ಆರ್‌ಟಿಐಗೆ ತಿದ್ದುಪಡಿ ಬೇಡ

Update: 2017-05-19 18:51 GMT

ಸ್ವತಂತ್ರ ಭಾರತದ ಇತಿಹಾಸದಲ್ಲಿ ಮಾಹಿತಿ ಹಕ್ಕು ಕಾಯ್ದೆ ಅತ್ಯಂತ ಜನಪರವಾದ ಮಹತ್ವದ ಕಾಯ್ದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇದು ಪರಿಣಾಮಕಾರಿ ಪಾತ್ರ ವಹಿಸಿದೆ. ಕೇಂದ್ರದಲ್ಲಿ ಯುಪಿಎ ಸರಕಾರ ಅಸ್ತಿತ್ವದಲ್ಲಿದ್ದಾಗ ಜಾರಿಗೆ ಬಂದ ಈ ಕಾಯ್ದೆ ಅನೇಕ ಹಗರಣಗಳು ಬಯಲಿಗೆ ಬರಲು ಕಾರಣವಾಗಿದೆ. ಸರಕಾರದ ವಿವಿಧ ಇಲಾಖೆಗಳ ಮೇಲೆ ಸಾರ್ವಜನಿಕರು ನಿಗಾ ಇಡಲು ಇದರಿಂದ ಅನುಕೂಲವಾಗಿದೆ. ಈ ಮಾಹಿತಿ ಹಕ್ಕು ಕಾಯ್ದೆ ಜಾರಿಯಾಗಿ 12 ವರ್ಷಗಳಾಗಿವೆ.

ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಹಾಗೂ ಸರಕಾರವನ್ನು ಉತ್ತರದಾಯಿಯನ್ನಾಗಿ ಮಾಡಲು ಈ ಕಾಯ್ದೆ ಉಪಯುಕ್ತವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಭಾರೀ ಸುದ್ದಿ ಮಾಡಿರುವ 2ಜಿ ಹಗರಣ, ಕಾಮನ್ವೆಲ್ತ್ ಗೇಮ್ಸ್ ಹಗರಣ, ಆದರ್ಶ್ ಹಗರಣ ಇಂತಹ ಪ್ರಮುಖ ಭ್ರಷ್ಟಾಚಾರ ಹಗರಣಗಳನ್ನು ಬಯಲಿಗೆಳೆಯುವಲ್ಲಿ ಈ ಕಾಯ್ದೆ ಸಹಕಾರಿಯಾಗಿದೆ. ಮಾಹಿತಿ ಹಕ್ಕು ಕಾಯ್ದೆ ಜಾರಿಯಾದ ಆನಂತರ ಎಷ್ಟೋ ಚುನಾಯಿತ ಜನಪ್ರತಿನಿಧಿಗಳು ಮತ್ತು ಉನ್ನತ ಅಧಿಕಾರಿಗಳು ಜನರೆದುರು ಬಟಾಬಯಲಾಗಿದ್ದಾರೆ. ಇಂತಹ ಪ್ರಬಲವಾದ ಕಾಯ್ದೆಯನ್ನು ಮತ್ತು ಅದರ ಅನುಷ್ಠಾನದ ನಿಯಮಗಳನ್ನು ಪುನರ್‌ರೂಪಿಸಲು ಕೇಂದ್ರದ ಎನ್‌ಡಿಎ ಸರಕಾರ ನಿರ್ಧರಿಸಿದೆ.

2005ರ ಆರ್‌ಟಿಐ ಕಾಯ್ದೆಯ ಸೆಕ್ಷನ್ 27ರ ಅನ್ವಯ ಹೊಸ ಕರಡು ನಿಯಮಗಳನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಸಾರ್ವಜನಿಕರಿಂದ ಅಭಿಪ್ರಾಯಗಳನ್ನೂ ಆಹ್ವಾನಿಸಲಾಗಿದೆ. ಪ್ರಮುಖ ಜನಪರವಾದ ಕಾನೂನಿನ ರೆಕ್ಕೆಪುಕ್ಕ ಕತ್ತರಿಸಿ ಇದನ್ನು ಇದ್ದೂ ಇಲ್ಲದಂತೆ ಮಾಡುವ ಸಂಚು ನಡೆದಿದೆ. ಸರಕಾರ ತರಲು ಹೊರಟಿರುವ ಈ ತಿದ್ದುಪಡಿಗೆ ಎಲ್ಲೆಡೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ಸರಕಾರ ಹಲವಾರು ಕಟ್ಟುಪಾಡುಗಳನ್ನು ವಿಧಿಸಿದೆ. ಆರ್‌ಟಿಐ ಕಾಯ್ದೆಯಡಿ ನೀಡಲಾಗುವ ಪ್ರತೀ ಪುಟದ ಮಾಹಿತಿಗೆ ಈಗ ಇರುವುದಕ್ಕಿಂತ ಎರಡುಪಟ್ಟು ಹೆಚ್ಚು ಶುಲ್ಕ ವಿಧಿಸಲು ಸರಕಾರ ಮುಂದಾಗಿದೆ. ಇದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ.

ಸರಕಾರ ತಿದ್ದುಪಡಿ ತರಲು ಹೊರಟಿರುವ ಎರಡು ನಿರ್ದಿಷ್ಟ ಅಂಶಗಳ ಬಗ್ಗೆ ನಾಗರಿಕರು ಹಾಗೂ ಆರ್‌ಟಿಐ ಕಾರ್ಯಕರ್ತರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಹೊಸ ಕರಡು ನಿಯಮಗಳ ಪ್ರಕಾರ ಮಾಹಿತಿ ಕೋರಿ ಸಲ್ಲಿಸಿದ ಅರ್ಜಿಯನ್ನು ವಾಪಸ್ ಪಡೆಯಲು ಅವಕಾಶವಿದೆ. ಇಂತಹ ಒಂದು ತಿದ್ದುಪಡಿಯನ್ನು ಯುಪಿಎ ಸರಕಾರವಿದ್ದಾಗ ಮಂಡಿಸಲಾಗಿತ್ತು. ಆಗ ನಾಗರಿಕ ಸಮಾಜದಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ಕೊನೆಗೆ ಜನರ ಒತ್ತಡಕ್ಕೆ ಮಣಿದು ಸರಕಾರ ಈ ತಿದ್ದುಪಡಿ ಕೈಬಿಟ್ಟಿತ್ತು. ಈ ತಿದ್ದುಪಡಿ ಮಾತ್ರವಲ್ಲದೇ, ಇನ್ನೊಂದು ತಿದ್ದುಪಡಿ ಕೂಡಾ ಅತ್ಯಂತ ಆತಂಕಕಾರಿಯಾಗಿದೆ. ಮಾಹಿತಿ ಕೋರಿ ಅರ್ಜಿ ಸಲ್ಲಿಸಿದವರು ಒಂದುವೇಳೆ ಮೃತಪಟ್ಟರೆ ಸಹಜವಾಗಿ ಅರ್ಜಿ ಸಂಬಂಧದ ಕಲಾಪ ಅಂತ್ಯವಾಗುತ್ತದೆ ಎಂಬಂತಹ ತಿದ್ದುಪಡಿಯೊಂದನ್ನು ಈ ಕಾನೂನಿಗೆ ತರಲಾಗಿದೆ.

ಇದರಿಂದಾಗಿ ಅರ್ಜಿದಾರನ ಮೇಲೆ ಒತ್ತಡ ಹೇರಿ ಅರ್ಜಿಯನ್ನು ಹಿಂದೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವ ಅಪಾಯವಿದೆ. ಹಾಗೆಯೇ ಅರ್ಜಿದಾರರ ಸಾವಿನ ಆನಂತರ ಅರ್ಜಿಯ ಮುಕ್ತಾಯಕ್ಕೆ ಅವಕಾಶ ನೀಡುವುದರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪಟ್ಟಭದ್ರ ಹಿತಾಸಕ್ತಿಗಳು ಆರ್‌ಟಿಐ ಅರ್ಜಿದಾರರ ಹತ್ಯೆಗೆ ಮುಂದಾಗುವ ಅಪಾಯವೂ ಇದೆ ಎಂಬ ಸಂದೇಹ ಸಾರ್ವಜನಿಕರಲ್ಲಿ ಉಂಟಾಗಿದೆ. ಈ ಸಂದೇಹವನ್ನು ಸರಕಾರ ಮೊದಲು ನಿವಾರಿಸಬೇಕಾಗಿದೆ. ಮಾಹಿತಿ ಹಕ್ಕು ವ್ಯಕ್ತಿಯ ಹಕ್ಕಾಗಿದ್ದು, ಸಂಬಂಧಿಸಿದ ಪ್ರಜೆಯ ಸಾವಿನೊಂದಿಗೆ ಇದೂ ಮುಕ್ತಾಯವಾಗುತ್ತದೆ.ಇದರಿಂದ ಮಾಹಿತಿ ಹಕ್ಕು ಆಯೋಗದ ಮುಂದೆ ಇತ್ಯರ್ಥಕ್ಕೆ ಕಾದಿರುವ ಅಸಂಖ್ಯ ಅರ್ಜಿಗಳ ಹೊರೆ ಕಡಿಮೆಯಾಗುತ್ತದೆ ಎಂಬ ವಿವರಣೆ ಸಮರ್ಥನೀಯವಲ್ಲ. ಪ್ರಭುತ್ವದ ಅಧಿಕಾರಸೂತ್ರ ಹಿಡಿದಿರುವವರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಇಂತಹ ತಿದ್ದುಪಡಿಗಳನ್ನು ಅನೇಕ ಬಾರಿ ತರುತ್ತಾರೆ.

ಆದರೆ, ಯುಪಿಎ ಸರಕಾರ ದೇಶವನ್ನು ಲೂಟಿ ಮಾಡಿತ್ತು ಎಂದು ಹೇಳುವ ಬಿಜೆಪಿ, ಅಧಿಕಾರದಲ್ಲಿರುವಾಗಲೇ ಮಾಹಿತಿ ಹಕ್ಕು ಕಾನೂನನ್ನು ಸತ್ವಹೀನಗೊಳಿಸುವ ಹುನ್ನಾರ ನಡೆಸಿದೆ. ಈ ಕಾಯ್ದೆಯ ಪರಿಣಾಮವಾಗಿಯೇ ಹಿಂದಿನ ಯುಪಿಎ ಸರಕಾರದ ಅನೇಕ ಮಂತ್ರಿಗಳು ಜೈಲಿಗೆ ಹೋದರು. ಆದರೆ, ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಮಾಹಿತಿ ಹಕ್ಕು ಕಾನೂನನ್ನು ಬದಲಿಸಲು ಅವಕಾಶ ಕೊಡಲಿಲ್ಲ ಮತ್ತು ಈ ಕಾಯ್ದೆಯನ್ನು ವಾಪಸ್ ಪಡೆಯಲಿಲ್ಲ. ಆದರೆ, ಮಹಾಸಂಪನ್ನರು ಮತ್ತು ಪ್ರಾಮಾಣಿಕರು ಎಂದು ಹೇಳಿಕೊಳ್ಳುವ ಬಿಜೆಪಿಯವರು ಮಾಹಿತಿಹಕ್ಕು ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದ್ದಾರೆ. ಈ ಕಾನೂನನ್ನು ಹಲ್ಲುಕಿತ್ತ ಹಾವನ್ನಾಗಿ ಮಾಡಲು ಮುಂದಾಗಿದ್ದಾರೆ. ಆ ಕಾರಣದಿಂದಲೇ ಎದುರಾಳಿಗಳ ಬಾಯಿ ಮುಚ್ಚಿಸಲು ಹಾಗೂ ತನ್ನ ಪಕ್ಷದ ಭ್ರಷ್ಟರಿಗೆ ರಕ್ಷಣೆ ನೀಡಲು ಮೋದಿ ಸರಕಾರ ಕೇಂದ್ರೀಯ ತನಿಖಾ ಸಂಸ್ಥೆ ಮತ್ತು ಜಾರಿ ನಿರ್ದೇಶನಾಲಯಗಳನ್ನು ಬಳಸಿಕೊಳ್ಳುತ್ತಿದೆ. ಈ ಮಾಹಿತಿ ಹಕ್ಕು ಕಾಯ್ದೆ ಜಾರಿಯಲ್ಲಿದ್ದಾಗಲೂ ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದರು. ಇಲ್ಲದ ನೆಪಗಳನ್ನು ಹೇಳಿ ಸತಾಯಿಸುತ್ತಿದ್ದರು.

ಕೆಲವು ಕಡೆ ಸುಳ್ಳು ಮಾಹಿತಿಗಳನ್ನು ನೀಡಿ ದಾರಿ ತಪ್ಪಿಸುತ್ತಿದ್ದರು. ಅಷ್ಟೇ ಅಲ್ಲ, ಭ್ರಷ್ಟಾಚಾರಗಳನ್ನು ಬಯಲಿಗೆಳೆಯಲು ಹೋದ ಅನೇಕ ಮಾಹಿತಿ ಹಕ್ಕು ಕಾರ್ಯಕರ್ತರು ಹಲ್ಲೆಗೀಡಾಗಿದ್ದಾರೆ. ಇನ್ನೂ ಅನೇಕರಿಗೆ ಪ್ರಾಣಬೆದರಿಕೆ ಹಾಕಿ ಬಾಯಿ ಮುಚ್ಚಿಸಲಾಗಿದೆ. ಈ ಕಾಯ್ದೆ ದುರುಪಯೋಗವಾಗಿಲ್ಲವೆಂದಲ್ಲ. ಎಲ್ಲ ಕಾಯ್ದೆಗಳಂತೆಯೇ ಇದೂ ಕೂಡಾ ದುರುಪಯೋಗವಾಗಿದೆ. ಸರಕಾರಿ ಅಧಿಕಾರಿಗಳನ್ನು ಹೆದರಿಸಲು, ಬ್ಲಾಕ್‌ಮೇಲ್ ಮಾಡಲು ಈ ಕಾಯ್ದೆಯನ್ನು ಕೆಲವರು ಬಳಸಿಕೊಂಡಿದ್ದಾರೆ. ಆದರೆ, ಲೋಪಗಳಿವೆ ಎಂದು ಕಾನೂನನ್ನೇ ದುರ್ಬಲಗೊಳಿಸುವುದು ಸರಿಯಲ್ಲ. ಮಾಹಿತಿ ಹಕ್ಕು ಕಾಯ್ದೆ ಪ್ರಜಾಪ್ರಭುತ್ವದ ಆಶಯಕ್ಕೆ ಪೂರಕವಾದ ಅತ್ಯಂತ ಮಹತ್ವದ ಕಾಯ್ದೆ ಎಂಬುದರಲ್ಲಿ ಸಂಶಯವಿಲ್ಲ. ಇಂತಹ ಕಾಯ್ದೆಗೆ ತಿದ್ದುಪಡಿ ತರುವ ಮುನ್ನ ಸರಕಾರ ನೂರು ಬಾರಿ ಯೋಚನೆ ಮಾಡಬೇಕು.

ದೇಶದಲ್ಲಿ ಜಾಗತೀಕರಣದ ಆರ್ಥಿಕ ನೀತಿಗಳು ಜಾರಿಗೆ ಬಂದ ಆನಂತರ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಪ್ರಮಾಣ ಹೆಚ್ಚಾಗಿದೆ. ಇಂತಹ ಸನ್ನಿವೇಶದಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಲಗೊಳಿಸುವುದರಿಂದ ಭ್ರಷ್ಟಾಚಾರ ಹೆಚ್ಚಲು ಅವಕಾಶ ನೀಡಿದಂತಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಸರಕಾರಗಳ ಪಾರದರ್ಶಕ ಆಡಳಿತ ಸಾಕಾರಗೊಳ್ಳಬೇಕಾದರೆ ಮಾಹಿತಿ ಹಕ್ಕು ಕಾಯ್ದೆಯಂತಹ ಕಾನೂನುಗಳು ಅಸ್ತಿತ್ವದಲ್ಲಿ ಇರಬೇಕು. ಈ ಕಾಯ್ದೆ ಜಾರಿಗೆ ಬಂದ ಆನಂತರ ಕಳೆದ ಒಂದು ದಶಕದಲ್ಲಿ ಆಡಳಿತ ವ್ಯವಸ್ಥೆಯಲ್ಲಿ ಹಲವಾರು ಸುಧಾರಣೆಗಳಾಗಿವೆ. ಭ್ರಷ್ಟ ಅಧಿಕಾರಿಗಳು ಬೆದರಿಕೊಂಡಿದ್ದಾರೆ. ಆದರೆ, ಈ ಕಾಯ್ದೆಯನ್ನು ದುರ್ಬಲಗೊಳಿಸಿದರೆ ಲಂಚಕೋರರಿಗೆ ಮುಕ್ತ ಅವಕಾಶ ನೀಡಿದಂತಾಗುತ್ತದೆ. ನ್ಯಾಯವಾಗಿ ರಾಜಕೀಯ ಪಕ್ಷಗಳನ್ನೂ ಮಾಹಿತಿಹಕ್ಕು ಕಾಯ್ದೆಯ ವ್ಯಾಪ್ತಿಗೆ ತರಬೇಕಾಗಿದೆ. ಆದರೆ, ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯಿಂದ ಹೊರಗುಳಿಯಲು ಒಟ್ಟಾಗಿ ಯತ್ನಿಸುತ್ತಿವೆ. ಆಡಳಿತದ ಲೋಪದೋಷ ಬಯಲಿಗೆಳೆಯುವವರನ್ನು ಹೆದರಿಸುವ ರೀತಿಯಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಲಗೊಳಿಸಲು ಸರಕಾರ ಮುಂದಾಗಿರುವುದು ಸರಿಯಲ್ಲ.

ಈಗಾಗಲೇ ಈ ಕಾಯ್ದೆಯ ಅನುಷ್ಠಾನದಲ್ಲಿ ಹಲವಾರು ಸಮಸ್ಯೆಗಳಿವೆ. ಕೇಂದ್ರೀಯ ಮಾಹಿತಿ ಕಮಿಷನರ್ ಹುದ್ದೆಯೇ ಭರ್ತಿಯಾಗಿಲ್ಲ. ನಮ್ಮ ರಾಜ್ಯದಲ್ಲೂ ಇದೇ ಸ್ಥಿತಿಯಿದೆ. ಮಾಹಿತಿ ಹಕ್ಕು ಆಯೋಗದಲ್ಲಿ ಮೂಲಸೌಕರ್ಯ ಮತ್ತು ಮಾನವಸಂಪನ್ಮೂಲಗಳ ಕೊರತೆ ಎದ್ದು ಕಾಣುತ್ತಿದೆ. ಇಂತಹ ಪ್ರತಿಕೂಲ ಸನ್ನಿವೇಶದಲ್ಲಿ ಈ ಮಹತ್ವದ ಕಾಯ್ದೆಯ ಮೂಲ ಉದ್ದೇಶವೇ ಈಡೇರಿಲ್ಲ. ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ಕ್ರಮೇಣ ಜನರಲ್ಲಿ ಜಾಗೃತಿ ಉಂಟಾಗಿ ಜನರು ಅದನ್ನು ಸಮರ್ಥವಾಗಿ ಬಳಸಿಕೊಳ್ಳಲು ಮುಂದಾದಾಗ ಈ ಕಾಯ್ದೆ ಸಂಪೂರ್ಣವಾಗಿ ಜಾರಿಯಾದಂತಾಗುತ್ತದೆ. ಭ್ರಷ್ಟಾಚಾರ ತಡೆಯುವ ನಿಟ್ಟಿನಲ್ಲಿ ಲೋಕಪಾಲ ವ್ಯವಸ್ಥೆ ಜಾರಿಗೆ ತರಬೇಕೆಂದು ಯುಪಿಎ ಸರಕಾರವಿದ್ದಾಗ ಅಣ್ಣಾ ಹಝಾರೆ ನೇತೃತ್ವದಲ್ಲಿ ದೊಡ್ಡ ಚಳವಳಿ ನಡೆಯಿತು.

ಆ ಚಳವಳಿಯಲ್ಲಿ ಈಗ ಕೇಂದ್ರದಲ್ಲಿ ಮಂತ್ರಿಯಾಗಿರುವ ಅನೇಕ ಬಿಜೆಪಿ ನಾಯಕರು ಇದ್ದರು. ನರೇಂದ್ರ ಮೋದಿಯವರ ಸರಕಾರ ಅಸ್ತಿತ್ವಕ್ಕೆ ಬಂದು ಮೂರು ವರ್ಷಗಳಾಗಿವೆ. ಆದರೂ ಲೋಕಪಾಲ್ ವ್ಯವಸ್ಥೆ ಯಾಕೆ ಜಾರಿಯಾಗಿಲ್ಲ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯ ಹೊಸ ಕರಡು ನಿಯಮಗಳು ಅತ್ಯಂತ ಆಕ್ಷೇಪಾರ್ಹವಾಗಿವೆ. ಭ್ರಷ್ಟಾಚಾರದ ವಿರುದ್ಧ ಅಸ್ತ್ರವಾಗಿ ಈ ಕಾನೂನನ್ನು ಬಳಸುವ ಜನರಲ್ಲಿ ಈ ಕರಡು ನಿಯಮಗಳು ಭೀತಿಯನ್ನು ಉಂಟುಮಾಡಲಿವೆ. ಆದ್ದರಿಂದ ಸರಕಾರ ಈ ನಿಯಮಗಳನ್ನು ಕೈಬಿಡುವುದು ತುರ್ತು ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News