ಬಂಡೀಪುರ: ಕಾಡಂಚಿನ ಗ್ರಾಮಗಳಲ್ಲಿ ಕಣ್ಮರೆಯಾಗುತ್ತಿರುವ ಜಾನುವಾರುಗಳು

Update: 2017-05-06 17:09 GMT

ಗುಂಡ್ಲುಪೇಟೆ, ಮೇ 6: ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಗ್ರಾಮಗಳಲ್ಲಿ ಉಂಟಾಗಿರುವ ಮೇವಿನ ಕೊರತೆಯಿಂದ ನೂರಾರು ಜಾನುವಾರುಗಳು ಸಾವಿಗೀಡಾಗುತ್ತಿವೆ. ಈ ಹಿಂದೆ ಬಂಡೀಪುರ ಹುಲಿ ಯೋಜನೆಯ ಕಾಡಂಚಿನ ಜಕ್ಕಹಳ್ಳಿ, ಮಂಗಲ, ಕಣಿಯನಪುರ, ಕಣಿಯನಪುರ ಕಾಲೋನಿ, ಎಲ್ಚೆಟ್ಟಿ, ಲೊಕ್ಕೆರೆ, ಕಾರೆಮಾಳ ಸೇರಿದಂತೆ ಎಲ್ಲಾ ಗ್ರಾಮಗಳಲ್ಲಿಯೂ ನೂರಾರು ಸಂಖ್ಯೆಯಲ್ಲಿದ್ದ ರಾಸುಗಳಿದ್ದವು. ಕೊಟ್ಟಿಗೆಯಿಂದ ಹೊರಟರೆ ಕಿಲೋ ಮೀಟರು ಉದ್ದಕ್ಕೂ ಸಾಗುತ್ತಿದ್ದ ರಾಸುಗಳಲ್ಲಿ ಸದ್ಯ ಬೆರಳೆಣಿಕೆಯಷ್ಟು ಮಾತ್ರ ಬದುಕುಳಿದಿವೆ. 

ಗೊಬ್ಬರ ಹಾಗೂ ಹಾಲು ಮಾರಾಟದಿಂದಲೇ ಜೀವನ ನಿರ್ವಹಣೆ ಮಾಡುತ್ತಿದ್ದ ಗ್ರಾಮಸ್ಥರಿಗೆ ಇವುಗಳಿಗೆ ಮೇವು ಹಾಗೂ ನೀರೊದಗಿಸುವುದು ಸವಾಲಾಗಿದ್ದು ಕಾಡಿನೊಳಗೂ ನೀರು ಮೇವು ದೊರಕದೆ ಹಸಿವಿನಿಂದ ಜಾನುವಾರುಗಳು ಸಾಯುತ್ತಿವೆ. 

ವಿತರಣೆಯಾಗದ ರಿಯಾಯಿತಿ ದರದ ಮೇವು:
ಜಕ್ಕಹಳ್ಳಿ, ಮಂಗಲ, ಎಲ್ಚೆಟ್ಟಿ ಮುಂತಾದ ಗ್ರಾಮಗಳಿಗೆ ಪಶುಪಾಲನಾ ಇಲಾಖೆಯವರು ಮೇವು ನಿಧಿ ಕೇಂದ್ರದ ಮೂಲಕ ಹುಲ್ಲು ಸರಬರಾಜು ಮಾಡಿದ್ದರು. ಆದರೆ ರಸ್ತೆ ಸರಿಯಿಲ್ಲ ಹಾಗೂ ಕಾಡೊಳಗೆ ಇರುವ ಕಾರಣದಿಂದ ಕಣಿಯನಪುರ ಗ್ರಾಮಕ್ಕೆ ಮೇವು ನೀಡಲು ಮುಂದಾಗಿಲ್ಲ. ಗ್ರಾಮಗಳಲ್ಲಿ ನೀರೊದಗಿಸುತ್ತಿದ್ದ ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಗ್ರಾಪಂ ವತಿಯಿಂದ ವಾರಕ್ಕೊಮ್ಮೆ ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುತ್ತಿದೆ. ಇದು ಗ್ರಾಮಗಳ ಜನರ ದೈನಂದಿನ ಬಳಕೆಗೂ ಸಾಕಾಗುತ್ತಿಲ್ಲ. ಪರಿಣಾಮವಾಗಿ ಪ್ರತಿ ದಿನವೂ ಹತ್ತಾರು ಹಸುಗಳು ಸಾವಿಗೀಡಾಗುತ್ತಿದ್ದು ಎಲ್ಲಾ ಗ್ರಾಮಗಳ ಬಳಿಯೂ ಸಮೀಪದ ಸತ್ತ ಹಸುಗಳ ಕಳೇಬರ ಹಾಗೂ ಮೂಳೆಗಳು ಹರಡಿಕೊಂಡಿವೆ.

ಕೊಳವೆ ಬಾವಿಗಳೇ ಆಧಾರ
ಈ ಭಾಗದ ಜನರು ತಮ್ಮ ಜಾನುವಾರುಗಳ ಮೇವಿಗೆ ಅನಿವಾರ್ಯವಾಗಿ ಅರಣ್ಯಪ್ರದೇಶವನ್ನೇ ಅವಲಂಬಿಸಿದ್ದು ಕುಂದಕೆರೆ ವಲಯದ ಹುಲಿಗೆಮ್ಮನ ದೇವಸ್ಥಾನದ ಬಳಿಯಿರುವ ಕೊಳವೆ ಬಾವಿಯಿಂದ ನೀರೆತ್ತಿ ಜಾನುವಾರುಗಳಿಗೆ ಕುಡಿಸಬೇಕಾಗಿದೆ.

ಕಳೆದ ವರ್ಷದಿಂದಲೂ ಸರಿಯಾಗಿ ಮಳೆ ಬೀಳದ ಪರಿಣಾಮವಾಗಿ ಈವರೆಗೆ ಸುಮಾರು 400ಕ್ಕೂ ಹೆಚ್ಚಿನ ಜಾನುವಾರುಗಳು ಸಾವಿಗೀಡಾಗಿವೆ ಎಂದು ಗ್ರಾಮಸ್ಥರು ಹೇಳಿದ್ದು ಪ್ರತಿ ಮನೆಯಲ್ಲಿಯೂ ಕನಿಷ್ಟ 40 ಹಸುಗಳಿಟ್ಟಿದ್ದವರು ಇಂದು ಒಂದೆರಡು ರಾಸಿಗೆ ಸೀಮಿತವಾಗಿದ್ದಾರೆ. ದುರ್ಬಲ ರಾಸುಗಳನ್ನು ನೂರಿನ್ನೂರು ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಮೇವು ಮೇಯಲು ಹೋದ ಎಷ್ಟೋ ರಾಸುಗಳು ಹಿಂದುರುಗಿಲ್ಲ. ಅರಣ್ಯ ಪ್ರದೇಶದಲ್ಲಿ ಸಾವಿಗೀಡಾದ ರಾಸನ್ನು ವನ್ಯಜೀವಿಗಳು ತಿಂದರೆ ಮನೆಯಲ್ಲಿ ಸತ್ತ ಜಾನುವಾರನ್ನು ಗ್ರಾಮದ ಹೊರವಲಯದಲ್ಲಿ ಎಸೆಯಲಾಗುತ್ತಿದೆ. ಕಣಿಯನಪುರ ಗ್ರಾಮವೊಂದರಲ್ಲಿಯೇ ಕಳೆದ ಮೂರು ತಿಂಗಳಿನಿಂದ ಸುಮಾರು 200 ರಾಸುಗಳು ಸಾವಿಗೀಡಾಗಿವೆ.

ಇಳಿದ ಹಾಲಿನ ಉತ್ಪಾದನೆ:
ಹಾಲಿನ ಉತ್ಪಾದನೆ ಇಳಿದ ಪರಿಣಾಮ ಪ್ರತಿ ದಿನವೂ 200 ಲೀಟರ್ ಹಾಲು ಸಂಗ್ರಹಿಸುತ್ತಿದ್ದ ಜಕ್ಕಹಳ್ಳಿ ಗ್ರಾಮದ ಡೇರಿಯ ಬಾಗಿಲು ಮುಚ್ಚಿದೆ. ಕೇವಲ 7 ಜನರು ಮಾತ್ರ ಹಾಲು ನೀಡುತ್ತಿರುವ ಮಂಗಲ ಗ್ರಾಮದ ಡೇರಿಯೂ ಕೆಲವೇ ದಿನಗಳಲ್ಲಿ ಮುಚ್ಚುವ ಹಂತದಲ್ಲಿದೆ.

ಹಿಂದೆ ಬೇಸಿಗೆ ಸಮಯದಲ್ಲಿ ಅರಣ್ಯ ಇಲಾಖೆಯವರು ದಿನಗೂಲಿ ಆಧಾರದ ಮೇಲೆ ಕಾರ್ಮಿಕರನ್ನು ಬಳಕೆ ಮಾಡಿಕೊಳ್ಳುತ್ತಿದ್ದರು. ಇತ್ತೀಚೆಗೆ ಜೆಸಿಬಿ ಮೂಲಕ ಕೆಲಸ ಮಾಡಿಸುತ್ತಿರುವುದರಿಂದ ಕೂಲಿಯೂ ಇಲ್ಲದೆ ಜೀವನ ನಿರ್ವಹಣೆಗೆ ಕಷ್ಟಕರವಾಗಿದೆ. ನರೇಗಾ ಯೋಜನೆಯಲ್ಲಿ ಗ್ರಾಪಂ ಕೆಲಸಗಳಿಗೂ ಯಂತ್ರಗಳ ಬಳಕೆ ಮಾಡುತ್ತಿದ್ದು ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ.

ಆದಾಯದ ಮೂಲವಿಲ್ಲದೆ ಅಸಹಾಯಕರಾದ ಜನತೆ:
ಹಾಲು, ಗೊಬ್ಬರ, ಬೇಸಾಯ ಹಾಗೂ ಕೂಲಿಯಿಂದ ಜೀವನ ನಿರ್ವಹಣೆ ಮಾಡುತ್ತಿದ್ದ ಜನರು ಅಕ್ಷರಶಃ ನಿರುದ್ಯೋಗಿಗಳಾಗಿದ್ದು ಜೀವನ ನಿರ್ವಹಣೆಯ ಬಗ್ಗೆ ಚಿಂತಿಸುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ನೆರವಿಗೆ ಬರಬೇಕು ಎಂದು ಒತ್ತಾಯಿಸಿದ್ದಾರೆ.

ಕಾಡಂಚಿನ ಗ್ರಾಮಗಳಲ್ಲಿ ನೀರು ಹಾಗೂ ಮೇವಿನ ಕೊರತೆಯಿಂದ ಪ್ರತಿದಿನವೂ ಹತ್ತಾರು ಜಾನುವಾರುಗಳು ಸಾವಿಗೀಡಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಲ ಗ್ರಾಪಂ ಕೇಂದ್ರದಲ್ಲಿ ಮೇವು ನಿಧಿ ಪ್ರಾರಂಭಿಸಿ ರೈತರಿಗೆ ರಿಯಾಯಿತಿ ದರದಲ್ಲಿ ಮೇವು ವಿತರಿಸುವಂತೆ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಗ್ರಾಪಂ ವತಿಯಿಂದ ಪ್ರತಿ ದಿನವೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದು.
ಎಚ್.ಎನ್.ನಟೇಶ್, ತಾಪಂ ಅಧ್ಯಕ್ಷರು.

Writer - ಮಹದೇವಪ್ರಸಾದ್ ಹಂಗಳ

contributor

Editor - ಮಹದೇವಪ್ರಸಾದ್ ಹಂಗಳ

contributor

Similar News