ಮುಸ್ಲಿಂ ಮಹಿಳೆಯಿಂದ ಎಚ್‌ಐವಿ ಪೀಡಿತ ಮಕ್ಕಳ ಪಾಲನೆ

Update: 2017-05-18 18:44 GMT

ಎಚ್‌ಐವಿ ಪೀಡಿತರ ಬಗೆಗಿನ ತಪ್ಪುಕಲ್ಪನೆ ತೊಡೆದುಹಾಕುವುದು ನಿಜಕ್ಕೂ ಸವಾಲಿನ ಕೆಲಸ. ಒಂದು ಪ್ರಕರಣದಲ್ಲಿ ರೋಗಿಗೆ ಸೂಕ್ತ ಚಿಕಿತ್ಸೆ ನೀಡಲು ಆರಂಭಿಸಿದ ತಕ್ಷಣವೇ ಹಲವು ಕುಟುಂಬಗಳು ಸಂತ್ರಸ್ತರನ್ನು ದೂರ ಮಾಡಿದ ನಿದರ್ಶನಗಳಿವೆ. ಸುಮಾರು ಹತ್ತು ವರ್ಷಗಳ ಹಿಂದೆ, ತಬಸ್ಸುಮ್ ಅವರ ಸ್ನೇಹಿತೆಯೊಬ್ಬರು ಮೃತಪಟ್ಟರು. ಆಕೆ ಸಾಯುವ ಎರಡು ದಿನಗಳ ಮೊದಲು ವೈದ್ಯರು, ಆಕೆ ಎಚ್‌ಐವಿಯಿಂದ ಬಳಲುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದರು. ಇದು ತಿಳಿದ ತಕ್ಷಣ ಆಕೆಯ ಕುಟುಂಬದ ಸದಸ್ಯರು ಆಕೆಯನ್ನು ಸ್ಪರ್ಶಿಸಲೂ ಮುಂದಾಗಲಿಲ್ಲ ಎನ್ನುವುದು ತಬಸ್ಸುಮ್ ಗಮನಕ್ಕೆ ಬಂತು. ಆಕೆಯ ಅಂತ್ಯವಿಧಿಗಳನ್ನು ನೆರವೇರಿಸಲು ಉಳಿದದ್ದು ಸ್ನೇಹಿತೆ ತಬಸ್ಸುಮ್ ಮಾತ್ರ. ಆ ಕ್ಷಣದಲ್ಲೇ ತಬಸ್ಸುಮ್ ಜೀವನದ ಮಹತ್ವದ ನಿರ್ಧಾರವೊಂದನ್ನು ಕೈಗೊಂಡರು. ತಮ್ಮ ಇಡೀ ಜೀವನವನ್ನು ಎಚ್‌ಐವಿ ಪೀಡಿತ ಮಕ್ಕಳ ಕಲ್ಯಾಣಕ್ಕೆ ಸಮರ್ಪಿಸಿಕೊಂಡರು. ಅದುವರೆಗೂ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಅವರು ನಿರ್ವಹಿಸುತ್ತಿದ್ದ ಉದ್ಯೋಗ ಅವರ ಪಾಲಿಗೆ ಆದಾಯದ ಮೂಲವಷ್ಟೇ ಆಗಿತ್ತು.

‘‘ಕಳೆದ ಹದಿನಾರು ವರ್ಷಗಳಿಂದ ಎಚ್‌ಐವಿ ಪೀಡಿತ ಮಕ್ಕಳು ಮತ್ತು ಗರ್ಭಿಣಿಯರಿಗಾಗಿ ದುಡಿಯುತ್ತಿದ್ದೇನೆ. ಈ ಘಟನೆ ಬಳಿಕ ನನ್ನ ದೃಷ್ಟಿಕೋನವೇ ಬದಲಾಯಿತು’’ ಎಂದು ಹಳೆಯ ಘಟನೆಗಳನ್ನು ಮೆಲುಕು ಹಾಕಿಕೊಂಡರು.
‘‘ನಾನು ಮೂಲತಃ ತೀರಾ ಬಡಕುಟುಂಬದ ಹಿನ್ನೆಲೆಯಿಂದ ಬಂದವಳು. ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ದರ್ಜೆಯೊಂದಿಗೆ ಉತ್ತೀರ್ಣಳಾದೆ. ಮತ್ತೆ ಓದು ಮುಂದುವರಿಸುವ ಇಚ್ಛೆಯೂ ಇತ್ತು. ಆದರೆ ನನ್ನ ಶಿಕ್ಷಣವನ್ನು ಬೆಂಬಲಿಸುವ ಸ್ಥಿತಿಯಲ್ಲಿ ನಮ್ಮ ಕುಟುಂಬ ಇರಲಿಲ್ಲ. ಅಂತೂ ಇಂತೂ ಕಷ್ಟಪಟ್ಟು ಪಿಯುಸಿ ಮುಗಿಸಿದೆ. ಆಗ ಮನೆಯವರು ಮದುವೆ ಮಾಡಿದರು.

ವಿವಾಹದ ಬಳಿಕ ಮನೆಯಲ್ಲೇ ಉಳಿಯದೆ, ಪದವಿ ಶಿಕ್ಷಣಕ್ಕೆ ಸೇರಿದೆ. ಪದವಿ ಮುಗಿಸಿ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಉದ್ಯೋಗ ಆರಂಭಿಸಿದೆ. ಮುಸ್ಲಿಂ ಮಹಿಳೆಯೊಬ್ಬರು ಉದ್ಯೋಗಕ್ಕೆ ಸೇರುವುದು ಅದರಲ್ಲೂ ಸ್ವಯಂಸೇವಾ ಸಂಸ್ಥೆಯಲ್ಲಿ ಕೆಲಸ ಮಾಡುವುದು, ಎಲ್ಲ ಬಗೆಯ ಜನರನ್ನು ನಿರ್ವಹಿಸುವುದು ಸುಲಭ ಸಾಧ್ಯವಲ್ಲ. ಇದಕ್ಕೆ ಕುಟುಂಬದಿಂದಲೇ ವಿರೋಧ ಎದುರಾಯಿತು. ಇಷ್ಟಾಗಿಯೂ ನಾನು ಇಂದಿಗೂ ಸ್ವಯಂಸೇವಾ ಸಂಸ್ಥೆಯಲ್ಲಿ ಉದ್ಯೋಗ ಮುಂದುವರಿಸಿದ್ದೇನೆ. ಇದೇ ವೇಳೆ ಮಕ್ಕಳ ಜತೆಗೆ ಕೆಲಸ ಮಾಡುವುದು ನನಗೆ ಇಷ್ಟದ ಕೆಲಸವಾದ್ದರಿಂದ ಈ ಸವಾಲನ್ನು ಎದುರಿಸಿ ಮುಂದುವರಿಯಲು ನಿರ್ಧರಿಸಿದೆ. ಇಂಥ ಮಕ್ಕಳ ನೆರವಿಗಾಗಿಯೇ ‘ಸ್ನೇಹದೀಪ’ ಎಂಬ ಸುರಕ್ಷಾ ಕೇಂದ್ರವನ್ನು ಎರಡು ವರ್ಷದ ಹಿಂದೆ ಆರಂಭಿಸಿದ್ದೇನೆ’’ ಎಂದು ತಬಸ್ಸುಮ್ ವಿವರಿಸುತ್ತಾರೆ.

‘‘ವಿಚಿತ್ರವೆಂದರೆ ನನ್ನ ಕಾರ್ಯಕ್ಕೆ ಭಾರೀ ವಿರೋಧ ವ್ಯಕ್ತವಾಯಿತು. ಆದರೆ ಈ ಮಕ್ಕಳ ಅರೈಕೆ ಮಾಡುತ್ತಿರುವ ನನ್ನ ‘ಸ್ನೇಹದೀಪ’ ಸಂಘಟನೆ ಬಗ್ಗೆ ನನಗೆ ಹೆಮ್ಮೆ ಇದೆ. ಇಲ್ಲಿರುವ ಮಕ್ಕಳು ಅಸ್ವಸ್ಥರಾದ ಬಳಿಕ ಅವರಿಗೆ ಯಾವ ಧರ್ಮವೂ ಇಲ್ಲ. ಸಾಮಾನ್ಯವಾಗಿ ಮಕ್ಕಳಿಗೆ ಇಂಥ ಕಾಯಿಲೆ ಇದೆ ಎಂದು ತಿಳಿದ ತಕ್ಷಣ ಮಕ್ಕಳನ್ನು ದೂರ ಮಾಡಲು ಕುಟುಂಬಗಳು ನಿರ್ಧರಿಸುತ್ತವೆ. ಅವರ ದೈಹಿಕ ಆರೋಗ್ಯಕ್ಕಿಂತ ಹೆಚ್ಚಾಗಿ, ಮಕ್ಕಳು ಮಾನಸಿಕ ವೇದನೆ ಅನುಭವಿಸುತ್ತಿರುತ್ತಾರೆ. ಜತೆಗೆ ತಮ್ಮನ್ನು ಪ್ರೀತಿಸುವವರ ಸಾಮೀಪ್ಯಕ್ಕೆ ಹಾತೊರೆಯುತ್ತಿರುತ್ತಾರೆ’’

‘‘ದೊಡ್ಡ ಮಕ್ಕಳು ಸಾಮಾನ್ಯವಾಗಿ ಪತ್ರಿಕೆಗಳ ಮೇಲೆ ಪ್ರತಿದಿನ ಕಣ್ಣಾಡಿಸಿ, ಎಚ್‌ಐವಿ ಗುಣಪಡಿಸುವ ಹೊಸ ಔಷಧಿಗಳಿಗಾಗಿ ನೋಡುತ್ತಾರೆ. ತಾವು ಶೀಘ್ರದಲ್ಲೇ ಇಹಲೋಕ ತ್ಯಜಿಸುತ್ತೇವೆ ಎನ್ನುವುದು ಅವರಿಗೆ ತಿಳಿದಿರುತ್ತದೆ. ಈ ಹಂತದಲ್ಲಿ ಅವರಿಗೆ ಶಿಕ್ಷಣದ ಅಗತ್ಯದ ಬಗ್ಗೆ ಮನವರಿಕೆ ಮಾಡಿಕೊಡುವುದೂ ಕಷ್ಟವಾಗುತ್ತದೆ. ಈ ಮಕ್ಕಳು ಕೊನೆಯ ಹಂತಕ್ಕೆ ಬಂದಾಗ, ಇವರನ್ನು ಆಸ್ಪತ್ರೆಗೆ ಸೇರಿಸಲಾಗುತ್ತದೆ. ಆಗ ಕೂಡಾ ಮಗುವಿನ ಜತೆಗೆ ಇರಲು ಕುಟುಂಬದ ಯಾವ ಸದಸ್ಯರೂ ಇಷ್ಟಪಡುವುದಿಲ್ಲ. ಸಾಮಾನ್ಯವಾಗಿ ಇಂಥ ಮಕ್ಕಳು ಒಬ್ಬಂಟಿಯಾಗಿ ಕೊನೆಯುಸಿರೆಳೆಯುತ್ತಾರೆ. ಅವರ ಯಾತನೆ, ವೇದನೆ ನೋಡಿಕೊಂಡು ಅವರೊಂದಿಗೆ ಕೊನೆಯ ದಿನಗಳನ್ನು ಕಳೆಯುವುದು ಕಷ್ಟಕರವಾದರೂ, ಕೊನೆಯವರೆಗೂ ಅವರ ಜತೆಗೆ ಇರಲು ತಾನು ಪ್ರಯತ್ನಿಸುತ್ತೇನೆ ಹಾಗೂ ಅವರ ಅಂತ್ಯ ವಿಧಿಗಳನ್ನು ನೆರವೇರಿಸುತ್ತೇನೆ’’ ಎಂದು ತಬಸ್ಸುಮ್ ವ್ಯಥೆಪಡುತ್ತಾರೆ.

‘‘ಪ್ರತಿ ಮಗುವಿನ ಸಾವಿನ ಸಂದರ್ಭದಲ್ಲೂ, ನನ್ನೆದುರು ಕೊನೆಯು ಸಿರೆಳೆವ ಕೊನೆಯ ಮಗು ಇದಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಆರಂಭಿಕ ದಿನಗಳಲ್ಲಿ ತೀರಾ ಸಂಕಷ್ಟಗಳನ್ನು ಎದುರಿಸಬೇಕಾಯಿತು. ನಮಗೆ ನೆರವು ನೀಡುವಂತೆ ಕೋರಿ ಪ್ರತಿ ರವಿವಾರ ಮನೆಮನೆಗೆ ತೆರಳಿ ಭಿಕ್ಷೆ ಬೇಡುತ್ತಿದ್ದೆ. ಮಕ್ಕಳಿಗಾಗಿ ಒಂದು ಪ್ಯಾಕ್ ಬಿಸ್ಕೆಟ್ ಸಿಕ್ಕಿದರೂ ಅದು ದೊಡ್ಡ ವ್ಯತ್ಯಾಸ ತರುವಂಥ ಪರಿಸ್ಥಿತಿ ಇತ್ತು. ಆಹಾರಕ್ಕಾಗಿ ಹಣ ಹೊಂದಿಸುವುದು ಯಾವಾಗಲೂ ದೊಡ್ಡ ಸವಾಲು’’ ಎನ್ನುವುದು ತಬಸ್ಸುಮ್ ಅವರ ಅಭಿಮತ.

Writer - ದೀಪ್ತಿ ಸಂಜೀವ್

contributor

Editor - ದೀಪ್ತಿ ಸಂಜೀವ್

contributor

Similar News