ನೀಟ್ ಪ್ರವೇಶ ಪರೀಕ್ಷೆಯನ್ನು “ನೀಟಾಗಿ” ಬರೆಯಬೇಕೇ: ಈ ಮಾಹಿತಿ ಓದಿ

Update: 2017-05-05 05:53 GMT

ನೀಟ್ ಪ್ರವೇಶ ಪರೀಕ್ಷೆಯನ್ನು ಸಿಬಿಎಸ್‌ಇ ನಡೆಸುತ್ತದೆ. ಆದರೆ, ದೇಶಾದ್ಯಂತ ಇರುವ ಸರಕಾರಿ ಮೆಡಿಕಲ್ ಮತ್ತು ಡೆಂಟಲ್ ಕಾಲೇಜುಗಳ ಶೇ.15 ಸೀಟುಗಳಿಗೆ ಮಾತ್ರ ಸಿಬಿಎಸ್‌ಇ ನೀಟ್ ಅಂಕಗಳ ಮೆರಿಟ್ ಆಧಾರದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕೇಂದ್ರದ ಮೀಸಲಾತಿಯಂತೆ ಕೇಂದ್ರ ಆರೋಗ್ಯ ಇಲಾಖೆ ಕೌನ್ಸೆಲಿಂಗ್ ನಡೆಸಲಿದೆ. ಕೇಂದ್ರದ ಮೀಸಲಾತಿಯ ಪ್ರಕಾರ ಪರಿಶಿಷ್ಟ ಜಾತಿ (ಶೇ.15),ಪರಿಶಿಷ್ಟ ಪಂಗಡ (ಶೇ.7.5), ಒಬಿಸಿ(ಶೇ.27) ಮತ್ತು ಅಂಗವಿಕಲರಿಗೆ ಮೀಸಲಾತಿ ಇದೆ. ಒಕ್ಕಲಿಗ, ಲಿಂಗಾಯಿತ, ಮುಸ್ಲಿಂ, ಕ್ರಿಶ್ಚಿಯನ್ ಮತ್ತು ರಾಜ್ಯದ ಎಲ್ಲಾ ಹಿಂದುಳಿದ ವರ್ಗಗಳು ಕೇಂದ್ರದ ಒಬಿಸಿ ಮೀಸಲಾತಿಯಡಿ ಬರಲಿದೆ. ಆದರೆ, ಆದಾಯದ ಮಿತಿ ಇರಲಿದೆ.

ಸುಪ್ರೀಂ ಕೋರ್ಟ್ ಆದೇಶದಂತೆ ಈ ವರ್ಷದಿಂದ ದೇಶಾದ್ಯಂತ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಅರ್ಹತಾ ಪ್ರವೇಶ ಪರೀಕ್ಷೆ ಮೇ 7ರಂದು ನಡೆಯಲಿದೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಸಿಬಿಎಸ್‌ಇ ನಡೆಸಲಿರುವ ಈ ಪರೀಕ್ಷೆಯಲ್ಲಿ ದೇಶಾದ್ಯಂತ ಹನ್ನೊಂದು ಲಕ್ಷಕ್ಕಿಂತ ಅಧಿಕ ವಿದ್ಯಾರ್ಥಿಗಳು ತಮ್ಮ ಜೀವನದ ಕನಸು ನನಸು ಮಾಡಲು ಅಗ್ನಿ ಪರೀಕ್ಷೆ ಎದುರಿಸಲಿದ್ದಾರೆ. ಕಳೆದ ವರ್ಷದವರೆಗೆ ರಾಜ್ಯದ ವಿದ್ಯಾರ್ಥಿಗಳು ಸಿಇಟಿ, ಎಐಪಿಎಂಟಿ ಮತ್ತು ಖಾಸಗಿ ಕಾಲೇಜುಗಳು ನಡೆಸುತ್ತಿದ್ದ ಹತ್ತಾರು ಪ್ರವೇಶ ಪರೀಕ್ಷೆ ಮುಖಾಂತರ ಮೆಡಿಕಲ್ ಮತ್ತು ಡೆಂಟಲ್ ಸೀಟುಗಳನ್ನು ಪಡೆಯುತ್ತಿದ್ದರು. ಆದರೆ ಈ ವರ್ಷದಿಂದ ಎರಡು ಸರಕಾರಿ ಸ್ವಾಯತ್ತ ವಿವಿಗಳನ್ನು ಹೊರತುಪಡಿಸಿ ಮೆಡಿಕಲ್ ಮತ್ತು ಡೆಂಟಲ್ ಸೀಟು ಪಡೆಯಲು ಕಡ್ಡಾಯವಾಗಿ ನೀಟ್ ಪರೀಕ್ಷೆ ಬರೆಯಲೇಬೇಕಾಗಿದೆ. ಲೋಕಸಭೆಯ ಕಾಯ್ದೆಯ ಪ್ರಕಾರ ಸ್ವಾಯತ್ತ ವಿವಿಗಳಾದ ಎಐಐಎಂಎಸ್ ಮತ್ತು ಜೆಐಪಿಎಂಇಆರ್ ಪ್ರತ್ಯೇಕವಾದ ಪ್ರವೇಶ ಪರೀಕ್ಷೆ ಮತ್ತು ಕೌನ್ಸೆಲಿಂಗ್ ನಡೆಸಲಿದೆ.

ರಾಜ್ಯದ 8 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಬೆಂಗಳೂರು, ಬೆಳಗಾವಿ, ದಾವಣಗೆರೆ, ಗುಲ್ಬರ್ಗ, ಮಂಗಳೂರು, ಹುಬ್ಬಳ್ಳಿ, ಮೈಸೂರು ಮತ್ತು ಉಡುಪಿ ನೀಟ್ ಪರೀಕ್ಷೆ ನಡೆಯುವ ಕೇಂದ್ರಗಳು. ಇಂಗ್ಲಿಷ್, ಹಿಂದಿ ಮತ್ತು ಕನ್ನಡವೂ ಸೇರಿದಂತೆ 10 ಭಾಷೆಗಳಲ್ಲಿ ಪ್ರಶ್ನೆ ಪತ್ರಿಕೆ ಇರಲಿದೆ.

ನೀಟ್ ಪ್ರವೇಶ ಪರೀಕ್ಷೆ ಜೀವಶಾಸ್ತ್ರ, ಸಸ್ಯಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಭೌತ ಶಾಸ್ತ್ರ ವಿಷಯಗಳ 180 ಪ್ರಶ್ನೆಗಳ 720 ಅಂಕಗಳಿಗೆ ನಡೆಯಲಿದೆ. ಪ್ರತಿಯೊಂದು ವಿಷಯಕ್ಕೂ 45 ಪ್ರಶ್ನೆಗಳಿರುತ್ತವೆ. ಪ್ರತಿ ಸರಿ ಉತ್ತರಕ್ಕೂ 4 ಅಂಕ ದೊರೆಯಲಿದೆ. ಪ್ರತಿ ತಪ್ಪು ಉತ್ತರಕ್ಕೆ ಒಂದು ಅಂಕ ಕಡಿತಗೊಳ್ಳಲಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ಮೂರು ಗಂಟೆ ಪರೀಕ್ಷೆ ನಡೆಯಲಿದೆ.

ನೀಟ್ ಪ್ರವೇಶ ಪರೀಕ್ಷೆಯನ್ನು ಸಿಬಿಎಸ್‌ಇ ನಡೆಸುತ್ತದೆ ಆದರೆ ದೇಶದಾದ್ಯಂತ ಇರುವ ಸರಕಾರಿ ಮೆಡಿಕಲ್ ಮತ್ತು ಡೆಂಟಲ್ ಕಾಲೇಜುಗಳ ಶೇ.15 ಸೀಟುಗಳಿಗೆ ಮಾತ್ರ ಸಿಬಿಎಸ್‌ಇ ನೀಟ್ ಅಂಕಗಳ ಮೆರಿಟ್ ಆಧಾರದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕೇಂದ್ರದ ಮೀಸಲಾತಿಯಂತೆ ಕೇಂದ್ರ ಆರೋಗ್ಯ ಇಲಾಖೆ ಕೌನ್ಸೆಲಿಂಗ್ ನಡೆಸಲಿದೆ. ಕೇಂದ್ರದ ಮೀಸಲಾತಿಯ ಪ್ರಕಾರ ಪರಿಶಿಷ್ಟ ಜಾತಿ(ಶೇ.15),ಪರಿಶಿಷ್ಟ ಪಂಗಡ (ಶೇ.7.5), ಓಬಿಸಿ(ಶೇ.27) ಮತ್ತು ಅಂಗವಿಕಲರಿಗೆ ಮೀಸಲಾತಿ ಇದೆ. ಒಕ್ಕಲಿಗ, ಲಿಂಗಾಯಿತ, ಮುಸ್ಲಿಂ, ಕ್ರಿಶ್ಚಿಯನ್ ಮತ್ತು ರಾಜ್ಯದ ಎಲ್ಲಾ ಹಿಂದುಳಿದ ವರ್ಗಗಳು ಕೇಂದ್ರದ ಒಬಿಸಿ ಮೀಸಲಾತಿಯಡಿ ಬರಲಿದೆ ಆದರೆ ಆದಾಯದ ಮಿತಿ ಇರಲಿದೆ.

ಕರ್ನಾಟಕದ ವಿದ್ಯಾರ್ಥಿಗಳಿಗೆ ರಾಜ್ಯದ ಶೇ.85 ಸರಕಾರಿ ಕಾಲೇಜುಗಳಲ್ಲಿರುವ ಸೀಟುಗಳಿಗೆ ರಾಜ್ಯದ ಮೀಸಲಾತಿಯ ಪ್ರಕಾರ ಆಯ್ಕೆ ನಡೆಯಲಿದೆ. ಖಾಸಗಿ, ಅಲ್ಪ ಸಂಖ್ಯಾತ, ಭಾಷಾ ಅಲ್ಪ ಸಂಖ್ಯಾತ ಮತ್ತು ಡೀಮ್ಡ್ ವಿಶ್ವ ವಿದ್ಯಾನಿಲಯಗಳು ಸರಕಾರಕ್ಕೆ ನೀಡಿರುವ ಸೀಟುಗಳಲ್ಲಿ ಮೀಸಲಾತಿ ಇರಲಿದೆ. ಈ ಸೀಟುಗಳಿಗೆ ಸರಕಾರ ಮತ್ತು ಖಾಸಗಿ ಆಡಳಿತ ಮಂಡಳಿಯ ನಡುವೆ ಆಗಿರುವ ಒಪ್ಪದಂತೆ ಶುಲ್ಕ ನಿಗದಿ ಮಾಡಲಾಗುವುದು. ಖಾಸಗಿ ಡೀಮ್ಡ್ ವಿವಿಗಳ ಶೇ.25 ಸೀಟುಗಳು ಕರ್ನಾಟಕದ ವಿದ್ಯಾರ್ಥಿಗಳಿಗೆ 6 ಲಕ್ಷದ ರಿಯಾಯಿತಿ ಶುಲ್ಕದೊಂದಿಗೆ ಮೊದಲ ಬಾರಿ ದೊರೆಯಲಿದೆ. ಅದಲ್ಲದೆ ಶೇ.30 ಸೀಟುಗಳು ಕರ್ನಾಟಕದ ವಿದ್ಯಾರ್ಥಿಗಳಿಗೆ ಮೀಸಲು. ಈ ಸೀಟುಗಳಿಗೆ ಯಾವುದೇ ರಿಯಾಯಿತಿ ಇರುವುದಿಲ್ಲ. ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ ಅವರ ಪ್ರಯತ್ನದಿಂದ ಇದು ಸಾಧ್ಯವಾಗಿದೆ.

ಉತ್ತರ ಪ್ರದೇಶ ಸರಕಾರ ಖಾಸಗಿ ಮೆಡಿಕಲ್ ಮತ್ತು ಡೆಂಟಲ್ ಕಾಲೇಜುಗಳಲ್ಲಿ ಸರಕಾರಿ ಕೋಟಾ ರದ್ದುಗೊಳಿಸಿದ್ದರೆ ಕರ್ನಾಟಕ ಸರಕಾರ ಖಾಸಗಿ ಡೀಮ್ಡ್ ಮೆಡಿಕಲ್ ಕಾಲೇಜುಗಳಲ್ಲಿ ರಿಯಾಯಿತಿ ಶುಲ್ಕದೊಂದಿಗೆ ಸೀಟು ಪಡೆದುಕೊಂಡಿದೆ. ಇದೇ ಸೀಟಿಗೆ ಖಾಸಗಿ ಡೀಮ್ಡ್ ವಿವಿಗಳಲ್ಲಿ 30 ಲಕ್ಷದಿಂದ ಕೋಟಿಯವರೆಗೂ ಶುಲ್ಕ ವಿಧಿಸುತ್ತಾರೆ. ಖಾಸಗಿ ಡೀಮ್ಡ್ ವಿವಿಗಳ ಪೂರ್ಣ ಹತೋಟಿ ಕೇಂದ್ರ ಸರಕಾರದ ಮೇಲೆ ಇದೆ. ರಾಜ್ಯ ಸರಕಾರದ ಯಾವುದೇ ಕಾನೂನಿಗೆ ಈ ವಿವಿಗಳು ಒಳಪಡುವುದಿಲ್ಲ.

  • ವಿದ್ಯಾರ್ಥಿಗಳು ಕೌನ್ಸೆಲಿಂಗ್‌ಗೆ ಅರ್ಹತೆ ಹೊಂದಬೇಕಾದರೆ 720 ಅಂಕಗಳಲ್ಲಿ, ಸಾಮಾನ್ಯ ವರ್ಗ ಶೇ.50 (360 ಅಂಕ), ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ವಿಕಲಚೇತನರು ಶೇ. 40 (288 ಅಂಕ) ಪಡೆಯಬೇಕು.
  • ಈ ಬಾರಿ ಶೇ.15 ಸರಕಾರಿ ಕಾಲೇಜುಗಳ ಸೀಟುಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ಸೀಟುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ದ ಮೂಲಕ ಏಕ ಗವಾಕ್ಷಿ ಕೌನ್ಸೆಲಿಂಗ್ ನಡೆಯಲಿದೆ. ಕಾಮೆಡ್ ಕೆ, ಅಲ್ಪಸಂಖ್ಯಾತ, ಭಾಷಾ ಅಲ್ಪಸಂಖ್ಯಾತ, ಖಾಸಗಿ ಡೀಮ್ಡ್ ವಿವಿಗಳಲ್ಲಿ ಯಾವುದೇ ಕೌನ್ಸೆಲಿಂಗ್ ಇರುವುದಿಲ್ಲ. ನೀಟ್ ಅರ್ಹತೆ ಇಲ್ಲದೆ ಮತ್ತು ಕೆಇಎ ಕೌನ್ಸೆಲಿಂಗ್ ಹೊರತು ಪಡಿಸಿ ಮೆಡಿಕಲ್ ಮತ್ತು ಡೆಂಟಲ್ ಕಾಲೇಜುಗಳಿಗೆ ಪ್ರವೇಶವಿಲ್ಲ. ಹಣ ಮತ್ತು ಪ್ರಭಾವದಿಂದ ಪ್ರವೇಶ ಸಾಧ್ಯವೇ ಇಲ್ಲ. ವಿದ್ಯಾರ್ಥಿಗಳು ಮತ್ತು ಪೋಷಕರು ಮೋಸ ಹೋಗಬೇಡಿ.
  • ವಿದ್ಯಾರ್ಥಿಗಳು ಪರೀಕ್ಷೆಗೆ ತೆರಳುವಾಗ ಪ್ರವೇಶ ಪತ್ರದಲ್ಲಿ ನೀಡಿರುವ ಸೂಚನೆಗಳನ್ನು ಪಾಲಿಸದಿದ್ದರೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಹಿಂದಿನ ದಿನವೇ ಪರೀಕ್ಷಾ ಕೇಂದ್ರಗಳನ್ನು ಗುರುತಿಸಿಕೊಳ್ಳಿ. ನಿಗದಿ ಪಡಿಸಿದ ಸಮಯಕ್ಕಿಂತ ಅರ್ಧ ಗಂಟೆ ಮೊದಲು ಪರೀಕ್ಷಾ ಕೇಂದ್ರ ತಲುಪಿದರೆ ಒಳಿತು.
  • ಪ್ರವೇಶ ಪತ್ರದಲ್ಲಿ ‘ಸ್ಲಾಟ್ ಎ’ ಮತ್ತು ‘ಸ್ಲಾಟ್ ಬಿ’ಎಂದು ನಮೂದಾಗಿರುವುದನ್ನು ಗಮನಿಸಿ. ‘ಸ್ಲಾಟ್ ಎ’ ನಮೂದಾಗಿರುವವರು ಬೆಳಗ್ಗೆ 7.30ರಿಂದ 8.30 ಗಂಟೆಯೊಳಗೆ ಹಾಜರಿರಬೇಕು. ‘ಸ್ಲಾಟ್ ಬಿ’ ವಿದ್ಯಾರ್ಥಿಗಳು ಬೆಳಗ್ಗೆ 8.30ರಿಂದ 9.30ಯೊಳಗೆ ಪರೀಕ್ಷಾ ಕೇಂದ್ರ ತಲುಪಬೇಕು. ಪರೀಕ್ಷಾ ಕೇಂದ್ರ ತಲುಪುವಾಗ ನೀಟ್ ಪ್ರವೇಶ ಪತ್ರ(ನೀಟ್ ಅಡ್ಮಿಟ್ ಕಾರ್ಡ್), ಪಾಸ್ ಪೋರ್ಟ್ ಸೈಝ್ ಕನಿಷ್ಠ ನಾಲ್ಕು ಫೋಟೊ, ಒಂದು ಪೋಸ್ಟ್ ಕಾರ್ಡ್ ಸೈಝ್ ಪೋಟೊ ಮರೆಯದೆ ತೆಗೆದುಕೊಂಡು ಹೋಗಬೇಕು.
  • ಡ್ರೆಸ್ ಕೋಡ್ ಅನುಸರಿಸಬೇಕು. ಶೂ, ಫುಲ್ ಸ್ಲೀವ್ ಶರ್ಟ್ ಧರಿಸುವಂತಿಲ್ಲ. ಮೊಬೈಲ್, ಯಾವುದೇ ಆಭರಣ, ವಾಚ್ ಹಾಕಿಕೊಂಡು ಪರೀಕ್ಷಾ ಕೇಂದ್ರ ಪ್ರವೇಶಿಸುವಂತಿಲ್ಲ. ಬರೆಯಲು ಪೆನ್ ಪರೀಕ್ಷಾ ಕೇಂದ್ರದೊಳಗೆ ನೀಡುತ್ತಾರೆ. ಬೆಲೆ ಬಾಳುವ ಆಭರಣ, ಮೊಬೈಲ್, ವಾಚ್ ತರುವ ವಿದ್ಯಾರ್ಥಿಗಳು ತಮ್ಮ ಪೋಷಕರನ್ನು ಜೊತೆಯಲ್ಲಿ ಕರೆದುಕೊಂಡು ಬಂದರೆ ಆತಂಕವಿಲ್ಲದೆ ಪರೀಕ್ಷೆ ಬರೆಯಬಹುದು. ಸೂಚನೆಗಳನ್ನು ಪಾಲಿಸದೆ ಅನುಚಿತವಾಗಿ ನಡೆದು ಕೊಂಡರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದಲ್ಲದೇ ಮುಂದೆ ಎಂದೂ ನೀಟ್ ಪರೀಕ್ಷೆ ಬರೆಯದಂತೆ ನಿಷೇಧಿಸಲಾಗುವುದು.
  • ನೀಟ್ ವೆಬ್‌ಸೈಟ್‌ನಲ್ಲಿರುವ ಸಮಯ ತಮ್ಮ ವಾಚುಗಳಲ್ಲಿ ಅಳವಡಿಸಿಕೊಳ್ಳಿ. ಇದರಿಂದ ನಿಗದಿತ ಸಮಯಕ್ಕೆ ಪರೀಕ್ಷಾ ಕೇಂದ್ರ ತಲುಪಲು ಅನುಕೂಲವಾಗಲಿದೆ. ಪರೀಕ್ಷಾ ಕೇಂದ್ರಗಳಲ್ಲಿ ಅಳವಡಿಸಿರುವ ಗಡಿಯಾರದ ಸಮಯದಂತೆ ಪರೀಕ್ಷೆ ನಡೆಯಲಿದೆ. ನೀಟ್ ವೆಬ್‌ಸೈಟ್‌ನಲ್ಲಿ ಮೇ ಕೊನೆಯ ವಾರದಲ್ಲಿ ಸರಿ ಉತ್ತರ ಪ್ರಕಟವಾಗಲಿದೆ. ಜೂನ್ 8 ರಂದು ಅಧಿಕೃತ ನೀಟ್ ಪರೀಕ್ಷಾ ಫಲಿತಾಂಶ ಪ್ರಕಟವಾಗಲಿದೆ. ವಿದ್ಯಾರ್ಥಿಗಳು ಮತ್ತು ಪೊಷಕರು ಪ್ರವೇಶ ಪತ್ರದಲ್ಲಿ ವಿಧಿಸಿರುವ ಸೂಚನೆಗಳನ್ನು ಪೂರ್ಣವಾಗಿ ಓದಿಕೊಂಡರೆ ಯಾವುದೇ ಆತಂಕವಿಲ್ಲದೆ ಪರೀಕ್ಷಾ ಕೊಠಡಿ ಪ್ರವೇಶಿಸಬಹುದು. ಪ್ರವೇಶ ಪತ್ರವನ್ನು ಕಾಲೇಜುಗಳಿಗೆ ಸೇರುವವರೆಗೆ ಕಳೆಯಬೇಡಿ.

Writer - ಎಂ.ಯೂಸುಫ್ ಪಟೇಲ್

contributor

Editor - ಎಂ.ಯೂಸುಫ್ ಪಟೇಲ್

contributor

Similar News