ನಕಲಿ ಗೋರಕ್ಷಕರಿಗೆ ರಾಜ್ಯ ಸರಕಾರದ ಬೆಂಬಲ?

Update: 2017-05-05 04:16 GMT

ಗೋರಕ್ಷಕರ ಹಿಂಸಾಚಾರಕ್ಕೆ ಪೊಲೀಸರು ಹೊಣೆಗಾರರಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಸಾಮಾಜಿಕ ಕಾರ್ಯಕರ್ತರೊಬ್ಬರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರಲ್ಲಿ, ಗೋರಕ್ಷಣೆಯ ಹೆಸರಲ್ಲಿ ಹಲ್ಲೆ, ದೌರ್ಜನ್ಯಗಳು ನಡೆದರೆ ಅಲ್ಲಿಯ ಪೊಲೀಸ್ ಅಧಿಕಾರಿಗಳನ್ನೇ ಹೊಣೆ ಮಾಡಬೇಕು ಎಂದು ನ್ಯಾಯಾಲಯವನ್ನು ಕೇಳಿಕೊಳ್ಳಲಾಗಿತ್ತು. ಇದನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಇದರ ಬಗ್ಗೆ ರಾಜ್ಯ ಸರಕಾರಗಳೇ ಗಮನಿಸಬೇಕು ಎಂದು ಹೇಳಿದೆ.

ಇದೇ ಸಂದರ್ಭದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಬಗ್ಗೆ ಆರು ತಿಂಗಳೊಳಗೆ ಪ್ರತಿಕ್ರಿಯೆ ನೀಡಬೇಕು ಎಂದು ಕೇಂದ್ರ ಸರಕಾರ, ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್, ಉ.ಪ್ರದೇಶ, ಜಾರ್ಖಂಡ್ ಮತ್ತು ಕರ್ನಾಟಕ ರಾಜ್ಯಗಳಿಗೆ ಸೂಚನೆ ನೀಡಿತ್ತು. ಸಾರ್ವಜನಿಕರಿಗೆ ತೊಂದರೆ ನೀಡುವ ಈ ಸಂಘಟನೆಗಳನ್ನು ಯಾಕೆ ನಿಷೇಧಿಸಬಾರದು ಎನ್ನುವ ಪ್ರಶ್ನೆಯನ್ನೂ ಮುಂದಿಟ್ಟಿತ್ತು. ವಿಪರ್ಯಾಸವೆಂದರೆ, ಪ್ರಗತಿಪರ ನಾಯಕನನ್ನು ಹೊಂದಿರುವ ಕರ್ನಾಟಕ ಸರಕಾರ ಗೋರಕ್ಷಕ ಪಡೆಯನ್ನು ಪರೋಕ್ಷವಾಗಿ ಸಮರ್ಥಿಸಿದೆ. ಗೋಹತ್ಯೆಯನ್ನು ತಡೆಯುವ ಸದುದ್ದೇಶದಿಂದ ನಡೆಸುವ ಕಾರ್ಯಕ್ಕೆ ಮಾತ್ರ ಕಾನೂನಿನ ಬೆಂಬಲವಿದೆ.

ಸಾಮರಸ್ಯ ಕದಡುವ ಕಾರ್ಯಕ್ಕೆ ಬೆಂಬಲವಿಲ್ಲ ಎಂದು ರಾಜ್ಯ ಸರಕಾರ ಗೋರಕ್ಷಣಾ ಪಡೆಯ ಕುರಿತಂತೆ ಅಡ್ಡಗೋಡೆಯ ಮೇಲೆ ದೀಪವಿಟ್ಟಿದೆ. ಯಾವ ಸಂಘಟನೆಗಳೇ ಆಗಲಿ, ‘ದುರುದ್ದೇಶದ ಹೆಸರಲ್ಲಿ’ ಸಂಘಟನೆ ಕಟ್ಟಿಕೊಳ್ಳುವುದಿಲ್ಲ ಎನ್ನುವುದು ಸರಕಾರದ ತಲೆಗೆ ಹೊಳೆದಿಲ್ಲ. ಗೋವಿಗೆ ಮಾತ್ರವಲ್ಲ ಎಲ್ಲ ಪ್ರಾಣಿಗಳಿಗೂ, ಮನುಷ್ಯರಿಗೂ ರಕ್ಷಣೆಯನ್ನು ನೀಡುವುದು ಸರಕಾರದ ಹೊಣೆ ಮತ್ತು ಅದಕ್ಕಾಗಿಯೇ ಕಾನೂನು ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಇದಕ್ಕಾಗಿ ಅಪಾರ ಹಣವನ್ನು ಸರಕಾರ ವೆಚ್ಚ ಮಾಡುತ್ತಿದೆ. ಗೋರಕ್ಷಕ ಪಡೆಗಳು ಹುಟ್ಟಿಕೊಂಡಿರುವುದು ಸದುದ್ದೇಶದ ಕಾರ್ಯಗಳಿಗಲ್ಲ ಎನ್ನುವ ಬಗ್ಗೆ ಸ್ವತಃ ಮುಖ್ಯಮಂತ್ರಿಯೇ ಹಲವು ವೇದಿಕೆಗಳಲ್ಲಿ ಹೇಳಿಕೆ ನೀಡಿದ್ದಾರೆ. ಅಂತಹ ಪಡೆಗಳು ರಾಜ್ಯದಲ್ಲಿ ಮಾಡಿರುವ ಅನಾಹುತಗಳ ಸರಮಾಲೆಗಳೇ ಸರಕಾರದ ಮುಂದಿವೆ. ಸರಕಾರ ಸುಪ್ರೀಂಕೋರ್ಟ್‌ನ ಮುಂದೆ ನೀಡಿರುವ ಹೇಳಿಕೆಯ ದೌರ್ಬಲ್ಯಗಳನ್ನು ಬಳಸಿಕೊಂಡೇ ಈ ಸಂಘಟನೆಗಳು ಕಾರ್ಯಾಚರಿಸುತ್ತಿರುವುದು ಸರಕಾರಕ್ಕೇಕೆ ಅರ್ಥವಾಗುತ್ತಿಲ್ಲ? ತಮ್ಮ ಗೋಹತ್ಯೆ ಮಸೂದೆಗೆ ಸಂಬಂಧಪಟ್ಟ ಕಾಯ್ದೆಯನ್ನು ಸಮರ್ಥಿಸುವ ಭರದಲ್ಲಿ ಗೋರಕ್ಷಕ ಪಡೆಗಳನ್ನೂ ಸರಕಾರ ಸಮರ್ಥಿಸಿದಂತಾಗಿದೆ.

ಗೋವುಗಳನ್ನು ನಿಜಕ್ಕೂ ರಕ್ಷಿಸುವವರು ಯಾರು? ಯಾರೆಲ್ಲ ಗೋವುಗಳನ್ನು ಸಾಕುತ್ತಾರೆಯೋ ಅವರೇ ನಿಜವಾದ ಗೋರಕ್ಷಕರು. ಅಂದರೆ ರೈತರೇ ನಿಜವಾದ ಗೋವುಗಳ ರಕ್ಷಕರು. ಅವರಿಗೆ ಸಕಲ ಅನುಕೂಲಗಳನ್ನು ಮಾಡಿಕೊಡುವುದು, ಸೌಲಭ್ಯಗಳನ್ನು ಒದಗಿಸುವುದು, ಅವರಿಗೆ ಭದ್ರತೆಯನ್ನು ನೀಡುವುದು ಸರಕಾರದ ಕೆಲಸ. ಒಂದು ವೇಳೆ ಅವರ ಹಟ್ಟಿಗೆ ನುಗ್ಗಿ ಗೋಕಳ್ಳರು ಗೋವುಗಳನ್ನು ಕದ್ದುಕೊಂಡು ಹೋದರು ಎಂದರೂ ಅದರ ವಿರುದ್ಧ ಕ್ರಮ ಕೈಕೊಳ್ಳುವುದಕ್ಕಾಗಿಯೇ ಪೊಲೀಸ್ ಇಲಾಖೆಗಳಿವೆ.

ಸಾರ್ವಜನಿಕರು ತಮ್ಮದೇ ಪಡೆಗಳನ್ನು ಕಟ್ಟಿಕೊಂಡು, ಪರ್ಯಾಯ ಪೊಲೀಸರಂತೆ ಬೀದಿಗಳಲ್ಲಿ ತಿರುಗಾಡಲು ಶುರು ಹಚ್ಚಿದರೆ ಅದು ಸಂವಿಧಾನದ, ಕಾನೂನಿನ ಉಲ್ಲಂಘನೆಯಾಗಿದೆ. ಸದ್ದುದ್ದೇಶದ ಕಾರಣಕ್ಕಾಗಿಯೂ ಒಬ್ಬನಿಗೆ ಥಳಿಸುವ, ಹಲ್ಲೆ ನಡೆಸುವ ಅಧಿಕಾರ ಇತರರಿಗಿಲ್ಲ. ಹೀಗಿರುವಾಗ, ಸದುದ್ದೇಶದ ಕಾರಣಕ್ಕಾಗಿ ಗೋರಕ್ಷಕರಿಗೆ ಕಾನೂನಿನ ಬೆಂಬಲವಿದೆ ಎನ್ನುವ ಹೇಳಿಕೆ ಎಷ್ಟರ ಮಟ್ಟಿಗೆ ನ್ಯಾಯಬದ್ಧವಾದುದು? ಯಾವುದು ಸದುದ್ದೇಶದಿಂದ ಕೂಡಿರುವುದು, ಯಾವುದು ಅಲ್ಲ ಎನ್ನುವುದನ್ನು ವಿಂಗಡಿಸುವವರು ಯಾರು? ಸರಕಾರದ ಈ ದ್ವಂದ್ವ ನಿಲುವಿನ ಮರೆಯಲ್ಲಿಯೇ ಇಂದು ರಾಜ್ಯಾದ್ಯಾಂತ ಗೋರಕ್ಷಕ ಪಡೆಗಳ ಹೆಸರಿನಲ್ಲಿ ಗೂಂಡಾಗಳು ವಿಜೃಂಭಿಸುತ್ತಿದ್ದಾರೆ.

ದನ ಸಾಕುವ ರೈತರಿಗೆ ಇವರು ಕಂಟಕವಾಗುತ್ತಿದ್ದಾರೆ. ಇವರಿಗೆ ಹೆದರಿ ಜನರು ಗೋಸಾಕಣೆಯನ್ನೇ ನಿಲ್ಲಿಸುತ್ತಿದ್ದಾರೆ. ಆದರೂ ಸರಕಾರ ಜಾಣ ಕುರುಡತನವನ್ನು ಪ್ರದರ್ಶಿಸಿ, ಸುಪ್ರೀಂಕೋರ್ಟ್ ಮುಂದೆ ನಕಲಿ ಗೋರಕ್ಷಕರನ್ನು ಸಮರ್ಥಿಸಿಕೊಂಡಿದೆ. ಇದು ನಿಜಕ್ಕೂ ಆಘಾತಕಾರಿಯಾದುದು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ, ಈ ನಾಡಿನ ದನಸಾಕುವ ರೈತರಿಗೆ, ಅಲ್ಪಸಂಖ್ಯಾತರಿಗೆ ಹಿಂದಿನಿಂದ ಇರಿದಿದೆ. ಅಷ್ಟೇ ಅಲ್ಲ, ಗೋರಕ್ಷಕರ ಹೆಸರಲ್ಲಿ ಬೀದಿಗಳಲ್ಲಿ ವಿಜೃಂಭಿಸುವ ಗೂಂಡಾಗಳಿಗೆ ಪರೋಕ್ಷ ಅಭಯ ಸಿಕ್ಕಿದಂತಾಗಿದೆ. ಗೋವಧೆಯನ್ನು ತಡೆಯುವ ಗೋರಕ್ಷಕರಿಗೆ ಕಾನೂನು ಕ್ರಮದಿಂದ ವಿನಾಯಿತಿ ನೀಡುವ ಕ್ರಮ ಎಷ್ಟರಮಟ್ಟಿಗೆ ದುರುಪಯೋಗ ಆಗುತ್ತಿದೆ ಎನ್ನುವುದಕ್ಕೆ ಇತ್ತೀಚೆಗೆ ಉಡುಪಿಯಲ್ಲಿ ಕೊರಗರ ಮೇಲೆ ನಡೆದ ದಾಂಧಲೆಯೇ ಸಾಕ್ಷಿಯಾಗಿದೆ. ಶುಭ ಕಾರ್ಯಕ್ರಮಕ್ಕೆ ಗೋಮಾಂಸ ಮಾಡಿದ ಕಾರಣಕ್ಕಾಗಿ ಕೊರಗರ ಕಾಲನಿಗೆ ನುಗ್ಗಿದ ರೌಡಿಗಳು ಅಲ್ಲಿ ದಾಂಧಲೆ ನಡೆಸಿದರು.

ಅಷ್ಟೇ ಅಲ್ಲ, ಇಬ್ಬರು ದಲಿತ ಯುವಕರಿಗೆ ಥಳಿಸಿ ಅವರನ್ನು ಪೊಲೀಸ್ ಠಾಣೆಗೆ ಎಳೆದೊಯ್ದರು. ಪೊಲೀಸರು ಹಲ್ಲೆಗೀಡಾದ ಕೊರಗ ಯುವಕರ ವಿರುದ್ಧವೇ ಪ್ರಕರಣ ದಾಖಲಿಸಿದರು. ಇದೇ ಸಂದರ್ಭದಲ್ಲಿ ಹಲ್ಲೆ, ದಾಂಧಲೆ ನಡೆಸಿದ ಗೂಂಡಾಗಳು ತಮ್ಮ ಕಣ್ಣೆದುರೇ ಇದ್ದರೂ ಅವರ ಮೇಲೆ ಯಾವ ಪ್ರಕರಣವನ್ನೂ ದಾಖಲಿಸಿಕೊಳ್ಳಲಿಲ್ಲ. ದಲಿತ ಸಂಘಟನೆಗಳು ದೂರು ನೀಡಿದ ಬಳಿಕವಷ್ಟೇ ಅವರ ಮೇಲೆ ಪ್ರಕರಣ ದಾಖಲಿಸಲಾಯಿತು. ಹಾಗಾದರೆ ಕೊರಗರ ಮೇಲೆ ನಡೆದ ದಾಳಿ ‘ಸದುದ್ದೇಶದಿಂದ ನಡೆಸಿದ ಕಾರ್ಯ’ ಎಂದು ಸರಕಾರ ಹೇಳುತ್ತಿದೆಯೇ? ಉಡುಪಿಯಲ್ಲಿ ದನದ ವ್ಯಾಪಾರಿ ಪ್ರವೀಣ್ ಪೂಜಾರಿಯನ್ನು ಥಳಿಸಿ ಕೊಂದಿರುವುದು ‘ಸದುದ್ದೇಶದಿಂದ’ ಎಂದು ಸರಕಾರ ಭಾವಿಸುತ್ತದೆಯೇ? ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸರಕಾರ ಹೇಳಿಕೊಳ್ಳಬಹುದು.

ಆದರೆ ಅಂತಹ ಘಟನೆಗಳಿಗೆ ನಿಜವಾದ ಹೊಣೆಗಾರರು ಯಾರು? ಅಂತಹ ಪರ್ಯಾಯ ಪೊಲೀಸ್ ಪಡೆಗಳನ್ನು ಕಟ್ಟುವುದಕ್ಕೆ ಸರಕಾರ ಅನುಮತಿ ನೀಡಿದ ಕಾರಣದಿಂದ ತಾನೇ ಅವುಗಳು ಘಟಿಸಿರುವುದು? ಎಲ್ಲರೂ ಕಾನೂನನ್ನು ಕೈಗೆತ್ತಿಕೊಳ್ಳಲು ತಮ್ಮ ತಮ್ಮ ಸ್ವಂತ ಪಡೆಗಳನ್ನು ಕಟ್ಟಿಕೊಂಡರೆ ಮತ್ತು ಅವೆಲ್ಲವೂ ‘ಸದುದ್ದೇಶದ ಕಾರ್ಯಕ್ಕಾಗಿ’ ಎಂದು ತಮ್ಮನ್ನು ಸಮರ್ಥಿಸಿಕೊಳ್ಳಲು ಶುರು ಹಚ್ಚಿದರೆ, ಕಾನೂನು ಸುವ್ಯವಸ್ಥೆಯ ಗತಿ ಏನಾದೀತು?

ಈ ದೇಶದಲ್ಲಿ ಗೋವುಗಳನ್ನು ಸಾಕುವವರನ್ನಷ್ಟೇ ಗೋರಕ್ಷಕರು ಎಂದು ಕರೆಯಬೇಕು ಮತ್ತು ಗೋವುಗಳ ರಕ್ಷಣೆಯ ವೇಷದಲ್ಲಿ ಸಮಾಜದ ಸ್ವಾಸ್ಥವನ್ನು ಕೆಡಿಸುತ್ತಿರುವ ನಕಲಿ ಗೋರಕ್ಷಕರಿಗೆ ನಿಷೇಧ ಹೇರಬೇಕು. ಇದು ಸಾಧ್ಯವಾಗಬೇಕಾದರೆ ಮೊತ್ತ ಮೊದಲು ಸರಕಾರ, ಗೋರಕ್ಷಕರ ಕುರಿತಂತೆ ತನ್ನಲ್ಲಿರುವ ಗೊಂದಲಗಳನ್ನು ನಿವಾರಿಸಿಕೊಳ್ಳಬೇಕು. ಹಾಗೆಯೇ ರಕ್ಷಣೆಯ ಕೆಲಸವನ್ನು ಪೊಲೀಸ್ ಪಡೆಗಳೇ ಮಾಡಬೇಕು. ಒಂದು ವೇಳೆ ಪರ್ಯಾಯ ಪಡೆಗಳನ್ನು ನಿರ್ಮಾಣ ಮಾಡುವುದಿದ್ದರೂ ಅದು ಪೊಲೀಸ್ ಇಲಾಖೆಯ ಮೂಲಕ ಸ್ಥಾಪನೆಯಾಗಬೇಕೇ ಹೊರತು, ಗೂಂಡಾಗಳು, ರೌಡಿಗಳ ಕೈಗೆ ರಕ್ಷಣೆಯ ಕೆಲಸವನ್ನು ಪೊಲೀಸರು, ಸರಕಾರ ನೀಡಬಾರದು. ಅದು ಸರಕಾರಕ್ಕೂ, ಪೊಲೀಸ್ ಇಲಾಖೆಗೂ ನಾಚಿಕೆ ತರುವ ವಿಷಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News