ಶಿರಚ್ಛೇದನ: ಸಚಿವರ ತಲೆದಂಡ ಅನಿವಾರ್ಯ

Update: 2017-05-06 04:48 GMT

ಗಡಿಯಲ್ಲಿ ಭರ್ಜರಿ ತಲೆಗಳ ವ್ಯಾಪಾರ ನಡೆಯುತ್ತಿದೆ. ರಾಜಕೀಯದ ಚದುರಂಗದಾಟಗಳಿಗೆ ಸೇನೆಯ ಅಮಾಯಕ ಸೈನಿಕರ ತಲೆಗಳು ಉರುಳುತ್ತಿದ್ದರೆ, ದೇಶದ ಒಳಗೆ ಬಾಬಾಗಳ ವೇಷದಲ್ಲಿ ಕುಳಿತಿರುವ ಪತಂಜಲಿ ವ್ಯಾಪಾರಿಗಳು ‘‘ಇವರ ಎರಡು ತಲೆಗೆ ಅವರ ನೂರು ತಲೆ’’ ಎಂದು ಘೋಷಿಸುತ್ತಿದ್ದಾರೆ.

ಹುತಾತ್ಮ ಯೋಧನ ಪುತ್ರಿಯ ಬಾಯಿಯಲ್ಲೂ ‘‘ತಲೆಗಳ ಲೆಕ್ಕಗಳನ್ನು ಘೋಷಿಸುತ್ತಿವೆ’’ ಮಾಧ್ಯಮಗಳು. ಎಳೆ ತರುಣಿ ‘‘ನನಗೆ ಪಾಕಿಸ್ತಾನದ 50 ಸೈನಿಕರ ತಲೆಗಳು ಬೇಕು’’ ಎಂಬ ಹೇಳಿಕೆಯನ್ನು ಆಕೆ ನೀಡಿದಳೋ ಅಥವಾ ಮಾಧ್ಯಮಗಳೇ ಆಕೆಯ ಬಾಯಿಯಿಂದ ಹೇಳಿಸಿದವೋ ಅಂತೂ, ಮುಖಪುಟದಲ್ಲಿ ಆಕೆಯ ‘ಘರ್ಜನೆ’ ಅಚ್ಚಾದವು. ಟಿವಿ ವಾಹಿನಿಗಳು ಕಣ್ಣೀರಿಡುತ್ತಿರುವ ಕುಟುಂಬದ ಮುಂದೆ ಕ್ಯಾಮರಾ ಇಟ್ಟು ಟಿಆರ್‌ಪಿ ಕುದುರಿಸಿದವು. ರಾಜಕಾರಣಿಗಳೂ ಈಗ ತಲೆಗೆ ತಲೆಯನ್ನು ಎಣಿಸುತ್ತಿದ್ದಾರೆ. ‘ಇಂಡಿಯಾ ಟುಡೇ’ ಪತ್ರಿಕೆಯಲ್ಲಂತೂ, ‘‘ನಮ್ಮ ಸೈನಿಕರ ತಲೆ ಉರುಳಿದ ಬೆನ್ನಿಗೇ ಭಾರತೀಯ ಸೇನೆ ಏಳು ಪಾಕಿಸ್ತಾನಿ ಯೋಧರನ್ನು ಕೊಂದು ಹಾಕಿತು’’ ಎಂದು ವರದಿ ಮಾಡಿತು. ಬಳಿಕ ಅದು ಸುಳ್ಳು ಸುದ್ದಿ ಎನ್ನುವುದೂ ಬಹಿರಂಗವಾಯಿತು.

ಕಾಶ್ಮೀರ ಮತ್ತೆ ಹೊತ್ತಿ ಉರಿಯುತ್ತಿದೆ. ನರೇಂದ್ರ ಮೋದಿ ಬಾಯಿ ತೆರೆಯುತ್ತಿಲ್ಲ. ವಿರೋಧ ಪಕ್ಷಗಳೋ, ‘‘ಬಿಜೆಪಿಯನ್ನು ಅಣಕಿಸುತ್ತಿವೆ’’. ಯುಪಿಎ ಸರಕಾರದ ಅವಧಿಯಲ್ಲಿ ಸೈನಿಕರ ತಲೆ ಕತ್ತರಿಸಲ್ಪಟ್ಟಾಗ ಬಿಜೆಪಿಯ ಮುಖಂಡರು ನೀಡಿದ ಹೇಳಿಕೆಗಳನ್ನು ಇದೀಗ ಯುಪಿಎ ನಾಯಕರು ಮರಳಿಸುತ್ತಿದ್ದಾರೆ. ನಿಜಕ್ಕೂ ಕತ್ತರಿಸಲ್ಪಟ್ಟ ನಮ್ಮ ಸೈನಿಕರ ತಲೆಗಳಿಗೆ ಬದಲಾಗಿ ಉರುಳಬೇಕಾದುದು ಪಾಕಿಸ್ತಾನದ ಸೈನಿಕರ ತಲೆಗಳಲ್ಲ. ಕೇಂದ್ರದಲ್ಲಿ ಆಡಳಿತ ನಡೆಸುವ ನಮ್ಮ ನಾಯಕರ ತಲೆಗಳು.

ಅಂದರೆ ಸೈನಿಕರ ಬರ್ಬರ ಸಾವಿಗಾಗಿ, ಕೇಂದ್ರದ ಒಬ್ಬ ಸಚಿವನಾದರೂ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ, ದುರಂತದ ಗಾಂಭೀರ್ಯವನ್ನು ದೇಶಕ್ಕೆ ಮನನ ಮಾಡಬೇಕಾಗಿತ್ತು. ಅಮಾಯಕ ಸೈನಿಕರ ಸಾವಿನ ಹಿಂದಿರುವ ರಾಜಕೀಯ ವೈಫಲ್ಯವನ್ನು ಒಪ್ಪಿಕೊಳ್ಳುವುದೇ ಅಮಾಯಕ ಸೈನಿಕರ ಸಾವಿಗೆ ಸಲ್ಲಿಸಬಹುದಾದ ಮೊದಲ ಗೌರವ. ವಿಪರ್ಯಾಸವೆಂದರೆ, ಈ ಸಂದರ್ಭದಲ್ಲಿ ಇವೆಲ್ಲವನ್ನು ನಿಭಾಯಿಸಬೇಕಾದ ಪೂರ್ಣ ಪ್ರಮಾಣದ ರಕ್ಷಣಾ ಸಚಿವರೇ ಭಾರತಕ್ಕೆ ಇಲ್ಲ. ಹಾಗಿರುವಾಗ, ರಾಜೀನಾಮೆ ನೀಡಬೇಕಾದವರು ಯಾರು? ಸದ್ಯಕ್ಕೆ ಆ ಖಾತೆ ಜೇಟ್ಲಿಯವರ ಜೇಬಿನಲ್ಲಿರುವುದರಿಂದ, ಬೇರೆಲ್ಲ ಚರ್ಚೆಗಳನ್ನು ಬದಿಗಿಟ್ಟು ಅವರಾದರೂ ರಾಜೀನಾಮೆ ಪತ್ರ ನೀಡಿ, ತನ್ನ ಮಾನವನ್ನು ಕಾಪಾಡಿಕೊಳ್ಳಬೇಕಾಗಿತ್ತು. ಈ ದುರಂತಕ್ಕೆ ನೇರವಾಗಿ ಅವರು ಹೊಣೆಯಲ್ಲದೇ ಇರಬಹುದು, ಆದರೆ ನಡೆದಿರುವ ಘಟನೆಯಿಂದ ದೇಶದ ಘನತೆ, ಭದ್ರತೆಯ ಮೇಲೆ ಧಕ್ಕೆ ಮಾಡಿರುವುದನ್ನು ನಾವು ನಿರಾಕರಿಸಲಾಗುವುದಿಲ್ಲ.

ದೇಶದಲ್ಲಿ ಇಂತಹದೊಂದು ಘಟನೆ ಇದೇ ಮೊದಲ ಬಾರಿ ನಡೆದಿರುವುದಾದರೆ ಅದನ್ನು ಇಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿರಲಿಲ್ಲ. ಈ ಹಿಂದೆ ಯುಪಿಎ ಸರಕಾರವಿದ್ದಾಗಲೂ ಇಂತಹದೊಂದು ಘಟನೆ ನಡೆದಿತ್ತು ಮತ್ತು ಆ ಘಟನೆಯನ್ನು ಮುಂದಿಟ್ಟುಕೊಂಡೇ ಬಿಜೆಪಿ ಚುನಾವಣಾ ಪ್ರಚಾರವನ್ನೂ ನಡೆಸಿತ್ತು. ಅಂದರೆ ಪ್ರಕರಣದ ಗಾಂಭೀರ್ಯ ಏನು ಎನ್ನುವುದು ಮೋದಿ ನೇತೃತ್ವದ ಸರಕಾರಕ್ಕೆ ಚೆನ್ನಾಗಿಯೇ ಗೊತ್ತಿದೆ. ಅಧಿಕಾರಕ್ಕೆ ಬಂದ ಮೊದಲ ದಿನವೇ ಸೇನೆಯ ಭದ್ರತೆ, ಯೋಗಕ್ಷೇಮದ ಕುರಿತಂತೆ ಗಮನಹರಿಸಿ, ಚುನಾವಣೆಯಲ್ಲಿ ಯೋಧರ ಹೆಸರಿನಲ್ಲಿ ಯಾಚಿಸಿದ ಮತಗಳ ಋಣ ತೀರಿಸುವುದು ಮೋದಿಯವರ ಕರ್ತವ್ಯವಾಗಿತ್ತು. ಆದರೆ ಮೋದಿ ನೇತೃತ್ವದ ಸರಕಾರ, ರಕ್ಷಣಾ ಖಾತೆಯನ್ನೇ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.

ಪಾರಿಕ್ಕರ್ ಎನ್ನುವ ಗೋವಾದ ಅಂದಿನ ಮುಖ್ಯಮಂತ್ರಿಯನ್ನು ಕೇಂದ್ರಕ್ಕೆ ತಂದು ಅವರಿಗೆ ರಕ್ಷಣಾ ಖಾತೆಯನ್ನು ವಹಿಸಲಾಯಿತಾದರೂ, ಅವರು ಗಡಿಯನ್ನು ಸಂಪೂರ್ಣ ಮರೆತು, ಗೋವಾವನ್ನೇ ತನ್ನ ಕೇಂದ್ರ ಕಚೇರಿಯನ್ನಾಗಿ ಮಾಡಿಕೊಂಡಿದ್ದರು. ಇವರ ಅವಧಿಯಲ್ಲಿ ಪಾಕಿಸ್ತಾನ -ಭಾರತದ ಗಡಿಬಿಕ್ಕಟ್ಟು ಉಲ್ಬಣಿಸಿದ್ದು ಮಾತ್ರವಲ್ಲ, ಕಾಶ್ಮೀರ ಸನ್ನಿವೇಶವೂ ತೀವ್ರ ಸ್ವರೂಪವನ್ನು ಪಡೆಯಿತು. ಇದು ತನ್ನ ಕೈ ಮೀರಿದ ವಿಷಯವೆನ್ನುವುದು ಮನದಟ್ಟಾದದ್ದೇ, ದೇಶದ ರಕ್ಷಣೆಗೆ ಬೆನ್ನು ಹಾಕಿ ಗೋವಾ ಕಡೆಗೆ ಪಲಾಯನಗೈದರು. ರಕ್ಷಣಾ ಖಾತೆ ಮತ್ತೆ ಅನಾಥವಾಯಿತು. ವಿಷಾದನೀಯ ಸಂಗತಿಯೆಂದರೆ ಪಾರಿಕ್ಕರ್ ರಕ್ಷಣಾ ಸಚಿವರಾದ ಸಂದರ್ಭದಲ್ಲಿ, ಕೇಂದ್ರ ಸರಕಾರ ತನ್ನ ರಾಜಕೀಯ ಹಿತಾಸಕ್ತಿಗಾಗಿ ಸೇನೆಯ ಗೌಪ್ಯತೆಯನ್ನೇ ಬಳಸಿಕೊಂಡದ್ದು.

ಪರಿಣಾಮವಾಗಿ ತಾನು ಗುಟ್ಟಾಗಿ ಮಾಡುತ್ತಿದ್ದ ಸರ್ಜಿಕಲ್ ಸ್ಟ್ರೈಕ್‌ನ್ನು ಪತ್ರಿಕಾಗೋಷ್ಠಿಯ ಮೂಲಕ ದೇಶದ ಇತಿಹಾಸದಲ್ಲೇ ಮೊದಲ ಬಾರಿ ಬಹಿರಂಗಪಡಿಸುವಂತಹ ಸ್ಥಿತಿಗೆ ಸೇನೆ ಇಳಿಯಬೇಕಾಯಿತು. ಅದನ್ನು ಮೋದಿಯ ಸಾಧನೆ ಎಂಬಂತೆ ಬಿಜೆಪಿಯ ಉಳಿದ ನಾಯಕರು ಬಿಂಬಿಸಿದರೆ, ರಕ್ಷಣಾ ಖಾತೆಯ ಅಂದಿನ ಸಚಿವ ಪಾರಿಕ್ಕರ್, ನಡೆದಿದೆಯೆನ್ನಲಾದ ಆ ಸರ್ಜಿಕಲ್ ದಾಳಿಯ ಹೆಗ್ಗಳಿಕೆಯನ್ನು ಆರೆಸ್ಸೆಸ್‌ನ ಚಡ್ಡಿಯ ಜೇಬಿನೊಳಗೆ ತುರುಕಿಸಿ ಬಿಟ್ಟರು. ಸರ್ಜಿಕಲ್ ಸ್ಟ್ರೈಕ್ ಮೂಲಕ ಗಡಿನಿಯಂತ್ರಣದಾಚೆಗಿರುವ ಉಗ್ರಗಾಮಿ ಶಿಬಿರಗಳೆಲ್ಲ ನಾಶವಾಗಿವೆ, ಉಗ್ರರಿಗೆ ಭಾರೀ ನಷ್ಟವುಂಟಾಗಿದೆ ಎಂದೆಲ್ಲ ಕೇಂದ್ರ ಸರಕಾರ ಹೇಳಿಕೊಂಡಿತು. ಹಾಗಾದರೆ ಇಂದು ಕಾಶ್ಮೀರ ಮತ್ತೆ ಯಾಕೆ ಉದ್ವಿಗ್ನಗೊಂಡಿದೆ? ಸೈನಿಕರ ಮೇಲೆ ಆ ಬಳಿಕವೂ ಹಲವು ಬಾರಿ ದಾಳಿಗಳು ನಡೆದವು. ಇದೀಗ ಇಬ್ಬರು ಸೈನಿಕರ ತಲೆಯನ್ನೇ ಕತ್ತರಿಸಿಕೊಂಡು ಹೋಗಿದ್ದಾರೆ. ಹಾಗಾದರೆ ಕೇಂದ್ರ ಪ್ರಾಯೋಜಿತ ಸರ್ಜಿಕಲ್ ಸ್ಟ್ರೈಕ್ ಮೂಲಕ ದೇಶಕ್ಕಾದ ಲಾಭವೇನು?

ಇದೇ ಹೊತ್ತಿನಲ್ಲಿ, ಮೋದಿ ನೇತೃತ್ವದ ಸರಕಾರ ‘ನೋಟು ನಿಷೇಧ’ವನ್ನೂ ಇನ್ನೊಂದು ಸರ್ಜಿಕಲ್ ಸ್ಟ್ರೈಕ್ ಎಂದು ಹೇಳಿಕೊಂಡಿತು. ನೋಟು ನಿಷೇಧದಿಂದ ಪಾಕಿಸ್ತಾನದಲ್ಲಿ ಮುದ್ರಣಗೊಳ್ಳುವ ಕೋಟ್ಯಂತರ ಬೆಲೆಯ ನಕಲಿ ನೋಟುಗಳಿಗೆ ಕಡಿವಾಣ ಬೀಳುತ್ತದೆ, ಭಯೋತ್ಪಾದನೆ ಇಳಿಕೆಯಾಗುತ್ತದೆ, ಕಾಶ್ಮೀರದಲ್ಲಿ ಕಲ್ಲುತೂರಾಟ ನಿಲ್ಲುತ್ತದೆ ಎಂದು ದೇಶದ ಜನರನ್ನು ನಂಬಿಸಿತು. ದೇಶದ ಲಕ್ಷಾಂತರ ಜನರ ಬದುಕು ನೋಟು ನಿಷೇಧದಿಂದ ಮೂರಾಬಟ್ಟೆಯಾಯಿತಾದರೂ, ‘ದೇಶದ ಒಳಿತಿಗೆ’ ಎಂದು ಎಲ್ಲವನ್ನೂ ಸಹಿಸಿಕೊಂಡರು. ಆದರೆ ಇದೀಗ ನಡೆಯುತ್ತಿರುವುದು ಬೇರೆಯೇ. ಕಾಶ್ಮೀರ ಬೆಂಕಿಯ ಕುಲುಮೆಯಾಗಿದೆ. ಗಡಿಭಾಗದಿಂದ ಉಗ್ರರ ದಾಳಿಯೂ ಹೆಚ್ಚುತ್ತಿದೆ. ಕಾಶ್ಮೀರದ ಜನರಲ್ಲಿ ಸೇನೆಯ ಕುರಿತಂತೆ ಅಸಹನೆ ದುಪ್ಪಟ್ಟಾಗಿದೆ.

ಸೇನೆಯ ಯೋಧರ ಶಿರಚ್ಛೇದನದಲ್ಲಿ ಕಾಶ್ಮೀರ ಹಿಂಸಾಚಾರದ ಪಾತ್ರ ಇದ್ದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಆದುದರಿಂದ, ಸೈನಿಕರ ಶಿರಚ್ಛೇದನಕ್ಕೆ ಪಾಕಿಸ್ತಾನವನ್ನು ಹೊಣೆ ಮಾಡುವುದರೊಂದಿಗೆ ಕೇಂದ್ರದ ಜವಾಬ್ದಾರಿ ಮುಗಿಯುವುದಿಲ್ಲ. ಈ ಪ್ರಕರಣದಲ್ಲಿ ತನ್ನ ಹೊಣೆಗಾರಿಕೆ ಏನು, ತಾನು ಎಲ್ಲಿ ಎಡವಿದ್ದೇನೆ ಎನ್ನುವುದನ್ನು ಸರಕಾರ ಎಲ್ಲಿಯವರೆಗೆ ಒಪ್ಪಿಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ಈ ಹಿಂಸಾಚಾರ ಮುಂದುವರಿಯುತ್ತಲೇ ಇರುತ್ತದೆ. ಭಾರತದ ಸೈನಿಕರ ತಲೆಗೆ ಪ್ರತಿಯಾಗಿ ಪಾಕಿಸ್ತಾನದ ಸೈನಿಕರ ತಲೆಗಳು ಗಡಿಭಾಗದ ಸಮಸ್ಯೆಗೆ ಪರಿಹಾರ ಖಂಡಿತಾ ಅಲ್ಲ. ಈಗ ಇರುವ ರಕ್ಷಣಾ ಸಚಿವರ ತಲೆದಂಡ ಮತ್ತು ಒಬ್ಬ ನೂತನ ಮುತ್ಸದ್ದಿ ನಾಯಕ ಆ ಸ್ಥಾನವನ್ನು ತುಂಬುವುದು ದೇಶದ ತಕ್ಷಣದ ಅಗತ್ಯ. ಗಡಿಭಾಗದಲ್ಲಿ ಬಿಗಡಾಯಿಸುತ್ತಿರುವ ಸಮಸ್ಯೆಯನ್ನು ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ಸರಕಾರ ಇಡಬಹುದಾದ ಮೊದಲ ಹೆಜ್ಜೆ ಇದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News