ಹೊಸ ಜೀವಿಗೆ ಕಲಾಂ ಹೆಸರಿಟ್ಟು ಗೌರವಿಸಿದ ನಾಸಾ

Update: 2017-05-22 07:39 GMT

ಲಾಸ್ ಏಂಜಲಿಸ್,ಮೇ 22 : ಭಾರತದ ಪಾಲಿಗೆ ಸಿಹಿ ಸುದ್ದಿಯೊಂದಿದೆ. ನಾಸಾದ ವಿಜ್ಞಾನಿಗಳು ತಾವು ಕಂಡು ಹಿಡಿದ ಹೊಸ ಜೀವಿಯೊಂದಕ್ಕೆ ಭಾರತದ ಮಾಜಿ ರಾಷ್ಟ್ರಪತಿ ಎ ಪಿ ಜೆ ಅಬ್ದುಲ್ ಕಲಾಂ ಅವರ ಹೆಸರನ್ನಿಟ್ಟಿದ್ದಾರೆ. ಇಲ್ಲಿಯ ತನಕ ಈ ಹೊಸ ಜೀವಿ- ಒಂದು ವಿಧದ ಬ್ಯಾಕ್ಟೀರಿಯಾ- ಕೇವಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಮಾತ್ರ ಕಂಡು ಬಂದಿದೆಯಲ್ಲದೆ ಭೂಮಿಯಲ್ಲಿ ಕಂಡು ಬಂದಿಲ್ಲ.

ನಾಸಾದ ಅಂತರ್-ಉಪಗ್ರಹ ಪ್ರಯಾಣಕ್ಕೆ ಸಂಬಂಧಿಸಿದ ಪ್ರಮುಖ ಪ್ರಯೋಗಾಲಯವಾಗಿರುವ ಜೆಟ್ ಪ್ರೊಪಲ್ಶನ್ ಲ್ಯಾಬೊರೇಟರಿ ಇಲ್ಲಿನ ಸಂಶೋಧಕರು ಈ ಹೊಸ ಬ್ಯಾಕ್ಟೀರಿಯಾವನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಫಿಲ್ಟರುಗಳಲ್ಲಿ ಕಂಡು ಹಿಡಿದಿದ್ದು ಅದನ್ನು ಸೊಲಿಬ್ಯಾಸಿಲ್ಲಸ್ ಕಲಾಮಿ ಎಂಬ ಹೆಸರು ನೀಡಿ ಖ್ಯಾತ ಬಾಹ್ಯಾಕಾಶ ವಿಜ್ಞಾನಿಯಾಗಿದ್ದ ಕಲಾಂ ಅವರಿಗೆ ಗೌರವ ಸಲ್ಲಿಸಲಾಗಿದೆ.

ಕಲಾಂ ಅವರು ತಮ್ಮ ಮೀನುಗಾರಿಕಾ ಗ್ರಾಮವಾದ ಕೇರಳದ ತುಂಬ ಎಂಬಲ್ಲಿ ದೇಶದ ಪ್ರಪ್ರಥಮ ರಾಕೆಟ್ ಉಡಾವಣಾ ಕೇಂದ್ರ ಸ್ಥಾಪಿಸುವ ಮೊದಲು ತಮ್ಮ ಆರಂಭಿಕ ತರಬೇತಿಯನ್ನು ನಾಸಾದಲ್ಲಿ 1963ರಲ್ಲಿ ಪಡೆದಿದ್ದರು.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಫಿಲ್ಟರಿನಲ್ಲಿ ಈ ಹೊಸ ಬ್ಯಾಕ್ಟೀರಿಯಾ 40 ತಿಂಗಳುಗಳ ಕಾಲ ಇತ್ತು. ಈ ಫಿಲ್ಟರ್- ಎಚ್‌ಇಪಿಎ ಅಥವಾ ಹೈ ಎಫೀಶಿಯನ್ಸಿ ಪಾರ್ಟಿಕ್ಯುಲೇಟ್ ಅರೆಸ್ಟೆನ್ಸ್ ಬಾಹ್ಯಾಕಾಶ ನಿಲ್ದಾಣದ ಸ್ವಚ್ಛತಾ ಕಾರ್ಯದಲ್ಲಿ ಪ್ರಮುಖ ಅಂಗವಾಗಿದೆ. ತಾವು ಕಂಡು ಹಿಡಿದ ಹೊಸ ಬ್ಯಾಕ್ಟೀರಿಯಾದ ಬಗ್ಗೆ ಜೆಪಿಎಲ್ ನ ಬಯೋಟೆಕ್ನಾಲಜಿ ಎಂಡ್ ಪ್ಲಾನೆಟರಿ ಪ್ರೊಟೆಕ್ಷನ್ ಗ್ರೂಪ್ ಇಲ್ಲಿನ ಹಿರಿಯ ಸಂಶೋಧನಾ ವಿಜ್ಞಾನಿ ಕಸ್ತೂರಿ ವೆಂಕಟೇಶ್ವರನ್ ಅವರು ಇಂಟರ್ ನ್ಯಾಷನಲ್ ಜರ್ನಲ್ ಆಫ್ ಸಿಸ್ಟಮ್ಯಾಟಿಕ್ ಎಂಡ್ ಇವೊಲ್ಯುಶನರಿ ಮೈಕ್ರೋಬಯಾಲಜಿಯಲ್ಲಿ ಪ್ರಕಟಿಸಿದ್ದರು.

ಹೊಸ ಬ್ಯಾಕ್ಟೀರಿಯಾಗಳನ್ನು ಸಾಮಾನ್ಯವಾಗಿ ದೊಡ್ಡ ವಿಜ್ಞಾನಿಗಳ ಹೆಸರುಗಳನ್ನಿಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News