕಟ್ಟೆ ಅವರ ಅನುವಾದ ಕೃತಿಯ ಮೂಲಧ್ವನಿಗೆ ಎಲ್ಲೂ ಧಕ್ಕೆ ತರದೆ, ಜಾಗರೂಕವಾಗಿ ನಮ್ಮಳಗೆ ಇಳಿಸುತ್ತದೆ.
ಲಂಕೇಶ್ ಪ್ರಕಾಶನ ಹೊರತಂದಿರುವ ಕೃತಿಯ ಮುಖಬೆಲೆ 150 ರೂಪಾಯಿ. ಆಸಕ್ತರು 080- 26676427 ದೂರವಾಣಿಯನ್ನು ಸಂಪರ್ಕಿಸಬಹುದು.
 

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News