ಮರಳಿ ಮತಪತ್ರದೆಡೆಗೆ

Update: 2017-05-10 18:50 GMT

ಉತ್ತರ ಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಬಳಿಕ ಮತ ಯಂತ್ರ ದುರ್ಬಳಕೆಯ ಆರೋಪ ತಾರಕಕ್ಕೇರಿದೆ. ಮತಯಂತ್ರಗಳ ಕುರಿತಂತೆ ಒಬ್ಬ ವ್ಯಕ್ತಿ, ಒಂದು ಸಂಘಟನೆ ಅಥವಾ ಯಾವುದೋ ಒಂದು ಸಣ್ಣ ಪ್ರಾದೇಶಿಕ ಪಕ್ಷ ಆರೋಪಿಸುತ್ತಿದ್ದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿರಲಿಲ್ಲ. ಆದರೆ ಬಿಜೆಪಿಯನ್ನು ಹೊರತು ಪಡಿಸಿದ ಎಲ್ಲ ಪಕ್ಷಗಳೂ ಈ ಮತಯಂತ್ರಗಳ ವಿರುದ್ಧ ತಮ್ಮ ಆಕ್ಷೇಪಗಳನ್ನು ಎತ್ತಿವೆ. ಈ ಹಿಂದೆ ಮತಪತ್ರದ ಕಾಲದಲ್ಲಿ ಮತಗಟ್ಟೆಯಲ್ಲಿ ವಂಚನೆ, ಮತಪೆಟ್ಟಿಗೆ ಅಪಹರಣ, ಮತಎಣಿಕೆಯಲ್ಲಿ ಮೋಸಗಳು ನಡೆಯುತ್ತಿತ್ತಾದರೂ, ಅವುಗಳಿಗೆ ಒಂದು ಮಿತಿ ಇತ್ತು. ಕಾನೂನು ಬಿಗಿ ಬಂದೋಬಸ್ತ್ ಮೂಲಕ ಅದನ್ನು ತಡೆಯುವ ಸಾಧ್ಯತೆಗಳಿದ್ದವು. ಆದರೆ ಈಗಿನದು ಅದಕ್ಕಿಂತಲೂ ಭಿನ್ನವಾದ ಸಮಸ್ಯೆ.

ಮತಯಂತ್ರಗಳನ್ನು ದುರ್ಬಳಕೆ ಮಾಡುವುದು ಯಾವುದೋ ಕ್ರಿಮಿನಲ್‌ಗಳೋ ಅಥವಾ ಕಾರ್ಯಕರ್ತರೋ ಅಲ್ಲ. ಈ ದೇಶವನ್ನು ಯಾರು ಆಳಬೇಕು ಎಂದು ಮೊದಲೇ ನಿರ್ಧರಿಸಿರುವ ಕೆಲವು ಪ್ರಬಲ ಕಾರ್ಪೊರೇಟ್ ಮತ್ತು ರಾಜಕೀಯ ಹಿತಾಸಕ್ತಿಗಳು ಜೊತೆಗೂಡಿ ಮತಯಂತ್ರವನ್ನು ದುರ್ಬಳಕೆ ಮಾಡುತ್ತಿವೆ ಎನ್ನುವುದು ಸದ್ಯದ ಆತಂಕಕಾರಿ ಆರೋಪ. ಈ ಹಿತಾಸಕ್ತಿಗಳು ಕೇವಲ ಭಾರತಕ್ಕೇ ಸೀಮಿತವಾಗಿರಬೇಕು ಎಂದೇನಿಲ್ಲ. ಅವರು ಅಮೆರಿಕದಲ್ಲಿ ಕುಳಿತು ಈ ಮತಯಂತ್ರವನ್ನು ಆ ಮೂಲಕ ನಮ್ಮ ಪ್ರಜಾಸತ್ತೆಯನ್ನು ನಿಯಂತ್ರಿಸಬಹುದು. ಅಂತಹ ಅತ್ಯುನ್ನತ ವಿದ್ಯಾವಂತರ ನೆರವಿನಿಂದ, ಯಾವ ದಾಖಲೆಗಳೂ ಉಳಿಯದಂತೆ ಒಂದು ದೇಶದ ಪ್ರಜಾಸತ್ತಾತ್ಮಕ ತೀರ್ಪನ್ನು ತಮಗೆ ಪೂರಕವಾಗಿ ತಿದ್ದುವುದು ಮತಯಂತ್ರದಿಂದ ಸಾಧ್ಯ ಎಂದು ಹೇಳುತ್ತಿವೆ ಕೆಲವು ರಾಜಕೀಯ ಪಕ್ಷಗಳು.

ತಮ್ಮ ದುರ್ಬಳಕೆಗೆ ಪೂರಕವಾಗಿ ಈ ಹಿತಾಸಕ್ತಿಗಳು ಮಾಧ್ಯಮಗಳನ್ನೂ ಕೊಂಡುಕೊಳ್ಳುತ್ತವೆ ಮತ್ತು ತಿರುಚಿರುವ ಮತಯಂತ್ರದ ತೀರ್ಪಿಗೆ ಪೂರಕವಾಗಿ ಈ ಮಾಧ್ಯಮಗಳಿಂದಲೂ ವಿಶ್ಲೇಷಣೆಗಳನ್ನು, ಗಿಣಿ ಭವಿಷ್ಯಗಳನ್ನು ಹೊರಡಿಸುತ್ತವೆ. ಒಟ್ಟಿನಲ್ಲಿ ಮತಗಟ್ಟೆ ಹೈಜಾಕ್‌ಗಳು ರೌಡಿಗಳು ಗೂಂಡಾಗಳ ಮೂಲಕ ನಡೆಯದೆ, ಅವರಿಗಿಂತಲೂ ಅಪಾಯಕಾರಿಗಳಾದ ಐಟಿ, ಬಿಟಿಯ ಕೋಟು ಬೂಟುಗಳನ್ನು ಧರಿಸಿದ ವಿದ್ಯಾವಂತರ ಮೂಲಕ ನಡೆಯುತಿದೆಯೆನ್ನುವುದೇ ಇಂದಿನ ಆತಂಕಕ್ಕೆ ಕಾರಣ. ಆದರೆ ಚುನಾವಣಾ ಆಯೋಗ ಮಾತ್ರ ಇದನ್ನು ನಿರಾಕರಿಸುತ್ತಲೇ ಬಂದಿದೆ.

ವಿಪರ್ಯಾಸವೆಂದರೆ, ಮತಯಂತ್ರ ಬಳಕೆಯನ್ನು ಸಮರ್ಥಿಸಿಕೊಳ್ಳುವುದು ಚುನಾವಣಾ ಆಯೋಗದ ಗುರಿಯಲ್ಲ. ಚುನಾವಣೆಯನ್ನು ಸರ್ವರೀತಿಯಲ್ಲಿ ಯಶಸ್ವಿಗೊಳಿಸುವುದೆಂದರೆ, ಯಾವುದೇ ಅಕ್ರಮಗಳಿಲ್ಲದೆ ಚುನಾವಣೆಗಳನ್ನು ನಡೆಸುವುದು ಎಂದರ್ಥ. ಚುನಾವಣಾ ಆಯುಕ್ತರು ಒಂದು ರೀತಿಯಲ್ಲಿ ಪ್ರಜಾಸತ್ತೆಯ ಕಾವಲುಗಾರರಿದ್ದ ಹಾಗೆ. ಅವರ ಗುರಿ ಪ್ರಜಾಸತ್ತೆಯನ್ನು ಉಳಿಸುವುದೇ ಹೊರತು, ಇವಿಎಂನ್ನು ರಕ್ಷಿಸುವುದಲ್ಲ. ಆದುದರಿಂದ, ಮತಯಂತ್ರದ ವಿರುದ್ಧ ಈ ದೇಶದ ಬಹುಮುಖ್ಯ ನಾಯಕರು ಆರೋಪ ಮಾಡಿದಾಗ, ಅದಕ್ಕೆ ಪ್ರತಿ ಸವಾಲು ಹಾಕುವುದು ಚುನಾವಣಾ ಆಯೋಗದ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತದೆ. ಅವರ ಆತಂಕದ ಹಿಂದಿರುವ ಕಾರಣಗಳನ್ನು ಪರಿಶೀಲಿಸಿ, ಅವರಲ್ಲಿ ವಿಶ್ವಾಸವನ್ನು ಹುಟ್ಟಿಸುವುದು ಚುನಾವಣಾ ಆಯೋಗದ ಜವಾಬ್ದಾರಿ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಯಾವುದೇ ಹೆಜ್ಜೆಯನ್ನು ಇಡದೇ ಇರುವುದು ಅನುಮಾನಗಳಿಗೆ ಇನ್ನಷ್ಟು ಪುಷ್ಟಿಯನ್ನು ನೀಡಿದೆ.

ಇದೇ ಸಂದರ್ಭದಲ್ಲಿ ದಿಲ್ಲಿ ವಿಧಾನಸಭೆಯಲ್ಲಿ ಆಮ್ ಆದ್ಮಿ ಪಕ್ಷವು ‘ಇವಿಎಂ ತಿರುಚಲು 90 ಸೆಕೆಂಡ್ ಸಾಕು’ ಎನ್ನುವುದನ್ನು ತಮ್ಮ ನೇರ ಪ್ರಾತ್ಯಕ್ಷಿಕೆಯಲ್ಲಿ ಬಯಲು ಮಾಡಿದೆ. ಸ್ವತಃ ಸಾಫ್ಟ್‌ವೇರ್ ಇಂಜಿಯರ್ ಆಗಿರುವ ಆಪ್‌ನ ಶಾಸಕ ಸೌರಭ್ ಭಾರದ್ವಾಜ್ ಈ ಪ್ರಾತ್ಯಕ್ಷಿಕೆಯ ನೇತೃತ್ವವನ್ನು ವಹಿಸಿದ್ದರು ಮತ್ತು ಪ್ರಾತ್ಯಕ್ಷಿಕೆಯ ಮೂಲಕ, ಹೇಗೆ ಮತದಾರರ ಮತಗಳನ್ನು ದುರ್ಬಳಕೆ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ‘ತಿರುಚಲು ಸಾಧ್ಯವಿಲ್ಲದ ಮತಯಂತ್ರ ಜಗತ್ತಿನಲ್ಲೇ ಇಲ್ಲ’ ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲ, ‘ನನಗೆ ಕೇವಲ ಮೂರು ತಾಸುಗಳವರೆಗೆ ಇವಿಎಂಗಳನ್ನು ನೀಡಿ. ನೀವು(ಬಿಜೆಪಿ) ಒಂದೇ ಒಂದು ಸೀಟು ಕೂಡಾ ಗೆಲ್ಲಲು ಸಾಧ್ಯವಿಲ್ಲದಂತೆ ಮಾಡುತ್ತೇನೆ’’ ಎಂದು ಸವಾಲು ಹಾಕಿದ್ದಾರೆ.

ಪ್ರಜೆಗಳು ಆರಿಸಿ ಕಳುಹಿಸಿದ ಸದನದಲ್ಲಿ ಇಂತಹದೊಂದು ಪ್ರಾತ್ಯಕ್ಷಿಕೆಯನ್ನು ನಡೆಸಿ, ಅಕ್ರಮದ ಕುರಿತಂತೆ ಜನರ ಗಮನಸೆಳೆದು, ಇವಿಎಂ ವಿರುದ್ಧ ನಿರ್ಣಯ ಮಂಡಿಸಿದ ಬಳಿಕವೂ, ಈ ಆರೋಪವನ್ನು ಚುನಾವಣಾ ಆಯೋಗ ಯಾಕೆ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ? ಕನಿಷ್ಠ ತನಿಖೆಯ ಭರವಸೆಯನ್ನಾದರೂ ಆಯುಕ್ತರು ನೀಡಬೇಕಾಗಿತ್ತು. ಬದಲಿಗೆ ಆಪ್ ಸರಕಾರದ ಸವಾಲಿಗೆ ಪ್ರತಿ ಸವಾಲನ್ನು ಹಾಕುವ ಮೂಲಕ ಒಂದು ರಾಜಕೀಯ ಸಂಘಟನೆಯ ನಾಯಕರಂತೆ ಆಯುಕ್ತರು ವರ್ತಿಸಿದ್ದಾರೆ. ಪ್ರಾತ್ಯಕ್ಷಿಕೆಗೆ ಬಳಸಿರುವ ಇವಿಎಂ ಮತಯಂತ್ರ ನಕಲಿ ಎನ್ನುವ ಚುನಾವಣಾ ಆಯೋಗ, ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದ ಮತಯಂತ್ರದ ಲೋಪಗಳಿಗೆ ಏನೆಂದು ಉತ್ತರಿಸುತ್ತಾರೆ? ಈಗಾಗಲೇ ಹಲವೆಡೆ ಲೋಪಗಳುಳ್ಳ, ತಿರುಚಬಹುದಾದ ಇವಿಎಂಗಳು ಪತ್ತೆಯಾಗಿವೆ. ನ್ಯಾಯಾಲಯವೇ ಈ ಬಗ್ಗೆ ಸೂಚನೆಗಳನ್ನು ನೀಡಿದೆ. ಇಷ್ಟಾದರೂ ಇವಿಎಂಯನ್ನು ಅಪ್ಪಿಕೊಳ್ಳುವುದರ ಅನಿವಾರ್ಯತೆ ಚುನಾವಣಾ ಆಯೋಗಕ್ಕೆ ಏನಿದೆ?

ಇವಿಎಂಗೆ ಸಂಬಂಧಿಸಿದಂತೆ ಆರೋಪಗಳು ಕೇಳಿ ಬಂದಿರುವುದು ಹೊಸತೇನಲ್ಲ ಎನ್ನುವುದನ್ನೂ ನಾವು ಗಮನಿಸಬೇಕು. ಈ ಹಿಂದೆ ಯುಪಿಎ ಸರಕಾರ ಚುನಾವಣೆಯಲ್ಲಿ ಆರಿಸಿ ಬಂದಾಗ, ಬಿಜೆಪಿಯ ನೇತಾರ ಎಲ್.ಕೆ.ಅಡ್ವಾಣಿ ಮತ್ತು ಬಿಜೆಪಿಯ ಅಂದಿನ ರಾಷ್ಟ್ರೀಯ ಅಧ್ಯಕ್ಷ ಗಡ್ಕರಿ ಅವರು ಮತಯಂತ್ರದ ವಿರುದ್ಧ ಭಾರೀ ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. ಹಾಗೆಯೇ ಇವಿಎಂ ವಿರುದ್ಧ ಅಂದು ಬಿಜೆಪಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಸುಪ್ರೀಂಕೋರ್ಟ್‌ನಲ್ಲಿ ಮೊಕದ್ದಮೆಯನ್ನೂ ಹೂಡಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ‘ವೋಟರ್ ವೆರಿಫೈಯಿಂಗ್ ಪೇಪರ್ ಆಡಿಟ್ ಟ್ರೇಲ್ (ವಿವಿಪಿಎಟಿ)’ನ್ನು ಅಳವಡಿಸಲು ಸೂಚನೆ ನೀಡಿತ್ತು. ನರೇಂದ್ರ ಮೋದಿಯನ್ನು ಪ್ರಧಾನಿಯಾಗಿಸಿದ ಮಹಾ ಚುನಾವಣೆಯ ಭಾರೀ ಫಲಿತಾಂಶ ಹಲವು ರಾಜಕೀಯ ವಿಶ್ಲೇಷಕರಿಗೆ ಆಘಾತ ತಂದಿತ್ತು. ಯಾಕೆಂದರೆ ಕೆಲವು ಕಳಪೆ ಅಭ್ಯರ್ಥಿಗಳೂ ಊಹಿಸದಷ್ಟು ಮತಗಳನ್ನು ಪಡೆದುಕೊಂಡು ಲೋಕಸಭೆಗೆ ಆಯ್ಕೆಯಾಗಿದ್ದರು. ಈ ಫಲಿತಾಂಶ ಅನುಮಾನಗಳನ್ನು ಹುಟ್ಟಿಸುವುದು ಸಹಜ. ಉತ್ತರ ಪ್ರದೇಶದ ಫಲಿತಾಂಶ ಇದರ ಮುಂದುವರಿಕೆಯಾಗಿದೆ.

ಕಾಂಗ್ರೆಸ್‌ನಲ್ಲಿ ವೀರಪ್ಪ ಮೊಯ್ಲಿಯೊಬ್ಬರನ್ನು ಹೊರತು ಪಡಿಸಿ ಎಲ್ಲರೂ ಇವಿಎಂ ವಿರುದ್ಧ ಮಾತನಾಡುತ್ತಿದ್ದಾರೆ. ವೀರಪ್ಪ ಮೊಯ್ಲಿಯವರು ಇವಿಎಂನ್ನು ಸಮರ್ಥಿಸುವ ಧಾಟಿ ಅತ್ಯಂತ ಹಗುರ ಭಾಷೆಯಲ್ಲಿದೆ ‘‘ಅತ್ಯಾಧುನಿಕ ತಂತ್ರಜ್ಞಾನದ ಈ ದಿನಗಳಲ್ಲಿ ನಾವು ತಂತ್ರಜ್ಞಾನವನ್ನು ಬಳಸುವುದರಲ್ಲಿ ಹಿಂಜರಿದರೆ ಹೇಗೆ?’’ ಎಂದು ಅವರು ಕೇಳುತ್ತಿದ್ದಾರೆ. ಸ್ಮಾರ್ಟ್‌ಫೋನ್ ಸೇರಿದಂತೆ ಈ ದೇಶದ ಎಲ್ಲ ಡಿಜಿಟಲ್ ತಂತ್ರಜ್ಞಾನಗಳೂ ಸೋರಿಕೆಯಾಗುತ್ತಿರುವುದು ದಿನಾ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿವೆ. ತಂತ್ರಜ್ಞಾನದಲ್ಲಿ ಭಾರತಕ್ಕಿಂತಲೂ ಹೆಚ್ಚು ಮುಂದುವರಿದಿರುವ ದೇಶಗಳೂ ಮತಪತ್ರವನ್ನು ಬಳಕೆ ಮಾಡುತ್ತಿವೆ. ಮತಯಂತ್ರಗಳನ್ನು ಅಳವಡಿಸಿರುವ ಹಲವು ದೇಶಗಳು ಅವುಗಳನ್ನು ಕಸದ ಬುಟ್ಟಿಗೆ ಹಾಕಿ ಮತಪತ್ರಗಳಿಗೆ ಮರಳಿವೆ.

ಮತಯಂತ್ರಗಳ ಮೂಲಕವೇ ಎರಡು ಬಾರಿ ಭರ್ಜರಿ ಗೆಲುವನ್ನು ತನ್ನದಾಗಿಸಿಕೊಂಡಿರುವ, ಕಾರ್ಪೊರೇಟ್ ಶಕ್ತಿಗಳಿಗೆ ಭಾರೀ ಹತ್ತಿರವಿರುವ ವೀರಪ್ಪಮೊಯ್ಲಿಗೆ ಮತಯಂತ್ರದ ಮೇಲೆ ಮೋಹವಿರುವುದು ಸಹಜವೇ ಆಗಿದೆ. ಅಭಿವೃದ್ಧಿ ಕಾರ್ಯಗಳಿಗೆ ತಂತ್ರಜ್ಞಾನವನ್ನು ಮೊರೆಹೋಗುವುದಕ್ಕೂ, ಮತದಾನಕ್ಕೆ ಇವಿಎಂ ಮತ ಯಂತ್ರ ಬಳಕೆಗೂ ವ್ಯತ್ಯಾಸವಿದೆ. ಇಂದು ಕಂಪ್ಯೂಟರ್‌ನಲ್ಲಿರುವ ಎಂತೆಂತಹ ರಹಸ್ಯಗಳನ್ನು ವಿದೇಶಿ ಶಕ್ತಿಗಳು ಹ್ಯಾಕ್ ಮಾಡಿರುವಾಗ, ಅಂತಹ ಅಪಾಯಗಳನ್ನು ಗೊತ್ತಿದ್ದೂ ಮೈಮೇಲೆ ಎಳೆದುಕೊಳ್ಳುವುದು ಎಷ್ಟು ಸರಿ? ಈ ದೇಶದ ಪ್ರಜಾಸತ್ತಾತ್ಮಕ ವೌಲ್ಯಗಳೇ ಕುಸಿದು ಹೋದರೆ, ಉಳಿದೆಲ್ಲ ಅಭಿವೃದ್ಧಿಗಳಿಗೆ ಯಾವ ಅರ್ಥವೂ ಇಲ್ಲ. ಆದುದರಿಂದ, ಪ್ರಜಾಸತ್ತೆ ಒಂದು ಪ್ರಹಸನವಾಗಿ ಉಳಿಯದೆ, ಅದು ವಾಸ್ತವದಲ್ಲಿ ತನ್ನ ಶಕ್ತಿಯನ್ನು ಪ್ರದರ್ಶಿಸಬೇಕಾದರೆ ಇವಿಎಂ ಕಸದ ಬುಟ್ಟಿ ಸೇರಲೇಬೇಕು. ದೇಶ ಮತ ಪತ್ರಕ್ಕೆ ಮರಳಲೇ ಬೇಕು. ಆ ಮೂಲಕ ತಂತ್ರಜ್ಞಾನದ ಮೂಲಕ ಹೈಜಾಕ್ ಆಗಿರುವ ಪ್ರಜಾಸತ್ತೆಯನ್ನು ಜನರಿಗೆ ಮುಕ್ತಗೊಳಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News