ಯು.ಉಪೇಂದ್ರ

Update: 2017-05-08 18:33 GMT

ಉಡುಪಿ, ಮೇ 8: ಉಡುಪಿಯ ಸಾಂಸ್ಕೃತಿಕ ಲೋಕದ ಹಿರಿಯ ಸಂಘಟಕ ಯು.ಉಪೇಂದ್ರ ಅವರು ಅಲ್ಪಕಾಲದ ಅನಾರೋಗ್ಯದಿಂದ ಮಿಷನ್ ಕಾಂಪೌಂಡ್‌ನ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 80 ವರ್ಷ ಪ್ರಾಯವಾಗಿತ್ತು. ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ನಗರದ ಖ್ಯಾತ ಸಾಂಸ್ಕೃತಿಕ ಸಂಘಟನೆಯಾಗಿರುವ ರಂಗಭೂಮಿ ಉಡುಪಿಯಲ್ಲಿ ಆರಂಭದಿಂದಲೂ ಸದಸ್ಯರಾಗಿ, ಬಳಿಕ ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಅದರ ಸುವರ್ಣ ರಂಗಭೂಮಿಯ ಕಾರ್ಯಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು. ಅದೇ ರೀತಿ ಯಕ್ಷಗಾನ ಕಲಾರಂಗದಲ್ಲೂ ಆರಂಭಿಕ ದಿನಗಳಿಂದ ಅದರ ಕಾರ್ಯಕರ್ತರಾಗಿ ವಿವಿಧ ನೆಲೆಗಳಲ್ಲಿ ಕೊನೆಯ ದಿನದವರೆಗೂ ಸೇವೆ ಸಲ್ಲಿಸಿದ್ದರು.

ಎಲ್‌ಐಸಿ ಉದ್ಯೋಗಿಗಳ ಕೋ ಆಪರೇಟಿವ್ ಬ್ಯಾಂಕ್‌ನ ನಿರ್ದೇಶಕರಾಗಿದ್ದ ಉಪೇಂದ್ರ, ಉಡುಪಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಸಂಸ್ಥೆ, ಚಿತ್ರ ಸಮುದಾಯ ಉಡುಪಿ, ವಿಮಾ ನೌಕರರ ಸಂಘ, ತುಳುಕೂಟ ಉಡುಪಿ, ರಥಬೀದಿ ಗೆಳೆಯರು ಸಂಘಟನೆಯಲ್ಲಿ ಹಾಗೂ ಇನ್ನಿತರ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಉಪೇಂದ್ರ ಅವರ ನಿಧನಕ್ಕೆ ಯಕ್ಷಗಾನ ಕಲಾರಂಗ, ರಂಗಭೂಮಿ ಉಡುಪಿ ಹಾಗೂ ವಿವಿಧ ಸಂಘಟನೆಗಳು ತೀವ್ರ ಸಂತಾಪ ವ್ಯಕ್ತಪಡಿಸಿವೆ. ಯಕ್ಷಗಾನ ಕಲಾರಂಗ ಕೊಡಮಾಡುವ ಯಕ್ಷಚೇತನ ಪ್ರಶಸ್ತಿಗೆ ಉಪೇಂದ್ರ ಬಾಜನರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ