ಅಪ್ರತಿಮ ಸಾಧಕ ಬಿಲ್ ಗೇಟ್ಸ್ ಈಗ ನಿಮ್ಮ ಸ್ಥಾನದಲ್ಲಿದ್ದಿದ್ದರೆ ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದರು ಗೊತ್ತೇ ?

Update: 2017-05-17 16:46 GMT

# ಬಿಲ್ ಗೇಟ್ಸ್ ಪ್ರಕಾರ  ಸಾಧನೆ ಎಂದರೇನು ? 

# ಪ್ರತಿಯೊಬ್ಬ ಯುವಜನತೆಗೆ ಅವರು ನೀಡುವ ಉಡುಗೊರೆ ಏನು ? 

ವಿದ್ಯಾರ್ಥಿಗಳು ಹತ್ತನೇ ತರಗತಿ / ಪಿಯುಸಿ ( ಹನ್ನೆರಡನೇ ತರಗತಿ) ಅಥವಾ ಪದವಿ ಇತ್ಯಾದಿ ಮುಗಿಸಿ ಜೀವನದ ಮಹತ್ವದ ಘಟ್ಟದಲ್ಲಿರುವ ಸಮಯ ಇದು. ಮುಂದೆ ಏನು ಮಾಡಬೇಕು ? ಯಾವ ಕ್ಷೇತ್ರ ಆಯ್ದುಕೊಳ್ಳಬೇಕು ? ಯಾವ ಕಾಲೇಜಿಗೆ ಸೇರಬೇಕು ? ಎಲ್ಲಿ ಅವಕಾಶಗಳು ಹೆಚ್ಚಿವೆ ? ಇತ್ಯಾದಿ ಇತ್ಯಾದಿ ಪ್ರಶ್ನೆಗಳ ನಡುವೆ ಇಂದು ನಮ್ಮ ಯುವಜನತೆ ನಿಂತಿದ್ದಾರೆ. ಏನು ಮಾಡಬೇಕು ಎಂಬಷ್ಟೇ ಮುಖ್ಯ ಏನು ಮಾಡಬಾರದು ಎಂಬುದು. ಹೀಗಿರುವಾಗ ನಮಗೆ ಸೂಕ್ತ ಮಾರ್ಗದರ್ಶನ , ಸಲಹೆ ಸೂಚನೆ ಸಿಕ್ಕಿದರೆ ಎಷ್ಟು ಚೆನ್ನಾಗಿರುತ್ತದೆ ? 

ಅದೂ ವಿಶ್ವ ವಿಖ್ಯಾತ ಸಾಧಕ , ಪ್ರತಿಷ್ಠಿತ ಮೈಕ್ರೋಸಾಫ್ಟ್ ಸಹಸ್ಥಾಪಕ ಬಿಲ್ ಗೇಟ್ಸ್  ಮಾರ್ಗದರ್ಶನ ನೀಡಿದರೆ  ಯಾರಿಗೆ ಬೇಡ ? ಈ ಮಹತ್ವದ ಸಂದರ್ಭದಲ್ಲೇ ಸರಣಿ ಟ್ವೀಟ್ ಗಳ ಮೂಲಕ ವಿದ್ಯಾರ್ಥಿಗಳಿಗೆ ಅದರಲ್ಲೂ ವಿಶೇಷವಾಗಿ ಪದವೀಧರರಿಗೆ ವೃತ್ತಿ ಕ್ಷೇತ್ರ ಆಯ್ಕೆ ಕುರಿತು ಉಪಯುಕ್ತ ಮಾಹಿತಿ ನೀಡಿದ್ದಾರೆ. 

ಲಘು ಹಾಸ್ಯದೊಂದಿಗೆ ತಮ್ಮ ವೃತ್ತಿ ಮಾರ್ಗದರ್ಶನ ಟ್ವೀಟ್ ಸರಣಿ ಆರಂಭಿಸಿರುವ ಬಿಲ್ ಗೇಟ್ಸ್ ಈ ಸಂದರ್ಭದಲ್ಲೇ ತಾವು ತಮ್ಮ ವೃತ್ತಿ ಕ್ಷೇತ್ರ ಆಯ್ಕೆ ಮಾಡುವುದಿದ್ದರೆ ಯಾವುದನ್ನು ಆಯ್ಕೆ ಮಾಡುತ್ತಿದ್ದರು ಎಂದು ಹೇಳಿದ್ದಾರೆ. 

ತಾನು ಈಗ ಆಯ್ಕೆ ಮಾಡುವ ಸಂದರ್ಭ ಇದ್ದಿದ್ದರೆ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ( ಕೃತಕ ಬುದ್ಧಿವಂತಿಕೆ - ರೋಬೋಟ್ ತಂತ್ರಜ್ಞಾನ ಇತ್ಯಾದಿ ), ಬಯೋ ಸೈನ್ಸ್ ( ಜೈವಿಕ ವಿಜ್ಞಾನ) ಹಾಗು ಇಂಧನ - ಈ ಮೂರು ಕ್ಷೇತ್ರಗಳಲ್ಲಿ ಉಜ್ವಲ ಅವಕಾಶಗಳಿರುವ ಈ ಕ್ಷೇತ್ರಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೆ ಎಂದು ಬಿಲ್ ಹೇಳಿದ್ದಾರೆ. 

ಜಗತ್ತಿನಲ್ಲೇ ಅತ್ಯಂತ ಶ್ರೀಮಂತ , ಅತ್ಯಂತ ಪ್ರತಿಷ್ಠಿತ ಕಂಪೆನಿ ಸ್ಥಾಪಿಸಿ, ಬೆಳೆಸಿದ ಕೀರ್ತಿಗೆ ಪಾತ್ರರಾದ ಬಿಲ್ ಗೇಟ್ಸ್ ಗೂ ಜೀವನದಲ್ಲಿ ಏನಾದರೂ ವಿಷಾದವಿದೆಯೇ ? ಹೌದು , ಇದೆ ! 

" ನಾನು ಶಾಲೆ ಬಿಟ್ಟಾಗ ನನಗೆ ಲೋಕದಲ್ಲಿರುವ ಅತ್ಯಂತ ಕೆಟ್ಟ ಅಸಮಾನತೆಗಳ ಕುರಿತು ಗೊತ್ತೇ ಇರಲಿಲ್ಲ . ಅದನ್ನು ತಿಳಿಯಬೇಕಾದರೆ ದಶಕಗಳೇ  ಬೇಕಾಯಿತು.  ನಮ್ಮ ಬುದ್ಧಿವಂತಿಕೆಯ ಮಿತಿ ಆಗ ನನಗೆ ಗೊತ್ತಾಯಿತು. ಅದರ ಬಗ್ಗೆ ನನಗೆ ವಿಷಾದವಿದೆ. ಆದರೆ ಯಾವುದಕ್ಕೂ ಹೆಚ್ಚು ತಡವಾಗಿಲ್ಲ. ನಾನು ನಿಮ್ಮ ವಯಸ್ಸಲ್ಲಿ ಏನು ತಿಳಿದಿದ್ದೇನೋ ಅದಕ್ಕಿಂತ ಬಹಳ ಹೆಚ್ಚು ನೀವು ಈಗಲೇ ತಿಳಿದಿದ್ದೀರಿ. ಅಸಮಾನತೆ ಎಲ್ಲಿ ಕಂಡರೂ ಅದನ್ನು ನೀವು ಪ್ರತಿಭಟಿಸಿ , ವಿರೋಧಿಸಿ " ಎಂದು ಅವರು ಯುವಜನರಿಗೆ ಕರೆ ಕೊಟ್ಟಿದ್ದಾರೆ. 

ಕೇವಲ ಹಣ ಸಂಪಾದನೆ ಮಾತ್ರ ಜೀವನದ ಉದ್ದೇಶ ಎಂದು ತಿಳಿದುಕೊಂಡವರಿಗೆ ಬಿಲ್ ಗೇಟ್ಸ್  ಅತ್ಯುತ್ತಮ ಸಲಹೆಗಳನ್ನು ನೀಡಿದ್ದಾರೆ. " ನಿಮ್ಮಿಂದ ಅತ್ಯುತ್ತಮ ಫಲಿತಾಂಶ ಪಡೆಯಬಲ್ಲವರ ಜೊತೆಗಿರಿ. ನನಗೆ ಈ ರೀತಿ ಮಾಡಲು ನನ್ನ ಪತ್ನಿ ಮೆಲಿಂಡಾ ಸ್ಫೂರ್ತಿ. ನೀವೂ ಖುಷಿಯಾಗಿರಿ. ನಿಮ್ಮ ಸುತ್ತಮುತ್ತ ಇರುವವರನ್ನು ಖುಷಿಯಾಗಿಡಿ " ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ . 

" ನನ್ನ ಸುತ್ತಲಿರುವವರು ಖುಷಿಯಾಗಿದ್ದರೆ , ನನ್ನನ್ನು ಪ್ರೀತಿಸುತ್ತಿದ್ದರೆ ಅದುವೇ ನನ್ನ ಪಾಲಿಗೆ ಸಂತಸದ ಮಾನದಂಡ.  ನಾನು ಪ್ರತಿಯೊಂದು ಯುವಜನರಿಗೆ ಒಂದು ಉಡುಗೊರೆ ನೀಡುವುದಾದರೆ ಸ್ಟೀವ್ ಪಿಂಕರ್ ಬರೆದ ದಿ ಬೆಟರ್ ಏಂಜಲ್ಸ್ ಆಫ್ ಅವರ್ ನೇಚರ್ ಪುಸ್ತಕವನ್ನು ನೀಡುತ್ತಿದ್ದೆ. ಇದು ನಾನು ಈವರೆಗೆ ಓದಿರುವ ಅತ್ಯಂತ ಸ್ಪೂರ್ತಿದಾಯಕ ಪುಸ್ತಕ " ಎಂದು ಬಿಲ್ ಗೇಟ್ಸ್ ಶಿಫಾರಸು ಮಾಡಿದ್ದಾರೆ. 

ಬಿಲ್ ಗೇಟ್ಸ್ ಪ್ರಕಾರ " ಇದು ನಾವು ಬದುಕಿರಬಹುದಾದ ಅತ್ಯುತ್ತಮ ಸಮಯ. ಅದರರ್ಥ ಸಮಸ್ಯೆಗಳು ಇಲ್ಲಿ ಇಲ್ಲವೆಂದಲ್ಲ . ಆದರೆ ಅವುಗಳನ್ನು ಪರಿಹರಿಸಲು ಸಾಧ್ಯ ಎಂಬ ಭರವಸೆ ನಮ್ಮಲ್ಲಿದೆ " . 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News