ಆದಿವಾಸಿಗಳಿಗೆ ಲೈಂಗಿಕ ಕಿರುಕುಳ ಬಹಿರಂಗಪಡಿಸಿದ ಜೈಲರ್‌ಗೆ ಅಮಾನತು ಶಿಕ್ಷೆ!

Update: 2017-05-18 05:08 GMT

‘‘ಹದಿನಾಲ್ಕರಿಂದ ಹದಿನಾರು ವರ್ಷದ ಬಾಲಕಿಯರನ್ನು ಪೊಲೀಸ್ ಠಾಣೆಗಳಲ್ಲಿ ನಗ್ನವಾಗಿಸಿ ಚಿತ್ರಹಿಂಸೆ ನೀಡುವುದನ್ನು ನಾನು ನೋಡಿದ್ದೇನೆ. ಅವರ ಕೈ ಹಾಗೂ ಸ್ತನಗಳಿಗೆ ವಿದ್ಯುತ್ ಶಾಕ್ ನೀಡಲಾಗುತ್ತಿದ್ದು, ಅಂಥ ಗಾಯದ ಗುರುತುಗಳನ್ನು ಕಂಡಿದ್ದೇನೆ. ಅದು ನನ್ನಲ್ಲಿ ಕ್ರೋಧ ಉಕ್ಕಿಸಿತು. ಅಪ್ರಾಪ್ತ ವಯಸ್ಸಿನವರಿಗೆ ಇಂಥ ಚಿತ್ರಹಿಂಸೆ ಏಕೆ ನೀಡಬೇಕು?’’

ವರ್ಷಾ ಡೋಂಗ್ರೆ ಎಪ್ರಿಲ್ 26ರಂದು ಮಾಡಿದ ಫೇಸ್‌ಬುಕ್ ಪೋಸ್ಟ್‌ನಲ್ಲಿ, ನಕ್ಸಲ್ ಕಾರ್ಯಚಟುವಟಿಕೆಯ ತಾಣವಾದ ಛತ್ತೀಸ್‌ಗಡದಲ್ಲಿ ಆಗುತ್ತಿರುವ ಮಾನವ ಹಕ್ಕು ಉಲ್ಲಂಘನೆಗಳ ಬಗ್ಗೆ ಇಲಾಖೆಯಲ್ಲಿದ್ದುಕೊಂಡೇ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹೇಯ ಕೃತ್ಯವನ್ನು ಬಹಿರಂಗಗೊಳಿಸಿದ ಕ್ರಮ ಸಹಜವಾಗಿಯೇ ಸರಕಾರಕ್ಕೆ ಮುಜು ಗರ ತಂದಿತು. ಆದ್ದರಿಂದ ರಾಯಪುರ ಜೈಲಿನಲ್ಲಿ ಕರ್ತವ್ಯದಲ್ಲಿದ್ದ 35 ವರ್ಷ ವಯಸ್ಸಿನ ಈ ಡಿವೈಎಸ್ಪಿಅಮಾನತುಗೊಂಡರು. ಬಳಿಕ ಅವರನ್ನು 350 ಕಿಲೋಮೀಟರ್ ದೂರದ ಅಂಬಿಕಾಪುರ ಜೈಲಿಗೆ ತಗುಲುಹಾಕಲಾಯಿತು.

ಛತ್ತೀಸ್‌ಗಡ ಪೊಲೀಸ್ ಇಲಾಖೆಯ ಆದೇಶದಂತೆ ತನಿಖೆ ನಡೆಯುತ್ತಿದ್ದು, ಈಗಾಗಲೇ ಡೋಂಗ್ರೆ ಕೇಂದ್ರ ನಾಗರಿಕ ಸೇವಾ (ನಡವಳಿಕೆ) ನಿಯಮಾವಳಿ- 1964 ಉಲ್ಲಂಘಿಸಿದ ಬಗ್ಗೆ ಪುರಾವೆಗಳು ಸಿಕ್ಕಿವೆ ಎಂದು ಕಾರಾಗೃಹಗಳ ಮಹಾನಿರ್ದೇಶಕ ಗಢಾರಿ ನಾಯಕ್ ವಿವರಿಸಿದ್ದಾರೆ.

‘‘ಈಕೆ ಸರಕಾರಿ ಉದ್ಯೋಗಿ. ಹವ್ಯಾಸಿ ಬರಹಗಾರರಲ್ಲ; ಸರಕಾರಿ ಉದ್ಯೋಗಿಗಳು ನೀತಿಸಂಹಿತೆ ಪಾಲಿಸಬೇಕಾಗುತ್ತದೆ. ತಾನು ಬೇಕಾದ್ದನ್ನು ಬರೆಯಲು ಸರಕಾರಿ ನೌಕರರಿಗೆ ಫೇಸ್‌ಬುಕ್ ಮಾಧ್ಯಮವಲ್ಲ’’ ಎನ್ನುವುದು ಅವರ ಅಭಿಮತ.

ಕಾರಾಗೃಹಗಳ ಉಪ ಮಹಾನಿರ್ದೇಶಕ ಕೆ.ಕೆ.ಗುಪ್ತಾ ಈ ಅಮಾನತು ಆದೇಶ ಹೊರಡಿಸಿದ್ದು, ಡೋಂಗ್ರೆ ವಿರುದ್ಧ ಕ್ರಮಕ್ಕೆ ಎರಡು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ತಪ್ಪುಮಾಹಿತಿ ನೀಡುವಂಥ ಬೇಜವಾಬ್ದಾರಿಯುತ ಹೇಳಿಕೆ ನೀಡಿರುವುದು ಹಾಗೂ ಅನುಮತಿ ಇಲ್ಲದೇ ಕರ್ತವ್ಯದಿಂದ ಹೊರಗಿದ್ದದ್ದು ಮುಖ್ಯ ಕಾರಣಗಳು.

‘‘ಆದರೆ ನನಗೆ ಈವರೆಗೆ ಯಾವುದೇ ಆರೋಪಪಟ್ಟಿ ಬಂದಿಲ್ಲ’’ ಎಂದು ಡೋಂಗ್ರೆ ಹೇಳುತ್ತಾರೆ. ಅದರ ಬದಲಾಗಿ ‘‘ನಾನು ಪ್ರತಿಕ್ರಿಯೆ ವ್ಯಕ್ತಪಡಿಸಿದ ಮರುದಿನವೇ ಅಮಾನತು ಆದೇಶ ಹೊರಡಿಸಿದ್ದು, ಇದು ನ್ಯಾಯಸಮ್ಮತವಲ್ಲ’’ ಎಂದು ಡೋಂಗ್ರೆ ಹೇಳುತ್ತಾರೆ.

ಸಾಮಾಜಿಕ ಹೋರಾಟಗಾರ ಹಿಮಾಂಶು ಕುಮಾರ್ ಅವರು ಡೋಂಗ್ರೆಯವರ ಪೋಸ್ಟ್ ಅನ್ನು ಯಾಕೆ ಶೇರ್ ಮಾಡಿದ್ದಾರೆ ಎಂದು ತನಿಖಾಧಿಕಾರಿ ಆರ್.ಆರ್.ರಾಯ್ ಪ್ರಶ್ನಿಸಿದ 32 ಪುಟಗಳ ಪತ್ರಕ್ಕೆ ಡೋಂಗ್ರೆ ಉತ್ತರಿಸಿದ್ದಾರೆ. ಎಪ್ರಿಲ್‌ನಲ್ಲಿ ಡೋಂಗ್ರೆ ಪೋಸ್ಟ್ ಮಾಡಿರುವ ಸರಣಿ ಚಿತ್ರಗಳು ಮತ್ತು ವಿವರಣೆಗಳ ಬಗ್ಗೆಯೂ ಸ್ಪಷ್ಟನೆ ಕೇಳಲಾಗಿದೆ.

ಸಾರ್ವಜನಿಕ ಸೇವಕರು ಸಮಾಜ ಮಾಧ್ಯಮವನ್ನು ಬಳಸಿಕೊಳ್ಳುವ ಸಂಬಂಧ ಸರಕಾರ ಹೊರಡಿಸಿರುವ ಸಾಮಾನ್ಯ ಆಡಳಿತ ಇಲಾಖೆಯ ನಿಯಮಾವಳಿಗಳನ್ನು ಡೋಂಗ್ರೆ ಉಲ್ಲಂಘಿಸಿದ್ದಾರೆಯೇ ಎಂದು ಪತ್ತೆ ಮಾಡುವಂತೆ ರಾಯ್ ಅವರಿಗೆ ಕಾರ್ಯಸೂಚಿ ನೀಡಲಾಗಿದೆ.

‘‘ನನ್ನ ಪೋಸ್ಟ್‌ನ ಹೊಣೆ ನಾನು ಹೊರುತ್ತೇನೆ. ಆದ್ದರಿಂದ ಆ ಬಗ್ಗೆ ಪ್ರತಿಕ್ರಿಯೆ ನೀಡುವುದು ನನ್ನ ಹೊಣೆಗಾರಿಕೆ. ಆದರೆ ಸ್ನೇಹಿತರ ಅಭಿಪ್ರಾಯಗಳ ಹೊಣೆ ನನ್ನದಲ್ಲ’’ ಎಂದು ಮೇ 5ರಂದು ಡೋಂಗ್ರೆ ಸ್ಪಷ್ಟಪಡಿಸಿದ್ದಾರೆ.

‘‘ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅನುಗುಣವಾಗಿ ಅಭಿವ್ಯಕ್ತ ಪಡಿಸಿರುವ ಹೇಳಿಕೆಗೆ ನಾನು ಹೊಣೆಗಾರಳು. ಸರಕಾರದ ರಹಸ್ಯಗಳ ಜತೆ ಯಾವ ರಾಜಿಯನ್ನೂ ಮಾಡಿಕೊಂಡಿಲ್ಲ ಅಥವಾ ಇಲಾಖೆಯ ಮಾಹಿತಿ ಅಥವಾ ದಾಖಲೆಗಳನ್ನು ಸೋರಿಕೆ ಮಾಡಿಲ್ಲ ಎನ್ನುವುದು ಅವರ ಸಮರ್ಥನೆ. ಸಾರ್ವಜನಿಕ ಸೇವಕರ ಹೊಣೆಗಾರಿಕೆ ಕೇವಲ ನಾಗರಿಕ ಸೌಲಭ್ಯಗಳನ್ನು ಕಲ್ಪಿಸುವುದಷ್ಟೇ ಅಲ್ಲ; ಜನರ ಸಾಂವಿಧಾನಿಕ ಹಕ್ಕುಗಳನ್ನು ಖಾತ್ರಿಪಡಿಸುವುದು ಕೂಡಾ ಆಗಿದೆ

ಮಗುಚಿದ ದಾಖಲೆ
ಬಡವರ ಹಾಗೂ ದುರ್ಬಲರ ಹಕ್ಕನ್ನು ಖಾತ್ರಿಪಡಿಸುವುದು ಕಡ್ಡಾಯವಾಗಿರುವುದರಿಂದ ಅವರು ಈ ಹೇಳಿಕೆ ನೀಡಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯ ನಮ್ಮ ಸಂವಿಧಾನ ಎಲ್ಲರಿಗೆ ನೀಡಿದ ಹಕ್ಕು. ನಾವು ನಾಗರಿಕ ಸೇವಕರಾದ ಬಳಿಕ ನಮಗೆ ಅದನ್ನು ನಿರಾಕರಿಸಲಾಗದು. ನಾವು ಸ್ವತಂತ್ರ ಪ್ರಜೆಗಳೂ ಆಗಿದ್ದು, ಸಾರ್ವಜನಿಕರ ವಿರುದ್ಧ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡುವುದು ನಮ್ಮ ಹಕ್ಕು.

ಆದರೆ ಈ ಹಾದಿಯಲ್ಲಿ ಮುನ್ನಡೆಯುವುದು ಸುಲಭವಲ್ಲ ಎನ್ನುವುದು ಆಕೆಗೆ ಸ್ಪಷ್ಟವಿದೆ. ಅವರ ಸಮರ ಎರಡು ವಿಷಯಗಳ ಮೇಲೆ ಅವಲಂಬಿತವಾಗಿದೆ. ‘‘ಒಂದು ಭಾರತ ಸಂವಿಧಾನದ 244ನೆ ವಿಧಿ. ಇದು ಆದಿವಾಸಿಗಳಿಗೆ ನೀರು, ಅರಣ್ಯ ಹಾಗೂ ಭೂಮಿಯ ಹಕ್ಕಿನ ಬಗ್ಗೆ ವಿವರಿಸುತ್ತದೆ. ಆದಿವಾಸಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಕಾರ್ಪೊರೇಟ್ ವರ್ಗದ ಲಾಭಕೋರ ದಂಧೆಯ ಪರಿಣಾಮ. ಎರಡನೆಯದಾಗಿ ನಾಗರಿಕ ಸೇವಕ ಸರಕಾರ ಹಾಗೂ ಸಮಾಜಕ್ಕೆ ಹೊಣೆಗಾರನಾಗಿರುತ್ತಾನೆ.

ಆದ್ದರಿಂದ ಅಸಾಂವಿಧಾನಿಕ ಪದ್ಧತಿಗಳನ್ನು ಬೆಳಕಿಗೆ ತರುವುದು ನಮ್ಮ ಕರ್ತವ್ಯ. ಈ ಮೂಲಕ ಅದನ್ನು ತಕ್ಷಣ ಪ್ರತಿಫಲಿಸುವಂತೆ ಮಾಡಬೇಕಾಗುತ್ತದೆ. ರಾಯಪುರ ಹಾಗೂ ಜಗದಾಳಪುರ ಜೈಲಿನಲ್ಲಿ ಕಿರುಕುಳ ನೀಡುವ ಹಲವು ನಿದರ್ಶನ ನೀಡಿದ್ದೇನೆ’’ ಎಂದು ಡೋಂಗ್ರೆ ಹೇಳಿದ್ದಾರೆ. ಇದೀಗ ಅಮಾನತುಗೊಂಡು ಮತ್ತೆ ಕರ್ತವ್ಯಕ್ಕೆ ಸಜ್ಜಾಗಿದ್ದಾರೆ.

2008ರಿಂದ 2010ರವರೆಗೆ ಡೋಂಗ್ರೆ ಸಹಾಯಕ ಜೈಲರ್ ಆಗಿದ್ದ ಅವಧಿಯಲ್ಲಿ, ಪೊಲೀಸರು ನೀಡುತ್ತಿರುವ ಚಿತ್ರಹಿಂಸೆಯನ್ನು ನೋಡಿದ್ದನ್ನು ಎಪ್ರಿಲ್ 26ರ ಪೋಸ್ಟ್‌ನಲ್ಲಿ ನೆನೆಸಿಕೊಂಡಿದ್ದಾರೆ. 14 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ನಾಲ್ವರು ಆದಿವಾಸಿ ಮಹಿಳೆಯರು ಮೂಲೆಯಲ್ಲಿ ಕೂತಿದ್ದನ್ನು ನೋಡಿದೆ. ಯಾಕಾಗಿ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಕೊಳ್ಳಲು ಅವರ ಬಳಿ ಬಂದೆ. ಆದರೆ ಬಾಲಕಿಯರು ಮಾತನಾಡಲು ಮುಂದಾಗಲಿಲ್ಲ. ಆಗ ಡೋಂಗ್ರೆ ಪರ ಕೈದಿಗಳು, ಮಾತನಾಡುವಂತೆ ಬಾಲಕಿಯರಿಗೆ ಧೈರ್ಯ ತುಂಬಿದರು. ಪೊಲೀಸ್ ಠಾಣೆಯಲ್ಲಿ ಅವರಿಗೆ ವಿದ್ಯುತ್ ಶಾಕ್ ನೀಡಲಾಗಿತ್ತು. ಅವರ ಮೈಮೇಲೆ 10ಕ್ಕೂ ಹೆಚ್ಚು ಸುಟ್ಟ ಗಾಯಗಳಿದ್ದವು. ಅವರ ಸ್ತನಗಳ ಸುತ್ತಲೂ ಎಂಟು-ಹತ್ತು ಕಪ್ಪುಕಲೆಗಳಿದ್ದವು. ಆ ಬಳಿಕ ಬಾಲಕಿಯರು ಬಾಯಿ ಬಿಟ್ಟರು’’ ಎಂದು ಡೋಂಗ್ರೆ ನೆನಪಿಸಿಕೊಂಡಿದ್ದಾರೆ.

ಇದನ್ನು ಅವರು ಯಾರ ಗಮನಕ್ಕಾದರೂ ತಂದಿದ್ದಾರೆಯೇ? 
ದುರದೃಷ್ಟವಶಾತ್ ಹಿಂದೆ ಜೈಲಿಗೆ ಕೈದಿಗಳನ್ನು ಸೇರಿಸುವ ಅವಧಿಯಲ್ಲಿ ಕೈದಿಗಳ ವೈದ್ಯಕೀಯ ದಾಖಲೆಗಳನ್ನು ನಿರ್ವಹಿಸುವ ಪದ್ಧತಿ ಇರಲಿಲ್ಲ. ಅದರೆ 2010ರಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಕೈದಿಗಳ ಆರೋಗ್ಯ ದಾಖಲೆಗಳನ್ನು ನಿರ್ವಹಿಸುವುದು ಕಡ್ಡಾಯವಾಗಿದೆ. ‘‘ಆ ದಿನ ಬಾಲಕಿಯರು ತಮ್ಮ ಅಳಲು ತೋಡಿಕೊಂಡ ನಂತರ ಜೈಲಿನ ವೈದ್ಯರಿಗೂ ಈ ಕಲೆ ತೋರಿಸಿದರು. ಆಗ ನನಗೂ ಆಘಾತವಾ ಯಿತು. ಬಾಲಕಿಯರ ಪರವಾಗಿ ಈ ಪ್ರಕರಣಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ಸಹಕರಿಸುವಂತೆ ವೈದ್ಯರಿಗೆ ಸೂಚಿಸಿದೆ. ಈ ಬಾಲಕಿಯರನ್ನು ನಕ್ಸಲ್ ಪ್ರಕರಣದಡಿ ಬಂಧಿಸಲಾಗಿತ್ತು.

ನಿಖರವಾದ ದಿನಾಂಕ ಡೋಂಗ್ರೆಗೆ ನೆನಪಿಲ್ಲ. ಆದರೆ ಆ ಬಳಿಕ ಕೆಲ ದಿನಗಳ ರಜೆಯಲ್ಲಿ ಹೋದದ್ದು ನೆನಪಿದೆ. ರಜೆ ಮುಗಿಸಿ ಬಂದಾಗ, ಬಾಲಕಿಯರು ಜಾಮೀನಿನ ಮೇರೆಗೆ ಬಿಡುಗಡೆಯಾಗಿರುವುದು ತಿಳಿಯಿತು. ಪ್ರಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ಅವರೂ ಈ ಪ್ರಕರಣ ಮರೆತುಬಿಟ್ಟರು. ಆದರೆ ಈ ಘಟನೆ ಅವರ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರಿತು. ಇಂದು ನಕ್ಸಲ್ ಪ್ರದೇಶದಲ್ಲಿ ಮತ್ತು ಆದಿವಾಸಿ ಪ್ರದೇಶಗಳಲ್ಲಿ ಪೊಲೀಸರು ಹಾಗೂ ಭದ್ರತಾ ಪಡೆಗಳು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಬೇಕು ಎಂಬ ಸಲಹೆಗಳು ಸರಕಾರಕ್ಕೆ ಬರುತ್ತಿದ್ದು, ಆ ಭಾಗದಲ್ಲಿ ವಾಸಿಸುವ ಮುಗ್ಧ ಜನರು ಹೇಗೆ ಬದುಕುತ್ತಾರೆ ಎಂಬ ಭೀತಿ ಎದುರಾಗಿದೆ.

ಎಪ್ರಿಲ್ 26ರಂದು ಡೋಂಗ್ರೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು, ಇದು ಹೊಸದೂ ಅಲ್ಲ ಅಥವಾ ಸರಕಾರದ ರಹಸ್ಯಗಳನ್ನು ಬಹಿರಂಗಪಡಿಸುವಂಥದ್ದೂ ಅಲ್ಲ. 2011ರಲ್ಲಿ ಸುಪ್ರೀಂಕೋರ್ಟ್‌ಗೆ ನೀಡಿದ ಆದೇಶದಂತೆ, ತಡ್‌ಮಿಟ್ಲಾ ಅರಾಜಕತೆ ಹಾಗೂ ಲೂಟಿ ಪ್ರಕರಣದಲ್ಲಿ ಸರಕಾರ ಕ್ರಮಕ್ಕೆ ಮುಂದಾಯಿತು. ಜಗದಾಳಪುರ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಅಂಶಗಳು ಬಸ್ತರ್‌ನ ಸ್ಥಿತಿಗತಿಗೆ ಕನ್ನಡಿ ಹಿಡಿಯುತ್ತಾರೆ. ಜಗದಾಳಪುರ ಹಾಗೂ ಬಸ್ತರ್‌ನ ನೈಜ ಸನ್ನಿವೇಶ ತಿಳಿಯುತ್ತದೆ.

ಹಾಗಾದರೆ ಆಕೆಯ ಮೇಲೆ ಕಾನೂನು ಕ್ರಮ ಏಕೆ?
‘‘ಸರಕಾರಕ್ಕೆ ನನ್ನ ಬಗ್ಗೆ ಅಸಾಧ್ಯ ಸಿಟ್ಟು ಬಂತು. ಯುಪಿಎಸ್ಸಿ ಅವ್ಯವಹಾರದ ಬಗ್ಗೆ ನಾನು ನೀಡಿದ ದೂರಿನ ಸಂಬಂಧ 2016ರ ಆಗಸ್ಟ್ 26ರಂದು ಹೈಕೋರ್ಟ್ ನೀಡಿದ ತೀರ್ಪಿನಲ್ಲಿ ಸರಕಾರದ ಭ್ರಷ್ಟ ಮುಖವನ್ನು ಟೀಕಿಸಲಾಯಿತು’’

2016ರಲ್ಲಿ ಈ ಪ್ರಕರಣ ದಾಖಲಿಸಲಾಯಿತು. 2003ರಲ್ಲಿ 147 ನಾಗರಿಕ ಸೇವಾ ಹುದ್ದೆಗಳನ್ನು ನೇಮಕ ಮಾಡಿಕೊಳ್ಳುವ ಸಂಬಂಧ ನಡೆದ ದೊಡ್ಡ ಅವ್ಯವಹಾರದ ಬಗ್ಗೆ ನಾನು ದೂರು ನೀಡಿದ್ದೆ.

ದೂರು ನೀಡಿದ ಬಳಿಕ ಡೋಂಗ್ರೆ 2006ರ ಜೂನ್ 19ರಂದು ಅಂದಿನ ಮುಖ್ಯಮಂತ್ರಿ ರಮಣ್ ಸಿಂಗ್ ಅವರನ್ನೂ ಭೇಟಿ ಮಾಡಿದ್ದರು. ಇದಕ್ಕೆ ಪೂರಕವಾಗಿ, ಮಾಹಿತಿಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಗಳ ಹಿನ್ನೆಲೆಯಲ್ಲಿ ನನಗೆ ನ್ಯಾಯ ಬೇಕು ಎಂದು ಸಿಎಂ ಬಳಿ ಹೇಳಿಕೊಂಡಿದ್ದರು. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ನಾನೇನೂ ಮಾಡುವಂತಿಲ್ಲ ಎಂದು ಪ್ರತಿಕ್ರಿಯಿಸಿದ್ದರು. ಬಳಿಕ ಅವರು ಸಿಬಿಐ ತನಿಖೆ ಬಯಸಿದರು. ಆಗ ಕೋಪಗೊಂಡ ಸಿಎಂ, ರಕ್ಷಣಾ ಸಿಬ್ಬಂದಿಯನ್ನು ಕರೆಸಿ, ಈ ಮಹಿಳೆಯನ್ನು ತಕ್ಷಣ ಹೊರದಬ್ಬುವಂತೆ ಸೂಚಿಸಿದ್ದರು.
                                                                                                  ಕೃಪೆ: scroll.in

Writer - ಮಾಲಿನಿ ಸುಬ್ರಹ್ಮಣ್ಯಂ

contributor

Editor - ಮಾಲಿನಿ ಸುಬ್ರಹ್ಮಣ್ಯಂ

contributor

Similar News