ದಲಿತರಿಗೆ ಮರೀಚಿಕೆಯಾಗುತ್ತಿರುವ ನ್ಯಾಯ

Update: 2017-04-26 19:00 GMT

ಸುಮಾರು 17 ವರ್ಷಗಳಿಂದ ಈ ನಾಡನ್ನು ದುಃಸ್ವಪ್ನದಂತೆ ಕಾಡುತ್ತಿದ್ದ ಕಂಬಾಲಪಲ್ಲಿ ನರಮೇಧ ಕೊನೆಗೂ ತಾರ್ಕಿಕ ಅಂತ್ಯವೊಂದನ್ನು ಕಂಡುಕೊಳ್ಳುವ ಹಂತಕ್ಕೆ ಬಂದಿದೆ. ಅಂದರೆ ಅದರ ಅರ್ಥ ಕಂಬಾಲಪಲ್ಲಿ ನರಮೇಧಗೈದ ಸಂತ್ರಸ್ತರಿಗೆ ನ್ಯಾಯ ಸಿಗುತ್ತದೆ ಎಂದಲ್ಲ. ಕಂಬಾಲಪಲ್ಲಿ ನರಮೇಧದ ಕಟ್ಟಕಡೆಯ ಸಾಕ್ಷಿ ಚಿಕ್ಕ ವೆಂಕಟರಾಯಪ್ಪ ಕೆಲ ದಿನಗಳ ಹಿಂದೆ ನಿಧನರಾಗುವ ಮೂಲಕ, ನರಮೇಧದ ಹಿಂದಿರುವ ಆರೋಪಿಗಳ ದಾರಿ ಸುಗಮ ವಾಯಿತು. ಕಂಬಾಲಪಲ್ಲಿಯ ಸಂತ್ರಸ್ತರು ಎರಡೆರಡು ಬಾರಿ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಅನ್ಯಾಯಕ್ಕೊಳಗಾದರು. ಒಂದು, ಮೇಲ್ವರ್ಣೀಯರಿಂದ ನಡೆದ ನರಮೇಧದಿಂದ ಆದ ಅನ್ಯಾಯ. ಮಗದೊಂದು, ನ್ಯಾಯವ್ಯವಸ್ಥೆಯಿಂದಾದ ನ್ಯಾಯದ ನರಮೇಧ.

70 ವರ್ಷದ ವೆಂಕಟರಾಯಪ್ಪ ನ್ಯಾಯಕ್ಕಾಗಿ ಹಂಬಲಿಸುತ್ತಲೇ ಇಹ ಲೋಕವನ್ನು ತ್ಯಜಿಸಿರುವುದು, ಪರೋಕ್ಷವಾಗಿ ಸಂವಿಧಾನದ ಸಾವೇ ಆಗಿದೆ. ಈ ದೇಶದಲ್ಲಿ ದಲಿತರ ಪರವಾಗಿರುವ ಕಾನೂನನ್ನು ಹೇಗೆ ವ್ಯವಸ್ಥೆ ದುರ್ಬಲಗೊಳಿಸುತ್ತಿವೆ ಎನ್ನುವುದಕ್ಕೆ ಕಂಬಾಲಪಲ್ಲಿ ನರಮೇಧ ಪ್ರಕರಣ ಒಂದು ಉದಾಹರಣೆ. ಇದು ಕೇವಲ ಕಂಬಾಲ ಪಲ್ಲಿಗಷ್ಟೇ ಸೀಮಿತವಾಗಿಲ್ಲ. ಖೈರ್ಲಾಂಜಿಯಲ್ಲೂ ಇದೇ ಪುನರಾವರ್ತನೆಯಾಗಿದೆ. ದಲಿತರ ಸಾಮೂಹಿಕ ಹತ್ಯಾಕಾಂಡದಲ್ಲಿ ಆರೋಪಿಗಳು ನ್ಯಾಯವ್ಯವಸ್ಥೆಯಿಂದ ನುಣುಚಿಕೊಂಡಿರುವುದೇ ಹೆಚ್ಚು. ದಲಿತರಿಗೆ ನ್ಯಾಯ ಮರೀಚಿಕೆಯಾದಂತೆಯೇ ಅವರ ಮೇಲಿನ ದೌರ್ಜನ್ಯಗಳೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಸಾಧಾರಣವಾಗಿ ಕಾನೂನು ತನ್ನ ಕೆಲಸವನ್ನು ಕಟ್ಟು ನಿಟ್ಟಾಗಿ ನಿರ್ವಹಿಸುತ್ತಿದ್ದರೆ ವರ್ಷದಿಂದ ವರ್ಷಕ್ಕೆ ದಲಿತರ ಬದುಕು ಸುಗಮವಾಗುತ್ತಾ ಸಾಗಬೇಕು.

ಆದರೆ 2012ರ ದೌರ್ಜನ್ಯಗಳಿಗೆ ಹೋಲಿಸಿದರೆ 2014ರಲ್ಲಿ ಇದು ಶೇ. 23ರಷ್ಟು ಹೆಚ್ಚಿದೆ ಎನ್ನುವುದನ್ನು ಸರಕಾರಿ ಅಂಕಿ ಅಂಶ ಹೇಳುತ್ತದೆ. ಕೇಂದ್ರದಲ್ಲಿ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ಆನಂತರ ಈ ದಾಳಿಯ ತೀವ್ರತೆ ದುಪ್ಪಟ್ಟಾಗಿದೆ. ದಲಿತ ದೌರ್ಜನ್ಯ ಪ್ರಕರಣದಲ್ಲಿ ದಲಿತರಿಗೆ ನ್ಯಾಯ ಸಿಗದೇ ಇರಲು ಇನ್ನಿತರ ಕಾರಣಗಳೂ ಇವೆ. ಅದರಲ್ಲಿ ಮುಖ್ಯವಾದುದು ನ್ಯಾಯ ವಿಳಂಬ. ವಿಚಾರಣೆ ದೀರ್ಘವಾದಷ್ಟೂ ದಲಿತರಿಗೆ ನ್ಯಾಯ ಮರೀಚಿಕೆಯಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಕಂಬಾಲ ಪಲ್ಲಿ ದುರಂತ. ಪ್ರಕರಣಕ್ಕೆ ಸಂಬಂಧಪಟ್ಟ ವಿಚಾರಣೆ ಮುಂದೆ ಹೋದಂತೆಯೇ ಒಬ್ಬೊಬ್ಬರೇ ಸಾಕ್ಷಿಗಳು ಕಳಚುತ್ತಾ ಹೋದರು. ಇದೇ ಸಂದರ್ಭದಲ್ಲಿ ಇರುವ ಒಬ್ಬ ಸಾಕ್ಷಿಯ ಆರೋಗ್ಯ ಕೆಡುತ್ತಾ ಹೋಯಿತು. ಎಲ್ಲಕ್ಕಿಂತ ಮುಖ್ಯವಾಗಿ ಕೂಲಿ ಕಾರ್ಮಿಕರಾಗಿ ಬದುಕುವ ದಲಿತರು ತಮಗಾದ ಅನ್ಯಾಯಕ್ಕಾಗಿ ವರ್ಷಗಟ್ಟಳೆ ಕೋರ್ಟಿಗೆ ಅಲೆಯುವಂತಹ ಸ್ಥಿತಿಯಲ್ಲಿರುವುದಿಲ್ಲ. ಸಂತ್ರಸ್ತರ ಅಸಹಾಯಕತೆಯನ್ನು ಮನಗಂಡೇ, ಆರೋಪಿಗಳು ತಮ್ಮ ಹಣ, ವಕೀಲರನ್ನು ಬಳಸಿಕೊಂಡು ವಿಚಾರಣೆಯನ್ನು ಎಷ್ಟು ಸಾಧ್ಯವೋ ಅಷ್ಟು ಮುಂದೆ ಹಾಕುತ್ತಾ ಹೋಗುತ್ತಾರೆ.

ವರ್ಷದಿಂದ ವರ್ಷಕ್ಕೆ ಪ್ರಕರಣ ದುರ್ಬಲವಾಗುತ್ತಾ, ಅಂತಿಮವಾಗಿ ಮುಚ್ಚಿ ಹೋಗುತ್ತದೆ. ಸಣ್ಣದೊಂದು ದಲಿತ ನಿಂದನೆಯ ವಿರುದ್ಧವೂ ಈ ದೇಶದಲ್ಲಿ ಬಿಗಿ ಕಾಯ್ದೆಯಿರುವಾಗ, ಹಲ್ಲೆ, ದೌರ್ಜನ್ಯ, ಹತ್ಯೆಗಳಂತಹ ಬರ್ಬರ ಪ್ರಕರಣಗಳಲ್ಲಿ ದಲಿತರಿಗೆ ಯಾಕೆ ನ್ಯಾಯ ಸಿಗುವುದಿಲ್ಲ ಎನ್ನುವುದನ್ನು ಅವಲೋಕಿಸಲು ಇದು ಸರಿಯಾದ ಸಮಯವಾಗಿದೆ. ಯಾವುದೇ ದೌರ್ಜನ್ಯ ಅಥವಾ ಹತ್ಯೆ ನಡೆದಾಗ ಮೊತ್ತ ಮೊದಲು ಪ್ರಕರಣ ದಾಖಲಿಸುವವರು ಪೊಲೀಸರು. ಅದರ ಆಧಾರದಿಂದಲೇ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತದೆ. ಹೆಚ್ಚಿನ ದಲಿತ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಪೊಲೀಸರ ದೂರಿನ ದಾಖಲೆಯಲ್ಲೇ ಲೋಪಗಳಿರುತ್ತವೆ. ದಲಿತರೆನ್ನುವ ಕಾರಣಕ್ಕಾಗಿ ನಡೆದ ದೌರ್ಜನ್ಯ, ಹತ್ಯೆ ಎನ್ನುವುದನ್ನು ಮುಚ್ಚಿಟ್ಟು ಪ್ರಕರಣಕ್ಕೆ ಬೇರೆ ವೈಯಕ್ತಿಕ ಕಾರಣಗಳನ್ನು ಪೊಲೀಸರೇ ಜೋಡಿಸುತ್ತಾರೆ. ದಲಿತ ಸಮುದಾಯವನ್ನು ಪ್ರತಿನಿಧಿಸುವ ಸಿಬ್ಬಂದಿಯ ಸಂಖ್ಯೆ ಪೊಲೀಸ್ ಠಾಣೆಯಲ್ಲಿ ಕಡಿಮೆಯಿರುವುದರಿಂದ ಮತ್ತು ಇರುವ ಪೊಲೀಸ್ ಸಿಬ್ಬಂದಿ ದಲಿತರ ಕುರಿತಂತೆ ಪೂರ್ವಾಗ್ರಹ ಪೀಡಿತರೇ ಅಧಿಕ ಇರುವುದರಿಂದ ಪ್ರಕರಣವನ್ನು ದುರ್ಬಲಗೊಳ್ಳುವುದು ಸಹಜ.

ದಲಿತರ ಮೇಲೆ ಹಲ್ಲೆ ನಡೆಸುವವರು ಮೇಲ್‌ಜಾತಿಯ ಜನರಾಗಿವುದರಿಂದ, ಪೊಲೀಸರು ಇವರ ಪರವಾಗಿ ನಿಲ್ಲುವುದು ಸಹಜವೇ ಆಗಿದೆ. ಜೊತೆಗೆ ಪೊಲೀಸ್ ಸಿಬ್ಬಂದಿ ಮೇಲ್‌ಜಾತಿ, ಮೇಲ್‌ವರ್ಗದವನಾಗಿದ್ದರೆ ಪ್ರಕರಣ ದಾಖಲಾಗುವುದೇ ಕಷ್ಟ ಎನ್ನುವ ಸ್ಥಿತಿ ಗ್ರಾಮೀಣ ಪ್ರದೇಶದಲ್ಲಿದೆ. ಹೆಚ್ಚಿನ ದಲಿತ ದೌರ್ಜನ್ಯ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರುವುದು ಇರಲಿ, ಠಾಣೆಯ ಮೆಟ್ಟಿಲೇರುವುದೇ ಕಷ್ಟ ಎನ್ನುವಂತಹ ಸ್ಥಿತಿ ನಮ್ಮ ದೇಶದಲ್ಲಿದೆ. ದಲಿತರಿಗೆ ನ್ಯಾಯ ಸಿಗದಂತೆ ನೋಡಿಕೊಳ್ಳುವ ಸಂಚು ಪ್ರಾಥಮಿಕ ಹಂತದಲ್ಲೇ ನಡೆಯುತ್ತದೆ. ದಲಿತರ ಬಡತನ, ಅನಕ್ಷರತೆ ಎಲ್ಲವೂ ಅವರ ಪಾಲಿಗೆ ನ್ಯಾಯವನ್ನು ಪಡೆಯಲು ಇರುವ ತೊಡಕೇ ಆಗಿದೆ. ವಿವಿಧ ಸಂಘಟನೆಗಳ ನೆರವಿನಿಂದ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತು ಎಂದೇ ಇಟ್ಟುಕೊಳ್ಳೋಣ. ಅಲ್ಲಿಯೂ ಮತ್ತೆ ದಲಿತರು ಮೇಲ್ ಜಾತಿ ಅಥವಾ ಮೇಲ್ ವರ್ಗದ ಪ್ರತಿನಿಧಿಗಳಿಂದಲೇ ನ್ಯಾಯವನ್ನು ನಿರೀಕ್ಷಿಸಬೇಕಾಗುತ್ತದೆ.

ಇಂದು ದೇಶದಲ್ಲಿ ದಲಿತರ ಕುರಿತಂತೆ ಮೇಲ್‌ವರ್ಗದ ಜನರಲ್ಲಿ ಪೂರ್ವಾಗ್ರಹ ಹೆಚ್ಚುತ್ತಿದೆ. ಅನೇಕ ಸಂದರ್ಭದಲ್ಲಿ ಸಂವಿಧಾನ, ನ್ಯಾಯ ಪುಸ್ತಕ ಎಷ್ಟರಮಟ್ಟಿಗೆ ದಲಿತರ ಪರವಾಗಿದೆ ಎನ್ನುವುದು ಮುಖ್ಯವಾಗುವುದಿಲ್ಲ, ಅದನ್ನು ಬಳಸಿಕೊಂಡು ನ್ಯಾಯ ನೀಡುವ ನ್ಯಾಯಾಧೀಶರು ಎಷ್ಟರಮಟ್ಟಿಗೆ ದಲಿತರ ಪರವಾಗಿದ್ದಾರೆ ಎನ್ನುವುದೂ ತೀರ್ಪಿನಲ್ಲಿ ತನ್ನ ಪ್ರಭಾವವನ್ನು ಬೀರುತ್ತದೆ. ಈ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿ ದಲಿತ ದೌರ್ಜನ್ಯಗಳ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ಸೂಚನೆ ನೀಡಿರುವುದು ಶ್ಲಾಘನೀಯ.

ಇದೇ ಸಂದರ್ಭದಲ್ಲಿ ಪೊಲೀಸ್ ಠಾಣೆಗಳಲ್ಲಿ ಮತ್ತು ನ್ಯಾಯಾಲಯಗಳಲ್ಲಿ ಹೆಚ್ಚು ಹೆಚ್ಚು ದಲಿತ ಸಿಬ್ಬಂದಿ ನೇಮಕವಾಗುವುದೂ ಅಷ್ಟೇ ಅಗತ್ಯವಾಗಿದೆ. ದಲಿತರ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಲು ದಲಿತರ ನೇತೃತ್ವವುಳ್ಳ ವಿಶೇಷ ವಿಭಾಗವನ್ನು ತೆರೆಯುವ ಅಗತ್ಯವೂ ಇದೆ. ಅಷ್ಟೇ ಅಲ್ಲ, ನ್ಯಾಯಾಲಯದಲ್ಲೂ ದಲಿತ ನ್ಯಾಯಾಧೀಶರನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರ ಕ್ರಮವನ್ನು ತೆಗೆದುಕೊಳ್ಳಬೇಕು. ದಲಿತರ ನೋವು ದುಮ್ಮಾನಗಳನ್ನು ದಲಿತರ ಕಣ್ಣಿನ ಮೂಲಕವೇ ನೋಡುವ ಅಧಿಕಾರಿಗಳು, ನ್ಯಾಯಾಧೀಶರು ಹೆಚ್ಚುವವರೆಗೆ ದಲಿತರಿಗೆ ಈ ನೆಲದಲ್ಲಿ ನ್ಯಾಯ ಮರೀಚಿಕೆಯಾಗಿಯೇ ಉಳಿಯುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News