ವಿಮಾನಯಾನ ದರ ಏರಿಕೆ ಸಂಭವ

Update: 2017-05-05 15:38 GMT

ಹೊಸದಿಲ್ಲಿ, ಮೇ 5: ಸರಕಾರವು ಭದ್ರತೆ ಮತ್ತು ಸೌಕರ್ಯ ಶುಲ್ಕವನ್ನು ಹೆಚ್ಚಿಸಲು ಮುಂದಾಗಿರುವುದರಿಂದ ಪ್ರಯಾಣಿಕರ ಸೇವಾ ಶುಲ್ಕ ಹೆಚ್ಚಳವಾಗಲಿದ್ದು ಇದರಿಂದ ವಿಮಾನಯಾನ ದರದಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ.

ದೇಶದಲ್ಲಿ ಕಾರ್ಯನಿರ್ವಹಿಸುವ 143 ವಿಮಾನ ನಿಲ್ದಾಣಗಳಲ್ಲಿ ಈಗ ಒದಗಿಸುತ್ತಿರುವ ಭದ್ರತಾ ವ್ಯವಸ್ಥೆಗೆ ತಗಲುವ ವಾರ್ಷಿಕ ವೆಚ್ಚದ ಮಾಹಿತಿ ಸಲ್ಲಿಸುವಂತೆ ಗೃಹ ಸಚಿವಾಲಯ ಕ್ಕೆ ಸೂಚಿಸಲಾಗಿದೆ. ಈ ವೆಚ್ಚವನ್ನು ಯಾವ ರೀತಿಯಲ್ಲಿ ವಸೂಲು ಮಾಡಿ ಸರಿತೂಗಿಸಬಹುದು ಎಂದು ನಿರ್ಧರಿಸುವಂತೆ ಉನ್ನತ ಮಟ್ಟದ ಸಭೆಯೊಂದು ವಿಮಾನಯಾನ ಸಚಿವಾಲಯಕ್ಕೆ ತಿಳಿಸಿದೆ.

ಎರಡು ತಿಂಗಳೊಳಗೆ ಎರಡೂ ಇಲಾಖೆಗಳಿಂದ ವರದಿ ಸಲ್ಲಿಕೆಯಾಗುವ ನಿರೀಕ್ಷೆಯಿದ್ದು ಆ ಬಳಿಕ ಪ್ರಯಾಣಿಕರ ಸೇವಾ ಶುಲ್ಕದಲ್ಲಿ ಏರಿಕೆಯಾಗುವ ಸಂಭವವಿದೆ. ಇದುವರೆಗೆ ಪ್ರತೀ ವಿಮಾನ ಟಿಕೆಟ್‌ನಲ್ಲಿ 225 ರೂ. ಪ್ರಯಾಣಿಕರ ಸೇವಾ ಶುಲ್ಕವಾಗಿದ್ದು ಇದರಲ್ಲಿ 130 ರೂ. ಭದ್ರತಾ ಶುಲ್ಕವಾಗಿರುತ್ತದೆ. ಕಳೆದ 15 ವರ್ಷಗಳಿಂದ ಭದ್ರತಾ ಶುಲ್ಕದಲ್ಲಿ ಏರಿಕೆಯಾಗಿಲ್ಲ. ಆದರೆ ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆ ಹಲವು ಪಟ್ಟು ಹೆಚ್ಚಾಗಿದೆ. ಆದ್ದರಿಂದ ಭದ್ರತಾ ಶುಲ್ಕದಲ್ಲಿ ಏರಿಕೆಯಾಗುವುದು ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News