​ದೇವಾಲಯಗಳು ಸಂಸ್ಕೃತಿ ಮತ್ತು ಸಂಸ್ಕಾರವನ್ನು ತುಂಬುವ ತಾಣಗಳು: ವೀರೇಂದ್ರ ಹೆಗ್ಗಡೆ

Update: 2017-05-05 18:35 GMT

ಚಿಕ್ಕಮಗಳೂರು, ಮೇ.5: ದೇವಾಲಯಗಳು ಜನರನ್ನು ಒಗ್ಗೂಡಿಸುವ, ಅವರಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರವನ್ನು ತುಂಬುವ ತಾಣಗಳು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ತಾಲ್ಲೂಕಿನ ಹಳಿಯೂರಿನಲ್ಲಿ ಜೀರ್ಣೋದ್ಧಾರಗೊಂಡ ಇತಿಹಾಸ ಪ್ರಸಿದ್ಧ ಶ್ರೀಕಲ್ಲೇಶ್ವರಸ್ವಾಮಿ ದೇವಾಲಯವನ್ನು ಲೋಕಾರ್ಪಣೆ ಮಾಡಿ ನಂತರ ನಡೆದ ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇವಾಲಯಗಳಿಗೆ ತೆರಳುವುದರಿಂದ, ಭಗವಂತನ ದರ್ಶನ ಮಾಡುವುದರಿಂದ ಮಾನಸಿಕ ಶಾಂತಿ ಮತ್ತು ನೆಮ್ಮದಿ ದೊರೆಯುತ್ತದೆ. ಧರ್ಮಾಚರಣೆಯಿಂದ ಮನುಷ್ಯ ಸಂಸ್ಕಾರವಂತನಾಗುತ್ತಾನೆ. ದೇವರ ಸಾನ್ನಿಧ್ಯ ವೃದ್ಧಿಸಬೇಕಾದರೆ ದೇವಾಲಯದಲ್ಲಿ ನಿರಂತರವಾಗಿ ಪೂಜೆ, ಪುನಸ್ಕಾರ ನಡೆಯಬೇಕು ಎಂದು ಹೇಳಿದರು.

ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಮಾತನಾಡಿದರು.

ಸಮಾರಂಭಕ್ಕೆ ಮುನ್ನ ಡಾ. ಡಿ.ವೀರೇಂದ್ರ ಹಗ್ಗಡೆ ಅವರನ್ನು ಗ್ರಾಮದ ಮುಂಭಾಗದಿಂದ ನಾದಸ್ವರ, ಗ್ರಾಮೀಣವಾದ್ಯ ಮತ್ತು ಕಳಸಗಳೊಂದಿಗೆ ಮೆರವಣಿಗೆಯಲ್ಲಿ ದೇವಾಲಯಕ್ಕೆ ಕರೆತರಲಾಯಿತು. ಗ್ರಾಮದ ವತಿಯಿಂದ ವೀರೇಂದ್ರ ಹೆಗ್ಗಡೆ ಅವರನ್ನು ಸನ್ಮಾನಿಸಲಾಯಿತು. ದೇವಾಲಯದ ಜೀರ್ಣೋದ್ಧಾರಕ್ಕೆ ದುಡಿದ ಮತ್ತು ಸಹಕರಿಸಿದವರನ್ನು ಗೌರವಿಸಲಾಯಿತು.

ಎಂಎಲ್‌ಸಿ ಡಾ. ಮೋಟಮ್ಮ, ಎಂ.ಕೆ.ಪ್ರಾಣೇಶ್, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಶಾಸಕ ಬಿ.ಬಿ.ನಿಂಗಯ್ಯ ಅವರ ಪತ್ನಿ ತ್ರಿವೇಣಿ, ಜಿಪಂ ಸದಸ್ಯ ನಿಖಿಲ್ ಚಕ್ರವರ್ತಿ ಗ್ರಾಪಂ ಅಧ್ಯಕ್ಷೆ ಚಂಪಾ, ಅಮೇರಿಕಾದ ಅಕ್ಕ ಕನ್ನಡ ಸಂಘಟನೆ ಮಾಜಿ ಅಧ್ಯಕ್ಷ ಡಾ. ವಿಶ್ವಾಮಿತ್ರ ಉಪಸ್ಥಿತರಿದ್ದರು.

ಎಚ್.ಡಿ.ನಾರಾಯಣಾಚಾರ್ ನಿರೂಪಿಸಿದರು. ಸುಧಾಕರ್ ಸ್ವಾಗತಿಸಿದರು. ಎಪಿಎಂಸಿ ಅಧ್ಯಕ್ಷ ಕವೀಶ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News